ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಗರು ಮುಸ್ಲಿಮರ ವಿರುದ್ಧ ಕೋಮು ದ್ವೇಷ ಭಾಷಣದ ಮಳೆಗರೆಯುತ್ತಿದ್ದಾರೆ. ಇಂತಹ ಕೋಮು ರಾಜಕೀಯದಲ್ಲಿ ಮುಸ್ಲಿಂ ಪ್ರಾತಿನಿತ್ಯದ ವಿಚಾರ ಮೂಲೆಗುಂಪಾಗುತ್ತಿದೆ. ಯಾವುದೇ ಸಮುದಾಯದ ಪರವಾಗಿ ಸಂಸತ್‌ನಲ್ಲಿ ಚರ್ಚೆಯಾಗಬೇಕೆಂದರೆ, ಆ ಸಮುದಾಯದ ಪ್ರತಿನಿಧಿಗಳು ಇರಲೇಬೇಕು. ಆದರೆ, ಸಂಸತ್‌ನಲ್ಲಿ ಮುಸ್ಲಿಂ ಪ್ರತಿನಿಧಿಗಳ ಸಂಖ್ಯೆ ಇಳಿಯುತ್ತಿದೆ. ಮೂಲ ಕಾರಣವಾಗಿ, ಚುನಾವಣಾ ಕಣದಲ್ಲಿಯೂ ಮುಸಲ್ಮಾನ ಅಭ್ಯರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ.
ಲೋಕಸಭೆಯ 543 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮುಸ್ಲಿಂ ವಿರೋಧಿ, ಕೋಮುವಾದಿ ಪಕ್ಷ ಬಿಜೆಪಿ ತನ್ನ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕೇರಳದ ಮಲಪ್ಪುರಂನಲ್ಲಿ ಕಣಕ್ಕಿಳಿಸಿದೆ. ಬಿಜೆಪಿಯ ಮಿತ್ರ ಪಕ್ಷ ಜೆಡಿಯು ಬಿಹಾರದಲ್ಲಿ ಮತ್ತೊಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇನ್ನು, ಪ್ರಮುಖ ವಿರೋಧ ಪಕ್ಷಗಳಲ್ಲಿಯೂ ಈ ಸಮುದಾಯಕ್ಕೆ ಪ್ರಾಥಿನಿಧ್ಯ ಕುಸಿಯುತ್ತಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ ಮತ್ತು ಸಿಪಿಐ(ಎಂ) ಈ ಬಾರಿ 78 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಪಕ್ಷಗಳು 2019ರಲ್ಲಿ 115 ಮಂದಿ ಮುಸ್ಲಿಮರನ್ನು ಕಣಕ್ಕಿಳಿಸಿದ್ದವು. ವರ್ಷದಿಂದ ವರ್ಷಕ್ಕೆ ಮುಸ್ಲಿಂ ಪ್ರಾತಿನಿಧ್ಯವನ್ನು ಎಲ್ಲ ಪಕ್ಷಗಳು ಕಡೆಗಣಿಸುತ್ತಿವೆ.
2019 ರಲ್ಲಿ, 26 ಮುಸ್ಲಿಂ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದರು; ಅವರಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿಯಿಂದ ತಲಾ ನಾಲ್ಕು, ಬಿಎಸ್‌ಪಿ ಮತ್ತು ಎಸ್‌ಪಿಯಿಂದ ತಲಾ ಮೂವರು ಹಾಗೂ ಎನ್‌ಸಿಪಿ ಮತ್ತು ಸಿಪಿಐ(ಎಂ) ತಲಾ ಒಬ್ಬರು. ಉಳಿದಂತೆ, ಅಸ್ಸಾಂನ AIUDF, ಬಿಹಾರದ ಲೋಕ ಜನಶಕ್ತಿ, IUML ಮತ್ತು ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ನಿಂದ ತಲಾ ಒಬ್ಬರು ಸಂಸತ್ ಪ್ರವೇಶಿಸಿದ್ದರು.
2024ರ ಪ್ರಸ್ತುತ ಚುನಾವಣೆಯಲ್ಲಿ ಬಿಎಸ್‌ಪಿ 35 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದೆಲ್ಲ ಪಕ್ಷಗಳಿಗೆ ಹೋಲಿಸಿದರೆ, ಇದು ಅತ್ಯಧಿಕ ಸಂಖ್ಯೆ. ಬಿಎಸ್‌ಪಿಯಿಂದ ಉತ್ತರ ಪ್ರದೇಶದಲ್ಲಿ 17, ಮಧ್ಯಪ್ರದೇಶದಲ್ಲಿ ನಾಲ್ಕು, ಬಿಹಾರ ಮತ್ತು ದೆಹಲಿಯಲ್ಲಿ ತಲಾ ಮೂರು, ಉತ್ತರಾಖಂಡದಲ್ಲಿ ಎರಡು ಹಾಗೂ ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಜಾರ್ಖಂಡ್, ತೆಲಂಗಾಣ ಮತ್ತು ಗುಜರಾತ್‌ನಲ್ಲಿ ತಲಾ ಒಬ್ಬರು ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.
2019ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಿಎಸ್‌ಪಿ, ಅಗಲೂ 39 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಮೂವರು ಗೆಲುವು ಸಾಧಿಸಿದ್ದರು. ಅದಕ್ಕೂ ಮುಂಚೆ, 2014ರಲ್ಲಿ 61 ಮುಸ್ಲಿಂ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿತ್ತು. ಆಗ, ಯಾರೂ ಗೆದಿದ್ದರಲಿಲ್ಲ. ಆಗ, 2014ರಲ್ಲಿ 503 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ, ಈಗ 424 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಉತ್ತರ ಪ್ರದೇಶದಲ್ಲಿ ಎಸ್‌ಪಿ ಮುಸ್ಲಿಂ ಮತ ಬ್ಯಾಂಕ್‌ನ ಹೆಚ್ಚು ಪಾಲನ್ನು ಹೊಂದಿದೆ. ಹೀಗಾಗಿ, ಎಸ್‌ಪಿ ಜೊತೆ ಮೈತ್ರಿಯಲ್ಲಿದ್ದ ಬಿಎಸ್‌ಪಿ 2019ರಲ್ಲಿ ಉತ್ತರ ಪ್ರದೇಶದಲ್ಲಿ 6 ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿತ್ತು. ಈ ಬಾರಿ 17 ಮಂದಿಯನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ಮತ್ತು ಎಸ್‌ಪಿಯನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು, ಈ ಬಾರಿಯ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸಲು ಮತ್ತು ಬಿಜೆಪಿಗೆ ಸಹಾಯ ಮಾಡಲು ಬಿಎಸ್‌ಪಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಆರೋಪಿಸಿವೆ.
ಪ್ರಸ್ತುತ ಚುನಾವಣೆಯಲ್ಲಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿರುವ ಪಕ್ಷಗಳಲ್ಲಿ ಕಾಂಗ್ರೆಸ್ 2ನೇ ಸ್ಥಾನದಲ್ಲಿದೆ. ಪಕ್ಷವು 19 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಅವರಲ್ಲಿ, ಪಶ್ಚಿಮ ಬಂಗಾಳದಲ್ಲಿ ಆರು ಮಂದಿ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಇಬ್ಬರು ಹಾಗೂ ಕರ್ನಾಟಕ, ಕೇರಳ, ಒಡಿಶಾ, ತೆಲಂಗಾಣ ಮತ್ತು ಲಕ್ಷದ್ವೀಪದಲ್ಲಿ ತಲಾ ಒಬ್ಬರು ಕಣದಲ್ಲಿದ್ದಾರೆ.
ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷವೆಂದು ಬಿಜೆಪಿಯಿಂದ ದಾಳಿಗೆ ಒಳಗಾಗುತ್ತಿದ್ದ ಕಾಂಗ್ರೆಸ್ 2019ರಲ್ಲಿ 34 ಮುಸಲ್ಮಾನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ 10 ಬಂಗಾಳ ಮತ್ತು 8 ಯುಪಿಯಲ್ಲಿ ಸ್ಪರ್ಧಿಸಿದ್ದರು. ಅವರಲ್ಲಿ ನಾಲ್ವರು ಗೆದ್ದಿದ್ದಾರೆ. ಆದರೆ, ಈ ಬಾರಿ 2019ಕ್ಕಿಂತ ಬರೋಬ್ಬರಿ 100 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆ. 2019ರಲ್ಲಿ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಈ ಬಾರಿ 328 ಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧೆಯಲ್ಲಿದೆ.
2014ರಲ್ಲಿ, ಕಾಂಗ್ರೆಸ್ 464 ಸ್ಥಾನಗಳಲ್ಲಿ ಸ್ಪರ್ಧಿಸಿದ್ದಾಗ, 31 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಅವರಲ್ಲಿ, ಮೂವರು ಗೆದಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಪಕ್ಷಗಳಲ್ಲಿ ಟಿಎಂಸಿ 3ನೇ ಸ್ಥಾನದಲ್ಲಿದೆ. ಆರು ಮಂದಿ ಮುಸ್ಲಿಮರು ಪಕ್ಷದಿಂದ ಸ್ಪರ್ಧಿಸಿದ್ದು, ಅವರಲ್ಲಿ ಐವರು ಬಂಗಾಳ ಮತ್ತು ಒಬ್ಬರು ಅಸ್ಸಾಂನಲ್ಲಿ ಸ್ಪರ್ಧೆಯಲ್ಲಿದ್ದಾರೆ.
2019ರಲ್ಲಿ ಟಿಎಂಸಿ 13 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರ, ಅಸ್ಸಾಂ ಮತ್ತು ಬಿಹಾರ ರಾಜ್ಯಗಳಲ್ಲಿ ಅವರು ಸ್ಪರ್ಧಿಸಿದ್ದರು. ಅವರಲ್ಲಿ ನಾಲ್ವರು ಗೆಲುವು ಸಾಧಿಸಿದ್ದರು. 2014ರಲ್ಲಿ, 24 ಮಂದಿ ಮುಸ್ಲಿಂ ಅಭ್ಯರ್ಥಿಗಳು ಟಿಎಂಸಿಯಿಂದ ಕಣದಲ್ಲಿದ್ದರು. ಆಗಲೂ ಮೂವರು ಗೆದ್ದಿದ್ದರು.
ಆದರೆ ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಟಿಎಂಸಿ ಸ್ಪರ್ಧಿಸುವ ಲೋಕಸಭಾ ಸ್ಥಾನಗಳ ಸಂಖ್ಯೆ 131 ರಿಂದ 62 ರಿಂದ 48ಕ್ಕೆ ಇಳಿದಿದೆ. ಈ ಬಾರಿ, 48 ಕ್ಷೇತ್ರಗಳಲ್ಲಿ ಮಾತ್ರವೇ ಟಿಎಂಸಿ ಸ್ಪರ್ಧಿಸಿದೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಪ್ರಬಲ ಬೆಂಬಲದ ಹೊರತಾಗಿಯೂ, ಎಸ್‌ಪಿ ಈ ಬಾರಿ ಕೇವಲ ನಾಲ್ಕು ಮುಸ್ಲಿಂ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದೆ. ಅವರಲ್ಲಿ ಮೂವರು ಉತ್ತರ ಪ್ರದೇಶ ಮತ್ತು ಒಬ್ಬರು ಆಂಧ್ರಪ್ರದೇಶದಲ್ಲಿ ಸ್ಪರ್ಧಿಸಿದ್ದಾರೆ. ಈ ಪಕ್ಷವು 2019ರಲ್ಲಿ 8 ಮಂದಿಯನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಮೂವರು ಗೆದಿದ್ದರು. 2014ರಲ್ಲಿ 39 ಮಂದಿ ಮುಸ್ಲಿಂ ಅಭ್ಯರ್ಥಿಗಳು ಎಸ್‌ಪಿಯಿಂದ ಸ್ಪರ್ಧಿಸಿದ್ದರು. ಆದರೆ, ಯಾರೊಬ್ಬರೂ ಗೆದ್ದಿರಲಿಲ್ಲ.
ಎಸ್‌ಪಿ 2014ರಲ್ಲಿ 197 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, 2019ರಲ್ಲಿ ಕೇವಲ 49 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ 71 ಸ್ಥಾನಗಳಲ್ಲಿ ಕಣದಲ್ಲಿದ್ದಾರೆ.
2019ರಲ್ಲಿ ಎಸ್‌ಪಿ ಮಹಾರಾಷ್ಟ್ರದಲ್ಲಿ ಮೂರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ಸ್ಪರ್ಧೆಗೆ ಮುಂದಾಗಿಲ್ಲ. ಪಕ್ಷವು ‘ಇಂಡಿಯಾ’ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತಿದೆ.
ಮುಸ್ಲಿಂ-ಯಾದವರ ಮತ ಬ್ಯಾಂಕ್ ಹೊಂದಿರುವ ಮತ್ತೊಂದು ಪಕ್ಷ ಆರ್‌ಜೆಡಿ, ಮಹಾಘಟಬಂಧನ್ ಮೈತ್ರಿಯ ಭಾಗವಾಗಿ 2019ರಲ್ಲಿ 19 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈಗ 23 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಆದರೂ, ಈ ಬಾರಿ ಬಿಹಾರದಲ್ಲಿ ಇಬ್ಬರು ಮುಸ್ಲಿಮರನ್ನು ಕಣಕ್ಕಿಳಿಸಿದೆ. 2019ರಲ್ಲಿ ಐವರನ್ನು ಕಣಕ್ಕಿಳಿಸಿತ್ತು. ಅವರಲ್ಲಿ, ಯಾರೂ ಗೆದಿರಲಿಲ್ಲ. 2014ರಲ್ಲಿ ಆರ್‌ಜೆಡಿಯಿಂ ಆರು ಮುಸ್ಲಿಂ ಅಭ್ಯರ್ಥಿಗಳಿದ್ದರು. ಒಬ್ಬರು ಗೆದ್ದಿದ್ದರು.
ಎನ್‌ಸಿಪಿ 2019ರಲ್ಲಿ ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಒಬ್ಬರು ಗೆದ್ದಿದ್ದರು. 2014ರಲ್ಲಿ ಎನ್‌ಸಿಪಿ ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇಬ್ಬರು ಗೆದ್ದಿದ್ದರು. ಈ ಬಾರಿ, ಪಕ್ಷವು ಎರಡು ಬಣಗಳಾಗಿ – NCP (ಅಜಿತ್ ಪವಾರ್) ಮತ್ತು NCP (ಶರದ್ ಪವಾರ್) – ವಿಭಜನೆಯಾಗಿದೆ. ಎರಡೂ ಬಣಗಳು ಲಕ್ಷದ್ವೀಪದಲ್ಲಿ ತಲಾ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. 2019ರಲ್ಲಿ ಕಾಂಗ್ರೆಸ್‌ನ ಹಮ್ದುಲ್ಲಾ ಸಯೀದ್ ಅವರನ್ನು 823 ಮತಗಳ ಅಂತರದಿಂದ ಸೋಲಿಸಿದ್ದ ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಪಿಪಿ ಅವರು ಈಗ ಎನ್‌ಸಿಪಿ (ಶರದ್ ಪವಾರ್) ಬಣದಿಂದ ಸ್ಪರ್ಧಿಸಿದ್ದಾರೆ.
2019ರಲ್ಲಿ, 436 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, ಮೂವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರಲ್ಲಿ ಯಾರೂ ಗೆಲ್ಲಲಿಲ್ಲ. 2014ರಲ್ಲಿ, ಅದು ಸ್ಪರ್ಧಿಸಿದ 428 ಸ್ಥಾನಗಳಲ್ಲಿ ಏಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಗಲೂ ಯಾರೂ ಗೆದ್ದಿರಲಿಲ್ಲ. ಈ ಬಾರಿ ಬಿಜೆಪಿ 440 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಒಬ್ಬ ಮುಸ್ಲಿಂ ಅಭ್ಯರ್ಥಿ ಕಣದಲ್ಲಿದ್ದಾರೆ.
CPI ಮತ್ತು CPI(M) ಒಟ್ಟಾಗಿ 2019ರಲ್ಲಿ 13 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅವರಲ್ಲಿ ಒಬ್ಬರು ಗೆದ್ದಿದ್ದರು. 2014ರಲ್ಲಿ, ಒಟ್ಟಿಗೆ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆಗ, ಇಬ್ಬರು ಗೆದ್ದರು. ಈ ಬಾರಿ, ಸಿಪಿಐ(ಎಂ) ಮಾತ್ರ ಮುಸ್ಲಿಮರನ್ನು ಕಣಕ್ಕಿಳಿಸದೆ. ಬಂಗಾಳದಲ್ಲಿ ಐದು, ಕೇರಳದಲ್ಲಿ ನಾಲ್ಕು ಮತ್ತು ತೆಲಂಗಾಣದಲ್ಲಿ ಒಬ್ಬರು ಸೇರಿದಂತೆ ಒಟ್ಟು 10 ಮಂದಿ ಮುಸ್ಲಿಂ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಮೂಲಭೂತವಾಗಿ ಮುಸ್ಲಿಂ ಹಿತಾಸಕ್ತಿಗಳನ್ನು ಪ್ರತಿನಿಧಿಸಿರುವ ಸಣ್ಣ ಪಕ್ಷಗಳಾದ AIMIM, IUML ಮತ್ತು AIUDF ವಿವಿಧ ರಾಜ್ಯಗಳಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಕೆಲವು ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಒಟ್ಟಾರೆಯಾಗಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ, ಉತ್ತರ ಪ್ರದೇಶ(22), ಪಶ್ಚಿಮ ಬಂಗಾಳ (17), ಬಿಹಾರ (7), ಕೇರಳ (6) ಮತ್ತು ಮಧ್ಯಪ್ರದೇಶದಲ್ಲಿ (4) ಗರಿಷ್ಠ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿರುವ ಅಸ್ಸಾಂನಲ್ಲಿ ಮೂರು ಮುಸ್ಲಿಂ ಅಭ್ಯರ್ಥಿಗಳು ಮಾತ್ರವೇ ಕಣದಲ್ಲಿದ್ದಾರೆ. ಕಳೆದ ಬಾರಿ ನಾಲ್ವರು ಕಣದಲ್ಲಿದ್ದರು.
ಪಕ್ಷಗಳ ಸ್ಪರ್ಧೆಯ ಕ್ಷೇತ್ರಗಳ ಇಳಿಕೆ, ಮುಸ್ಲಿಂ ಓಲೈಕೆಯ ಆರೋಪದಿಂದ ನುಣುಚಿಕೊಳ್ಳುವ ಯತ್ನ ಅಥವಾ ಮುಸ್ಲಿಮರ ಕಡೆಗಣನೆ ಸೇರಿದಂತೆ ನಾನಾ ಕಾರಣಗಳಿಂದಾಗಿ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ಕಡಿಮೆ ಮಾಡಿವೆ ಎಂಬುದು ಸ್ಪಷ್ಟವಾಗಿ ಕಾಣಸಿಗುತ್ತದೆ.
ಮೂಲ: ಟಿಐಎ