ಪ್ರಧಾನಿ ಮೋದಿ ಅವರು ರಾಜ್ಯಗಳ ನಡುವೆ ಘರ್ಷಣೆ ಹುಟ್ಟುಹಾಕುವ ‘ಕೀಳುಮಟ್ಟದ ತಂತ್ರ’ವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯಾಕೆಂದರೆ, ಅವರ ‘ಕೋಮು ದ್ವೇಷದ ಪ್ರಚಾರ’ ಫಲಕೊಟ್ಟಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳ ನಾಯಕರು ಉತ್ತರ ಪ್ರದೇಶದ ಜನರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂಬುದು ಮೋದಿಯವರ ‘ಕಾಲ್ಪನಿಕ ಕತೆ ಮತ್ತು ಸುಳ್ಳು ಮೂಟೆ’ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
ಇತ್ತೀಚೆಗೆ, ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮೋದಿ, “ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ದಕ್ಷಿಣದ ಮಿತ್ರಪಕ್ಷಗಳು ಉತ್ತರ ಪ್ರದೇಶ ಮತ್ತು ಸನಾತನ ಧರ್ಮವನ್ನು ಅವಮಾನಿಸಿವೆ” ಎಂದು ಆರೋಪಿಸಿದ್ದರು.
ತಮಿಳುನಾಡಿನಲ್ಲಿ ಬಿಹಾರದಿಂದ ಬಂದ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಮನೀಷ್ ಕಶ್ಯಪ್ ಎಂಬಾತ ತನ್ನ ಯೂಟ್ಯೂಬ್‌ನಲ್ಲಿ ನಕಲಿ ವಿಡಿಯೋವನ್ನು ಪ್ರಕಟಿಸಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಕಳೆದ ತಿಂಗಳು ಜೈಲಿನಿಂದ ಬಿಡುಗಡೆಯಾದ ಆತ ಬಿಜೆಪಿ ಸೇರಿದ್ದಾನೆ. ಇಂತಹ ಸುಳ್ಳುಗಳನ್ನು ಹರಡುವುದು ಮತ್ತು ಹರಡುವವರನ್ನು ಬಿಜೆಪಿ ಪ್ರೋತ್ಸಾಹಿಸುತ್ತದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಟೀಕಿಸಿದ್ದಾರೆ.
“ಬಿಜೆಪಿಯ ವಿಭಜನೆಯ ಕನಸುಗಳು ಎಂದಿಗೂ ನನಸಾಗುವುದಿಲ್ಲ! ಸುಳ್ಳು ನಿರೂಪಣೆ ಮತ್ತು ದ್ವೇಷವನ್ನು ಕಿತ್ತೊಗೆಯಲಾಗುತ್ತದೆ. ಭಾರತ ಗೆಲ್ಲುತ್ತದೆ,” ಸ್ಟಾಲಿನ್ ಹೇಳಿದ್ದಾರೆ.
“ದ್ವೇಷದ ಪ್ರಚಾರ ನಿಷ್ಪ್ರಯೋಜಕವಾಗಿದೆ. ಹೀಗಾಗಿ, ಮೋದಿ ಹತಾಶರಾಗಿದ್ದಾರೆ. ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಜನರಿಗೆ ಹೇಳಲು ಯಾವುದೇ ಸಾಧನೆಗಳಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.
“ದ್ವೇಷ ಭಾಷಣ ವಿಫಲವಾದ್ದರಿಂದ, ಪ್ರಧಾನಿ ಮೋದಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ರಾಜ್ಯಗಳ ನಡುವೆ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ತಾವು ಯಾವಾಗಲೂ ಬಡ ಜನರ ವಿರೋಧಿ ಎಂಬುದನ್ನು ತೋರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
‘ಇಂಡಿಯಾ’ ಮೈತ್ರಿಕೂಟ ಗೆಲುವಿನತ್ತ ಓಡುತ್ತಿದೆ. ಮೋದಿ ಅವರು ಸುಳ್ಳು ಮತ್ತು ದ್ವೇಷದ ಪ್ರಚಾರ ಮಾಡುತ್ತಿದ್ದಾರೆ. ಜನರು ಚುನಾವಣಾ ಆಯೋಗದ ಮೌನವನ್ನು ಆಘಾತ ಮತ್ತು ದುಃಖದಿಂದ ಗಮನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.