ಗ್ಯಾರಂಟಿ ಯೋಜನೆಗಳಿಗಾಗಿ 52,009 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದೇವೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿಗಳು ಸ್ಥಗಿತವಾಗುತ್ತವೇ ಎಂಬುದು ಬಿಜೆಪಿಯ ಅಪ್ಪಟ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸರ್ಕಾರಕ್ಕೆ ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, “ಗ್ಯಾರಂಟಿಗಳಿಗೆ ಇದಕ್ಕಿಂತ ಹೆಚ್ಚು ಹಣ ಕೊಡ್ತೀವಿ. ಸರ್ಕಾರ ಬಂದು ಇಂದಿಗೆ ಒಂದು ವರ್ಷ ತುಂಬಿದ್ದು, ಲೋಕಸಭಾ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸಂಭ್ರಮ ಆಚರಣೆ ಮಾಡಲು ಆಗಿಲ್ಲ. ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು” ಎಂದರು.
“ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಅಭದ್ರತೆಯ ಆತಂಕ ಇರಲೇಬಾರದೆಂದು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆ. ಅವರ ವಿಶ್ವಾಸವನ್ನು ನಾವು ಕಳೆದುಕೊಳ್ಳುವುದಿಲ್ಲ” ಎಂದು ತಿಳಿಸಿದರು.
“ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ. ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ, ಗ್ಯಾರಂಟಿಗಳ ಜಾರಿಗೆ ಕ್ರಮ ತೆಗೆದುಕೊಂಡು ಐದಕ್ಕೆ ಐದೂ ಜಾರಿ ಮಾಡಿದ್ದೇವೆ” ಎಂದು ಹೇಳಿದರು.
“ಅನ್ನಭಾಗ್ಯ ಯೋಜನೆಗೆ ನಾವು ಹಣ ಕೊಟ್ಟರೂ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ಸತಾಯಿಸಿತು. ಅಕ್ಕಿ ಸಂಗ್ರಹ ಇದ್ದರೂ ಕೊಡಲಿಲ್ಲ. ಅಕ್ಕಿ ಕೊಡದೆ ಇರಲು ಮೇಲಿನಿಂದ ಆದೇಶ ಇದೆ ಎಂದು ಅಧಿಕಾರಿಗಳು ತಿಳಿಸಿದರು. ನಾವು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ನಾಡಿನ ಜನತೆಯ ಖಾತೆಗೆ ಹಣ ಜಮೆ ಮಾಡಿದ್ದೇವೆ” ಎಂದು ತಿಳಿಸಿದರು.
“ಶಕ್ತಿ ಯೋಜನೆಯಲ್ಲಿ ಏಪ್ರಿಲ್ ಕೊನೆಯವರೆಗೂ 201 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಸಂಚರಿಸಿದ್ದಾರೆ. ಯಾವ ಕಾರಣಕ್ಕೂ ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ನಮ್ಮ ಯೋಜನೆಗಳ ಬಡ ಜನರಿಗೆ ಆರ್ಥಿಕವಾಗಿ ಸಹಾಯ ತಂದಿವೆ” ಎಂದರು.
“ಅಭಿವೃದ್ಧಿಗೆ ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಹಣ ಮೀಸಲಿಟ್ಟಿದ್ದೇವೆ. ಹೆಚ್ವು ಹಣ ಖರ್ಚು ಮಾಡಿದ್ದೇವೆ. ಬೊಮ್ಮಾಯಿ ಬಜೆಟ್ ಗಾತ್ರಕ್ಕಿಂತ ನಮ್ಮ ಸರ್ಕಾರದ ಬಜೆಟ್ ಗಾತ್ರ ಹೆಚ್ಚಾಗಿದೆ. ನಮ್ಮ ಸರ್ಕಾರ ಪಾಪರ್ ಆಗಿದ್ದರೆ ಇದು ಸಾಧ್ಯವಿತ್ತಾ” ಎಂದು ಯಡಿಯೂರಪ್ಪ ಆರೋಪಗಳಿಗೆ ಸವಾಲು ಎಸೆದರು.
“ನುಡಿದಂತೆ ನಡೆದು 7.5 ಕೋಟಿ ಜನರ ಆಶಯ ಈಡೇರಿಸಿದ್ದೇವೆ. ನಮಗೆ ಆಶೀರ್ವಾದ ಮಾಡಿ ಬಹುಮತದಿಂದ ಗೆಲ್ಲಿಸಿದ ಜನತೆಗೆ ಮಾಧ್ಯಮಗಳ ಮೂಲಕ ಅಭಿನಂದನೆ ಸಲ್ಲಿಸುವೆ” ಎಂದರು.
