ಸೋಮವಾರ 5ನೇ ಹಂತದಲ್ಲಿ 49 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಆದರೆ, ಮತದಾನ ನಿಖರ ಅಂಕಿಅಂಶಗಳನ್ನು ಚುನಾವಣಾ ಆಯೋಗ ಇನ್ನೂ ನೀಡಿಲ್ಲ. 60.09% ಮತದಾನ ನಡೆದಿದೆ ಎಂದು ಅಂದಾಜಿಸಲಾಗಿದೆ. ನಾಲ್ಕು ದಿನಗಳ ಬಳಿಕ ನಿಖರ ಅಂಕಿಅಂಶ ನೀಡುವುದಾಗಿ ಆಯೋಗ ಹೇಳಿದೆ.
ಈ ಹಿಂದೆ ನಡೆದ ನಾಲ್ಕು ಹಂತಗಳ ಮತದಾನದಲ್ಲಿಯೂ ಸ್ಪಷ್ಟವಾದ ಅಂಕಿಅಂಶ ಪ್ರಕಟಿಸುವಲ್ಲಿ ಆಯೋಗ ವಿಳಂಬ ಮಾಡಿತ್ತು. ಇದೀಗ, 5ನೇ ಹಂತದಲ್ಲಿಯೂ ಅದೇ ಮುಂದುವರೆದಿದೆ.
ಸೋಮವಾರ 60.09% ಮತದಾನ ಆಗಿರುವುದಾಗಿ ರಾತ್ರಿ 11:30ರ ವೇಳೆಗೆ ಅಂದಾಜಿಸಲಾಗಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳಿಂದ ಅಂಕಿಅಂಶಗಳ ನವೀಕರಣವನ್ನು ಮುಂದುವರಿಸಲಾಗುತ್ತಿದೆ” ಎಂದು ಆಯೋಗ ಹೇಳಿದೆ.
ನಿಖರ ಮಾಹಿತಿಯನ್ನು ಇನ್ನೂ ನೀಡದ ಚುನಾವಣಾ ಆಯೋಗ, “ನವೀಕರಿಸಿದ ಮತದಾನದ ಪ್ರಮಾಣವನ್ನು ಮೇ 24ರೊಳಗೆ ಲಿಂಗವಾರು ವರ್ಗೀಕರಣದೊಂಧಿಗೆ ಪ್ರಕಟಿಸುವುದಾಗಿ” ಹೇಳಿಕೊಂಡಿದೆ. ಈ ಹಿಂದೆ, ನಾಲ್ಕನೇ ಹಂತದ ಮತದಾನವಾದಾಗ, ಮಾಹಿತಿ ನೀಡಲು 11 ದಿನಗಳನ್ನು ತೆಗೆದುಕೊಂಡಿದ್ದು ಆಯೋಗ ಇದೀಗ ನಾಲ್ಕು ದಿನಗಳ ನಂತರ ಮಾಹಿತಿ ನೀಡುವುದಾಗಿ ಹೇಳುತ್ತಿದೆ.
ಅಂದಾಜಿತ ಅಂಕಿಅಂಶಗಳ ಪ್ರಕಾರ, ಮೇ 20ರ ಸಂಜೆ 7.45 ಗಂಟೆಯ ವೇಳೆಗೆ ಎಲ್ಲ 49 ಕ್ಷೇತ್ರಗಳಲ್ಲಿ ಒಟ್ಟು 57.47% ಮತದಾನವಾಗಿದೆ ಎಂದು ಅಂದಾಜಿಸಲಾಗಿತ್ತು.

ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು74.65%ರಷ್ಟು ಮತದಾನವಾಗಿದೆ. 1970ರ ದಶಕದಿಂದಲೂ ಈ ರಾಜ್ಯವು ಭಾರತದ ಇತರ ಭಾಗಗಳಿಗಿಂತ ಹೆಚ್ಚಿನ ಶೇಕಡಾವಾರು ಮತದಾನವನ್ನು ದಾಖಲಿಸುತ್ತಿದೆ. ಮಹಾರಾಷ್ಟ್ರದಲ್ಲಿ 54.29% ಮತದಾನವಾಗಿ, 5ನೇ ಹಂತದಲ್ಲಿ ಅತೀ ಕಡಿಮೆ ಮತದಾನವಾದ ರಾಜ್ಯವಾಘಿದೆ. ಅಲ್ಲಿನ 13 ಸ್ಥಾನಗಳಲ್ಲಿ ಮತದಾನ ನಡೆದಿದೆ.
ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಕಳೆದ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು 56.73% ಮತದಾನವಾಗಿದೆ. ಆರ್ಟಿಕಲ್ 370 ರದ್ದತಿಯಿಂದ ಸಿಟ್ಟಾಗಿರುವ ಜನರು ಕೇಂದ್ರದ ವಿರುದ್ಧ ಮತ ಚಲಾಯಿಸಲು ಮತಗಟ್ಟೆ ಎಡೆಗೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ.
5ನೇ ಹಂತದಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಒಟ್ಟು 695 ಅಭ್ಯರ್ಥಿಗಳು ಚುನಾವಣೆ ಎದುರಿದ್ದಾರೆ.
ಒಟ್ಟಾರೆಯಾಗಿ ಕಳೆದ 5 ಹಂತಗಳಲ್ಲಿ 25 ರಾಜ್ಯಗಳ 428 ಸ್ಥಾನಗಳಿಗೆ ಮತದಾನ ಮುಗಿದಿದೆ. ಇನ್ನು, 115 ಸ್ಥಾನಗಳಿಗೆ ಮತದಾನ ಬಾಕಿ ಇದೆ.