ಐಪಿಎಲ್ ಬೆಟ್ಟಿಂಗ್ ದಂಧೆ ತಡೆಯಲು ಕರ್ನಾಟಕ ಪೊಲೀಸರು ಎಷ್ಟೇ ಕ್ರಮವಹಿಸಿದರೂ ತಡೆಯಲಾಗುತ್ತಿಲ್ಲ. ಮೊಬೈಲ್ ಆ್ಯಪ್ ಮೂಲಕ ಅಕ್ರಮವಾಗಿ ಐಪಿಎಲ್ ಬೆಟ್ಟಿಂಗ್ ದಂಧೆ ರಾಜ್ಯಾದ್ಯಂತ ಜೋರಾಗಿ ನಡೆಯುತ್ತಿದೆ. ಶ್ರಮವಿಲ್ಲದೇ, ಹಣ ಗಳಿಸುವ ದುರಾಸೆಯಿಂದ ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಳ್ಳುವ ಯುವಕರು ಹಣವನ್ನೇಲ್ಲ ಕಳೆದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಮೈ ತುಂಬಾ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಇದೀಗ, ಇಂತಹದ್ದೆ ಒಂದು ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ. 29 ವರ್ಷದ ಮುದಿಬಸವ ಎಂಬ ಯುವಕ ಐಪಿಎಲ್ ಬೆಟ್ಟಿಂಗ್ ಕಟ್ಟಿದ್ದಾನೆ. ಆದರೆ, ಬೆಟ್ಟಿಂಗ್ ಕಟ್ಟಿದ ಎಲ್ಲ ಮ್ಯಾಚ್‌ಗಳು ಸೋತಿದ್ದವು. ಇದರಿಂದ ಯುವಕ ಹೆಚ್ಚಾಗಿ ಸಾಲ ಮಾಡಿಕೊಂಡಿದ್ದನು. ಸಾಲಗಾರರ ಕಿರುಕುಳ ತಾಳಲಾರದೇ ನಗರದ ಲಾಡ್ಜ್‌ವೊಂದರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕ ಮೂಲತಃ ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದವನು. ಬೆಟ್ಟಿಂಗ್‌ನಿಂದ ಸೋತ ನಂತರ ಹಣ ಪಾವತಿಸಲಾಗದೆ ಯುವಕ ಕಿರುಕುಳಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಸಾಲಗಾರರ ಕಾಟಕ್ಕೆ ಬೇಸತ್ತ ಮುದಿಬಸವ ಮನನೊಂದು ಸಿಂಧನೂರು ನಗರದ ಸಾಯಿ ರೆಸಿಡೆನ್ಸಿ ಲಾಡ್ಜ್‌ನ ರೂಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೂಮಿನ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡು ಲಾಡ್ಜ್ ಸಿಬ್ಬಂದಿ ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸಿಂಧನೂರು ನಗರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಘಟನೆ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಸಾಂಕ್ರಾಮಿಕವಾಗಿ ಹಬ್ಬಿದ ಐಪಿಎಲ್ ಬೆಟ್ಟಿಂಗ್
ರಾಯಚೂರು ಜಿಲ್ಲೆಯಾದ್ಯಂತ ಐಪಿಎಲ್ ಬೆಟ್ಟಿಂಗ್ ಸಾಂಕ್ರಾಮಿಕವಾಗಿ ಹಬ್ಬಿದೆ. ಮೊಬೈಲ್ ಆಪ್ ಮೂಲಕ ಯಾವುದೇ ಸ್ಥಳದಲ್ಲಿ ಕುಳಿತು ಬೆಟ್ಟಿಂಗ್ ತೊಡಗಿಕೊಳ್ಳಬಹುದಾದ್ದರಿಂದ ಅತಿ ಹೆಚ್ಚು ಯುವಕರು ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಾವಳಿ ನಡೆದಾಗ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಬುಕ್ಕಿಗಳು ಯುವಕರನ್ನು ಗುರುತಿಸಿ ಹಣದ ಆಮಿಷ ಒಡ್ಡಿ ಬೆಟ್ಟಿಂಗ್ ಖೆಡ್ಡಾಕ್ಕೆ ಸಲೀಸಾಗಿ ಬೀಳಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಹಲವೆಡೆ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆದಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸೈಬರ್ ಕ್ರೈಂಗಾಗಿ ಭಾರತೀಯ ಸಿಮ್ ಖರೀದಿ; ವಿದೇಶಕ್ಕೆ ಸಿಮ್ ರವಾನೆ ಮಾಡುತ್ತಿದ್ದವನ ಬಂಧನ
ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆಕೋರರು ತರಹೇವಾರಿ ಆ್ಯಪ್‌ಗಳ ಮೂಲಕ ದಂಧೆ ಶುರು ಮಾಡಿಕೊಂಡಿದ್ದಾರೆ. ಗ್ರಾಹಕರ ಮೊಬೈಲ್‌ಗೆ ಬೆಟ್ಟಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಡುತ್ತಾರೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ, ತರ ಆ್ಯಪ್‌ಗಳ ಮೂಲಕ ಆನ್ ಲೈನ್ ಮೂಲಕವೇ ಹಣ ವರ್ಗಾಯಿಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ 22 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದ್ದು, ಈ ಕೇಸ್‌ಗಳಲ್ಲಿ 27 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟಾರೆ ₹1.04 ಲಕ್ಷ ವಶಪಡಿಸಿಕೊಳ್ಳಲಾಗಿದೆ.
Hang to IPL