ದೇಶದ ಕೋಚಿಂಗ್ ಹಬ್ ಎಂದೇ ಕರೆಯಲ್ಪಡುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್ ಎಂಬ ವಿದ್ಯಾರ್ಥಿ ಮೃತ ದುರ್ದೈವಿ. ಆತ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದ ಎಂದು ಕೋಟಾ ಪೊಲೀಸರು ತಿಳಿಸಿದ್ದಾರೆ.
“ನನ್ನನ್ನು ಕ್ಷಮಿಸು ಅಪ್ಪಾ. ‘ಸಾಲ್ ಭೀ ನಹಿ ಕರ್ ಪಾಯಾ’ (ನನಗೆ ಸಮಯಕ್ಕೆ ಸರಿಯಾಗಿ ತಯಾರಿ ನಡೆಸಲು ಸಾಧ್ಯವಾಗಲಿಲ್ಲ),” ಎಂದು ಅತ ಪತ್ರ ಬರೆದಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿದ್ಯಾರ್ಥಿ ಭರತ್ ರಾಜಸ್ಥಾನದ ಧೋಲ್‌ಪುರ ಮೂಲದವರು ಎಂದು ತಿಳಿದುಬಂದಿದೆ. NEET ಮತ್ತು ಜಂಟಿ ಪ್ರವೇಶ ಪರೀಕ್ಷೆ (JEE) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರತಿ ವರ್ಷ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟಾಕ್ಕೆ ಬರುತ್ತಾರೆ. ಅಲ್ಲಿ, ನಿರಂತರವಾಗಿ ಅಭ್ಯಾಸ ಮಾಡುತ್ತಾರೆ.
ವಿದ್ಯಾರ್ಥಿಗಳ ಕಲಿಕಾ ವೇಳಾಪಟ್ಟಿ ಪೂರ್ವ ನಿಗದಿಯಾಗಿರುತ್ತದೆ ಮತ್ತು ಸಂಪೂರ್ಣ ಒತ್ತಡವಿರುತ್ತದೆ. ಕಟ್-ಥ್ರೋಟ್ ಸ್ಪರ್ಧೆ, ಓದು, ಪೋಷಕರ ನಿರೀಕ್ಷೆಗಳ ಹೊರೆ – ಕೋಚಿಂಗ್ ಹಬ್‌ನಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಸಂಗತಿಗಳಾಗಿವೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.