ಕಲುಷಿತ ನೀರಿನಲ್ಲಿ ಕಂಡು ಬರುವ ಅಪರೂಪವಾಗಿ ಮನುಷ್ಯರ ಮೆದುಳಿಗೆ ಹಾನಿಗೊಳಿಸುವ ಅಮೀಬಾ ದಿಂದ 5 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಂದು ನಡೆದಿದೆ.
ಮಲಪ್ಪುರಂ ಜಿಲ್ಲೆಯ ಮುನ್ನಿಯೂರ್ ಪಂಚಾಯತ್ ವ್ಯಾಪ್ತಿಯ ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಆರೋಗ್ಯ ಕೇಂದ್ರದಲ್ಲಿ ವಾರದ ಹಿಂದೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 5 ವರ್ಷದ ಬಾಲಕಿ ಸೋಮವಾರ(ಮೇ.20) ಮೃತಪಟ್ಟಿದ್ದಳು.
ವೈದ್ಯಕೀಯ ಪರಿಣಿತರ ಪ್ರಕಾರ ಈ ಬಾಲಕಿ ಮೆದುಳಿಗೆ ಹಾನಿಗೊಳಿಸುವ ಪರಾವಲಂಬಿಯಲ್ಲದ ಜೀವಂತ ಅಮೀಬಾ ಬ್ಯಾಕ್ಟೀರಿಯಾ ಕಲುಷಿತ ನೀರಿನಿಂದ ಮೂಗಿನೊಳಗೆ ಪ್ರವೇಶಿಸಿ ಬಾಲಕಿಯ ಮೆದುಳನ್ನು ಹಾನಿಗೊಳಿಸಿದೆ.
ಮೃತ ಬಾಲಕಿ ಮೇ. 1 ಹಾಗೂ ಮೇ 10 ರಂದು ತನ್ನ ಮನೆಯ ಹತ್ತಿರದ ಕೊಳದಲ್ಲಿ ಆಟವಾಡಿದ್ದಾಳೆ. ನಂತರದಲ್ಲಿ ಜ್ವರ, ತಲೆನೋವು, ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಕೋವ್ಯಾಕ್ಸಿನ್ ಲಸಿಕೆ ಪಡೆದ ವರ್ಷದ ನಂತರ ಶೇ.30 ಮಂದಿಗೆ ಆರೋಗ್ಯ ಸಮಸ್ಯೆಗಳು
ಆಸ್ಪತ್ರೆಗೆ ದಾಖಲಿಸಿದ ನಂತರ ಬಾಲಕಿಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಬಾಲಕಿ ಆಟವಾಡಿದ ಕೊಳದಲ್ಲಿಯೇ ಇತರ ಕೆಲವು ಮಕ್ಕಳು ಆಟವಾಡಿದ್ದಾರೆ, ಇವರನ್ನು ಕೂಡ ಆರೋಗ್ಯ ತಪಾಸಣೆಯಲ್ಲಿ ಇಡಲಾಗಿತ್ತು. ತದ ನಂತರ ಮೆದುಳಿಗೆ ಹಾನಿಗೊಳಿಸುವ ಯಾವುದೇ ರೋಗಗಳು ಕಂಡುಬರದ ಕಾರಣ ಆಸ್ಪತ್ರೆಯಿಂದ ಈ ಮಕ್ಕಳನ್ನು ಬಿಡುಗಡೆಗೊಳಿಸಲಾಗಿದೆ.
ಮೆದುಳಿಗೆ ಹಾನಿಗೊಳಿಸುವ ಜೀವಂತ ಅಮೀಬಾ ರೋಗವು ಅಲಪ್ಪುಳ ಜಿಲ್ಲೆಯಲ್ಲಿ 2017 ಹಾಗೂ 2023 ರಲ್ಲಿ ವರದಿಯಾಗಿದ್ದವು.
ಜ್ವರ, ತಲೆನೋವು, ವಾಂತಿ ಹಾಗೂ ಸೀನುವಿಕೆ ಈ ರೋಗದ ಪ್ರಮುಖ ಲಕ್ಷಣವಾಗಿದೆ. ಜೀವಂತವಿರುವ ಅಮೀಬಾ ಬ್ಯಾಕ್ಟೀರಿಯಾ ಮೂಗಿನ ಮೂಲದ ದೇಹವನ್ನು ಪ್ರವೇಶಿಸಿ ಮೆದುಳನ್ನು ತಿನ್ನುತ್ತವೆ. ತುರ್ತು ವೈದ್ಯಕೀಯ ಚಿಕಿತ್ಸೆ ಹೊರತುಪಡಿಸಿ ಬಹುತೇಕ ಸಂದರ್ಭಗಳಲ್ಲಿ ಅಮೀಬಾ ಮೆದುಳು ಪ್ರವೇಶಿಸಿದ ನಂತರ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ.
