ಉತ್ತರ ಪ್ರದೇಶದ ಬಾರಾಬಂಕಿ ಹಾಗೂ ಫತೇಫುರ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಸರ್ಕಾರ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಹಿಂದುಳಿದ ಪ್ರದೇಶಗಳ ಅನುದಾನವನ್ನು ಏಕೆ ರದ್ದುಗೊಳಿಸಿತು. ಬಿಜೆಪಿ ಏಕೆ ಮೆಂತ್ಯ ಬೆಳೆಯುವ ರೈತರನ್ನು ಕಡೆಗಣಿಸಿತು. ಅದಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರಂತರವಾಗಿ ಬುದ್ವಾಲ್ ಸಕ್ಕರೆ ಗಿರಣಿಯನ್ನು ಮರು ಪ್ರಾರಂಭಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಭಾರತದ ಹಿಂದುಳಿದ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಿಂದುಳಿದ ಪ್ರದೇಶ ಅನುದಾನ ನಿಧಿಯನ್ನು 2006ರಲ್ಲಿ ಸ್ಥಾಪಿಸಿತ್ತು. ಈ ಯೋಜನೆಯಿಂದ ಉತ್ತರ ಪ್ರದೇಶದ ಹಿಂದುಳಿದ ಜಿಲ್ಲೆಗಳು 2013ರವರೆಗೂ 4 ಸಾವಿರ ಕೋಟಿ ರೂ. ಅನುದಾನ ಪಡೆದಿವೆ. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2015ರಲ್ಲಿ ಈ ಯೋಜನೆ ರದ್ದುಗೊಳಿಸಿ ಹಣ ನೀಡುವುದನ್ನು ನಿಲ್ಲಿಸಿತು. ಇದರಿಂದಾಗಿ ಉತ್ತರ ಪ್ರದೇಶದ ಫತೇಪುರ್ ರೀತಿಯ ಜಿಲ್ಲೆಗಳು ಆರ್ಥಿಕ ನೆರವು ಸಿಗದೆ ಗಮನಾರ್ಹ ಹೊಡೆತ ಅನುಭವಿಸಬೇಕಾಯಿತು. ಈ ಪ್ರಶ್ನೆಗೆ ಮೋದಿ ಸರ್ಕಾರ ಖಂಡಿತಾ ಉತ್ತರ ನೀಡಬೇಕು ಎಂದು ಜೈರಾಮ್ ರಮೇಶ್ ಆಗ್ರಹಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಭಾರತವು ವಿಶ್ವದಲ್ಲಿಯೇ ಅತೀ ಹೆಚ್ಚು ಮೆಂತ್ಯ ಎಣ್ಣೆಯನ್ನು ಉತ್ಪಾದಿಸಿ ರಫ್ತು ಮಾಡುವ ದೇಶವಾಗಿದ್ದು, ಉತ್ತರ ಪ್ರದೇಶ ಭಾರತದಲ್ಲಿಯೇ ಶೇ.90 ರಷ್ಟು ಮೆಂತ್ಯ ಎಣ್ಣೆ ಉತ್ಪಾದಿಸುತ್ತದೆ. ಮೋದಿ ಸರ್ಕಾರದ ಮೆಂತ್ಯ ಎಣ್ಣೆಯ ಮೇಲೆ ಜಿಎಸ್‌ಟಿ ಹೆಚ್ಚಿನ ತೆರಿಗೆಯ ಹೇರಿಕೆಯಿಂದಾಗಿ ಉದ್ಯಮಕ್ಕೆ ಆರ್ಥಿಕ ಹೊಡೆತ ಉಂಟಾಗಿದ್ದು, ಮೆಂತ್ಯ ಬೆಳೆಯುವ ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ಈ ರೈತರನ್ನು ಉತ್ತೇಜಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಲಿಲ್ಲ. ಇದಕ್ಕೂ ನಿರ್ಗಮಿಸುವ ಪ್ರಧಾನಿ ಮೋದಿ ಸರ್ಕಾರ ಉತ್ತರ ನೀಡಬೇಕು ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರಂತರ ಭರವಸೆಗಳ ಹೊರತಾಗಿಯೂ ಬುಂದ್ವಾಲದ ಸಕ್ಕರೆ ಗಿರಣಿ ನಿಷ್ಕ್ರಿಯವಾಗಿದೆ. ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗೂ ಮುನ್ನ ಬುಂದ್ವಾಲದ ಸಕ್ಕರೆ ಗಿರಣಿಯನ್ನು ಅಭಿವೃದ್ಧಿಪಡಿಸುವುದಾಗಿ ಬಿಜೆಪಿ ಸರ್ಕಾರಗಳು ನೀಡಿದ್ದ ಭರವಸೆಗಳು ಕೇವಲ ಭರವಸೆಗಳಾಗಿ ಉಳಿದಿವೆ. ಇದಕ್ಕೂ ಕೂಡ ಮೋದಿಯವರು ಉತ್ತರ ಕೊಡಬೇಕು ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
