- ʼರೇವಣ್ಣ ಅವರು ಏಕವಚನದಲ್ಲಿ ಕಳ್ಳನನ್ನು ಬೆಳೆಸಿಬಿಟ್ಟೆ ಎಂದಿದ್ದಾರೆʼ
- ʼಸಾಮಾನ್ಯ ಹಳ್ಳಿ ರೈತನ ಮಗನಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೀನಿʼ
ರೇವಣ್ಣ ಅವರೇ ನಾನು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತಾಡಬಹುದು. ಆದರೆ, ಹಾಗೆ ಮಾಡಲ್ಲ. ಅಗೌರವದಿಂದ ಮಾತನಾಡುವುದನ್ನು ನೀವು ಮೊದಲು ನಿಲ್ಲಿಸಿ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಮಾಜಿ ಶಾಸಕ ಕೆ ಎಂ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ದಿನ ದೇವೇಗೌಡರು, ರೇವಣ್ಣ ಅವರು ಸತ್ಯ ಮರೆ ಮಾಚುವಂಥ ಮೂರ್ನಾಲ್ಕು ಆಪಾದನೆಗಳನ್ನು ನನ್ನ ಮೇಲೆ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರು ಇಂತಹ ಕೆಲಸ ಮಾಡಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ತೆಂಗಿನಮರ ನಾಶವಾದಾಗ ರೈತರಿಗೆ ಪರಿಹಾರ ನೀಡಿ ಎಂದು ಹೋರಾಟ ಮಾಡಿ ಮಲಗಿದರೆ, ನಾಟಕ ಎಂದು ಹೇಳ್ತಾರಲ್ಲ. ಇದು ಅವರಿಗೆ ಗೌರವ ತರುವ ಕೆಲಸನಾ? ನಾನು ಏನಕ್ಕೆ ಮಲಗಿದ್ದೆ ಎಂದು ಅರಸೀಕೆರೆ ತಾಲೂಕಿನ ಜನಕ್ಕೆ ಗೊತ್ತಿದೆ. ಪಾಪ ಅವರಿಗೆ ಭಗವಂತ ಒಳ್ಳೆಯದು ಮಾಡಲಿ, ನಾನೇನು ದ್ವೇಷ ಮಾಡಲ್ಲ” ಎಂದಿದ್ದಾರೆ.
“ರಾಜಕೀಯವಾಗಿ ನಾನು ಬೆಳೆದಿದ್ದು ನನಗೆ ಗೊತ್ತಿದೆ. ರೇವಣ್ಣ ಅವರು ಏಕವಚನದಲ್ಲಿ ಕಳ್ಳನನ್ನು ಬೆಳೆಸಿಬಿಟ್ಟೆ ಎಂದಿದ್ದಾರೆ. ಅವರು ಏನು ಬೆಳೆಸಿರೋದು, ಎಷ್ಟು ಕೊಟ್ಟಿರೋದು, ಏನು ಕೊಟ್ಟಿದ್ದಾರೆ. ನಾನು ಹೇಗೆ ಬೆಳೆದಿದ್ದೀನಿ ಅಂತ ನನಗೆ ಗೊತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.
“ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ 13 ಸಾವಿರ ಮತಗಳಷ್ಟೇ ಬರುತ್ತಿದ್ದವು. ಬೇಕಾದರೆ ತೆಗೆದು ನೋಡಲಿ. ನಾನು ಸ್ಪರ್ಧಿಸಿದ ಬಳಿಕ 80 ಸಾವಿರ ಮತಗಳು ಬಂದಿದ್ದು, ಹೆಚ್ಚಾಗಿದ್ದು ಏಕೆ ಎಂಬುದನ್ನು ಇವರು ತಿಳಿದುಕೊಳ್ಳಬೇಕು. ಎಂಪಿ ಚುನಾವಣೆಯಲ್ಲಿ ಎಷ್ಟು ಓಟು ಕೊಡುತ್ತಿದ್ದೇನೆ. ಇದೆಲ್ಲಾ ಸುಳ್ಳಾ, ಅಂಕಿ ಅಂಶಗಳನ್ನು ತೆಗೆದು ನೋಡಲಿ” ಎಂದು ಗುಡುಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಬಿಇಒ ಬಲರಾಮ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ; ಎಚ್ ಪಿ ಸ್ವರೂಪ್ ಕಿಡಿ
“ಈ ಬಾರಿ ಅರಸೀಕೆರೆಯಲ್ಲಿ ಚುನಾವಣೆ ಮಾಡಲಿ ಗೊತ್ತಾಗುತ್ತೆ. ಪಾಪ ಟಿಕೆಟ್ ಕೊಡುತ್ತೇನೆಂದು ಬಾಣಾವರ ಆಶೋಕ್ ಅವರನ್ನು ಕರೆದುಕೊಂಡು ಬಂದು ಇವರು ಮಾಡಿದ್ದು ಮೋಸ ಅಲ್ವಾ? ಈಗ ಅವನ್ಯಾರೋ ಬಿಜೆಪಿಯಲ್ಲಿ ಇದ್ದವನನ್ನು ಕರೆದುಕೊಂಡು ಬಂದು ಹೋರಾಟ ಮಾಡುತ್ತಿದ್ದಾರಲ್ಲಾ ಮಾಡಲಿ” ಎಂದು ಸವಾಲು ಹಾಕಿದ್ದಾರೆ.
“ನಿಮ್ಮ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿಕೊಳ್ಳಬೇಡಿ. ನನಗೂ ನೋವಿದೆ ರೇವಣ್ಣ ಅವರೇ, ನಿಮ್ಮ ಬಗ್ಗೆ ಮಾತನಾಡಲ್ಲ. ಸಭೆ, ಸಮಾರಂಭಗಳಲ್ಲಿ ಗೌರವದಿಂದ ಮಾತನಾಡಿ” ಎಂದು ಎಚ್ಚರಿಸಿದ್ದಾರೆ.
“ನೀವೇನು ಎಲ್ಲವನ್ನೂ ತಂದು ಹಾಕಿಲ್ಲ, ನಾನೂ ಕಷ್ಟಪಟ್ಟು ಮೇಲೆ ಬಂದಿದ್ದೀನಿ. ನಾನೇನು ಮಾಜಿ ಪ್ರಧಾನಿಯ ಮಗ ಅಲ್ಲ, ವಂಶಸ್ಥನೂ ಅಲ್ಲ. ಸಾಮಾನ್ಯ ಹಳ್ಳಿ ರೈತನ ಮಗನಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೀನಿ” ಎಂದು ತಿರುಗೇಟು ನೀಡಿದ್ದಾರೆ.