ಸದ್ಯಕ್ಕೆ, ಬಂಗಾಳದಲ್ಲಿ ಲೋಕಸಭಾ ಚುನಾವಣೆಯು ಮೇಲ್ನೋಟಕ್ಕೆ ಟಿಎಂಸಿ, ಬಿಜೆಪಿ ನಡುವಿನ ಕದನದಂತೆ ಕಾಣಿಸುತ್ತಿದೆಯಾದರೂ, ಕಾಂಗ್ರೆಸ್-ಎಡಪಕ್ಷಗಳು ನಿರ್ಣಾಯಕ ಪೈಪೋಟಿ ನೀಡುವ ಸಾಧ್ಯತೆಗಳೂ ಇವೆ.
ಭಾರತದ ಸಂಸತ್‌ನಲ್ಲಿ ಹೆಚ್ಚು ಸಂಸದರ ಪಾಲನ್ನು ಹೊಂದಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದು. 42 ಸಂಸರನ್ನು ಹೊಂದಿರುವ ಬಂಗಾಳ, ಲೋಕಸಭೆಯಲ್ಲಿ ಹೆಚ್ಚು ಪ್ರತಿನಿಧಿಗಳನ್ನು ಹೊಂದಿರುವ 3ನೇ ರಾಜ್ಯ. ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ನಂತರದ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದವರೇ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಾರೆ ಎಂಬುದು ಭಾಗಶಃ ಖಚಿತ. ಹೀಗಾಗಿಯೇ, ರಾಷ್ಟ್ರೀಯ ಪಕ್ಷಗಳು ಈ ನಾಲ್ಕು ರಾಜ್ಯಗಳ ಮೇಲೆ ಹೆಚ್ಚು ರಾಜಕೀಯ ಕದನಕ್ಕೆ ಮುಂದಾಗುತ್ತವೆ.
ಆದರೂ, ಹೆಚ್ಚು ಸಂಸದರನ್ನು ಹೊಂದಿರುವ ಮೂರನೇ ಸ್ಥಾನದಲ್ಲಿರುವ ಬಂಗಾಳ ಮತ್ತು ಆಂಧ್ರದಲ್ಲಿ ಸ್ಥಳೀಯ ಪಕ್ಷಗಳೇ ಪಾರುಪತ್ಯ ಸಾಧಿಸಿವೆ. ಬಂಗಾಳವನ್ನು ಕಳೆದೊಂದು ದಶಕದಿಂದ ಟಿಎಂಸಿ ತನ್ನ ಭದ್ರಕೋಟೆ ಮಾಡಿಕೊಂಡಿದೆ. ಮಮತಾ ಬ್ಯಾನರ್ಜಿ 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಾಬಲ್ಯ ಸಾಧಿಸಿದ್ದಾರೆ. ಈ ಹಿಂದೆ, ಮೊದಲಿಗೆ ಕಾಂಗ್ರೆಸ್, ನಂತರದಲ್ಲಿ ಎಡಪಕ್ಷಗಳ ಕೋಟೆಯಾಗಿದ್ದ ಬಂಗಾಳ ಈಗ ಟಿಎಂಸಿ ಸುಪರ್ಧಿಯಲ್ಲಿದೆ. ಟಿಎಂಸಿ ಕೋಟೆಯನ್ನು ಭೇದಿಸಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಅಲ್ಲಿನ ಜನರು ಬಿಜೆಪಿಯ ಅಭಿವೃದ್ಧಿ ಮಾತಿಗೆ ಮರಳಾಗಿದ್ದರಾದರೂ, ಅದರ ಕೋಮು ರಾಜಕೀಯ ಅರಿತು, ದೂರ ಇಡುತ್ತಿದ್ದಾರೆ.
ಈ ಹಿಂದೆ, ದೇಶಕ್ಕೆ ಮೋದಿ, ಬಂಗಾಳಕ್ಕೆ ಮಮತಾ ಎಂಬುದು ಬಂಗಾಳಿಗರ ಅಭಿಪ್ರಾಯವಾಗಿತ್ತು. ಆದರೀಗ, ಬಂಗಾಳಕ್ಕೆ ಮಮತಾ, ಆದರೆ, ದೇಶಕ್ಕೆ ಮೋದಿಯಲ್ಲ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. 2021ರಲ್ಲಿ ಮಮತಾ ಅವರ ಬಲಗೈ ಭಂಟನಾಗಿದ್ದ ಸುವೇಂದು ಅಧಿಕಾರಿ ಬಿಜೆಪಿ ಸೇರಿದ್ದಾಗಿಯೂ ಬಿಜೆಪಿಗೆ ಹೆಚ್ಚಿನ ನೆಲೆಯೇನೂ ದೊರೆತಿಲ್ಲ.
ಸದ್ಯ, ಲೋಕಸಭಾ ಚುನಾವಣೆಯ ಆರಂಭದಲ್ಲಿ ಮೋದಿ ಅವರು ‘ಮೋದಿ ಕಿ ಗ್ಯಾರಂಟಿ’ ಮತ್ತು ‘ಚಾರ್ ಸೋ ಪಾರ್’ ಎಂಬ ಘೋಷಣೆಯನ್ನು ಮುನ್ನೆಲೆಗೆ ತಂದಿದ್ದರು. ಆದರೆ, ಅವರ ಈ 400 ಸ್ಥಾನಗಳ ಗೆಲುವಿಗೆ ಮೊದಲು ತಡೆಯಾಗಿದ್ದೇ ಪಶ್ಚಿಮ ಬಂಗಾಳ. 2019ರಲ್ಲಿ ಮೋದಿ ಅಲೆಯ ಪರಿಣಾಮ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತಾದರೂ, ಟಿಎಂಸಿ 22 ಸ್ಥಾನಗಳೊಂದಿಗೆ ಮುನ್ನಡೆಯಲ್ಲಿಯೇ ಇತ್ತು. ಈ ಬಾರಿ, ಬಿಜೆಪಿಗೆ 18 ಸ್ಥಾನಗಳನ್ನು ಗೆಲ್ಲುವುದು ಅಷ್ಟು ಸುಲಭವಂತೂ ಇಲ್ಲ.
ಬಂಗಾಳದಲ್ಲಿಯೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಭಾರೀ ಹೋರಾಟ ನಡೆಸುತ್ತಿದೆ. ಮಮತಾ ಬ್ಯಾನರ್ಜಿ ‘ಇಂಡಿಯಾ’ ಕೂಟದಲ್ಲಿ ದೂರವಿದ್ದರೂ, ಅವರು ಬಾಹ್ಯ ಬೆಂಬಲ ನೀಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ, ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಹಾಗೂ ‘ಇಂಡಿಯಾ’ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಇದೆಯೆಂದಿದ್ದರೂ, ಬಿಜೆಪಿ ವರ್ಸಸ್ ಇತರರು ಎಂಬುದೇ ಸ್ಪಷ್ಟವಾಗಿದೆ.
ಬಂಗಾಳದಲ್ಲಿ ತಮ್ಮ ಕಾರ್ಯಕ್ಷಮತೆ, ಜಾತ್ಯತೀತ ಮೌಲ್ಯಗಳಿದ್ದು, ರಾಜ್ಯದ ಎಲ್ಲ ಸಮುದಾಯಗಳ ಜನರಿಗಾಗಿ ತಾವು ಶ್ರಮಿಸುತ್ತಿದ್ದೇವೆ. ಬಂಗಾಳದ ಜನರು ನಮ್ಮ ಪ್ರಯತ್ನಗಳನ್ನು ಗಮನಿಸುತ್ತಿದ್ದಾರೆ. ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದ ಜನರು ನಮ್ಮೊಂದಿಗೇ ಇದ್ದಾರೆ ಎಂದು ಮಮತಾ ಹೇಳಿಕೊಳ್ಳುತ್ತಾರೆ.
ಮುಸ್ಲಿಮರು – ಬಿಜೆಪಿ – ಆರ್‌ಎಸ್‌ಎಸ್
ವಿಶೇಷವಾಗಿ ಮುಸ್ಲಿಮರನ್ನು ತಮ್ಮಲ್ಲಿ ಹಿಡಿದಿಟ್ಟುಕೊಳ್ಳಲು ಮಮತಾರ ತಂತ್ರಗಳು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿವೆ. ರಾಜ್ಯದಲ್ಲಿ ಶೇ.30ರಷ್ಟಿರುವ ಮುಸ್ಲಿಮರು ರಾಜ್ಯದಲ್ಲಿ ಯಾರು ಹೆಚ್ಚು ಸ್ಥಾನ ಗೆಲ್ಲಬೇಕು ಎಂಬುದನ್ನು ನಿರ್ಣಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.
ಬಂಗಾಳದ ಮುಸ್ಲಿಮರು ಕೋಮುವಾದಿ ಬಿಜೆಪಿಯ ವಿರುದ್ಧವೇ ಇದ್ದಾರೆ. ಹೀಗಾಗಿ, ಅವರು ಕಾಂಗ್ರೆಸ್-ಎಡಪಕ್ಷಗಳ ಮೈತ್ರಿ ಅಥವಾ ಇಂಡಿಯಾ ಒಕ್ಕೂಟದೊಳಗೆ ಒಂದು ಕಾಲಿಟ್ಟು, ಹೊರಗಿರುವ ಟಿಎಂಸಿಗೆ ಮತಹಾಕುತ್ತಾರೆ. ಆದರೆ, ಈ ಮತಗಳು ವಿಭಜನೆಯಾಗದಂತೆ ನೋಡುವುದು ಕೂಡ ಬಹಳ ಮುಖ್ಯ. ಆ ಎಚ್ಚರಿಕೆಯೊಂದಿಗೆ ವಿಪಕ್ಷಗಳು ಮುನ್ನಡೆಯುತ್ತಿವೆ.
ಇನ್ನು, ಎಡಪಕ್ಷಗಳ ವೈಫಲ್ಯವನ್ನು ಬಳಸಿಕೊಂಡು ಬಂಗಾಳದಲ್ಲಿ ನೆಲೆ ಕಂಡುಕೊಂಡ ಬಿಜೆಪಿ, ಸದ್ಯ, ಬಂಗಾಳ ವಿಧಾನಸಭೆಯಲ್ಲಿ 294 ಸ್ಥಾನಗಳ ಪೈಕಿ, ಕೇವಲ 61 ಕ್ಷೇತ್ರಗಳನ್ನು ಗೆದ್ದಿದೆ. ಟಿಎಂಸಿಯಲ್ಲಿರುವ ಕೆಲ ಪ್ರಭಾವಿ ನಾಯಕರನ್ನು ತನ್ನತ್ತ ಸೆಳೆದುಕೊಂಡು, ನೆಲೆಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಟಿಎಂಸಿಯ ಪ್ರಭಾವಿಗಳು ಬಿಜೆಪಿ ಸೇರಿದರೂ ಮಮತಾರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ.
ಹೊಸ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಬಿಜೆಪಿಯ ಪೋಷಕ ಸಂಸ್ಥೆ ಆರ್‌ಎಸ್‌ಎಸ್ ತನ್ನ ಸಿದ್ಧಾಂತವನ್ನು ಬೆಳೆಯುವ ಕುಡಿಗಳಾದ ಮಕ್ಕಳ ತಲೆಯಲ್ಲಿ ತುಂಬಲು ಭಾರೀ ಕಸರತ್ತು ನಡೆಸುತ್ತಿದೆ. ಅದಕ್ಕಾಗಿಯೇ, ಆರ್‌ಎಸ್‌ಎಸ್ ಹಲವಾರು ಶಾಲೆಗಳನ್ನು ಬಂಗಾಳದಲ್ಲಿ ತೆರೆದಿದೆ. ಆರ್‌ಎಸ್‌ಎಸ್ ಜೊತೆಗೆ ನಂಟಿರುವ ಸುಮಾರು 300 ಶಾಲೆಗಳಿವೆ. ಅವುಗಳಲ್ಲಿ ಬರೋಬ್ಬರಿ 125 ಶಾಲೆಗಳು ನಿರಪೇಕ್ಷಣಾ ಪತ್ರವನ್ನೇ ಪಡೆಯದೆ, ಕಾರ್ಯನಿರ್ವಹಿಸುತ್ತಿವೆ. 2018ರಲ್ಲಿ ಅವುಗಳನ್ನು ಗುರುತಿಸಿದ್ದ ಸರ್ಕಾರ, ಅವುಗಳನ್ನು ನಿಷೇಧಿಸಲು ಮುಂದಾಗಿತ್ತು. ಆದರೆ, ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ಈಗಲೂ ಆ ಶಾಲೆಗಳು ಮುಂದುವರೆದಿವೆ. ಆದರೆ, ಆರ್‌ಎಸ್‌ಎಸ್ ಸಿದ್ದಾಂತವನ್ನು ಬುಡಮೇಲು ಮಾಡಲು ಟಿಎಂಸಿ ಪ್ರತಿತಂತ್ರಗಳನ್ನು ರೂಪಿಸುತ್ತಿದೆ.
ಫಲಿಸದ ಭ್ರಷ್ಟಾಚಾರ ಆರೋಪಗಳು
ಮಮತಾ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾ, ಬಿಜೆಪಿ ಜನರನ್ನು ಸೆಳೆಯಲು ನಿರಂತವಾಗಿ ಯತ್ನಿಸುತ್ತಿದೆ. ಆದರೆ, ಬಂಗಾಳ ಚುನಾವಣಾ ರಾಜಕೀಯದಲ್ಲಿ ಭ್ರಷ್ಟಾಚಾರ ವಿಷಯವು ಎಂದಿಗೂ ನಿರ್ಣಾಯಕ ಅಂಶವಾಗಿ ಕಂಡುಬಂದಿಲ್ಲ. 2016ರ ವಿಧಾನಸಭಾ ಚುನಾವಣೆ ಸಮಯದಲ್ಲೇ ಹೊರಬಂದ ಶಾರದಾ ಹಗರಣ ಮತ್ತು ನಾರದ ಹಗರಣಗಳು ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ. ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಸಾಧ್ಯವಾಗುತ್ತದೆ ಎಂಬ ನಂಬಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅದೇ ರೀತಿ, 2021ರಲ್ಲಿ, ಕಲ್ಲಿದ್ದಲು ಹಗರಣ, ಜಾನುವಾರು ಕಳ್ಳಸಾಗಣೆ, ಪಡಿತರ ಹಗರಣ ಹಾಗೂ ಸರ್ಕಾರಿ ಯೋಜನೆಗಳಿಗೆ ಹಣ ಕಡಿತದ ಆರೋಪಗಳು ಹೆಚ್ಚಾಗಿ ಕೇಳಬಂದಾಗಲೂ ಟಿಎಂಸಿ ಬರೋಬ್ಬರಿ 215 ಸ್ಥಾನಗಳನ್ನು ಗೆಲ್ಲುವ ಮೂಲಕ, ಬಿಜೆಪಿಗೆ ಹೆಚ್ಚಿನ ಅವಕಾಶವನ್ನು ಕೊಡಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ, ರಾಜಕೀಯ ಹಿಂಸಾಚಾರ, ಚುನಾವಣಾ ದುಷ್ಕೃತ್ಯಗಳು, ಕಲ್ಯಾಣ ಯೋಜನೆಗಳು, ಸಿಎಎ ಹಾಗೂ ಧಾರ್ಮಿಕ ದೃವೀಕರಣವು ಚುನಾವಣಾ ವಿಷಯಗಳಾಗಿ ಚರ್ಚೆಯಾಗುತ್ತಿವೆ. ಇದರ ಜೊತೆಗೆ, ಹೊಸದಾಗಿ, ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ಹಗರಣವು ಮುನ್ನೆಲೆಗೆ ಬಂದಿದೆ. ಮಾತ್ರವಲ್ಲದೆ, ಸಂದೇಶ್‌ಖಾಲಿ ಪ್ರಕರಣವು ನಿರ್ಣಾಯಕವಾಗಿದೆ.
ಉಲ್ಟಾ ಹೊಡೆದ ಸಂದೇಶ್‌ಖಾಲಿ ಪ್ರಕರಣ
ಆರಂಭದಲ್ಲಿ, ಸಂದೇಶ್‌ಖಾಲಿ ಪ್ರಕರಣವು ಟಿಎಂಸಿಗೆ ಭಾರೀ ಹೊಡೆತ ನೀಡಬಹುದು. ಇದು ಬಿಜೆಪಿಗೆ ವರದಾನವೂ ಆಗಬಹುದು ಎಂದು ಹೇಳಲಾಗಿತ್ತು. ಸಂದೇಶ್‌ಖಾಲಿ ಪ್ರದೇಶದಲ್ಲಿ ಪ್ರಬಲನಾಗಿದ್ದ ಟಿಎಂಸಿ ಮುಖಂಡ ಶಹಜಹಾನ್ ಮತ್ತು ಆತನ ಸಹಚರರು ಅಲ್ಲಿನ ಬುಡಕಟ್ಟು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲಿನ ಜನರ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ ಎಂಬ ಗಂಭೀರ ಅರೋಪ ಕೇಳಿಬಂದಿತ್ತು. ನಾನಾ ಪ್ರತಿಭಟನೆಗಳೂ ನಡೆದಿದ್ದವು. ಪ್ರಕರಣವು ದೇಶದ ಗಮನ ಸೆಳೆದಿದ್ದು, ಶಹಜಹಾನ್‌ನನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಈ ನಡುವೆ, ದೂರು ನೀಡಿದ್ದ ಮಹಿಳೆಯರು ಕೆಲ ಬಿಜೆಪಿ ಮುಖಂಡರು ‘ತಮ್ಮ ಬಳಿ ಯಾವುದೋ ಅರ್ಜಿ ಸಲ್ಲಿಸಲು ಬಿಳಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡರು. ಬಳಿಕ, ಬಲವಂತವಾಗಿ ದೂರು ನೀಡುವಂತೆ ಮಾಡಿದರು’ ಎಂದು ಆರೋಪಿಸಿದ್ದಾರೆ. ಹೀಗಾಗಿ, ಪ್ರಕರಣವು ಬಿಜೆಪಿಗೇ ತಿರುಗುಬಾಣವಾಗಿ ಪರಿಣಮಿಸಿದೆ. ಸಂದೇಶ್‌ಖಾಲಿ ಪ್ರಕರಣದಲ್ಲಿ ಟಿಎಂಸಿ ಮೇಲಿನ ಆಕ್ರೋಶ, ಈಗ ಬಿಜೆಪಿ ಎಡೆಗೆ ಬದಲಾಗಿದೆ.
ಸಿಎಎ ವಿರೋಧಿ ಅಲೆ
2019ರಲ್ಲಿ ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ರೂಪಿಸಿದ್ದ ಮೋದಿ ಸರ್ಕಾರ, ಈ ಕಾನೂನುಗಳ ಮೂಲಕ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಹಿಂದುಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಘೂ ಕ್ರಿಶ್ಚಿಯನ್ನರಿಗೆ ಭಾರತದಲ್ಲಿ ಪೌರತ್ವ ನೀಡುವುದಾಗಿ ಹೇಳಿತ್ತು. ಸ್ಪಷ್ಟವಾಗಿ ಕಾಯ್ದೆಯು ಮುಸ್ಲಿಮರನ್ನು ಹೊರಗಿಟ್ಟಿತ್ತು. ಆ ಮೂಲಕ, ಭಾರತದ ಜಾತ್ಯತೀತ ಸ್ವಭಾವಕ್ಕೆ ಪೆಟ್ಟು ಕೊಡುವ ಯತ್ನ ಮಾಡಿತ್ತು.
ಸಿಎಎ ಜೊತೆಗೆ ಎನ್‌ಆರ್‌ಸಿ ಜಾರಿಯು, ಭಾರತದಲ್ಲಿನ ಮುಸ್ಲಿಮರಿಗೆ ಭಯವನ್ನು ಹುಟ್ಟುಹಾಕಿತ್ತು. ಮುಸ್ಲಿಮರು ತಮ್ಮ ಭವಿಷ್ಯದ ಪೌರತ್ವಕ್ಕಾಗಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿತ್ತು. ಮಾತ್ರವಲ್ಲದೆ, ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಕುರಿತ ಚರ್ಚೆಯು ಕೆಲವು ಬಾಂಗ್ಲಾದೇಶ ಮೂಲದ ಹಿಂದುಗಳಲ್ಲಿಯೂ ಸಹ ಭೀತಿಯನ್ನು ಹುಟ್ಟುಹಾಕಿತು. ಹೀಗಾಗಿ, ಹಿಂದು-ಮುಸ್ಲಿಮರು ಒಗ್ಗಟ್ಟಾಗಿ ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಿಳಿದರು.
ಅದೇ ಸಮಯದಲ್ಲಿ, ಬಂಗಾಳದಲ್ಲಿ ಸಿಎಎ ಜಾರಿಗೆ ಅವಕಾಶವೇ ಇಲ್ಲ ಎಂದು ಮಮತಾ ಘೋಷಿಸಿದರು. ಸಲ್ಲದೆ, ಅದೇ ಗಟ್ಟಿಧ್ವನಿಯಲ್ಲಿ ಮತ್ತೆ-ಮತ್ತೆ ಹೇಳುತ್ತಲೇ ಇದ್ದಾರೆ. ಇದೇ ಹೊತ್ತಿನಲ್ಲಿ, 2019ರ ಬಂಗಾಳದಲ್ಲಿ ನಡೆದ ಮೂರು ನಿರ್ಣಾಯಕ ಉಪ ಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಬಂಗಾಳಿ ಮತದಾರರಲ್ಲಿ ಪೌರತ್ವದ ಬಗ್ಗೆ ಭಯ ಹುಟ್ಟಿಸಿದ್ದೇ ಇದಕ್ಕೆ ಮೂಲ ಕಾರಣವೆಂದು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ.
ಇದಲ್ಲದೆ, ಸಿಎಎ ವಿರೋಧಿ ಆಂದೋಲನ ಉತ್ತುಂಗದಲ್ಲಿದ್ದಾಗಲೇ ನಡೆದ 2021ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಮುಸ್ಲಿಮರು ಟಿಎಂಸಿ ಜೊತೆಗೆ ಒಗ್ಗೂಡಿದರು. ಈ ರೀತಿ ಮುಸ್ಲಿಮರು ಒಂದೇ ಪಕ್ಷದೊಂದಿಗೆ ಹಿಂದೆಂದೂ ಒಗ್ಗೂಡಿರಲಿಲ್ಲ. ಅವರೆಲ್ಲರೂ ಸಿಎಎ ವಿರುದ್ಧದ ಹೋರಾಟಕ್ಕಾಗಿ ಮಮತಾ ಜೊತೆ ಬಲವಾಗಿ ನಿಂತರು. ಇದರ ಪರಿಣಾಮವಾಗಿ, ಬಿಜೆಪಿ ರಾಜ್ಯದ ಹಿಂದುಗಳಲ್ಲಿ ಗಮನಾರ್ಹ ಬೆಂಬಲ ಪಡೆದರೂ, ಹಿಂದುಗಳಲ್ಲಿಯೂ ಅರ್ಧಕ್ಕಿಂತ ಹೆಚ್ಚು ಮತದಾರರು ಟಿಎಂಸಿಯನ್ನೇ ಬೆಂಬಲಿಸಿದರು.
ಸಿಎಎ-ಎನ್‌ಆರ್‌ಸಿ ವಿರೋಧಿ ಆಂದೋಲನವು ರಾಜ್ಯದಲ್ಲಿ ಕೋಮುವಾದಕ್ಕೆ ಬೆಲೆಯಿಲ್ಲ ಎಂಬುದನ್ನು ಸೂಚಿಸಿದೆ. ಅಂದಿನಿಂದ, ಬಂಗಾಳ ರಾಜ್ಯ ಬಿಜೆಪಿ ಸಿಎಎ-ಎನ್‌ಆರ್‌ಸಿ ಬಗ್ಗೆ ಹೆಚ್ಚು ಮಾತನಾಡುವುದನ್ನು ಸ್ಪಷ್ಟವಾಗಿ ನಿಲ್ಲಿಸಿದೆ.
ಮಮತಾಗೆ ಮಹಿಳಾ ಶಕ್ತಿ
ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಯಲ್ಲಿರುವಂತೆಯೇ, ಬಂಗಾಳದಲ್ಲಿ ಮಮತಾ ಸರ್ಕಾರವು 2023ರಲ್ಲಿ ಮಹಿಳೆಯರಿಗಾಗಿ ‘ಲಕ್ಷ್ಮೀ ಭಂಡಾರ್’ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಗೆ ಸರ್ಕಾರಿ ಉದ್ಯೋಗ ಹೊಂದಿರದ 25 ರಿಂದ 60 ವರ್ಷ ವಯೋಮಿತಿ ಎಲ್ಲ ಮಹಿಳೆಯರೂ ಅರ್ಹರಾಗಿದ್ದಾರೆ. ಯೋಜನೆಯಡಿ ಸಾಮಾನ್ಯ ವರ್ಗದ ಕುಟುಂಬದಲ್ಲಿ ಓರ್ವ ಮಹಿಳೆಗೆ ಮಾಸಿಕ 500 ರೂ. ಮತ್ತು ಎಸ್‌ಸಿ/ಎಸ್‌ಟಿ ಸಮುದಾಯದ ಮಹಿಳೆಗೆ ಮಾಸಿಕ 1,000 ರೂ. ನೀಡಲಾಗುತ್ತಿದೆ.
ಇದು, ಗೃಹಿಣಿಯಾಗಿ ದುಡಿಯುತ್ತಿದ್ದ ಕೋಟ್ಯಂತರ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಯೋಜನೆ ಜಾರಿಯಾದ ಮೂರೇ ತಿಂಗಳಲ್ಲಿ 1.5 ಕೋಟಿ ಅರ್ಜಿಗಳು ಬಂದಿದ್ದದ್ದು, ಯೋಜನೆಯ ಸಫಲತೆಯನ್ನು ಸೂಚಿಸಿದೆ. ಮನೆಯೊಳಗೆ ಕುಟುಂಬದ ಕೆಲಸಕ್ಕಷ್ಟೇ ಸೀಮಿತವಾಗಿದ್ದ ಮಹಿಳೆಯರಿಗೆ ಯೋಜನೆ ನೆರವಾಗಿದ್ದು, ಮಹಿಳೆಯರು ಮಮತಾ ಪರವಾದ ಒಲವು ಹೊಂದಿದ್ದಾರೆ.
ಅದೇ ರೀತಿಯಲ್ಲಿ ನಾನಾ ಕಲ್ಯಾಣ ಯೋಜನೆಗಳು ಜನರಲ್ಲಿ ಟಿಎಂಸಿ ಸರ್ಕಾರದ ಪರವಾದ ಒಲವನ್ನು ಹೆಚ್ಚಿಸಿದೆ.
ಭ್ರಷ್ಟಾಚಾರ-ಕೋಮುವಾದ ವಿರೋಧಿ ಅಲೆಯಲ್ಲಿ ಮೇಲೇಳಲು ಕಾಂಗ್ರೆಸ್-ಎಡಪಕ್ಷಗಳ ಹರಸಾಹನ
ಬಂಗಾಳದ ಜನರು ಕೋಮುವಾದವನ್ನು ಕಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ. ಬಂಗಾಳದಲ್ಲಿ ಚುನಾವಣಾ ಸಮಯದಲ್ಲಿ ನಡೆಯುವ ಹಿಂಸಾಚಾರಗಳು ರಾಜಕೀಯ ಪ್ರೇರಿತವೇ ಆಗಿದ್ದರೂ, ಕೋಮುವಾದದಿಂದ ಮಾತ್ರ ಉತ್ತೇಜಿತವಾಗುತ್ತಿಲ್ಲ. ಹೀಗಾಗಿ, ಕೋಮುವಾದಿ ಬಿಜೆಪಿಗೆ ಹೆಚ್ಚಿನ ನೆಲೆ ರಾಜ್ಯದಲ್ಲಿಲ್ಲ. ಅದೇ ರೀತಿ, ಇಷ್ಟು ದಿನಗಳ ಕಾಲ ಸಮಸ್ಯೆಯೂ ಅಲ್ಲ, ಚರ್ಚೆಯ ವಿಷಯವೂ ಅಲ್ಲ ಎಂಬಂತಿಲ್ಲ ಭ್ರಷ್ಟಾಚಾರವು ಇತ್ತೀಚೆಗೆ ಚರ್ಚೆಗೆ ಬರುತ್ತಿದೆ. ಹೀಗಾಗಿ, ಬಿಜೆಪಿಯ ಕೋಮುವಾದ, ಟಿಎಂಸಿಯ ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ತನ್ನನ್ನು ತಾನು ಮತ್ತೆ ಗಟ್ಟಿಗೊಳಿಸಿಕೊಳ್ಳಲು ಹಳೆಯ ಪಕ್ಷ ಕಾಂಗ್ರೆಸ್ ಮತ್ತು ಈ ಹಿಂದೆ 3 ದಶಕದ ಕಾಲ ಆಡಳಿತ ನಡೆಸಿದ್ದ ಎಡಪಕ್ಷಗಳು ಕಸರತ್ತು ನಡೆಸುತ್ತಿವೆ.
ಎಡಪಕ್ಷಗಳು ನೆಲೆ ಕಂಡುಕೊಳ್ಳಲು ಹೊಸ ಮತ್ತು ಯುವ ಮುಖಗಳನ್ನು ಮುನ್ನೆಲೆಗೆ ತಂದು ಚುನಾವಣೆ ಎದುರಿಸಲು ಮುಂದಾಗಿವೆ. ವಿಧಾನಸಭೆ, ಲೋಕಸಭೆಯಲ್ಲಿ ಗಮನಾರ್ಹ ಸ್ಥಾನಗಳನ್ನು ಹೊಂದಿಲ್ಲದಿದ್ದರೂ, ರಾಜ್ಯದ ತಳಮಟ್ಟದಲ್ಲಿ ತನ್ನ ನೆಲೆಯನ್ನು ಇನ್ನೂ ಉಳಿಸಿಕೊಂಡಿವೆ. ಈಗಲೂ, ಸ್ಥಳೀಯ ಚುನಾವಣೆಗಳಲ್ಲಿ ಟಿಎಂಸಿಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳೇ ತೀವ್ರ ಪೈಪೋಟಿ ನೀಡುತ್ತಿವೆ. ಆ ನೆಲೆಯನ್ನು ವಿಧಾನಸಭೆ-ಲೋಕಸಭೆಯ ಮಟ್ಟಕ್ಕೆ ಮತ್ತೆ ಕೊಂಡೊಯ್ಯುವ ಪ್ರಯತ್ನದಲ್ಲಿವೆ.
ಹೀಗಾಗಿ, ಸದ್ಯಕ್ಕೆ, ಬಂಗಾಳದಲ್ಲಿ ಲೋಕಸಭಾ ಚುನಾವಣೆಯು ಮೇಲ್ನೋಟಕ್ಕೆ ಟಿಎಂಸಿ, ಬಿಜೆಪಿ ನಡುವಿನ ಕದನದಂತೆ ಕಾಣಿಸುತ್ತಿದೆಯಾದರೂ, ಕಾಂಗ್ರೆಸ್-ಎಡಪಕ್ಷಗಳು ನಿರ್ಣಾಯಕ ಪೈಪೋಟಿ ನೀಡುವ ಸಾಧ್ಯತೆಗಳೂ ಇವೆ. ಅಂತಿಮವಾಗಿ ಚುನಾವಣಾ ಕಣದಲ್ಲಿ ಯಾರ ಪರವಾದ ಒಲವು ಹೆಚ್ಚಲಿದೆ ಕಾದು ನೋಡಬೇಕಿದೆ.