ಮಳೆಯಿಲ್ಲದೇ, ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಬೆಂಗಳೂರು ಜನರ ಮೊಗದಲ್ಲಿ ಇದೀಗ ಸಂತಸ ಮೂಡಿದೆ. 37 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಸೆಕೆಗೆ ಜನರು ಬೇಸತ್ತಿದ್ದರು. ಇದೀಗ, ಮಳೆಯಾಗಿರುವುದರಿಂದ ನಗರದಲ್ಲಿ ತಂಪಾದ ವಾತಾವರಣ ಮೂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮೇ 19ರಂದು ಧಾರಾಕಾರ ಮಳೆಯಾಗಿದೆ. ಮಳೆಯ ಜತೆಗೆ ನಗರದ ಹಲವೆಡೆ ಅವಾಂತರ ಕೂಡ ಸೃಷ್ಟಿಯಾಗಿದೆ.
ರಾತ್ರಿ ಸುರಿದ ಮಳೆಗೆ ಯಲಹಂಕದ ನಾರ್ತ್ ಹುಡ್ ಅಪಾರ್ಟ್‌ಮೆಂಟ್ ಸುತ್ತಮುತ್ತ ನೀರು ತುಂಬಿಕೊಂಡಿದೆ. ಕಳೆದ ಒಂದು ವಾರದಿಂದ ರಾಜಕಾಲುವೆಯಿಂದ ನೀರು ಹರಿಯುತ್ತಿದೆ. ಸ್ಟಾರ್ಮ್ ವಾಟರ್ ಡ್ರೇನ್ ಓಪನ್ ಬಿಟ್ಟಿರೋದರಿಂದ ಸಮಸ್ಯೆಯಾಗುತ್ತಿದೆ. ಅಲ್ಲದೇ, ರಾಜಕಾಲುವೆ ನೀರಿನ ವಾಸನೆಗೆ ನಿವಾಸಿಗಳು ಕಂಗಾಲಾಗಿದ್ದು, ಕೆಲವರು ಮನೆ ಬಿಟ್ಟು ಬೇರೆಡೆ ತೆರಳಿದ್ದಾರೆ.
ಮೋಟಾರ್‌ನಲ್ಲಿ ನೀರು ಹೊರಹಾಕಲು ನಿತ್ಯ ಹರಸಾಹಸ ಪಡುತ್ತಿದ್ದಾರೆ. ವಾರದ ಹಿಂದೆ ಬಿಬಿಎಂಪಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕಾಲುವೆಯಿಂದ ನೀರು ತುಂಬಿ 22 ಮನೆಗಳ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಪಕ್ಕದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ನೀರು ಹರಿಯದೇ ಇರುವುದರಿಂದ ಆ ನೀರು ಕೂಡ ಹಾಳಾಗುತ್ತಿದೆ. ರಾಜಕಾಲುವೆ, ಮಳೆ ನೀರು ಸೇರಿ ಇಡೀ ಪ್ರದೇಶ ಕೆರೆಯಂತಾಗಿದೆ.
ಎಂ.ಎಸ್.ಪಾಳ್ಯ ಬಳಿ ನೀರು ನಿಂತಿರುವುದರಿಂದ, ಯಲಹಂಕ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಬಿನ್ನಿ ಮಿಲ್, ಪೀಣ್ಯ ಪ್ಲೈಓವರ್ ರಸ್ತೆ, ಸಿಟಿ ಮಾರ್ಕೆಟ್ ಡೌನ್ ರಾಂಪ್ ಬಳಿ, ಹೆಬ್ಬಾಳ ಜಂಕ್ಷನ್, ಹೆಬ್ಬಾಳ ಮೇಲ್ಸೇತುವೆ, ದೇವಿನಗರ ಅಂಡರ್‌ಪಾಸ್, ವೀರಣ್ಣಪಾಳ್ಯ ಸೇರಿದಂತೆ ನಗರ ಹಲವೆಡೆ ನೀರು ಜಲಾವೃತಗೊಂಡಿತ್ತು. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.
ಸಂಜಯನಗರ ಮುಖ್ಯರಸ್ತೆಯಲ್ಲಿ ಮರದ ಕೊಂಬೆ ಬಿದ್ದ ಕಾರಣ ನಾಗಶೆಟ್ಟಿಹಳ್ಳಿ ಮುಖ್ಯರಸ್ತೆ ಕಡೆಗೆ ಸಂಚಾರ ಸಮಸ್ಯೆ ಉಂಟಾಗಿತ್ತು.
ನಿನ್ನೆ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಮಾಗುಂಡಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಸತತ ಒಂದು ಗಂಟೆಗಳ ಕಾಲ ಮಳೆ ಸುರಿದು ರಸ್ತೆಗಳೆಲ್ಲಾ ಜಲಾವೃತಗೊಂಡವು.
ಮತ್ತೊಂದೆಡೆ ಚಿಕ್ಕಮಗಳೂರು ತಾಲೂಕಿನ ಕಸ್ಕೆ ಎಂಬಲ್ಲಿ ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಎಲ್ಲ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಳೆಗೆ ಕಾಂಪೌಂಡ್ ಕುಸಿದು 5 ಬೈಕ್, 2 ಸೈಕಲ್ ಜಖಂ ಆಗಿದೆ.
ಮಂಡ್ಯ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಕೆ.ಆರ್.ಪೇಟೆ, ಶೀಳನೆರೆ, ಮುರುಕನಹಳ್ಳಿ, ಮರಡಹಳ್ಳಿ, ಜಕ್ಕನಹಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಮಳೆಗೆ ತೆಂಗಿನ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆ ಅವಾಂತರ ತಂದೊಡ್ಡಿದೆ. ಭಾರೀ ಮಳೆಯಿಂದ ಮನೆಯೊಳಗೆ ಚರಂಡಿ ನೀರು ನುಗ್ಗಿದ್ದು, ಮನೆಯಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯ ಹಾನಿಯಾಗಿದೆ.
ಗೌರಿಬಿದನೂರು-ಕೊರಟಗೆರೆ ಹೆದ್ದಾರಿ ಎತ್ತರ ಹೆಚ್ಚಿಸಿ ಚರಂಡಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಕಳೆದ 2 ದಿನದಿಂದ ಭಾರೀ ಮಳೆಯಾಗುತ್ತಿದೆ. ಮಳೆಯಿಂದ ಕೆಲ್ಲೋಡು ಸೇತುವೆ ಭರ್ತಿಯಾಗಿ ಹರಿಯುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಸೇತುವೆ ತುಂಬಿ ವಾಣಿ ವಿಲಾಸ ಸಾಗರ ಡ್ಯಾಂ ಕಡೆಗೆ ನೀರು ಹರಿಯುತ್ತಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮೇಗಳ ಕಣಿವೆ ಅರಣ್ಯ ಪ್ರದೇಶದಲ್ಲಿ ಜಲಪಾತ ಸೃಷ್ಠಿಯಾಗಿದೆ. ಕಳೆದ ಎರಡು ದಿನದಿಂದ ಉತ್ತಮ ಮಳೆ ಹಿನ್ನೆಲೆ ಮೇಗಳ ಕಣಿವೆಯ ಬಂಡೆಗಲ್ಲಿನ ಮೇಲೆ ಮಳೆ ನೀರು ಧುಮ್ಮಿಕ್ಕುತ್ತಿದೆ.
ಈ ಸುದ್ದಿ ಓದಿದ್ದೀರಾ? ಆರ್‌ಸಿಬಿ-ಸಿಎಸ್‌ಕೆ ಪಂದ್ಯ | ಬೆಂಗಳೂರಿನ ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ; ಬಿಗಿ ಭದ್ರತೆ
ಇನ್ನು ಹಾವೇರಿ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದ್ದು, ಮಳೆ ಆರ್ಭಟಕ್ಕೆ ಶಿಗ್ಗಾಂವ್ ತಾಲೂಕಿನಲ್ಲಿ ಹೊಲ-ಗದ್ದೆಗಳೆಲ್ಲಾ ಜಲಾವೃತವಾಗಿ ಮೆಕ್ಕೆಜೋಳದ ರಾಶಿ ನೀರಿನಲ್ಲಿ ಸಂಪೂರ್ಣ ಕೊಚ್ಚಿ ಹೋಗಿದೆ.
ಚಿಕ್ಕಬಳ್ಳಾಪುರದ ನಾನಾಕಡೆ ಧಾರಕಾರ ಮಳೆಯಾಗಿ ಅವಾಂತರ ಸೃಷ್ಟಿಯಾಗಿದೆ. ರಾಯಚೂರಿನಲ್ಲಿಯೂ ಮಳೆಯ ಅಬ್ಬರಕ್ಕೆ ರಸ್ತೆಗಳ ಮೇಲೆ ಮಳೆ ನೀರು ಹಳ್ಳದಂತೆ ಹರಿದು ವಾಹನ ಸವಾರರು ಪರದಾಡುವಂತಾಯಿತು.
ರಾಜ್ಯದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು-ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.