ಕೃಷಿಗಾಗಿ ಸಾಲ ಮಾಡಿದ್ದ ರೈತ, ಬರದಿಂದಾಗಿ ನಷ್ಟಕ್ಕೆ ಸಿಲುಕಿ ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ, ಸಾಲದಾತ ಮಹಿಳೆ ರೈತನ ಪತ್ನಿ ಮತ್ತು ಪುತ್ರನನ್ನು ಗೃಹಬಂಧನದಲ್ಲಿಟ್ಟಿದ್ದು, ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ.
ಇಬ್ಬರು ಸಚಿವರಿರುವ – ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ – ಜಿಲ್ಲೆಯಲ್ಲಿಯೇ ಸಾಲದಾತರು ರೈತನ ಕುಟುಂಬದ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ದೌರ್ಜನ್ಯದಿಂದ ಮನನೊಂದ, ಸಾಲ ಮಾಡಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಸ್ಲಾಂಪುರದ ರೈತ ರಾಜು ಖೋತಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅವರು ಅದೇ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆಯ ಬಳಿ 10% ಬಡ್ಡಿದರದಲ್ಲಿ 1.5 ಲಕ್ಷ ಸಾಲ ಮಾಡಿದ್ದರು. ಸಾಲ ಮರುಪಾವತಿಸುವಂತೆ ಪದೇ-ಪದೇ ಒತ್ತಡ ಹಾಕಿದ್ದರು. ಒಂದೆರಡು ತಿಂಗಳು ಸಮಯ ಕೇಳಿದರೂ ಒಬ್ಬದ ಸಾಲದಾತೆ, ಸಾಲ ವಾಪಾಸ್ ಕೊಡುವವರೆಗೂ ಪುತ್ರ ಬಸವರಾಜ್‌ನನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದರು. ಮಗನನ್ನು ಕರೆದುಕೊಂಡ ಬರಲು ಹೋದ ರಾಜು ಪತ್ನಿ ದುರ್ಗವ್ವ ಅವರನ್ನೂ ಗೃಹ ಬಂಧನದಲ್ಲಿಡಲಾಗಿತ್ತು.
ಸಾಲದಾತೆ ರಾಜು ಅವರ ಪುತ್ರ ಮತ್ತು ಪತ್ನಿಗೆ ನೀರು-ಆಹಾರವನ್ನೂ ಕೊಡದೆ, ಹಸಿವಿನಲ್ಲಿ ಇರಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಮನವೊಂದ ರೈತ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲದಾತೆ ಸಿದ್ದವ್ವ ಅವರ ದೌರ್ಜನ್ಯದ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು ಎಂಬ ಆರೋಪವೂ ಇದೆ. ರೈತ ಆತ್ಮಹತ್ಯೆ ಮಾಡಿಕೊಂಡ ಬಳಿಕ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
ಆಪ್ತ ಬಂಡವಾಳಿಗರ ಲಕ್ಷಾಂತರ ಕೋಟಿ ಸಾಲ ರೈಟ್ ಆಫ್ ಮಾಡುವ ರಾಜಕಾರಣಿಗಳು ಇರುವ ದೇಶದಲ್ಲಿ,,ಬಡರೈತರ ಸ್ಥಿತಿ ಹೀಗೂ ಉಂಟೆ