ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲಾಗಿ ಪ್ರಧಾನಿ ಹುದ್ದೆಯನ್ನು ಮತ್ತೆ ತನ್ನದಾಗಿಸಿಕೊಳ್ಳುವ ಅತಿಯಾಸೆಯನ್ನು ಹೊಂದಿದ್ದಾರೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಟೀಕಿಸಿದರು.
ಥಾಣೆಯಲ್ಲಿ ಹಾಲಿ ಸಂಸದ ಮತ್ತು ತಮ್ಮ ಪಕ್ಷದ ಅಭ್ಯರ್ಥಿ ರಾಜನ್ ವಿಚಾರೆ ಅವರ ಪರವಾಗಿ ಪ್ರಚಾರ ನಡೆಸಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ಅವರು ತನ್ನನ್ನು ಮತ್ತು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ಪದೇ ಪದೇ ಗುರಿಯಾಗಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ? ನಮ್ಮ ಹಿಂದುತ್ವ ಮನೆ ಒಲೆ ಹೊತ್ತಿಸಿದರೆ ಬಿಜೆಪಿಯ ಹಿಂದುತ್ವ ಮನೆಯನ್ನೇ ಸುಡುತ್ತದೆ: ಉದ್ಧವ್ ಠಾಕ್ರೆ
ಈ ಲೋಕಸಭೆ ಚುನಾವಣೆಯನ್ನು ನಿಷ್ಠೆ ಮತ್ತು ದ್ರೋಹದ ನಡುವಿನ ಘರ್ಷಣೆ ಎಂದು ಕರೆದಿರುವ ಉದ್ಧವ್ ಠಾಕ್ರೆ ಅವರು ಶಿವಸೇನೆ ಮತ್ತು ಥಾಣೆ ನಗರದ ನಡುವಿನ ನಂಟಿನ ಬಗ್ಗೆ ಪ್ರಸ್ತಾಪ ಮಾಡಿ ಜನರಲ್ಲಿ ಮತಯಾಚನೆ ಮಾಡಿದ್ದಾರೆ.
“ಮೋದಿ ಅವರು ತಮ್ಮ ವಾಕ್ಚಾತುರ್ಯದ ಮೂಲಕ ವಿವಾದ ಹುಟ್ಟುಹಾಕುತ್ತಿದ್ದಾರೆ. ಬಹುಮತ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ರಾಜವಂಶದ ರಾಜಕೀಯದ ಆರೋಪ ಮಾಡುತ್ತಿದೆ” ಎಂದು ಠಾಕ್ರೆ ಆರೋಪಿಸಿದರು.
ಇತ್ತೀಚೆಗೆ ಪ್ರಧಾನಿ ಮೋದಿ ತನ್ನ ಭಾಷಣಗಳಲ್ಲಿ ಠಾಕ್ರೆಯವರ ಶಿವಸೇನೆ ಬಣವನ್ನು ‘ನಕಲಿ ಸೇನೆ’ ಎಂದು ಕರೆದಿದ್ದಾರೆ ಮತ್ತು ಶರದ್ ಪವಾರ್ ಅವರನ್ನು ಅಲೆದಾಡುವ ಆತ್ಮ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಬಾಗಿಲು ತೆರೆದರೂ ಹಿಂದಿರುಗಿ ಹೋಗಲ್ಲ: ಉದ್ಧವ್ ಠಾಕ್ರೆ
ಇದಕ್ಕೆ ತಿರುಗೇಟು ನೀಡಿದ ಉದ್ಧವ್ ಠಾಕ್ರೆ, “ಪ್ರಧಾನಿ ಮೋದಿ ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು ಪ್ರಧಾನಿ ಹುದ್ದೆಯನ್ನು ತಾನೇ ಮರಳಿ ಪಡೆಯಲು ಉತ್ಸುಕರಾಗಿದ್ದಾರೆ” ಎಂದು ಟೀಕಿಸಿದರು.
ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯು ಥಾಣೆ ಲೋಕಸಭಾ ಕ್ಷೇತ್ರಕ್ಕೆ ನರೇಶ್ ಮ್ಹಾಸ್ಕೆ ಅವರನ್ನು ಕಣಕ್ಕಿಳಿಸಿದೆ. ಮುಂಬೈನ ಆರು ಸ್ಥಾನಗಳು ಸೇರಿದಂತೆ 12 ಇತರ ಲೋಕಸಭಾ ಕ್ಷೇತ್ರಗಳಿಗೆ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.
2022ರಲ್ಲಿ ಮೂಲ ಶಿವಸೇನೆಯನ್ನು ವಿಭಜಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಶಿವಸೇನೆಯ ನಾಯಕ ಏಕನಾಥ್ ಶಿಂದೆಗೆ ಥಾಣೆಯಲ್ಲಿನ ಸ್ಪರ್ಧೆಯು ಪ್ರತಿಷ್ಠೆಯ ಯುದ್ಧವಾಗಿದೆ.