ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ದರೆ ಪ್ಲಾನ್ ಬಿ ಬಗ್ಗೆ ಚಿಂತಿಸುತ್ತಿದೆಯೆ? ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದ್ದಿಗಾರರ ಪ್ರಶ್ನೆಗೆ ಕೊಟ್ಟ ಉತ್ತರ ಹೀಗಿತ್ತು.
“ಪ್ಲಾನ್ ಎ ನಲ್ಲಿ ಶೇ.60 ರಷ್ಟು ಸಾಧ್ಯತೆಗಳು ಯಶಸ್ವಿಯಾಗದಿದ್ದರೆ ಮಾತ್ರ ಪ್ಲಾನ್ ಬಿ ಬಗ್ಗೆ ಚಿಂತಿಸುವ ಅಗತ್ಯವಿದೆ. ಅಂತಹ ಸಾಧ್ಯತೆಗಳು ನಾನು ನೋಡುವುದಿಲ್ಲ. ನನಗೆ ಖಚಿತ ವಿಶ್ವಾಸವಿದೆ ಪ್ರಧಾನಿ ನರೇಂದ್ರ ಮೋದಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದಾರೆ” ಎಂದು ತಿಳಿಸಿದರು.
“ವಯಸ್ಸು, ಜಾತಿಯನ್ನೂ ಮೀರಿ ಮೋದಿ ಸರ್ಕಾರದ ಅನುಕೂಲ ಪಡೆದುಕೊಂಡವರು 400 ಸಂಖ್ಯೆ ನೀಡಲಿದ್ದಾರೆ. ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲೂ ನಾವು ದೊಡ್ಡ ಜಯ ಗಳಿಸುತ್ತೇವೆ” ಎಂದು ಅಮಿತ್ ಶಾ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
543 ಸದಸ್ಯಬಲದ ಲೋಕಸಭೆಯಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿ ಒಕ್ಕೂಟ ಬಹುಮತ ಗಳಿಸಬೇಕೆಂದರೆ 272 ಸ್ಥಾನಗಳನ್ನು ಗೆಲ್ಲಬೇಕು. 2019ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಜಯಿಸಿತ್ತು. ಎನ್ಡಿಎ ಒಕ್ಕೂಟ 353 ಸ್ಥಾನ ಗಳಿಸಿತ್ತು.
ಈಗಾಗಲೇ ನಾಲ್ಕು ಹಂತದ ಲೋಕಸಭೆ ಚುನಾವಣೆಯಲ್ಲಿ 23 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 379 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು,ಇನ್ನು 164 ಕ್ಷೇತ್ರಗಳು ಬಾಕಿಯಿದ್ದು, ಮೇ.20, ಮೇ. 25 ಹಾಗೂ ಜೂನ್ 1ರಂದು ಚುನಾವಣೆ ನಡೆಯಲಿದೆ. ಜೂನ್.4 ರಂದು ಫಲಿತಾಂಶ ಹೊರಬೀಳಲಿದೆ.
