ಲೋಕಸಭಾ ಚುನಾವಣೆ | ಒಡಿಶಾದಲ್ಲಿ ಬಿಜೆಪಿ-ಕಾಂಗ್ರೆಸ್ ಇದ್ದರೂ ಇಲ್ಲಿ ಪಟ್ನಾಯಕ್‌ರೇ ಪೈಲ್ವಾನ್

Date:

Advertisements

ಲೋಕಸಭಾ ಚುನಾವಣೆ ಜೊತೆಗೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ನಡೆಯುತ್ತಿದೆ. ಆ ಪೈಕಿ ಒಡಿಶಾ ರಾಜ್ಯವೂ ಒಂದು.

ಒಡಿಶಾದಲ್ಲಿ 21 ಲೋಕಸಭಾ ಕ್ಷೇತ್ರಗಳು ಮತ್ತು 147 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದ್ದು, ದೇಶದ ನಾಲ್ಕನೇ ಹಂತದ ಮತದಾನ ನಡೆದ ಮೇ 13ರಂದು ಒಡಿಶಾದಲ್ಲಿ 4 ಲೋಕಸಭಾ ಮತ್ತು 28 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಇನ್ನೂ, ಮೂರು ಹಂತಗಳಲ್ಲಿ ಜೂನ್ 2ರವರೆಗೆ ಚುನಾವಣೆ ನಡೆಯಲಿದೆ. ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ), ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಚುನಾವಣಾ ಕದನ ಏರ್ಪಟ್ಟಿದೆ.

ಒಡಿಶಾದಲ್ಲಿ ಈ ಹಿಂದೆ, ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದ್ದ ಆಡಳಿತಾರೂಢ ಬಿಜೆಡಿ, ಸದ್ಯ ಬಿಜೆಪಿ ಜೊತೆಗಿನ ಸಖ್ಯ ತೊರೆದಿದೆ. ಹಲವಾರು ಸುತ್ತಿನ ಮಾತುಕತೆಯ ಹೊರತಾಗಿಯೂ ಮೈತ್ರಿ ಕೂಡಿಬಂದಿಲ್ಲ. ಹೀಗಾಗಿ, ಬಿಜೆಡಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ.

Advertisements

ಬಿಜೆಪಿ-ಬಿಜೆಡಿ ಜಿದ್ಧಾಜಿದ್ದಿ

ಒಡಿಶಾದಲ್ಲಿ 24 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಡಿ, ರಾಜ್ಯವನ್ನು ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿದೆ. ರಾಜ್ಯದಲ್ಲಿ ಆರನೇ ಬಾರಿಗೆ ಪಕ್ಷವು ಅಧಿಕಾರ ಹಿಡಿಯಲು ಮತ್ತು ಆರನೇ ಬಾರಿಗೆ ಮುಖ್ಯಮಂತ್ರಿಯಾಗಲು ನವೀನ್ ಪಟ್ನಾಯಕ್ ಸಿದ್ದವಾಗಿದ್ದಾರೆ.

ಜತೆಗೆ, ರಾಜ್ಯದಲ್ಲಿ ತನ್ನ ಹಳೆಯ ಮಿತ್ರ ಪಕ್ಷ ಬಿಜೆಪಿಯನ್ನು ಮಣಿಸಬೇಕು. ಬಿಜೆಪಿ ಪ್ರಾಬಲ್ಯವನ್ನು ಕಸಿದುಕೊಳ್ಳಬೇಕು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಣತೊಟ್ಟಿದ್ದಾರೆ. ಅವರು ರಾಜ್ಯದ ವಿಭಿನ್ನ ಪ್ರದೇಶಗಳ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಇಡೀ ರಾಜ್ಯದಲ್ಲಿ ಬಿಜೆಡಿಯ ನೆಲೆಯನ್ನು ಗಟ್ಟಿಗೊಳಿಸಿ, ಬಿಜೆಪಿಯನ್ನು ರಾಜ್ಯದಿಂದ ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತ, ಬಿಜೆಡಿಯ ಮತಗಳನ್ನು ಕಸಿದುಕೊಂಡು ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಯತ್ನದಲ್ಲಿದೆ. ಹೇಗಾದರೂ, ನವೀನ್ ಪಟ್ನಾಯಕ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪಣತೊಟ್ಟಿದೆ. ಇವುಗಳ ನಡುವೆಯೇ, ಕಾಂಗ್ರೆಸ್ ಕೂಡ ತಾನು ಕಳೆದುಕೊಳ್ಳುತ್ತಿರುವ ನೆಲೆಯನ್ನು ಮರಳಿ ಪಡೆಯಲು ಭಾರೀ ಕಸರತ್ತು ನಡೆಸುತ್ತಿದೆ.

ಬಿಜೆಡಿ ಮತ್ತು ಬಿಜೆಪಿ 2009ರಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಬಳಿಕ, ಈ ಮೈತ್ರಿ ಮುರಿದು ಬಿದ್ದಿತ್ತು. ಈಗ ಈ ಎರಡು ಪಕ್ಷಗಳ ನಡುವಿನ ದ್ವಂದ್ವ ಹೋರಾಟವು ಭಾರೀ ದಿನಗಳಿಂದ ನಡೆಯುತ್ತಿದೆ. ಇತ್ತೀಚೆಗೆ, ಉಭಯ ಪಕ್ಷಗಳು ಮತ್ತೆ ಮೈತ್ರಿಗಾಗಿ ಮಾತುಕತೆ ನಡೆಸಿದ್ದವು. ಆದರೆ, ಮೈತ್ರಿ ಮಾತುಕತೆ ಮುರಿದು ಬಿದ್ದಿತ್ತು. ಇನ್ನು ಈ ಮೈತ್ರಿ ಮಾತುಕತೆಗೂ ಮುನ್ನ ಪಶ್ಚಿಮ ಒಡಿಶಾದ ಹಲವು ಬಿಜೆಡಿ ನಾಯಕರು ಬಿಜೆಪಿ ಸೇರಿದ್ದಾರೆ. ಹಾಗಾಗಿ, ಈ ಬಾರಿ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಸ್ವಲ್ಪ ಎಚ್ಚರಿಕೆ ವಹಿಸಿದ್ದಾರೆ. ಪಶ್ಚಿಮ ಒಡಿಶಾದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ತಂತ್ರ ಹೆಣೆಯುತ್ತಿದ್ದಾರೆ.

24 ವರ್ಷಗಳ ಕಾಲ ಆಡಳಿತ ನಡೆಸಿದರೂ ಸಿಎಂ ನವೀನ್ ಪಟ್ನಾಯಕ್ ಅವರ ಜನಪ್ರಿಯತೆ ಮತ್ತು ಕ್ಲೀನ್ ಇಮೇಜ್ ಪ್ರಾದೇಶಿಕ ಸಂಘಟನೆಯ ದೊಡ್ಡ ಶಕ್ತಿಯಾಗಿದೆ. ಪಟ್ನಾಯಕ್ ಅವರ ವರ್ಚಸ್ಸು ಇನ್ನೂ ಪ್ರಬಲವಾಗಿದೆ. ಅವರ ಸರಳತೆ ಹೆಚ್ಚಿನ ಜನಪ್ರಿಯತೆ ಹೊಂದಿದೆ.

ಒಡಿಶಾ ರಾಜ್ಯದ 4.5 ಕೋಟಿ ಜನಸಂಖ್ಯೆಯಲ್ಲಿ ಬಿಜೆಡಿ ಒಂದು ಕೋಟಿಗೂ ಹೆಚ್ಚು ಸದಸ್ಯತ್ವ ಮತ್ತು ಮೀಸಲಾದ ಕೇಡರ್ ಹೊಂದಿದೆ. ಪಟ್ನಾಯಕ್ ಅವರ ಮಹಿಳಾ ಸಬಲೀಕರಣ ಚಟುವಟಿಕೆಗಳು ಈಗಾಗಲೇ ಪಕ್ಷಕ್ಕೆ ಗಟ್ಟಿಯಾದ ಮತಬ್ಯಾಂಕ್ ಅನ್ನು ಸೃಷ್ಟಿಸಿವೆ.

ಪಕ್ಷಕ್ಕೆ ಪಟ್ನಾಯಕ್ ದೌರ್ಬಲ್ಯ

ಪಟ್ನಾಯಕ್ ನೇತೃತ್ವದಲ್ಲಿ ಸರ್ಕಾರವು ಉತ್ತಮ ಆಡಳಿತ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ನಾನಾ ಸೌಲಭ್ಯಗಳನ್ನು ಜನರಿಗೆ ಒದಗಿಸಿದೆ. ಆದರೂ, ಮತ್ತೆ ಅಧಿಕಾರ ಹಿಡಿಯಲು ಸಾಧ್ಯವೇ ಎಂಬ ಆತಂಕದಲ್ಲಿದೆ. ತನ್ನ ಪ್ರತಿಸ್ಪರ್ಧಿಯಾಗಿ ಬಿಜೆಪಿಯನ್ನ ನೋಡುತ್ತಿದೆ. ಬಿಜೆಪಿಯ ಬೆಳವಣಿಗೆ ಜೊತೆಗೆ, ಹಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಮತ್ತು ತೀವ್ರವಾದ ಗುಂಪುಗಾರಿಕೆಯನ್ನು ಎದುರಿಸುತ್ತಿದೆ.

ಇದೆಲ್ಲದರ ನಡುವೆ, ನವೀನ್ ಪಟ್ನಾಯಕ್ ಅವರೇ ಪಕ್ಷದ ದೌರ್ಬಲ್ಯ ಎಂದರೂ ತಪ್ಪಾಗಲಾರದು. ಏಕೆಂದರೆ, ಅವರು ಜನರ ಏಕೈಕ ಆಕರ್ಷಣೆಯಾಗಿದ್ದಾರೆ. ಪಾಟ್ನಾಯಕ ಅವರ ಮೃದು ಸ್ವಭಾವ, ಸಭ್ಯತೆ, ಸರಳ ವ್ಯಕ್ತಿತ್ವವು ಜನರ ಮನ ಗೆದ್ದಿದೆ. ಆದರೆ, ಅಂತಹ ಸ್ವಭಾವವಾಗಲೀ ಅಥವಾ ಅವರ ನಂತರದಲ್ಲಿ ಮತ್ತೊಬ್ಬ ಪ್ರಬಲ ನಾಯಕನಾಗಲೀ ಬಿಜೆಡಿಯಲ್ಲಿಲ್ಲ. ಪಕ್ಷವು 100ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದರೂ, ಯಾರೊಬ್ಬರೂ ನವೀನ್ ಅವರ ಅನುಪಸ್ಥಿತಿಯಲ್ಲಿ ಪಕ್ಷದ ವ್ಯವಹಾರಗಳನ್ನು ನಿರ್ವಹಿಸಲು ಸಾಧ್ಯವಿಲ್ಲ.

ಮತ್ತೊಂದೆಡೆ, ಇಷ್ಟುದಿನ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪರವಾಗಿ ಬಿಜೆಡಿ ಒಲುವು ಹೊಂದಿದ್ದು ಕೂಡ, ಈಗ ಸವಾಲಾಗಿದೆ. ಈಗಲೂ, ಬಿಜೆಡಿ ನಾಯಕರು ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ಮತ್ತು ತಾರತಮ್ಯವೂ ಕೂಡ ಪಕ್ಷದ ಮೇಲೆ ಜನರಲ್ಲಿ ಅಸಮಾಧಾನ ಮೂಡಿಸಿದೆ.

ಬಿಜೆಪಿಗೆ ನೆಲೆ ಸಿಕ್ಕರೂ ಸಿಗುತ್ತಿಲ್ಲ ಅಧಿಕಾರ

ಇತ್ತ, 2009ರಲ್ಲಿ ಬಿಜೆಪಿಯಿಂದ ಬಿಜೆಡಿ ದೂರ ಸರಿದ ಬಳಿಕ, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲೆ ಕಳೆದುಕೊಳ್ಳಲಾರಂಭಿಸಿತ್ತು. ಆದರೆ, 2014ರ ಬಳಿಕ ಮೋದಿ ಅಲೆಯೊಂದಿಗೆ ಮತ್ತೆ ನೆಲೆ ಕಂಡುಕೊಂಡಿದೆ. ಈಗ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ. ಒಡಿಶಾದಲ್ಲಿ ಬಿಜೆಪಿಗೆ ಮೋದಿಯೇ ಶ್ತಕಿಯಾಗಿದ್ದಾರೆ. ಅಲ್ಲಿನ ಜನರು, ಮೋದಿಯನ್ನು ಜನಪ್ರಿಯ ನಾಯಕನೆಂದು ನಂಬಿಸಿದ್ದಾರೆ. ಹಿಂದುತ್ವ, ರಾಮಮಂದಿರದ ವಿಚಾರವು ಬಿಜೆಪಿಗೆ ನೆಲೆ ಕೊಟ್ಟಿದೆ.

ಆದರೆ, ನವೀನ್ ಅವರಿಗೆ ಸವಾಲೊಡ್ಡುವ ಪ್ರಭಾವಿ ನಾಯಕ ರಾಜ್ಯ ಬಿಜೆಪಿಯಲ್ಲಿಲ್ಲ. ಬಿಜೆಪಿಯ ಬಹುತೇಕ ನಾಯಕರು ಕೆಲವು ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ರಾಜ್ಯಾದ್ಯಂತ ಆರ್ಎಸ್ಎಸ್ ಕಾರ್ಯಕರ್ತರು ಮತ್ತು ಎಬಿವಿಪಿ ಸದಸ್ಯರಿದ್ದರೂ, ಅವರಿಗೂ-ಪಕ್ಷಕ್ಕೂ ಸಂಪರ್ಕವೇ ಇಲ್ಲ. ಜೊತೆಗೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಳಗಿನ ಹಿರಿಯ ನಾಯಕರ ಒಳಜಗಳಗಳು ಬಿಜೆಪಿಯ ಓಟಕ್ಕೆ ತಡೆಯಾಗಿವೆ.

ಮಾತ್ರವಲ್ಲದೆ, ಬಿಜೆಪಿ ನಾಯಕರು ಹೆಚ್ಚಾಗಿ ನಗರ ಕೇಂದ್ರಿತರಾಗಿದ್ದಾರೆ. ಪಕ್ಷಕ್ಕೆ ತಳಮಟ್ಟದೊಂದಿಗೆ ಸಂಪರ್ಕ ಕಡಿಮೆಯಿದೆ. ರಾಜಕೀಯವಾಗಿ ಗ್ರಾಮ ಮಟ್ಟದ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಯಾವುದೇ ಚಟುವಟಿಕೆಗಳಿಲ್ಲ. ಹೀಗಾಗಿ, ಬಿಜೆಡಿಯನ್ನು ಮಣಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸಾಮರ್ಥ್ಯ ಕಾಂಗ್ರೆಸ್ಗಿಂತ ಬಿಜೆಪಿಗೆ ಹೆಚ್ಚಿದ್ದರೂ, ಅದನ್ನು ಬಳಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ.

ಕಣ್ಮರೆಯಾದ ಕಾಂಗ್ರೆಸ್

ಒಡಿಶಾದಲ್ಲಿ ಕಾಂಗ್ರೆಸ್ 24 ವರ್ಷಗಳಿಂದ ಅಧಿಕಾರದಲ್ಲಿಲ್ಲ. 2019ರ ಲೋಕಸಭಾ ಚುನಾವಣೆವರೆಗೂ 2ನೇ ಸ್ಥಾನದಲ್ಲಿದ್ದ ಪಕ್ಷ ಮತ್ತಷ್ಟು ಕುಸಿದಿದೆ. ಆದಾಗ್ಯೂ, ಬಿಜೆಡಿ ಮತ್ತು ಬಿಜೆಪಿ ನಡುವೆ ಮೈತ್ರಿಯಾಗಿದ್ದರೆ, ಎದುರಾಳಿ ಸ್ಥಾನ ಕಾಂಗ್ರೆಸ್ಗೆ ಮಾತ್ರವೇ ಇರುತ್ತಿತ್ತು. ಆ ಮೈತ್ರಿಯು ಕಾಂಗ್ರೆಸ್ಗೆ ತನ್ನ ನೆಲೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಕಾಂಗ್ರೆಸ್ ಎದುರು ನೋಡುತ್ತಿತ್ತು. ಆದರೆ, ಅದು ಕೂಡ ಸಾಧ್ಯವಾಗಿಲ್ಲ.

2009ಕ್ಕೂ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್, ಈಗಲೂ ಜನರಿಗೆ ಹತ್ತಿರದ ಪಕ್ಷ. ಆದರೂ, ಅಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈಗಲೂ, ರಾಜ್ಯದ ಎಲ್ಲ 314 ಬ್ಲಾಕ್ಗಳಲ್ಲಿ ಪಕ್ಷವು ಉತ್ತಮ ಕಾರ್ಯಕರ್ತರನ್ನು ಹೊಂದಿದೆ. ಆದರೆ, ಪಕ್ಷದ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಎರಡು ದಶಕಗಳಿಂದ ಪಕ್ಷವು ಅಧಿಕಾರದಿಂದ ಹೊರಗುಳಿದಿದ್ದರೂ, ನಾಯಕರು ಹುದ್ದೆಗಾಗಿ ಪರಸ್ಪರ ಕಚ್ಚಾಟ ಮುಂದುವರೆಸಿದ್ದಾರೆ.

ಜೊತೆಗೆ, ಪಕ್ಷದಲ್ಲಿ ಉತ್ತಮವಾದ ಯಾವುದೇ ಹಣಕಾಸಿನ ಬೆಂಬಲವಿಲ್ಲ. ಹೀಗಾಗಿ, ಅನೇಕ ಉತ್ತಮ ಅಭ್ಯರ್ಥಿಗಳು ಬಿಜೆಡಿ ಮತ್ತು ಬಿಜೆಪಿ ವಿರುದ್ಧ ಚುನಾವಣೆಗಳನ್ನು ಎದುರಿಸಲು ಭಯಪಡುತ್ತಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ಒಡಿಶಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕಾರಣ, ರಾಜ್ಯ ಘಟಕಕ್ಕೆ ಹೈಕಮಾಂಡ್ನಿಂದ ಹೆಚ್ಚಿನ ಬೆಂಬಲವೂ ದೊರೆಯುತ್ತಿಲ್ಲ.

ಆಡಳಿತಾರೂಢ ಬಿಜೆಡಿ ಮತ್ತು ಪ್ರತಿಪಕ್ಷ ಬಿಜೆಪಿ ಮೈತ್ರಿಯಲ್ಲಿ ಇದ್ದರೂ, ಇಲ್ಲದಿದ್ದರೂ ಎರಡೂ ಪಕ್ಷಗಳು ವರ್ತನೆ ರಾಜ್ಯದಲ್ಲಿ ಒಂದೇ ರೀತಿ ಇದೆ. ಹೀಗಾಗಿ, ಜನರು ವಿರೋಧ ಪಕ್ಷವಾಗಿ ಕಾಂಗ್ರೆಸ್ ಅನ್ನೇ ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಬಿಜೆಡಿ ಮತ್ತು ಬಿಜೆಪಿ ಮೈತ್ರಿಯಾಗಿದ್ದರೆ, ಪಕ್ಷಕ್ಕೆ ಉತ್ತಮ ಅವಕಾಶ ದೊರೆಯುತ್ತಿತ್ತು ಎನ್ನಲಾಗುತ್ತಿದೆ.

ಸದ್ಯ, ಕಾಂಗ್ರೆಸ್ಗೆ ನೆಲೆ ಇಲ್ಲ ಎನ್ನಲಾಗಿದ್ದರೂ, ಪ್ರಸ್ತುತ ಚುನಾವಣೆಯಲ್ಲಿ ಒಟ್ಟು 168 ಸ್ಥಾನಗಳಿಗೆ (ಲೋಕಸಭಾ ಮತ್ತು ವಿಧಾನಸಭಾ) ಪಕ್ಷದ ಟಿಕೆಟ್ಗಾಗಿ ಸುಮಾರು 3,000 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಹಲವರು ಹಣದ ಕೊರತೆಯನ್ನು ಎದುರಿಸುತ್ತಿದ್ದಾರೆ. ಮೋದಿ ಮತ್ತು ಪಟ್ನಾಯಕ್ ಜನಪ್ರಿಯತೆಯನ್ನು ಎದುರಿಸಲು ಕಾಂಗ್ರೆಸ್ನಲ್ಲಿ ಪ್ರಬಲ ನಾಯಕರೂ ಕಾಣೆಯಾಗಿರುವುದು ಪಕ್ಷ ಹಿಂದೆ ಉಳಿಯಲು ಕಾರಣವಾಗಿದೆ.

ಈ ಸುದ್ದಿ ಓದಿದ್ದೀರಾ? ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು

ಇತ್ತೀಚೆಗೆ, ಒಡಿಶಾಗೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, “ಕಳೆದ 24 ವರ್ಷಗಳಿಂದ ಬಿಜೆಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ಒಡಿಶಾದ ಜನರು ಅಭಿವೃದ್ಧಿ ಹೊಂದಿಲ್ಲ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) ವರದಿ ಪ್ರಕಾರ, ಒಡಿಶಾದಲ್ಲಿ ನಿರುದ್ಯೋಗ ಹೆಚ್ಚಿದೆ. ಒಡಿಶಾದಲ್ಲಿ ಉದ್ಯೋಗದ ಕೊರತೆಯಿಂದ ಜನರು ಜೀವನೋಪಾಯಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಬೇಕಾಗಿದೆ. ಯಾವ ರೀತಿಯ ಅಭಿವೃದ್ಧಿ ಮಾಡಿದ್ದೀರಿ? ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಜ್ಯದಲ್ಲಿ ವಲಸೆಯ ಪ್ರಮಾಣ ಏಕೆ ಹೆಚ್ಚಿದೆ ಎಂಬುದರ ಕುರಿತು ಉತ್ತರಿಸಬೇಕು” ಎಂದು ಪ್ರಶ್ನಿಸಿದ್ದಾರೆ.

ಅದಾಗ್ಯೂ, ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೇರಲು ಮತ್ತು ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಡಿ ಮತ್ತು ಬಿಜೆಪಿ ತೀವ್ರ ಪೈಪೋಟಿ ನಡೆಸುತ್ತಿವೆ. ಸ್ನೇಹಿತರಂತೆಯೇ ಇಷ್ಟು ದಿನ ವರ್ತಿಸಿರುವ ಈ ಎರಡೂ ಪಕ್ಷಗಳ ನಡುವಿನ ಹೋರಾಟ ಮತ್ತು ಒಲವಿನ ನಡುವೆ ಜನರು ಕಾಂಗ್ರೆಸ್ಗೆ ನೆಲೆ ಕೊಡುವರೇ ಕಾದು ನೋಡಬೇಕಿದೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X