ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದರು ಎಂಬ ಕಾರಣಕ್ಕೆ ಕಾನ್‌ಸ್ಟೆಬಲ್ ಒಬ್ಬರು ಇನ್‌ಸ್ಪೆಕ್ಟರ್ ಹಾಗೂ ಎಸಿಪಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸರು ಆಯುಕ್ತ ಬಿ.ದಯಾನಂದ ಅವರು ಆದೇಶಿಸಿದ್ದಾರೆ.
ಕರ್ತವ್ಯಲೋಪ ಎಸಗಿದ್ದ ಆರೋಪದಲ್ಲಿ ಬಾಣಸವಾಡಿ ಠಾಣೆಯ ಇನ್ಸ್ಪೆಕ್ಟರ್ ಮತ್ತು ಎಸಿಪಿ ಅವರು ಪೊಲೀಸ್ ಪೇದೆಯ ಅಮಾನತಿಗೆ ಶಿಫಾರಸು ಮಾಡಿದ್ದರು. ಇದಕ್ಕೆ ಕೋಪಗೊಂಡ ಪೇದೆ ಚಾಕುವಿನಿಂದ ಇರಿದು ಕೊಲೆ ಮಾಡೋದಾಗಿ ಇನ್ಸ್‌ಪೆಕ್ಟರ್ ಮತ್ತು ಎಸಿಪಿಗೆ ಜೀವ ಬೆದರಿಕೆ ಹಾಕಿದ್ದಾರೆ. ರೇಣುಕಾ ನಾಯಕ್ ಜೀವ ಬೆದರಿಕೆ ಹಾಕಿದ ಪೊಲೀಸ್ ಪೇದೆ.
ಮೇ 7ರಂದು ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಾರ್ತಿಕೇಯನ್ ಎಂಬಾತನ ಹತ್ಯೆಯಾಗಿತ್ತು. ಆರೋಪಿ ಮಂಜು ಹಾಗೂ ಆತನ ಸಹಚರರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಹಳೇ ದ್ವೇಷವೇ ಕಾರಣ ಎಂಬುದು ಗೊತ್ತಾಗಿತ್ತು.
ಹತ್ಯೆಯಾದ ವ್ಯಕ್ತಿಗೂ, ಆರೋಪಿಗಳಿಗೂ ಹಳೇ ದ್ವೇಷವಿದೆ ಎಂಬ ಮಾಹಿತಿ ಠಾಣೆಯ ಕ್ರೈಂ ಸಿಬ್ಬಂದಿ ಮೊದಲೇ ಗೊತ್ತಿದ್ದರೂ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಈ ಹಿನ್ನೆಲೆ, ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಶಿಫಾರಸಿನ ಮೇರೆಗೆ ಠಾಣೆಯ ಕಾನ್ಸ್ಟೇಬಲ್ಗಳಾದ ಸಂತೋಷ್, ಪುಟ್ಟಸ್ವಾಮಿ ಮತ್ತು ವಿನೋದ್ ಎಂಬವರನ್ನು ಅಮಾನತುಗೊಳಿಸಿ ಪೂರ್ವವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ಆದೇಶಿಸಿದ್ದರು.
ಪೊಲೀಸ್ ಪೇದೆ ರೇಣುಕಾ ನಾಯಕ್ ಅವರನ್ನೂ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ತನ್ನ ಹೆಸರನ್ನು ಅಮಾನತು ಶಿಕ್ಷೆಗೆ ಶಿಫಾರಸು ಮಾಡಿದ ವಿಚಾರ ತಿಳಿದ ಕಾನ್‌ಸ್ಟೆಬಲ್, ಪಿಐ ಮತ್ತು ಎಸಿಪಿಗೆ ಕರೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಹುಬ್ಬಳ್ಳಿಯ ಸಹೋದರರು ಸೇರಿ 11 ಮಂದಿ ಎನ್‌ಐಎ ವಶಕ್ಕೆ!
ಅದರಿಂದ ವಿಚಲಿತಗೊಂಡ ಪಿಐ ಮತ್ತು ಎಸಿಪಿ ಶಿಫಾರಸು ಪತ್ರ ವಾಪಸ್ ಪಡೆದುಕೊಂಡಿದ್ದರು. ಅಲ್ಲದೇ, ಕಾನ್‌ಸ್ಟೆಬಲ್‌ನನ್ನು 1 ತಿಂಗಳ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಇದೇ ಪ್ರಕರಣದ ತನಿಖೆಯನ್ನು ಸಿಸಿಬಿ ವರ್ಗಾವಣೆ ಮಾಡಲಾಗಿದೆ.
ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.