ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!

Date:

ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕ ‘ದಿ ಎಕಾನಮಿಸ್ಟ್‌’ನ 2022ರ ಏಪ್ರಿಲ್ ಸಂಚಿಕೆಯೊಂದರ ಬರೆಹವೊಂದರ ತಲೆಬರೆಹ ಹೀಗಿತ್ತು- For Most Modern Autocrats, Lying is more useful Than Killing. (ಆಧುನಿಕ ಸರ್ವಾಧಿಕಾರಿಗಳ ಪೈಕಿ ಬಹುತೇಕರಿಗೆ ಸುಳ್ಳು ಹೇಳುವುದು, ಕೊಲ್ಲುವುದಕ್ಕಿಂತ ಹೆಚ್ಚು ಉಪಯೋಗಿ).

ಸನ್ಮಾನ್ಯ ಪ್ರಧಾನಮಂತ್ರಿ ಮೋದಿಯವರು ಸುಳ್ಳಿನ ಚಕ್ರವರ್ತಿಯೇ ಆಗಿ ಹೋಗಿದ್ದಾರೆ. ಅಸತ್ಯದ ಅನಭಿಷಿಕ್ತ ಸಾಮ್ರಾಟನ ಪದವಿಯೇನಾದರೂ ಇದ್ದರೆ ನಿಸ್ಸಂದೇಹವಾಗಿ ಅವರೇ ಅದರ ಅಸಲು ಹಕ್ಕುದಾರರು. ತಾವು ಎಂದೆಂದೂ ಹಿಂದೂ-ಮುಸ್ಲಿಮ್ ರಾಜಕಾರಣವನ್ನೇ ಮಾಡಿಲ್ಲವೆಂದು ಮತ್ತೊಂದು ಹಸೀ ಸುಳ್ಳು ಹೇಳಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿಯೇ ಬೇಕು ಎಂದು ಹಠ ಹಿಡಿದಿದ್ದಾರೆ. ಹಗಲನ್ನು ಇರುಳೆಂದೂ, ಇರುಳನ್ನು ಹಗಲೆಂದೂ ನಂಬಿಸುವ ತಮ್ಮ ಹಳೆಯ ಚಾಳಿಯನ್ನು ಬಿಡದಾಗಿದ್ದಾರೆ. “ಮಾಡುವುದು ಒಂದು, ಹೇಳುವುದು ಇನ್ನೊಂದು” ಎಂಬ ಮಾತಿಗೆ ತಮ್ಮದೇ ಆದ ಅಪ್ಪಟ ಮತ್ತು ತಾಜಾ ನಿದರ್ಶನ ಒದಗಿಸಿದ್ದಾರೆ.

ಮುಖ್ಯಮಂತ್ರಿ ಪದವಿಯಿಂದ ಪ್ರಧಾನಿ ಪಟ್ಟದ ತನಕ ಹೆಚ್ಚೂ ಕಡಿಮೆ ಕಾಲು ಶತಮಾನದ ಅವರ ಪ್ರಚಂಡ ಅಧಿಕಾರ ಸೌಧದ ಅಡಿಪಾಯವೇ ಅಸಲಿ ಕೋಮುದ್ವೇಷ ಮತ್ತು ನಕಲಿ ವಿಕಾಸ. ಹಿಂದುತ್ವದ ಲೋಹಪುರುಷರೆಂಬ ಬಿರುದು ಹಾಗೆಯೇ ಅವರನ್ನು ಅಲಂಕರಿಸಿಬಿಡಲಿಲ್ಲ.

ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಅಂತ ಭಾಷಣ ಮಾಡುವ ಅಗತ್ಯವೇನು ಬಿತ್ತು ನಿಮಗೆ ಎಂದು ಪ್ರಶ್ನೆ ಕೇಳುತ್ತಾರೆ ಗೋದಿ ಮೀಡಿಯಾದ ಸಂದರ್ಶಕಿ. ಕೇಳಬೇಕಿದ್ದ ಅಗತ್ಯವೇನು ಬಿತ್ತು ನಿಮಗೆ ಎಂಬುದಲ್ಲ. ಬದಲಿಗೆ ಹೀಗೆ ಹೇಳುವುದು ತಪ್ಪಲ್ಲವೇ, ಹಿಂದೂ-ಮುಸ್ಲಿಮ್ ರಾಜಕಾರಣವಲ್ಲವೇ? ವೋಟು ಗಳಿಸಲು ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಕೆರಳಿಸಿ ಎತ್ತಿ ಕಟ್ಟುವುದೇ ಆಗಿದೆಯಲ್ಲವೇ ಎಂಬುದು ಕೇಳಬೇಕಿದ್ದ ಅಸಲು ಪ್ರಶ್ನೆ. ಆದರೆ ಹಿಂದುಸ್ತಾನದ ಚರಣಚುಂಬಕ ಮೀಡಿಯಾ ಕಳೆದ ಹತ್ತು ವರ್ಷಗಳಲ್ಲಿ ಅಸಲು ಪ್ರಶ್ನೆಗಳನ್ನು ಒಮ್ಮೆಯಾದರೂ ಕೇಳಿದೆಯೇ? ಭಕ್ತ ಭಜನಾ ಮಂಡಳಿಯಾಗಿರುವ ಗುಲಾಮ ಮೀಡಿಯಾ ಬೆನ್ನುಮೂಳೆಯನ್ನು ಅಡಮಾನವಿಟ್ಟಿದೆ. ಬಿಡಿಸಿಕೊಳ್ಳಲು ಬೇಕಾದ ಬಂಡವಾಳ ಅದರ ಬಳಿ ಇಲ್ಲವೇ ಇಲ್ಲ. ಮೋದಿಯವರು ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಹೇಳುವ ಸುಳ್ಳುಗಳನ್ನು ಸತ್ಯದ ಚಕಮಕಿ ಕಲ್ಲಿಗೆ ಉಜ್ಜದೆ ಹಾಗೆಯೇ ಸತ್ಯವೆಂಬಂತೆ ಪ್ರಕಟಿಸಿ ಪ್ರಸಾರ ಮಾಡುತ್ತಿವೆ ಮಾಧ್ಯಮಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈ ಆಪಾದನೆ ಕೇಳಿ ಹೈರಾಣಾಗಿ ಹೋಗಿದ್ದೀನ್ರೀ.. ನಾನು ಹಿಂದೂ ಹೆಸರನ್ನೂ ಹೇಳಿಲ್ಲ, ಮುಸಲ್ಮಾನರನ್ನೂ ಹೆಸರಿಸಿಲ್ಲ. ಯಾವೊತ್ತಿಂದ ನಾನು ಹಿಂದೂ-ಮುಸ್ಲಿಮ್ ರಾಜಕಾರಣ ಮಾಡಲು ತೊಡಗುತ್ತೇನೆಯೋ ಅಂದಿನಿಂದ ನಾನು ಸಾರ್ವಜನಿಕ ಬದುಕಿನಲ್ಲಿರುವ ಅರ್ಹತೆಯೇ ನನಗಿಲ್ಲ” ಎಂದು ಸತ್ಯದ ಕಪಾಳಕ್ಕೆ ಬಾರಿಸಿದ್ದಾರೆ ಪ್ರಧಾನಿ.

ಈ ಸಂಪತ್ತನ್ನು ನಿಮ್ಮ ಕಷ್ಟಾರ್ಜಿತದ ಗಳಿಕೆಯನ್ನು (ಕಾಂಗ್ರೆಸ್ಸಿನವರು) ಕಿತ್ತುಕೊಂಡು ಮುಸಲ್ಮಾನರಿಗೆ ಹಂಚಲಿದ್ದಾರೆ. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ (ಕಾಂಗ್ರೆಸ್ ಪಕ್ಷ) ಸಾರಿದೆ. ಮೊದಲ ಅಧಿಕಾರ ಮುಸಲ್ಮಾನರದು ಅಂತ ಮನಮೋಹನ್‌ ಸಿಂಗ್ ಹೇಳಿದ್ದರಲ್ಲ ಅವರಿಗೆ ಹಂಚಲಿದ್ದಾರೆ. ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೆರುವವರಿಗೆ ಹಂಚಲಿದ್ದಾರೆ ಎಂಬುದು ಅವರು ಕಳೆದ ತಿಂಗಳ 23ರಂದು ರಾಜಸ್ತಾನದ ಚುನಾವಣಾ ರ್‍ಯಾಲಿಯಲ್ಲಿ ಆಡಿದ್ದ ಮಾತು. ಮುಸಲ್ಮಾನರು ಈ ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಎಂಬುದಾಗಿ ಮನಮೋಹನ್‌ ಸಿಂಗ್ ಮಾತುಗಳನ್ನು ಸಂದರ್ಭ ಸನ್ನಿವೇಶದಿಂದ ಹೊರಸೆಳೆದು ತಿರುಚಿದ್ದರು ಮೋದಿ. 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಮಾತಿನ ಅರ್ಥ ಮೋದಿಯವರ ವ್ಯಾಖ್ಯಾನ ಆಗಿರಲೇ ಇಲ್ಲ.

ಕಳೆದ ಕೆಲ ವಾರಗಳಲ್ಲಿ ಪತ್ರಿಕೆಗಳು, ಚಾನೆಲ್‌ಗಳಲ್ಲಿ ಮೋದಿಯವರ ಸಂದರ್ಶನದ ಪ್ರವಾಹವೇ ಉಕ್ಕಿದೆ. 40-50 ಸಂದರ್ಶನಗಳು! ಎಲ್ಲವೂ exclusive! ರ‌್ಯಾಲಿಗಳಲ್ಲಿ ಮಾಡಿದ ಭಾಷಣವೇ ನಾನಾ ತಲೆಬರೆಹಗಳು. ಎಲ್ಲ ಒಂದೇ. ದೊಡ್ಡ ಸುದ್ದಿ ಒಂದೂ ಹೊರಬೀಳಲಿಲ್ಲ. ಪ್ರಶ್ನೆಗಳನ್ನು ಕೇಳಿದವರಿಲ್ಲ. ಹೇಳಿದ್ದನ್ನು ಬರೆದುಕೊಂಡವರೇ ಎಲ್ಲ. ಮುಂಚಿತವಾಗಿ ಕಳಿಸಿದ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನೇ ಪ್ರಸಾದವೆಂಬಂತೆ ಸ್ವೀಕರಿಸಿದವರು. ಸುಳ್ಳುಗಳನ್ನೇ ಮತ್ತೆ ಮತ್ತೆ ಮುಖಪುಟಗಳಲ್ಲಿ ಅಚ್ಚು ಮಾಡಲಾಗುತ್ತಿದೆ. ಒಂದೇ ಪ್ರಶ್ನೆಯಲ್ಲಿ ಐದೈದು ವಿಷಯಗಳನ್ನು ಪೋಣಿಸಲಾಗುತ್ತಿದೆ. ಒಂದೆರಡಕ್ಕೆ ಉತ್ತರವಿದ್ದರೆ, ಉಳಿದವುಗಳು ಗಾಳಿಪಾಲು. ಮಂಗಳಸೂತ್ರ ಕಿತ್ತುಕೊಳ್ಳುವ, ಪ್ರಜ್ವಲ್ ರೇವಣ್ಣ ವಿಕೃತ ವಿಡಿಯೋಗಳು, ನಿರುದ್ಯೋಗ, ಅಗ್ನಿವೀರ್, ಎಲೆಕ್ಟೋರಲ್ ಬಾಂಡ್ ಮುಂತಾದ, ಅಸಲಿ ವಾದ ವಿವಾದ ಕುರಿತು ಪ್ರಶ್ನೆಗಳೇ ಇಲ್ಲ. ಅಜಿತ್ ಪವಾರ್, ಮಣಿಪುರ, ಬ್ರಿಜ್‌ಭೂಷಣ್, ಮೋದಿ ವಾಶಿಂಗ್ ಮಷೀನ್ ಸಂದರ್ಶಕರಿಗೆ ನೆನಪಿಗೇ ಬರಲಿಲ್ಲ.

ಭಾರತದ ಪ್ರಧಾನಿಯವರ ಸಂದರ್ಶನವನ್ನು ಅಮೆರಿಕೆಯ ನ್ಯೂಸ್ ವೀಕ್ ಇಂಗ್ಲಿಷ್ ನಿಯತಕಾಲಿಕವೂ ಪ್ರಕಟಿಸಿತ್ತು. ಆದರೆ ಈ ಸಂದರ್ಶನವು ಮುಂಚಿತವಾಗಿಯೇ ಕಳಿಸಿದ ಪ್ರಶ್ನೆಗಳಿಗೆ ಪ್ರಧಾನಿ ಕಾರ್ಯಾಲಯದಿಂದ ಬಂದ ಲಿಖಿತ ಉತ್ತರಗಳು ಎಂದು ಸಂದರ್ಶನದ ಕೆಳಗೆ ಸ್ಪಷ್ಟೀಕರಣ ಪ್ರಕಟಿಸಿತ್ತು. ಪತ್ರಿಕೆಗಳಲ್ಲಿ ನಾಲ್ಕರಿಂದ ಏಳು ಪುಟಗಳ ಉದ್ದದ ಸಂದರ್ಶನ. ಚುನಾವಣೆಗಳಲ್ಲಿ ಆಳುವ ಪಕ್ಷ ಮತ್ತು ಪ್ರತಿಪಕ್ಷಗಳಿಗೆ ಸಮಾನ ಅವಕಾಶ ಇರಬೇಕೆಂಬ ತತ್ವಕ್ಕೆ ಅರ್ಥವೇನು ಉಳಿಯಿತು?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

ಸರ್ವಾಧಿಕಾರಿ ಸಮಾಜಗಳ ಎರಡು ಚಹರೆಗಳನ್ನು ಅದ್ವಿತೀಯ ಚಿಂತಕ ಜಾರ್ಜ್ ಆರ್ವೆಲ್ ಗುರುತಿಸಿದ್ದ. ಒಂದು ಸುಳ್ಳು ಹೇಳುವುದು ಮತ್ತೊಂದು schizophrenia(ಛಿದ್ರಮನಸ್ಕತೆ, ನಿರಂತರ ಭ್ರಾಂತಿಗಳಿಂದ ಕೂಡಿದ ಮಾನಸಿಕ ವ್ಯಾಧಿ). ಸಂಘಟಿತವಾಗಿ ಸುಳ್ಳು ಹೇಳುವುದು ಸರ್ವಾಧಿಕಾರಿ ಪ್ರಭುತ್ವದ ಅವಿಭಾಜ್ಯ ಅಂಗ. ಯಾತನಾಶಿಬಿರಗಳು ಮತ್ತು ಗುಪ್ತ ಪೊಲೀಸ್ ದಳಗಳು ಇಲ್ಲದೆಯೂ ಸಾಗುವಂತಹುದು.

“ಸರ್ವವ್ಯಾಪಿ ಠಕ್ಕು ಕಪಟಗಳ ಕಾಲಮಾನದಲ್ಲಿ ಸತ್ಯ ಹೇಳುವುದೊಂದು ಕ್ರಾಂತಿಕಾರಿ ಕ್ರಿಯೆ” ಎಂದಿದ್ದ ಜಾರ್ಜ್ ಆರ್ವೆಲ್.

ಪ್ರಾಪಗ್ಯಾಂಡ ಎಂಬುದು ಸತ್ಯವನ್ನು ವಸ್ತುನಿಷ್ಠವಾಗಿ ತನಿಖೆ ಮಾಡಕೂಡದು. ಆಳುವವರಿಗೆ ಅನುಕೂಲಕರವಾದ ಸತ್ಯದ ಮುಖವನ್ನು ಮಾತ್ರವೇ ಜನಸಮೂಹಗಳ ಎದುರಿಗೆ ಇರಿಸಬೇಕು. ಜನಸಮೂಹಗಳ ಗ್ರಹಿಕೆಯ ಸಾಮರ್ಥ್ಯಗಳು ಬಹಳ ಸೀಮಿತ. ಅವುಗಳ ತಿಳಿವಳಿಕೆ ಶಕ್ತಿಯೂ ಬಲು ಕ್ಷೀಣ. ಅಷ್ಟೇ ಅಲ್ಲ, ..ತಡವಿಲ್ಲದೆ ಮರೆತುಬಿಡುವುದು ಅವುಗಳ ಗುಣಲಕ್ಷಣ. ಹೀಗಿರುವಾಗ ಎಲ್ಲ ಪರಿಣಾಮಕಾರಿ ಪ್ರಾಪಗ್ಯಾಂಡ ಸರಳವೂ ನೇರವೂ ಸಂಕ್ಷಿಪ್ತವೂ ಆಗಿರಬೇಕು. ಅದನ್ನು ಈಗಾಗಲೇ ಹಳತಾಗಿರುವ ಏಕರೂಪ ಮಾದರಿಯ ಸೂತ್ರಗಳಲ್ಲೇ ಇಟ್ಟು ದಾಟಿಸಬೇಕು. ನಮ್ಮ ವಿಚಾರ ಕಟ್ಟಕಡೆಯ ಮನುಷ್ಯನ ತಲೆಯೊಳಗೆ ಹೋಗುವ ತನಕ ಈ ಘೋಷಣೆಗಳನ್ನು ಮತ್ತೆ ಮತ್ತೆ ನಿರಂತರವಾಗಿ ಅಪ್ಪಳಿಸುತ್ತಲೇ ಇರಬೇಕು. ಪ್ರಾಪಗ್ಯಾಂಡದ ಸಂದೇಶದಲ್ಲಿ ಬದಲಾವಣೆಗಳನ್ನು ಮಾಡಲಾದರೂ, ಅದರ ತೀರ್ಮಾನ ಒಂದೇ ಆಗಿರಬೇಕು. ಮುಖ್ಯ ಘೋಷಣೆಯನ್ನು ಹಲವು ಬಗೆಗಳಲ್ಲಿ, ಬಹು ಕೋನಗಳಲ್ಲಿ ಚಿತ್ರಿಸಬಹುದಾದರೂ, ಅಂತ್ಯದಲ್ಲಿ ಅದೇ ಸೂತ್ರವನ್ನು ಅದು ಪ್ರತಿಪಾದಿಸಬೇಕು ಎಂದು ಹಿಟ್ಲರ್ ಹೇಳಿದ್ದಾನೆ.

ಭಾರತದಲ್ಲಿಯೂ ಪ್ರಾಪಗ್ಯಾಂಡವನ್ನು ಆಳುವವರು ತಮ್ಮ ಅಚ್ಚಿಗೆ ಸರಿಯಾಗಿ ಎರಕ ಹೊಯ್ದುಕೊಂಡಿದ್ದಾರೆ. ಅದು ಆಳುವವರ ಪರವಾಗಿ ಮತ್ತು ಆಳುವವರ ವಿರೋಧಿಗಳ ವಿರೋಧಿಯಾಗಿ, ಸುಸಜ್ಜಿತ ಬೃಹತ್ ಯಂತ್ರದಂತೆ ದಿನನಿತ್ಯ ಕೆಲಸ ಮಾಡುತ್ತದೆ. ಮಿಥ್ಯೆಗಳನ್ನು ಸೃಷ್ಟಿಸುತ್ತದೆ. ಆಳುವವರ ಎಲ್ಲ ಕೆಲಸ ಕಾರ್ಯಗಳು, ನಡೆ ನುಡಿಗಳು, ನೀತಿ ನಿರ್ಧಾರಗಳಿಗೆ ಜನರ ಒಪ್ಪಿಗೆಯನ್ನು ತಯಾರಿಸುವ ಕಾರ್ಖಾನೆ ಅದು. ಮಿಥ್ಯೆಗಳನ್ನು ಸೃಷ್ಟಿಸಲು, ಜನಸಮ್ಮತಿಯನ್ನು ತಯಾರಿಸಲು ಅದು ಯಾವ ಹಂತಕ್ಕೂ ಹೋಗಬಲ್ಲದು. ನೈತಿಕ-ಅನೈತಿಕ, ನ್ಯಾಯ-ಅನ್ಯಾಯ, ಸರಿ-ತಪ್ಪುಗಳ ಗೋಜಿಗೆ ಅದು ಹೋಗುವುದೇ ಇಲ್ಲ.

ಅಪಾಯಕಾರಿ ವ್ಯಾಧಿಯ ನಿಚ್ಚಳ ಲಕ್ಷಣಗಳು ಸಮಕಾಲೀನ ಭಾರತದಲ್ಲಿ ಭುಸುಗುಟ್ಟಿವೆ. ಸೌಹಾರ್ದ ಸಾಮರಸ್ಯದ ಬಹುಮುಖೀ ಸಂಸ್ಕೃತಿಯ ಸಾಮಾಜಿಕ ಹಂದರವನ್ನು ಛಿದ್ರಗೊಳಿಸಿ ದೇಶವನ್ನು ದುರ್ಬಲಗೊಳಿಸುವ ರೋಗ ಚಿಹ್ನೆಗಳಿವು. ಈ ರೋಗ ಬಡಿದಿದ್ದ ಜರ್ಮನಿಯು ಕಂಡ ನೀಚಾತಿನೀಚ ನರಮೇಧಗಳ ತಾಜಾ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಹಗಲು ಕಂಡ ಈ ಭಾವಿಗೆ ರಾತ್ರಿ ಬೀಳತೊಡಗಿದೆ ಭಾರತ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ...

ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

'ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು' ಎನ್ನುವುದು ಕೇವಲ ಒಂದು ಪೊಲಿಟಿಕಲ್...

ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ

ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಹೊಣೆಗಾರಿಕೆ ಇರುವ ಚುನಾವಣಾ ಆಯೋಗವು...