ಕಳೆದ ಐದು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಹೈದರಾಬಾದ್ಗೆ ತೆರಳುತ್ತಿದ್ದಾಗ ಮೆಹಬೂಬ್ ನಗರದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಧಾರಾವಾಹಿ ನಟಿ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದರು. ಅವರ ಸಾವಿನ ಬೆನ್ನಲ್ಲೇ ಅದೇ ಕಾರಿನಲ್ಲಿ ಪ್ರಯಾಣಿಸಿ, ಬದುಕಿ ಉಳಿದಿದ್ದ ಸ್ನೇಹಿತ ಹಾಗೂ ನಟ ಚಂದ್ರಕಾಂತ್ ಅವರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಪವಿತ್ರಾ ಜಯರಾಮ್ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದ್ರಕಾಂತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಜಯರಾಮ್ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಅವರು, ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವತ್ತು ಪವಿತ್ರಾ ಹುಟ್ಟುಹಬ್ಬ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಚಂದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಸಾವಿನ ನಂತರ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದು, ಮಿದುಳಿನ ಕಾಯಿಲೆ ಇದ್ದು, ಸಾಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.
ಬೆಂಗಳೂರಿನಿಂದ ಹೈದರಾಬಾದ್ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವಿಗೀಡಾಗಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಟಿ ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಚಂದು ಅವರು ಮಂಡ್ಯಕ್ಕೆ ಬಂದಿದ್ದರು. ಈ ವೇಳೆ ಅಪಘಾತ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ, ತೀವ್ರ ಭಾವುಕವಾಗಿ ಮಾತನಾಡಿದ್ದರು.
ಇದನ್ನು ಓದಿದ್ದೀರಾ? ದೆಹಲಿ | ಬೆಂಬಲಿಗನ ನೆಪದಲ್ಲಿ ಬಂದು ಕನ್ಹಯ್ಯ ಕುಮಾರ್ ಮೇಲೆ ಹಲ್ಲೆಗೈದ ಬಿಜೆಪಿ ಕಾರ್ಯಕರ್ತ
ಚಂದು ಅವರ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. 2015ರಲ್ಲಿ ಶಿಲ್ಪಾ ಎಂಬವರನ್ನು ಪ್ರೀತಿಸಿ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೈದರಾಬಾದ್ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
