ಮಹಾರಾಷ್ಟ್ರದಲ್ಲಿ ಶಿವಸೇನೆಯು ಈಗಾಗಲೇ ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂದೆ ಬಣವಾಗಿ ವಿಭಜನೆಯಾಗಿದೆ. ಇದಾದ ಬಳಿಕ ಇಂಡಿಯಾ ಕೂಟದ ಐಕಾನ್ ಆಗಿ ಉದ್ಧವ್ ಠಾಕ್ರೆ ಮಿಂಚುತ್ತಿದ್ದಾರೆ. ಇತ್ತ ಬಿಜೆಪಿ ಪಾಳಯದ ಜೊತೆ ಕೈಜೋಡಿಸಿರುವ ಏಕನಾಥ್ ಶಿಂದೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಪ್ರಚಾರದ ಗುಂಗಿನಲ್ಲಿದ್ದಾರೆ. ಏನೇ ಆದರೂ ನಾವು ಶಿವಸೇನೆ, ಎನ್‌ಸಿಪಿ ವಿಭಜನೆಗೆ ಜಾರಿ ನಿರ್ದೇಶನಾಲಯ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ.
ಶಿವಸೇನೆಯ ಉದ್ಧವ್ ಠಾಕ್ರೆ ಬಣದಲ್ಲಿದ್ದ ಅದೆಷ್ಟೋ ನಾಯಕರುಗಳು ಠಾಕ್ರೆ ಅವರಿಂದ ದೂರ ಸರಿದು ಶಿಂದೆಯ ಎನ್‌ಡಿಎ ಕೂಟಕ್ಕೆ ಸೇರುವಂತೆ ಮಾಡುವಲ್ಲಿ ಇಡಿ ಪ್ರಯತ್ನವನ್ನು ನಾವು ಅಲ್ಲಗಳೆಯುವಂತಿಲ್ಲ. ಯಾಮಿನಿ ಜಾಧವ್, ಅವರ ಪತಿ ಯಶವಂತ್, ರವೀಂದ್ರ ವೈಕರ್ ಮೊದಲಾದ ನಾಯಕರುಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಎನ್‌ಸಿಪಿಯಲ್ಲಿ ಅಜಿತ್ ಪವಾರ್, ಹಸನ್ ಮುಶ್ರಿಫ್ ಮತ್ತು ಪ್ರಫುಲ್ ಪಟೇಲ್, ಧನಂಜಯ್ ಮುಂಡೆ ಪುರಾವೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ : ಮಹಾ ವಿಕಾಸ್ ಅಘಾಡಿಯ ಐಕಾನ್ ಉದ್ಧವ್ ಠಾಕ್ರೆ!
ಎನ್‌ಡಿಎ ಕೂಟಕ್ಕೆ ಪಲಾಯನ
ಎನ್‌ಡಿಎ ಕೂಟಕ್ಕೆ ಪಲಾಯನವಾದ ಬಳಿಕ ಇಡಿ ತನಿಖೆ ನಿಲ್ಲುತ್ತದೆ ಎಂಬುವುದಕ್ಕೆ ನಮಗೆ ಯಾಮಿನಿ ಜಾಧವ್ ಮತ್ತು ಅವರ ಪತಿ ಯಶವಂತ್ ಸ್ಪಷ್ಟ ಉದಾಹರಣೆ. ಈ ದಂಪತಿ ವಿರುದ್ಧ ಭ್ರಷ್ಟಾಚಾರದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳು ನಡೆಸುತ್ತಿದ್ದವು. ಆದರೆ ಯಾಮಿನಿ ಜಾಧವ್ ಅವರು ಏಕನಾಥ್ ಶಿಂಧೆ ಜೊತೆ ಸೇರಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವನ್ನು ಎಂದು ಸೇರಿದರೋ ಅಂದೇ ಜಾಧವ್ ವಿರುದ್ಧದ ವಿಚಾರಣೆಯೂ ಕೂಡಾ ನಿಂತಿದೆ.
ಹೀಗೆ ಭ್ರಷ್ಟಾಚಾರದ ವಿಚಾರಣೆಯನ್ನು ಎದುರಿಸುತ್ತಿರುವ ಹಲವಾರು ವಿರೋಧ ಪಕ್ಷದ ನಾಯಕರು ಬಿಜೆಪಿಗೆ ಅಥವಾ ಎನ್‌ಡಿಎಗೆ ಸೇರಿದ ಬಳಿಕ ಇಡಿ, ಸಿಬಿಐ, ಐಟಿ ಕೆಂಗಣ್ಣಿನಿಂದ ದೂರ ಸರಿದಿರುವುದು ನಾವು ಗಮನಿಸಬಹುದು. 2022 ಮತ್ತು 2023 ರ ವೇಳೆಗೆ ಕೇಂದ್ರದ ತನಿಖಾ ಏಜೆನ್ಸಿಗಳು ಹೆಚ್ಚಾಗಿ ಮಹಾರಾಷ್ಟ್ರದ ಮೇಲೆ ಲಕ್ಷ್ಯ ಇರಿಸಿದೆ. ಇದರ ಪರಿಣಾಮವೇ ಶಿವಸೇನೆ ಮತ್ತು ಎನ್‌ಸಿಪಿ ಇಬ್ಭಾಗ.
ಇದನ್ನು ಓದಿದ್ದೀರಾ? ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು ಮೋದಿಗೆ ಪ್ರಧಾನಿ ಹುದ್ದೆಯ ಅತಿಯಾಸೆ: ಉದ್ಧವ್ ಠಾಕ್ರೆ
ಈ ವಿಚಾರವನ್ನು ಪ್ರಸ್ತುತ ಶಿಂದೆ ಬಣದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಶಿವಸೇನೆಯ ರಾಜಕಾರಣಿ ರವೀಂದ್ರ ವೈಕರ್ ಅವರೇ ಸ್ಪಷ್ಟಪಡಿಸುತ್ತಾರೆ. ಜೈಲು ಮತ್ತು ಏಕನಾಥ್ ಶಿಂಧೆ ಅವರ ಪಕ್ಷಕ್ಕೆ ಸೇರುವುದು ಇವೆರಡಲ್ಲಿ ಒಂದನ್ನು ಆಯ್ಕೆ ಮಾಡಬೇಕಾದ ಸ್ಥಿತಿ ತನಗೆ ಬಂದಿತ್ತು ಎಂದು ರವೀಂದ್ರ ವೈಕರ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಶಿಂಧೆ ಮಧ್ಯಪ್ರವೇಶಿಸಿ ತನಿಖಾ ಅಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ವಿಚಾರಣೆಯ ತಲೆ ಬಿಸಿ ದೂರವಾಗಿದೆ ಎಂದಿದ್ದಾರೆ.
ರವೀಂದ್ರ ವೈಕರ್ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ರಾಜ್ಯ ಆರ್ಥಿಕ ಅಪರಾಧಗಳ ವಿಭಾಗವು ತನಿಖೆ ನಡೆಸುತ್ತಿದೆ. ಮಾರ್ಚ್‌ನಲ್ಲಿ ಉದ್ಧವ್ ಠಾಕ್ರೆ ಬಣದಿಂದ ರವೀಂದ್ರ ವೈಕರ್ ಅವರು ಶಿಂದೆ ಬಣಕ್ಕೆ ಪಕ್ಷಾಂತರಗೊಂಡಿದ್ದಾರೆ. ಹಾಗೆಯೇ ಮುಂಬೈ ವಾಯುವ್ಯದ ಮಾಯಾಯುತಿಯ ಟಿಕೆಟ್ ಅನ್ನು ಪಕ್ಷಾಂತರದ ಉಡುಗೊರೆಯಾಗಿ ವೈಕರ್ ಪಡೆದುಕೊಂಡಿದ್ದಾರೆ.
ಇನ್ನೊಂದೆಡೆ ರವೀಂದ್ರ ವೈಕರ್ ಎದುರಾಳಿಯಾಗಿ ಠಾಕ್ರೆ ಬಣದಿಂದ ಅಮೋಲ್ ಕೀರ್ತಿಕರ್ ಸ್ಪರ್ಧಿಸುತ್ತಿದ್ದಾರೆ. ಅಮೋಲ್ ಕೀರ್ತಿಕರ್ ಹೆಸರು ಘೋಷಣೆಯಾದ ಕೆಲವೇ ದಿನಗಳಲ್ಲಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಕೀರ್ತಿಕರ್ ಅವರಿಗೆ ಬಂದಿದೆ. ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ನೀಡಲು ಸಂಸ್ಥೆಗಳಿಗೆ ಗುತ್ತಿಗೆ ನೀಡುವುದರಲ್ಲಿ ಕೀರ್ತಿಕರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಇದನ್ನು ‘ಖಿಚಡಿ ಹಗರಣ’ ಎಂದೂ ಏಜೆನ್ಸಿ ಕರೆದಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಬಾಗಿಲು ತೆರೆದರೂ ಹಿಂದಿರುಗಿ ಹೋಗಲ್ಲ: ಉದ್ಧವ್ ಠಾಕ್ರೆ
ಇನ್ನು ಎನ್‌ಸಿಪಿಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣವಿದೆ. ಇದರಲ್ಲಿ ಅಜಿತ್ ಪವಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರ ಬಣದಲ್ಲಿರುವ ಕನಿಷ್ಠ ಐದು ಪ್ರಮುಖ ನಾಯಕರುಗಳು ಬ್ಯಾಂಕ್ ಸಾಲ ವಂಚನೆ, ಭ್ರಷ್ಟಾಚಾರ, ಭೂ ಹಗರಣ, ಗ್ಯಾಂಗ್‌ಸ್ಟಾರ್ ಇಕ್ಬಾಲ್ ಮಿರ್ಚಿ ಜೊತೆ ಸೇರಿ ಮನಿ ಲಾಂಡರಿಂಗ್ ಹೀಗೆ ಹಲವಾರು ಆರೋಪಗಳನ್ನು ಹೊತ್ತಿದ್ದವರು ಮತ್ತು ಹೊತ್ತಿರುವವರು.
Mumbai Police Submits Closure Report In Cheating Case Against Ajit Pawar Citing “Mistake of Facts” https://t.co/oKIOPU5YLn
— nikhil wagle (@waglenikhil) March 3, 2024
ಎನ್‌ಡಿಎ ಕೂಟವನ್ನು ಸೇರಿದ ಬಳಿಕ ಅಜಿತ್ ಪವಾರ್, ಹಸನ್ ಮುಶ್ರಿಫ್ ಮತ್ತು ಪ್ರಫುಲ್ ಪಟೇಲ್ ವಿರುದ್ಧದ ತನಿಖೆ ಮರಿಚೀಕೆಯಾಗುತ್ತಿದೆ. ಧನಂಜಯ್ ಮುಂಡೆ ವಿರುದ್ಧದ ಪ್ರಕರಣವು ಮುಂದೆ ಸಾಗುತ್ತಲೇ ಇಲ್ಲ. ಇನ್ನು ಅಜಿತ್ ಪವಾರ್ ವಿರುದ್ಧ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲಿ (ಎಂಎಸ್‌ಸಿಬಿ) 25,000 ಕೋಟಿ ರೂಪಾಯಿ ಹಗರಣದ ಕ್ರಿಮಿನಲ್ ಮೊಕದ್ದಮೆಯನ್ನು ಪೊಲೀಸರು ಹಿಂಪಡೆದಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯ ವಾಷಿಂಗ್ ಮೆಷಿನ್ ಮಹಾರಾಷ್ಟ್ರದಲ್ಲಿನ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದೆ.
ಈ ಎಲ್ಲ ಘಟನೆಗಳನ್ನು ನೋಡಿದಾಗ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮಹಾರಾಷ್ಟ್ರದ ಎರಡು ಪ್ರಬಲ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿಯನ್ನು ಇಬ್ಭಾಗಗೊಳಿಸಿ ಮಹಾರಾಷ್ಟ್ರದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಏನೇ ಆದರೂ ತನಿಖಾ ಸಂಸ್ಥೆಗಳ ಛಾಟಿಯೇಟಿಗೆ ಭಯಪಟ್ಟು ಪಲಾಯನವಾಗುತ್ತಿರುವ ಉದ್ಧವ್ ಠಾಕ್ರೆ, ಶರದ್ ಪವಾರ್ ಬಣದ ನಾಯಕರುಗಳು ಮುಂದೊಂದು ದಿನ ಬಿಜೆಪಿಯಿಂದ ಮೂಲೆಗುಂಪಾಗುತ್ತಾರೆ ಎಂಬುವುದು ಅಲ್ಲಗಳೆಯುವಂತಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.