ಕಳೆದ 10 ವರ್ಷಗಳಲ್ಲಿ ದೇಶದಲ್ಲಾಗಿರುವ ಪ್ರಗತಿಯನ್ನು, ವಿಶೇಷವಾಗಿ ಮೂಲಸೌಕರ್ಯ ಯೋಜನೆಗಳಲ್ಲಿ ಆಗಿರುವ ಬದಲಾವಣೆಯನ್ನು ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಶ್ಲಾಘಿಸಿದ್ದಾರೆ.
ಇದರ ವಿಡಿಯೋವನ್ನು ‘ಪುಷ್ಪಾ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ತನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಣಿಪುರ, ಲಡಾಖ್‌ಗೆ ಭೇಟಿ ಯಾವಾಗ ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದರೆ, ಇನ್ನು ಕೆಲವರು ಐಟಿ ದಾಳಿಯ ಉಲ್ಲೇಖ ಮಾಡಿದ್ದಾರೆ.
South India to North India… West India to East India… Connecting people, connecting hearts! 🤍 #MyIndia pic.twitter.com/nma43rN3hM
— Rashmika Mandanna (@iamRashmika) May 16, 2024
ಈ ವರ್ಷದ ಜನವರಿಯಲ್ಲಿ ಅಧಿಕೃತವಾಗಿ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಎಂದು ಹೆಸರಿಸಲಾದ 22 ಕಿಮೀ ಉದ್ದದ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಈ ಸೇತುವೆಯ ನಿರ್ಮಾಣವನ್ನು ನಟಿ ಶ್ಲಾಘಿಸಿದ್ದಾರೆ. ಹಿಂದಿನ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 20 ನಿಮಿಷಗಳಿಗೆ ಕಡಿತಗೊಳಿಸುತ್ತದೆ ಎಂದು ಹೇಳಿದ್ದಾರೆ.
ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೇಗೆ?
ರಶ್ಮಿಕಾ ಪೋಸ್ಟ್ ಮಾಡಿರುವ ವಿಡಿಯೋಗೆ 4.6 ಮಿಲಿಯನ್ ವೀವ್ಸ್ ಲಭಿಸಿದ್ದು, 3.9 ಸಾವಿರ ಕಾಮೆಂಟ್‌ಗಳನ್ನು ಮಾಡಲಾಗಿದೆ. ಸಂಘಿ ಪ್ರಿನ್ಸ್ ಎಂಬ ಎಕ್ಸ್ ಬಳಕೆದಾರರೊಬ್ಬರು ‘ನ್ಯಾಷನಲ್ ಕ್ರಷ್ ಈಗ ನ್ಯಾಷನಲಿಸ್ಟ್ ಆಗುತ್ತಿದ್ದಾರೆ’ ಎಂದು ಹೇಳಿದ್ದರೆ, ಹಲವಾರು ನೆಟ್ಟಿಗರು ನಟಿ ರಶ್ಮಿಕಾರ ಮಣಿಪುರ ಭೇಟಿ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಇನ್ನು ಇಡಿ ದಾಳಿಯ ಬಗ್ಗೆಯೂ ನೆಟ್ಟಿಗರು ಪ್ರಸ್ತಾಪಿಸಿದ್ದಾರೆ.
“ರಶ್ಮಿಕಾ ನಿಮಗೆ ನಾಚಿಕೆಯಾಗಬೇಕು. ಈ ಅಟಲ್‌ಸೇತು ನಮಗೆ ಉಚಿತವಾಗಿ ನಿರ್ಮಿಸಿದ್ದೇನಲ್ಲ. ನಾವು 19 ಲಕ್ಷ ರೂಪಾಯಿ ಕಾರು ಖರೀದಿಸಿದ ಬಳಿಕ ಆದಾಯ ತೆರಿಗೆಯನ್ನು ಪಾವತಿಸಿದ್ದೇವೆ. ಅದರಲ್ಲಿ 9 ಲಕ್ಷ ರೂಪಾಯಿ ತೆರಿಗೆಯೇ ಆಗಿದೆ. ಪೆಟ್ರೋಲ್ ಮೇಲೆ ಶೇಕಡ 200ರಷ್ಟು ತೆರಿಗೆಯನ್ನು ನಾವು ಪಾವತಿಸುತ್ತೇವೆ. ಸರ್ಕಾರ 17,000 ಕೋಟಿ ರೂಪಾಯಿ ಸಾಲ ಪಡೆದ ಕಾರಣ ಅದನ್ನು ಮರುಪಾವತಿ ಮಾಡಲು ನಾವು 250 ರೂಪಾಯಿ ಟೋಲ್ ಶುಲ್ಕವನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನು ರಶ್ಮಿಕಾ ಮಂದಣ್ಣರ ನಿವಾಸದ ಮೇಲೆ ಐಟಿ ದಾಳಿಯ ಸುದ್ದಿಯ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ ನೆಟ್ಟಿಗರೊಬ್ಬರು, “ದಕ್ಷಿಣ ಭಾರತದಿಂದ ಉತ್ತರ ಭಾರತ, ಇಡಿ ದಾಳಿಯ ಆತಂಕ” ಎಂದು ಗೇಲಿ ಮಾಡಿದ್ದಾರೆ. ಇನ್ನು ಕೆಲವರು ಈ ಜಾಹೀರಾತಿಗೆ ಎಷ್ಟು ಸಂಭಾವನೆ ಲಭಿಸಿದೆ ಎಂದು ಪ್ರಶ್ನಿಸಿದ್ದಾರೆ.
2020ರ ಜನವರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಶ್ಮಿಕಾ ಮಂದಣ್ಣ ಕುಟುಂಬಕ್ಕೆ ಸೇರಿದ ಅಘೋಷಿತ ಆದಾಯ 3.94 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಈ ದಾಳಿಯನ್ನು ನಡೆಸಲಾಗಿದೆ.