“ಹೆಚ್ ಡಿ ದೇವೇಗೌಡ ಮತ್ತು ನನ್ನ ಮೇಲೆ ಗೌರವ ಇದ್ದರೆ ಕೈಮುಗಿದು ಮನವಿ ಮಾಡುವೆ, ರಾಜ್ಯಕ್ಕೆ ಬಂದು ಎಸ್‌ಐಟಿಗೆ ಶರಣಾಗು” ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಂಸದ ಪ್ರಜ್ವಲ್ ರೇವಣ್ಣಗೆ ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಬೆಂಗಳುರು ನಗರದ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ನೆಲದ ಕಾನೂನು ಇದೆ, ಯಾಕೆ ಹೆದರಬೇಕು? ಎಷ್ಟು ದಿನ ಕಳ್ಳ ಪೊಲೀಸ್ ಆಟ. ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡಬೇಕು. ಎರಡು ದಿನದೊಳಗೆ ಬರಬೇಕು” ಎಂದು ಕೋರಿದ್ದಾರೆ.
“ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದು ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹಾಗಾಗಿ ನಾನು ಸಾರ್ವಜನಿಕವಾಗಿ ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ಎಲ್ಲರೂ ಅಸಹ್ಯ ಪಡುವ ಪ್ರಕರಣ ಇದು. ಈ ಕೇಸ್ನಲ್ಲಿ ನನ್ನ ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ” ಎಂದರು.
“ಪದ್ಮನಾಭ ನಗರಕ್ಕೆ ನಾನು ಪ್ರಜ್ವಲ್ನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೋಗುತ್ತೇನೆ. ಪ್ರಜ್ವಲ್ ಎಲ್ಲೆ ಇದ್ದರೂ ಬಂದು ಸರೆಂಡರ್ ಆಗಲು ಮಾನವಿ ಮಾಡುವಂತೆ ನಾನು ತಂದೆಗೆ ಹೇಳಿದ್ದೇನೆ” ಎಂದು ಹೇಳಿದರು.
“ನಿನ್ನೆ ಆಡಿಯೋ ಬಂತಲ್ಲ. ಈಗ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ. ದೇವರಾಜೇಗೌಡ ಆಡಿಯೋದಲ್ಲಿ ಯಾರು ಮತನಾಡಿದ್ದು, ಸದಾಶಿವ ನಗರಕ್ಕೆ ಯಾರನ್ನ ಭೇಟಿ ಮಾಡಲು ಹೇಳಿದ್ದರು. ಆಡಿಯೋದಲ್ಲಿ ಶಿವಕುಮಾರ್ ಹೇಳಿದ್ದಾರೆ. ಕುಮಾರಸ್ವಾಮಿ ಹೆಸರು ಹೇಳಿ ಅಂದಿದ್ದಿರಾ ಸಿ ಡಿ ಶಿವು” ಎಂದು ಕಿಡಿಕಾರಿದರು.
“ಶಿವಕುಮಾರ್ ನೀವು ತಿಹಾರ್ ಜೈಲಿನಲ್ಲಿ ಇದ್ದಾಗ ನಾನು ನಿಮ್ಮ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ನಿಮ್ಮನ್ನು ಕೂಡ ತಿಹಾರ್ ಜೈಲಿನಲ್ಲಿ ಭೇಟಿ ಮಾಡಿ ನಾಲ್ಕು ದಿನಗಳಲ್ಲಿ ನೀವು ಬಿಡುಗಡೆ ಆದ್ರಿ. ಈಗ ನೀವು ಏನು ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಮ್ಮ ತಾಯಿ ಕೈಯಿಂದ ಅನ್ನ ತಿಂದಿದ್ದೀರಿ” ಎಂದು ಹರಿಹಾಯ್ದರು.
