ರಾಜ್ಯದ ಎಲ್ಲ ಶಾಲೆಗಳ 5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ತೇರ್ಗಡೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ ಆದೇಶ ಹೊರಡಿಸಿದ್ದು, “ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ನಡೆದಿರುವ ಪರೀಕ್ಷೆಗಳ ಮೌಲ್ಯಾಂಕನ ಆಧರಿಸಿ ಮುಂದಿನ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವಂತೆ” ಸೂಚಿಸಿದ್ದಾರೆ.
2023–24ನೇ ಸಾಲಿನ ಫಲಿತಾಂಶವನ್ನು ರಾಜ್ಯದ ಎಲ್ಲ ಶಾಲೆಗಳಲ್ಲಿ ಏಪ್ರಿಲ್ 8ರಂದು ಪ್ರಕಟಿಸುವಂತೆ ಈ ಹಿಂದೆ ಸೂಚಿಸಲಾಗಿತ್ತು. ಆದರೆ, ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಫಲಿತಾಂಶವನ್ನು ಪ್ರಕಟಿಸಲು ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದು, ಅಂತಿಮ ತೀರ್ಪು ಬಾಕಿ ಇದೆ.
ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ಮೇ 29 ರಿಂದ 2024- 25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದೇ ಇರುವುದರಿಂದ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ತರಗತಿಗೆ ಪ್ರವೇಶ, ದಾಖಲಾತಿ, ಪ್ರವೇಶ ಶುಲ್ಕ ಪಾವತಿ ಹಾಗೂ ಬೇರೆ ಸ್ಥಳಗಳಿಗೆ ವರ್ಗಾವಣೆಗೆ ಪ್ರಮಾಣ ಪತ್ರ, ಪ್ರಗತಿ ಪತ್ರ, ವ್ಯಾಸಂಗ ಪ್ರಮಾಣ ಪತ್ರ ವಿತರಿಸಲು ಶಾಲೆಗಳಿಗೆ ಸಾಧ್ಯವಾಗಿರಲಿಲ್ಲ.
ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ನಡೆದಿರುವ ಪರೀಕ್ಷೆಗಳ ಮೌಲ್ಯಾಂಕನ ಆಧರಿಸಿ ಮುಂದಿನ ತರಗತಿಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಸೂಚಿಸಿದ್ದಾರೆ.
ನ್ಯಾಯಾಲಯದ ಮಧ್ಯಂತರ ತೀರ್ಪಿನಂತೆ, 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ SA-2 ಮೌಲ್ಯಾಂಕನವನ್ನು ತಡೆಹಿಡಿದಿರುವ ಹಿನ್ನೆಲೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ FA- 1, FA-2, FA-3, FA-4 2 SA-1 ಮೌಲ್ಯಾಂಕನ ಆಧಾರದ ಮೇಲೆ ತರಗತಿಗೆ ಮುಂದುವರೆಸಲು ಅವಕಾಶ ಕಲ್ಪಿಸುವುಂತೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೇ 21 ರಂದು ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ
2023-24ನೇ ಸಾಲಿನಲ್ಲಿ ರಾಜ್ಯ ಪಠ್ಯ ಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2023-24ನೇ ಸಾಲಿಗೆ ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಏ.11 ರಿಂದ ಮೇ 28ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಆದರೆ, ರಾಜ್ಯದಲ್ಲಿನ ಕೆಲವು ಖಾಸಗಿ ಶಾಲೆಗಳು ಬೇಸಿಗೆ ರಜೆಯನ್ನು ಕಡಿತಗೊಳಿಸಿ ತರಗತಿಗಳನ್ನು ಪ್ರಾರಂಭಿಸಿವೆ. ಈ ಕುರಿತಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈಗಾಗಲೇ ನಿಗದಿಯಾದಂತೆ ಶೈಕ್ಷಣಿಕ ರಜೆಯನ್ನು ಮುಂದುವರಿಸುವಂತೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಕೆಲವು ಖಾಸಗಿ ಶಾಲೆಗಳು ಬೇಸಿಗೆ ರಜೆ ಅವಧಿಯನ್ನು ಕಡಿತಗೊಳಿಸಿ ಶಾಲೆ ಆರಂಭಿಸಿರುವ ಕ್ರಮ ಸರಿಯಾಗಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಹೇಳಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆಗಳನ್ನು ನಿಗದಿಯಂತೆಯೇ ಮೇ 29ರಿಂದಲೇ ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮಕ್ಕಳಿಗೆ ಶೈಕ್ಷಣಿಕ ವರ್ಷದಲ್ಲಿ ಶಾಲಾ ಚಟುವಟಿಕೆಗಳನ್ನು ಸೇರಿದಂತೆ ಶೈಕ್ಷಣಿಕ ಮಾರ್ಗಸೂಚಿ ಮತ್ತು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅದರಂತೆ ಶಾಲೆಗಳನ್ನು ಪ್ರಾರಂಭಿಸಿ ಮುಂದುವರೆಸಲು ಕ್ರಮವಹಿಸುವಂತೆ ರಾಜ್ಯದ ಎಲ್ಲ ಉಪನಿರ್ದೇಶಕರುಗಳಿಗೆ ಸೂಚನೆ ನೀಡಿದ್ದಾರೆ.