ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ಗೋಡೆಯನ್ನು ಉರುಳಿಸಿದ್ದು ನಮ್ಮ ‘ಧಕಡ್’ (ಬಲವಾದ) ಸರ್ಕಾರ. ಆ ಗೋಡೆ ಉರುಳಿದ ಪರಿಣಾಮ ಕಾಶ್ಮೀರವು ಈಗ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಅದೇ ಕಾಶ್ಮೀರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಚುನಾವಣಾ ಕಣದಿಂದ ಓಡಿಹೋಗಿದೆ. ಇದು, ಬಿಜೆಪಿಯ ಸೋಲಿನ ಭಯವನ್ನು ಸೂಚಿಸುತ್ತದೆ ಎಂಬುದು ಗಮನಾರ್ಹ.
ಹರಿಯಾಣದ ಅಂಬಾಲದಲ್ಲಿ ಶನಿವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮೋದಿ, “ಮೋದಿಯವರ ಧಕದ್ (ಬಲವಾದ ಮತ್ತು ನಿರ್ಣಾಯಕ) ಸರ್ಕಾರವು ಆಗಸ್ಟ್ 2019ರಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಹಕ್ಕುಗಳನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯ ಗೋಡೆಯನ್ನು ಉರುಳಿಸಿತು. ಕಾಶ್ಮೀರದ ಅಭಿವೃದ್ಧಿಗೆ ಬಾಗಿಲು ತೆರೆಯಿತು” ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ ಮೋದಿ. “ಕಾಂಗ್ರೆಸ್‌ನ ಇತಿಹಾಸವು ಭಾರತದ ಪಡೆಗಳು ಮತ್ತು ಸೈನಿಕರಿಗೆ ದ್ರೋಹ ಬಗೆದಿದೆ. ‘ಜೀಪ್ ಹಗರಣ’ವು ಕಾಂಗ್ರೆಸ್‌ನ”ಮೊದಲ ಹಗರಣ” ಎಂದು ಹೇಳಿದ್ದಾರೆ.
“ದುರ್ಬಲ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಬದಲಾಯಿಸಬಹುದೇ? ಹರಿಯಾಣವು ಸಶಸ್ತ್ರ ಪಡೆಗಳಿಗೆ ಸಾಕಷ್ಟು ಸಂಖ್ಯೆಯ ಸೈನಿಕರನ್ನು ನೀಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಹರಿಯಾಣದಲ್ಲಿ ತಾಯಂದಿರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದರು” ಎಂದಿದ್ದಾರೆ.
“ಹರಿಯಾಣದ ರಕ್ತನಾಳಗಳಲ್ಲಿ ದೇಶಭಕ್ತಿ ಹರಿಯುತ್ತದೆ. ರಾಜ್ಯವು ದೇಶವಿರೋಧಿ ಶಕ್ತಿಗಳನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ, ಹರಿಯಾಣದ ಪ್ರತಿ ಮನೆಯು ‘ಮೋದಿ ಸರ್ಕಾರ್ – ಫಿರ್ ಏಕ್ ಬಾರ್’ ಎಂದು ಹೇಳುತ್ತಿದೆ” ಎಂದರು.
“ದೇಶದಲ್ಲಿ ಧಕದ್ ಸರ್ಕಾರವಿದ್ದಾಗ, ಶತ್ರುಗಳು ಏನನ್ನೂ ಮಾಡುವ ಮೊದಲು 100 ಬಾರಿ ಯೋಚಿಸುತ್ತಾರೆ. ಈ ಹಿಂದೆ ತನ್ನ ಕೈಯಲ್ಲಿ ಬಾಂಬ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಕೈಯಲ್ಲಿ ಈಗ ‘ಭೀಖ್ ಕಾ ಕಟೋರಾ’ (ಭಿಕ್ಷಾಪಾತ್ರೆ) ಇದೆ” ಎಂದು ಮೋದಿ ಹೇಳಿದರು.
ಹರಿಯಾಣದ ಒಟ್ಟು 10 ಲೋಕಸಭಾ ಸ್ಥಾನಗಳಿಗೆ ಮೇ 25 ರಂದು ಮತದಾನ ನಡೆಯಲಿದೆ.