ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

Date:

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ 3ನೇ ಅತಿ ದೊಡ್ಡ (69.2 ಕಿ.ಮೀ) ಮೆಟ್ರೋ ಸೇವೆಯಾಗಿದೆ. ಮೊದಲ ಸ್ಥಾನದಲ್ಲಿ ದೆಹಲಿಯಿದ್ದರೆ (350 ಕಿ.ಮಿ), ಎರಡನೇ ಸ್ಥಾನದಲ್ಲಿ (73.75 ಕಿ.ಮೀ) ಬೆಂಗಳೂರಿನ ನಮ್ಮ ಮೆಟ್ರೋ ಇದೆ.

ತೆಲಂಗಾಣ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಹೈದರಾಬಾದ್ ಮೆಟ್ರೋ ನಿರ್ವಹಣೆಯ ಶೇ.90 ರಷ್ಟು ಪಾಲನ್ನು 65 ವರ್ಷಗಳ ಅವಧಿಗೆ ಎಲ್&ಟಿ (ಲಾರ್ಸೆನ್ ಅಂಡ್ ಟರ್ಬೊ) ಬಹುರಾಷ್ಟ್ರೀಯ ಕಂಪನಿಗೆ ವಹಿಸಿ ಕೇವಲ 10% ಪಾಲನ್ನು ತಾನು ಇಟ್ಟುಕೊಂಡಿದೆ.

2023ರ ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದು, ಸಿಎಂ ರೇವಂತ್ ರೆಡ್ಡಿ ಕರ್ನಾಟಕದ ಶಕ್ತಿ ಯೋಜನೆಯ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ್ ಬಸ್ ಪ್ರಯಾಣದ ಮಹಾಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಹಿಳೆಯರಿಗೆ ಉಚಿತ ಬಸ್ ಇರುವುದರಿಂದ ಮೆಟ್ರೋ ಪ್ರಯಾಣಿಕರಲ್ಲಿ ಕುಸಿತ ಕಂಡಿದ್ದು, ಬಹಳಷ್ಟು ನಷ್ಟವಾಗಿದೆ. ಹಾಗಾಗಿ 2026 ರಿಂದ ಎಲ್&ಟಿ ಮೆಟ್ರೋದ ಪಾಲನ್ನು ಮಾರಾಟ ಮಾಡಿ ಹೊರಹೋಗುವುದಾಗಿ ಬೆದರಿಕೆಯೊಡ್ಡಿದೆ.

ಕಾಂಗ್ರೆಸ್ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಸುಸ್ಥಿರವಾಗಿಲ್ಲ. ಇಂತಹ ಯೋಜನೆಗಳಿಂದ ರಾಜ್ಯದ ಸಾರಿಗೆ ನಿಗಮವು ದಿವಾಳಿಯಾಗುವುದರಲ್ಲಿ ಏನು ಅರ್ಥವಿದೆ? ಮೆಟ್ರೋ ರೈಲಿನಂತಹ ಆಧುನಿಕ, ಶೂನ್ಯ ಮಾಲಿನ್ಯಕಾರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಖಾಸಗಿ ಬಂಡವಾಳವನ್ನು ಬಳಸಲಾಗುತ್ತಿದೆ. ಆದರೆ ಅದೇ ಸಮಯದಲ್ಲಿ, ರಾಜ್ಯ ಸರ್ಕಾರವು ಜನರು ಮಾಲಿನ್ಯಕಾರಕ ಬಸ್‌ಗಳನ್ನು ಬಳಸುವಂತೆ ಹಣವನ್ನು ಖರ್ಚು ಮಾಡುತ್ತಿದೆ. ಮಹಿಳೆಯರು ಬಸ್‌ಗಳನ್ನು ಉಚಿತವಾಗಿ ಬಳಸುತ್ತಾರೆ ಮತ್ತು ಪುರುಷರು ಪ್ರಯಾಣಕ್ಕೆ ಸರಾಸರಿ 35 ರೂಗಳನ್ನು ಪಾವತಿಸುತ್ತಾರೆ. ಇದು ಹೇಗೆ ಸಮರ್ಥನೀಯ? ಇದಿಷ್ಟು ಎಲ್ & ಟಿ ಅಧ್ಯಕ್ಷ, ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಆರ್ ಶಂಕರ್ ರಾಮನ್ ರವರ ಆರೋಪಗಳು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ

ಇದರ ಮುಂದುವರಿಕೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಹ, ”ನೀವು ನಗರದಲ್ಲಿ ಮೆಟ್ರೋ ನಿರ್ಮಿಸಿ ನಂತರ ಚುನಾವಣೆ ಗೆಲ್ಲಲು ಅದೇ ನಗರದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡುತ್ತೀರಿ. ಇದರಿಂದ ನಿಮ್ಮ ಮೆಟ್ರೋ ಪ್ರಯಾಣಿಕರಲ್ಲಿ 50% ರಷ್ಟು ಕಡಿಮೆಯಾಗುತ್ತಾರೆ” ಎಂದು ಟೀಕಿಸಿದ್ದಾರೆ.

ವಾಸ್ತವವೇನು?

ಬೆಂಗಳೂರು ಮತ್ತು ಹೈದರಾಬಾದ್ ಎರಡು ಐಟಿ-ಬಿಟಿ ಸಿಟಿಗಳು. ಈ ಎರಡು ರಾಜ್ಯಗಳಲ್ಲಿಯೂ ಮೆಟ್ರೋ ಸೇವೆ ಇದೆ ಮತ್ತು ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಕರ್ನಾಟಕದಲ್ಲಿ ಮೇ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿದೆ. ಈ ಅವಧಿಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬೇಕಿತ್ತಲ್ಲವೇ? ಆದರೆ ಕಳೆದ ವರ್ಷ ಅಂದರೆ 2023ರ ಮೇ ತಿಂಗಳಲ್ಲಿ1.74 ಕೋಟಿಯಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಈ ವರ್ಷದ ಫೆಬ್ರವರಿ ಅಂತ್ಯಕ್ಕೆ 2.04 ಕೋಟಿಗೆ ಏರಿಕೆಯಾಗಿದೆ. ಜನವರಿಯಲ್ಲಿ ಈ ಸಂಖ್ಯೆ 2.10 ಕೋಟಿಗೆ ತಲುಪಿತ್ತು. ಕಳೆದ ತಿಂಗಳು (ಏ.15) ಒಂದೇ ದಿನ ಮೆಟ್ರೋದಲ್ಲಿ 7,92,000 ಜನ ಪ್ರಯಾಣ ಮಾಡಿದ್ದಾರೆ. ಇದು ನಮ್ಮ ಮೆಟ್ರೋದಲ್ಲಿಒಂದೇ ದಿನ ಅತಿ ಹೆಚ್ಚು ಪ್ರಯಾಣಿಕರ ಸಂಚಾರ ಮಾಡಿದ ದಾಖಲೆಯಾಗಿದೆ. ಸದ್ಯ ಸರಾಸರಿ 7 ಲಕ್ಷ ಜನರು ನಮ್ಮ ಮೆಟ್ರೋ ಬಳಸುತ್ತಿದ್ದಾರೆ. ಆರ್‌.ವಿ ರಸ್ತೆ ಮತ್ತು ಬೊಮ್ಮಸಂದ್ರದ ನಡುವಿನ ಹಳದಿ ಲೈನ್ ಮತ್ತು ನಾಗಸಂದ್ರ ಮಾದಾವರ ನಡುವಿನ ಮೆಟ್ರೋ ಆರಂಭವಾದಲ್ಲಿ ಮತ್ತಷ್ಟು ಪ್ರಯಾಣಿಕರು ಹೆಚ್ಚಾಗುವ ಸಾಧ್ಯತೆಯಿದೆ.

ಹೈದರಾಬಾದ್ ಮೆಟ್ರೋ
ಹೈದರಾಬಾದ್ ಮೆಟ್ರೋ

ಹೆಚ್ಚಿನ ನಮ್ಮ ಮೆಟ್ರೋ ಆದಾಯ

ನಮ್ಮ ಮೆಟ್ರೋ ಸಹ ಹಲವು ವರ್ಷಗಳು ನಷ್ಟ ಅನುಭವಿಸಿದೆ. 2018ರಲ್ಲಿ 352.25 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದ ನಮ್ಮ ಮೆಟ್ರೋ  2019ರಲ್ಲಿ 498.41 ಕೋಟಿ ರೂಪಾಯಿ ನಷ್ಟ ಕಂಡಿತ್ತು. 2020 ರಿಂದ 2022ರವರೆಗೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಹಲವು ತಿಂಗಳು‍ ಸೇವೆ ಸ್ಥಗಿತಗೊಳಿಸಿದ್ದ ಬೆಂಗಳೂರು ಮೆಟ್ರೊ 500 ಕೋಟಿಗೂ ಅಧಿಕ ನಷ್ಟ ಅನುಭವಿಸಿತ್ತು. ಆನಂತರವಷ್ಟೆ ಅದು ಲಾಭದ ಹಾದಿಗೆ ಮರಳಿದೆ.

ಆದಾಯದ ವಿಷಯಕ್ಕೆ ಬರುವುದಾದರೆ 2022-23ರ ವರ್ಷದಲ್ಲಿ 108 ಕೋಟಿ ರೂ ಆದಾಯ ಗಳಿಸಿದ್ದ ನಮ್ಮ ಮೆಟ್ರೋ 2023-24ರ ವರ್ಷದಲ್ಲಿ ಬರೋಬ್ಬರಿ 129 ಕೋಟಿ ರೂ ಆದಾಯ ಗಳಿಸಿದೆ.

ಇದಕ್ಕೆ ಕಾರಣ ತಿಳಿಸಿರುವ ಮೆಟ್ರೋ ಅಧಿಕಾರಿಗಳು, ”ಹೊಸ ಮಾರ್ಗಗಳು ಇಲ್ಲವೇ ವಿಸ್ತರಣೆ ಮಾರ್ಗಗಳು ಸದಾ ಪ್ರಯಾಣಿಕರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುತ್ತವೆ. ಕಳೆದ ವರ್ಷ ಚಲ್ಲಘಟ್ಟವರೆಗೆ ಮೆಟ್ರೋ ವಿಸ್ತರಣೆ ಮಾಡಿದ್ದು, ಮೊದಲ ಐಟಿ ಕಾರಿಡಾರ್‌ಗೆ ಪ್ರಯಾಣ ಸೇವೆಗೆ ಪೂರ್ಣ ನೇರಳೆ ಮಾರ್ಗ ತೆರೆದಿರುವುದು ಈ ಸಾಧನೆಗೆ ಕಾರಣವಾಗಿದೆ” ಎಂದಿದ್ದಾರೆ.

ಟಿಕೆಟ್ ಆದಾಯ ಹೆಚ್ಚು: ಇತರ ಆದಾಯ ಇಳಿಕೆ

ಸದ್ಯ ನಮ್ಮ ಮೆಟ್ರೋದಲ್ಲಿ ಟಿಕೆಟ್ ಮಾರಾಟದಿಂದಲೇ ಹೆಚ್ಚಿನ ಆದಾಯ ಬರುತ್ತಿದ್ದು, ಜಾಹೀರಾತು ಸೇರಿದಂತೆ ಇತರ ಮೂಲಗಳಿಂದ ಬರುವ ಆದಾಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಜಾಹೀರಾತಿನಿಂದ 2018ರಲ್ಲಿ 131 ಕೋಟಿ ರೂಪಾಯಿ ವರಮಾನವನ್ನು ಮೆಟ್ರೋ ಗಳಿಸಿತ್ತು. 2019ರಲ್ಲಿ ಅದು 81 ಕೋಟಿ ರೂಪಾಯಿಗೆ ಕುಸಿಯಿತು. ಆನಂತರ ಮತ್ತಷ್ಟು ಕುಸಿದಿದೆ. ಸದ್ಯ ಮೆಟ್ರೋ ನಿಲ್ದಾಣಗಳಲ್ಲಿ ಸೇರಿದಂತೆ, ಮೆಟ್ರೋ ರೈಲಿನ ಬಾಗಿಲು, ಕಿಟಕಿ ಸೇರಿದಂತೆ ಇತರೆಡೆ ಜಾಹೀರಾತು ಸೇವೆ ಒದಗಿಸಲು ನಮ್ಮ ಮೆಟ್ರೋ ಮುಂದಾಗಿದೆ. ಇದರಿಂದ ನೂರಾರು ಕೋಟಿ ರೂ ಆದಾಯ ತರುವ ನಿರೀಕ್ಷೆ ಇದೆ.

2017-18ನೇ ಹಣಕಾಸು ವರ್ಷದಲ್ಲಿ ಟಿಕೆಟ್‌ಯೇತರ ಮೂಲಗಳಿಂದ ಅಂದರೆ ಪಾರ್ಕಿಂಗ್, ಕಟ್ಟಡಗಳ ಬಾಡಿಗೆಗಳಿಂದ 44 ಕೋಟಿ ರೂ. ಆದಾಯ ಹರಿದು ಬಂದಿತ್ತು. 2018-19ರಲ್ಲಿ 47.33 ಕೋಟಿ ರೂ., 2019-20ಕ್ಕೆ 41.92 ಕೋಟಿ ರೂ. ಆದಾಯ, 2021-22ರಲ್ಲಿ 28.06 ಕೋಟಿ ರೂ. ಹಾಗೂ 2022-23ರಲ್ಲಿ 20.98 ಕೋಟಿ ರೂ.ಗೆ ಇಳಿಕೆಯಾಗಿದೆ.

ಇದನ್ನು ಓದಿದ್ದೀರಾ?: ಪತಂಜಲಿ ‘ಸೋನ್ ಪಾಪ್ಡಿ’ ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ; ಮೂವರಿಗೆ ಜೈಲು

BMRCL ನ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಎಎಸ್ ಮಾತನಾಡಿ, ”ಶಕ್ತಿ ಯೋಜನೆಯು ಬೆಂಗಳೂರು ಮೆಟ್ರೋದ ಪ್ರಯಾಣಿಕರ ಮೇಲೆ ಪರಿಣಾಮ ಬೀರಿಲ್ಲ. ಬಸ್ಸುಗಳು ಕಿಕ್ಕಿರಿದ ಕಾರಣ ಪ್ರಯಾಣಿಕರು ಮೆಟ್ರೋಗೆ ಸ್ಥಳಾಂತರಗೊಂಡಿದ್ದಾರೆ. ಇದು ಅತ್ಯಂತ ಮಿತವ್ಯಯ ಮಾತ್ರವಲ್ಲ. ಹವಾನಿಯಂತ್ರಿತ ಸೌಕರ್ಯವನ್ನು ಒದಗಿಸುವ ನಗರದಲ್ಲಿ ಅತ್ಯಂತ ವಿಶ್ವಾಸಾರ್ಹ ಸಾರಿಗೆ ವಿಧಾನವಾಗಿದೆ” ಎಂದು ತಿಳಿಸಿದ್ದಾರೆ.

ಹೈದರಾಬಾದ್ ಮೆಟ್ರೋ ನಷ್ಟಕ್ಕೆ ಕಾರಣಗಳೇನು?

ಗಮನಿಸಬೇಕಾದ ಅಂಶವೆಂದರೆ ಹೈದರಾಬಾದ್ ಮೆಟ್ರೋ ಉಚಿತ ಬಸ್ ಸೇವೆ ಆರಂಭವಾದ ನಂತರ ನಷ್ಟಕ್ಕೆ ಸಿಲುಕಿಲ್ಲ. ಬದಲಿಗೆ ಆರಂಭದಿಂದಲೂ ನಷ್ಟದಲ್ಲಿಯೇ ಸಾಗುತ್ತಿದೆ.

2017-18ನೇ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆ ಪ್ರಾರಂಭವಾದಾಗ, L&TMRH 58.36 ಕೋಟಿ ರೂ ನಷ್ಟವನ್ನು ಘೋಷಿಸಿತು. 2018-19ರಲ್ಲಿ 148 ಕೋಟಿಗೆ ನಷ್ಟವು ಹೆಚ್ಚಾಯಿತು. 2019-20 ರಲ್ಲಿ ₹ 598.20 ಕೋಟಿಗೆ ಏರಿಕೆಯಾಯಿತು. 2020-21 ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 1,766 ಕೋಟಿ ರೂ ನಷ್ಟವನ್ನು ಕಂಡಿದೆ. 2021-22 ರಲ್ಲಿ 1,745 ಕೋಟಿ ಮತ್ತು 2022-23 ರಲ್ಲಿ 1,315.95 ಕೋಟಿ ರೂ ನಷ್ಟವನ್ನು ಉಲ್ಲೇಖಿಸಿದೆ.

ಸದ್ಯ ಎಲ್‍&ಟಿ ಸುಮಾರು 14,000 ಕೋಟಿ ರೂ ಸಾಲದಲ್ಲಿದೆ. 2021ರ ಜೂನ್ ತಿಂಗಳಿನಲ್ಲಿಯೇ ಎಲ್‍&ಟಿ ನಿಯೋಗವು ಅಂದಿನ ಸಿಎಂ ಕೆಸಿಆರ್‍ರವರನ್ನು ಭೇಟಿ ಮಾಡಿ ನಷ್ಟ ಸರಿದೂಗಿಸಲು 400 ಕೋಟಿ ರೂ ನೆರವು ನೀಡುವಂತೆ ಮನವಿ ಮಾಡಿದ್ದರು. 2023ರಲ್ಲಿ 3000 ಕೋಟಿ ರೂ ಬಡ್ಡಿರಹಿತ ದೀರ್ಘಾವಧಿ ಸಾಲಕ್ಕಾಗಿ ಸರ್ಕಾರದ ಬಳಿ ಮನವಿ ಮಾಡಲಾಗಿತ್ತು. ಸರ್ಕಾರ ಸುಮಾರು 900 ಕೋಟಿ ರೂಗಳ ಸಾಲ ನೀಡಿದೆ ಎನ್ನಲಾಗಿದೆ.

ಹೈದರಾಬಾದ್ ಮೆಟ್ರೋ ಆರಂಭವಾಗಿ ಆರೂವರೆ ವರ್ಷಗಳಾಗಿವೆ ಅಷ್ಟೆ. ಈ ಮಧ್ಯೆ ಕೋವಿಡ್ ಸೇರಿದಂತೆ ಹಲವು ಅಡೆತಡೆಗಳು ಎದುರಾಗಿವೆ. ಅಲ್ಲದೇ ಹೈದರಾಬಾದ್ ಏರ್ಪೋರ್ಟ್, ಗಚಿಬೋಲಿ ಪ್ರದೇಶ ಸೇರಿದಂತೆ ಹಲವು ಕಡೆಗಳಿಗೆ ಮೆಟ್ರೋ ಸೇವೆ ಇನ್ನೂ ವಿಸ್ತರಣೆಯಾಗಿಲ್ಲ. ಜಾಹೀರಾತು ಮೂಲಗಳಿಂದ ನಿರೀಕ್ಷಿಸಿದಷ್ಟು ಆದಾಯ ಬಂದಿಲ್ಲ. ಮುಖ್ಯವಾಗಿ ರೈಲು ಗಾಡಿಗಳ ಸಂಖ್ಯೆ ಮತ್ತು ಕೋಚ್‍ಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ, ಪ್ರಯಾಣಿಕ ಸ್ನೇಹಿ ವಾತವಾರಣ ನಿರ್ಮಾಣ ಮಾಡುವಲ್ಲಿ ಎಲ್‍&ಟಿ ವಿಫಲವಾಗಿದೆ. ಇದೇ ನಷ್ಟಕ್ಕೆ ಮುಖ್ಯ ಕಾರಣ ಎಂದು ಬಹುತೇಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಎಲ್ & ಟಿಗೆ ತೆಲಂಗಾಣ ಸರ್ಕಾರ ಸುಮಾರು 269 ಎಕರೆ ಭೂಮಿಯನ್ನು ಡಿಪೋ, ಪಾರ್ಕಿಂಗ್‍ಗಾಗಿ ನೀಡಿದೆ. ಹಲವು ಜಾಗಗಳ ಅಭಿವೃದ್ದಿಗೆಅವಕಾಶ ನೀಡಿದೆ. ಸದ್ಯ ಹಲವಾರು ಮಾಲ್‍ಗಳನ್ನು ನಿರ್ಮಿಸಲಾಗಿದ್ದು ಅವುಗಳನ್ನು ಬಾಡಿಗೆಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಧಿಕಾರಕ್ಕೆ ಬಂದ ಕೂಡಲೇ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳನ್ನು ಸ್ಥಗಿತಗೊಳಿಸಿದರು, ಮಾರ್ಗದ ಯೋಜನೆಗಳನ್ನು ಮರುಹೊಂದಿಸಿದರು ಮತ್ತು ಎಲ್ & ಟಿ ಮೇಲಿನ ಆರೋಪಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಾಗಾಗಿ ಸಿಎಂ ವಿರುದ್ಧ ಎಲ್‍&ಟಿ ಅಸಮಾಧಾನಗೊಂಡಿದ್ದು ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ ಎನ್ನಲಾಗಿದೆ.

ರೇವಂತ್ ರೆಡ್ಡಿ
ರೇವಂತ್ ರೆಡ್ಡಿ

ಉಚಿತ ಬಸ್ ಪ್ರಯಾಣ ನಿಲ್ಲುವುದಿಲ್ಲ – ಸಿಎಂ ರೇವಂತ್ ರೆಡ್ಡಿ

ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ರೇವಂತ್ ರೆಡ್ಡಿ, ”ಎಲ್&ಟಿ ನವರು ಮೆಟ್ರೋ ನಿರ್ವಹಣೆಯಿಂದ ಹೊರನಡೆಯುವುದಾರೆ ಅದನ್ನು ಸ್ವಾಗತಿಸುತ್ತೇನೆ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಾದ ಮಹಿಳೆಯರ ಉಚಿತ ಬಸ್ ಪ್ರಯಾಣ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಎಲ್‍&ಟಿ ಜಾಗದಲ್ಲಿ ಮತ್ತೊಬ್ಬರು ಬರುತ್ತಾರೆ. ಚಿಂತಿಸುವ ಅಗತ್ಯವಿಲ್ಲ” ಎಂದಿದ್ದಾರೆ.

”ಸರ್ಕಾರವು ಜನರಿಗಾಗಿ ಕೆಲಸ ಮಾಡಬೇಕೆ ಹೊರತು ಕಾರ್ಪೊರೇಟ್ ಕಂಪನಿಗಳ ಪರವಲ್ಲ. ನಾನು ಎಲ್‍&ಟಿ ಲಾಭ ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಹೋಗುವುದಾದರೆ ಸರ್ಕಾರ ಮೆಟ್ರೋ ನಿರ್ವಹಣೆ ವಹಿಸಿಕೊಳ್ಳುತ್ತದೆ ಅಥವಾ ಮತ್ತೊಂದು ಕಂಪನಿ ಆ ಜವಾಬ್ದಾರಿ ವಹಿಸಿಕೊಳ್ಳಬಹುದು” ಎಂದು ರೇವಂತ್ ರೆಡ್ಡಿ ಹೇಳುವ ಮೂಲಕ ಕಂಪನಿ ವಿರುದ್ಧ ಖಡಕ್ ಸಂದೇಶ ರವಾನಿಸಿದ್ದಾರೆ.

ಇದನ್ನು ಓದಿದ್ದೀರಾ?: ಮಾಧ್ಯಮ ಸಂವಾದ | ಒಂದು ವರ್ಷದಲ್ಲಿ ರಾಜ್ಯದ ಅಭಿವೃದ್ಧಿಗೆ ₹56,274 ಕೋಟಿ ಖರ್ಚು: ಸಿದ್ದರಾಮಯ್ಯ

ಕಳೆದ ವರ್ಷವೇ ಕಾಳೇಶ್ವರಂ ಏತ ನೀರಾವರಿ ಯೋಜನೆಯ ಭಾಗವಾದ ಮೇಡಿಗಡ್ಡ ಬ್ಯಾರೇಜ್‌ ಕಳೆದ ವರ್ಷ ಮುಳುಗಡೆಯಾಗಿತ್ತು. ಆದರೆ ಅದರ ಗುತ್ತಿಗೆದಾರರಾದ ಎಲ್‍&ಟಿ ದುರಸ್ಥಿ ಮಾಡಿಸಲು ನಿರಾಕರಿಸಿತ್ತು. ಆಗಲೂ ರೇವಂತ್ ರೆಡ್ಡಿ ಎಲ್‍&ಟಿ ವಿರುದ್ಧ ಕಿಡಿಕಾರಿದ್ದರು.

ಈಗ ಎಲ್‍ &ಟಿ ತಾನು ಹೊರನಡೆಯುವುದಾಗಿ ಹೇಳುವುದು ಮಾತ್ರವಲ್ಲದೇ ಬಹಳ ನಷ್ಟದಲ್ಲಿದ್ದೇನೆ ಎಂದು ತನ್ನದೇ ಯೋಜನೆ ಬಗ್ಗೆ ಋಣಾತ್ಮಕ ಪ್ರಚಾರ ಮಾಡಿಬಿಟ್ಟಿದೆ. ಹಾಗಾಗಿ ಸುಲಭಕ್ಕೆ ಅದನ್ನು ಕೊಂಡುಕೊಳ್ಳಲು ಯಾರು ಸಹ ಮುಂದೆ ಬರುವುದಿಲ್ಲ. ಅಲ್ಲದೇ ತನ್ನ ವೈಫಲ್ಯಕ್ಕೆ ಸರ್ಕಾರದ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಸಹ ಟೀಕಿಸುವ ಮೂಲಕ ಮುಖ್ಯಮಂತ್ರಿಗಳ ವಿರೋಧ ಕಟ್ಟಿಕೊಂಡಿದೆ. ಆರಂಭದಲ್ಲಿ ರಾಜಕೀಯ ಹೇಳಿಕೆ ನೀಡಬಾರದೆಂದು ಆಡಳಿತ ಮಂಡಳಿಯಲ್ಲಿ ಚರ್ಚೆಯಾಗಿದ್ದು, ಅದನ್ನು ತಾನೇ ಉಲ್ಲಂಘಿಸುವ ಮೂಲಕ ಭಾರೀ ಕಷ್ಟಕ್ಕೆ ಸಿಲುಕಿಕೊಂಡಿದೆ.

ಕಲಿಯಬೇಕಾದ ಪಾಠಗಳು

ಮೆಟ್ರೋದಂತಹ ಸೇವೆಗಳು ಪ್ರಪಂಚದಾದ್ಯಂತ ಸ್ವಲ್ಪ ನಷ್ಟದಲ್ಲಿಯೇ ನಡೆಯುತ್ತಿವೆ. ಆದರೆ ಅಲ್ಲಿನ ಸರ್ಕಾರಗಳು ಅದನ್ನು ಸಂಚಾರ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸುವ ಸೇವೆಯ ಭಾಗವಾಗಿ ನೋಡುತ್ತವೆ ಹೊರತು ಲಾಭ ನಷ್ಟದ ಲೆಕ್ಕಾಚಾರದಿಂದ ಅಲ್ಲ. ಬೆಂಗಳೂರಿನ ನಮ್ಮ ಮೆಟ್ರೋ ಸಹ ಹಲವು ವರ್ಷ ನಷ್ಟದಲ್ಲಿದ್ದು, ಸದ್ಯ ವಿಸ್ತರಿತ ಸೇವೆಯಿಂದ ಲಾಭದ ಹಾದಿಗೆ ಮರಳಿದೆ. ಎಲ್ & ಟಿ ಖಾಸಗಿ ಸಂಸ್ಥೆಯು ಮೆಟ್ರೋದ ನಿರ್ವಹಣೆ ಹೊತ್ತುಕೊಂಡಿರುವುದು, ಅದು ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದು ಕಾರ್ಪೊರೇಟ್ ಲಾಭದ ಹಪಹಪಿಯನ್ನು ತೋರಿಸುತ್ತದೆ. ಹಾಗಾಗಿ ಸಾರ್ವಜನಿಕ ಸಂಸ್ಥೆಗಳ ಮಹತ್ವವನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ. ಉಚಿತ ಬಸ್ ಪ್ರಯಾಣವನ್ನು ಟೀಕಿಸುವುದು ಉಚಿತ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳನ್ನು ಟೀಕಿಸಿದಂತೆ. ಶಿಕ್ಷಣ, ಆರೋಗ್ಯ ಮತ್ತು ಜನರ ಕಾಳಜಿ ವಹಿಸುವುದು ಸರ್ಕಾರದ ಕರ್ತವ್ಯ ಎನ್ನುವುದನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ.

ಎರಡನೇಯದಾಗಿ ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬೃಹತ್ ವೇಗದಲ್ಲಿ ಬೆಳೆದಿದೆ ಎಂಬ ಆಳುವ ಕೇಂದ್ರ ಸರ್ಕಾರದ ವಾದಕ್ಕೆ ಈ ಪ್ರಕರಣ ಅಡ್ಡಗಾಲಾಗುತ್ತದೆ. ಮುಖ್ಯವಾಗಿ ಜಾಹೀರಾತು ಕುಸಿತ, ಮಾಲ್‍ಗಳಿಗೆ ಬೇಡಿಕೆಯಿಲ್ಲದಿರುವುದು ಏಕೆ ಎಂಬುದು ದೊಡ್ಡ ಚರ್ಚೆಯನ್ನು ಕೇಳುತ್ತದೆ. ಆ ಚರ್ಚೆಗೆ ನಾವು ತೆರೆದುಕೊಳ್ಳಬೇಕಿದೆ.

ಮುತ್ತುರಾಜು
ಮುತ್ತುರಾಜು
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತದೆ: ಎಎಪಿ

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ...

120 ತಾಲ್ಲೂಕುಗಳಲ್ಲಿ ಕ್ರೀಡಾಂಗಣಗಳಿಲ್ಲ; ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯಗೆ ಮಾಹಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ...

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ; ಶಾಲೆಗಳಲ್ಲಿ ಲಿಂಗಸಮಾನತೆಯ ಪಾಠದ ಕೊರತೆ

2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು...

ಪರಿಶಿಷ್ಟ ಪಂಗಡಗಳ ಮಕ್ಕಳ ಶೈಕ್ಷಣಿಕ ಮಟ್ಟ ಏಕೆ ಸುಧಾರಿಸಿಲ್ಲ?: ಅಧಿಕಾರಿಗಳಿಗೆ ಸಿಎಂ ತರಾಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣದಲ್ಲಿ ಪರಿಶಿಷ್ಟ...