ಬಿಬಿಸಿ ಸಾಕ್ಷ್ಯಚಿತ್ರ: ಅವರ ಪರ ಸಾಕ್ಷಿಯಲ್ಲವೇ?

Date:

Advertisements
ನನ್ನನ್ನು ಕೇಳಿದರೆ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಈ ಸಾಕ್ಷ್ಯಚಿತ್ರವನ್ನೇ ವ್ಯಾಪಕವಾಗಿ ಪ್ರದರ್ಶನ ಮಾಡಿದರೆ ಸಾಕು; ಅವರ ಅಭಿವೃದ್ಧಿಪರ, ಭ್ರಷ್ಟಾಚಾರ ವಿರೋಧಿ ಮಾತುಗಳ ಗಿಲೀಟಿನ ಅಗತ್ಯವೇ ಇಲ್ಲ! ಅಷ್ಟಾಗಿಯೂ ಆಡಳಿತಾರೂಢ ಪಕ್ಷ, ಚಿತ್ರದ ವಿರುದ್ಧ ಹರಿಹಾಯ್ದಿದ್ದಕ್ಕೆ ಒಂದೇ ಕಾರಣವಿರಲು ಸಾಧ್ಯ- ಬಿಬಿಸಿ ಎಂಬ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಇದರ ನಿರ್ಮಾಪಕರಾಗಿರುವುದು, ಆ ಕಾರಣಕ್ಕೇ ವಿಶ್ವ ವೇದಿಕೆಗಳಲ್ಲಿ ಭಾರತದ ವರ್ಚಸ್ಸು ಮಂಕಾಗಬಹುದೆಂಬ ಆತಂಕ…..

ಆಯ್ತಪ್ಪ, ತಡವಾಗಿಯಾದರೂ ಸರಿ, ಎರಡು ಕಂತುಗಳ ಆ ಬಿಬಿಸಿ ಸಾಕ್ಷ್ಯಚಿತ್ರ- The Modi question- ನೋಡಿದ್ದಾಯಿತು. ನೋಡಿದ ಮೇಲೆ ಉಳಿದ ಪ್ರಶ್ನೆ- ಇದರಲ್ಲಿ ಹೊಸದೇನಿದೆ? ಎಲ್ಲ ವಿಷಯಗಳೂ ಎಲ್ಲರಿಗೂ ಗೊತ್ತಿರುವಂಥವೇ, ಉದ್ದಕ್ಕೂ ಮಾಧ್ಯಮಗಳಲ್ಲಿ ನೂರು ಬಾರಿ ಬಂದಂಥವೇ. 2002ರ ಗೋಧ್ರಾ ಹತ್ಯಾಕಾಂಡ ಮತ್ತು ನಂತರದ ಗುಜರಾತ್ ನರಮೇಧ, CAA-NRC ಪ್ರತಿಭಟನೆಗಳು, ಇತ್ಯಾದಿ ಇತ್ಯಾದಿ… ಇದರಲ್ಲಿ ಯಾವುದು ಹೊಸದು?

ಸಾಧನಾ ಸುಬ್ರಹ್ಮಣ್ಯಂ ಎಂಬ- (ಬಹುಶಃ ಬೆಂಗಳೂರಿನಲ್ಲಿ ನೆಲೆಸಿರುವ) ತಮಿಳು ಹೆಣ್ಣುಮಗಳು ನಿರ್ದೇಶಿಸಿರುವ ಈ ಚಿತ್ರಕ್ಕೆ ದೇಶಾದ್ಯಂತ ಬಿಜೆಪಿಗರು ಎಬ್ಬಿಸಿದ ಹುಯಿಲು ಮಾತ್ರ ಆಶ್ಚರ್ಯಕರವಾಗಿದೆ. ಎಷ್ಟರ ಮಟ್ಟಿಗೆಂದರೆ ಕಡೆಗೆ ಆ ಚಿತ್ರಕ್ಕೆ ನಮ್ಮ ದೇಶದಲ್ಲಿ ನಿಷೇಧವನ್ನೇ ಹೇರಿಬಿಟ್ಟರು. (ಆದರೆ ಈಗಲೂ ಆ ಸಾಕ್ಷ್ಯಚಿತ್ರ ಬಯಸಿದವರ ಕೈಗೆಟಕುವಂತೆಯೇ ಇದೆ!) ಯಾಕೆ? ಅರ್ಥವೇ ಆಗುವುದಿಲ್ಲ!

ಬಿಜೆಪಿ ಸರ್ಕಾರದ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಏಕನಿಷ್ಠೆಯಿಂದ ಅನುಸರಿಸುತ್ತ ಬಂದ ಮುಸ್ಲಿಂ ವಿರೋಧಿ ತಾತ್ವಿಕತೆಯನ್ನು ಒಂದು ಸುಸಂಬದ್ಧ ಚೌಕಟ್ಟಿನಲ್ಲಿ ಕೂರಿಸಿ ಜನರ ಮುಂದಿಟ್ಟಿದ್ದು ಈ ಚಿತ್ರದ ವೈಶಿಷ್ಟ್ಯ ಸರಿ, ಆದರೆ ಬಿಜೆಪಿ ಮತ್ತು ಸಂಘ ಪರಿವಾರ ತನ್ನ ಆ ನಿಲುವನ್ನು ಯಾವಾಗ ಮುಚ್ಚಿಟ್ಟಿದೆ? ಆ ಪಕ್ಷದಲ್ಲಿ ನಮಗೆ ಮುಸ್ಲಿಂ ಮತಗಳೇ ಬೇಡ ಎಂದು ಬಹಿರಂಗವಾಗಿ ಘೋಷಿಸುವ ಎಷ್ಟು ಮಂದಿ ಜನಪ್ರತಿನಿಧಿಗಳಿಲ್ಲ? ಗುಜರಾತ್ ಗಲಭೆಗಳಲ್ಲಿ (ಬಿಲ್ಕಿಸ್ ಬಾನೊ ಪ್ರಕರಣದಲ್ಲಿ) ಗರ್ಭಿಣಿ ಹೆಂಗಸಿನ ಮೇಲೆ ಅತ್ಯಾಚಾರ ಮಾಡಿ ಮೂರು ವರ್ಷದ ಹಸುಳೆಯನ್ನೂ ಕೊಂದು ಬಿಸಾಡಿದವರನ್ನು ಸನ್ನಡತೆ ಆಧಾರದ ಮೇಲೆ ಕೋರ್ಟು ಬಿಡುಗಡೆ ಮಾಡಿದಾಗ ಆ ಸಂಸ್ಕಾರವಂತರಿಗೆ ಸದ್ಗೃಹಿಣಿಯರು ಹಾರ ಹಾಕಿ ಕುಂಕುಮವಿಟ್ಟು ಸ್ವಾಗತಿಸಿದ ಪರಂಪರೆಯೇ ಕಣ್ಣ ಮುಂದಿಲ್ಲವೇ? ಮತ್ತೆ ಬಿಜೆಪಿಗೆ ಈ ಚಿತ್ರದ ಬಗ್ಗೆ ನಾಚಿಕೆಯೇಕೆ?

Advertisements

ಹಾಗೆ ನೋಡಿದರೆ ಈ ಚಿತ್ರ- ಬಿಜೆಪಿಯ ರಾಜಕೀಯ ಅಜೆಂಡಾವನ್ನು ಆ ಪಕ್ಷದ ಹುರಿಯಾಳುಗಳಿಗಿಂತ ಪರಿಣಾಮಕಾರಿಯಾಗಿ, ಮನ ಮುಟ್ಟುವಂತೆ, ಬಿಂಬಿಸುತ್ತದೆ. ಆ ಪಕ್ಷದ ಮತದಾರ ಅನುಯಾಯಿಗಳಲ್ಲಿ ಅಕಸ್ಮಾತ್ ಯಾವುದಾದರೂ ಬಗೆಯ ಶಂಕೆ ಆತಂಕಗಳಿದ್ದರೆ, ಈ ಚಿತ್ರ ಇಲ್ಲ, ಹೆದರಬೇಡಿ, ಬಿಜೆಪಿ ತನ್ನ ನಿಲುವಿನಿಂದ ಅತ್ತಿತ್ತ ಅಲ್ಲಾಡುವುದಿಲ್ಲ ಎಂಬ ಅಭಯ ನೀಡುವಷ್ಟು ಸಮರ್ಥವಾಗಿದೆ!

ಇದನ್ನು ಓದಿದ್ದೀರಾ?: ನಿರ್ಲಕ್ಷ್ಯವೇ ಅಥವಾ ಪಿತೂರಿಯೇ? ಪುಲ್ವಾಮಾದ ಸಂಪೂರ್ಣ ಸತ್ಯ ದೇಶ ಕೇಳುತ್ತಿದೆ…

ನನ್ನನ್ನು ಕೇಳಿದರೆ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಈ ಸಾಕ್ಷ್ಯಚಿತ್ರವನ್ನೇ ವ್ಯಾಪಕವಾಗಿ ಪ್ರದರ್ಶನ ಮಾಡಿದರೆ ಸಾಕು; ಅವರ ಅಭಿವೃದ್ಧಿಪರ, ಭ್ರಷ್ಟಾಚಾರ ವಿರೋಧಿ ಮಾತುಗಳ ಗಿಲೀಟಿನ ಅಗತ್ಯವೇ ಇಲ್ಲ!

ಅಷ್ಟಾಗಿಯೂ ಆಡಳಿತಾರೂಢ ಪಕ್ಷ, ಚಿತ್ರದ ವಿರುದ್ಧ ಹರಿಹಾಯ್ದಿದ್ದಕ್ಕೆ ಒಂದೇ ಕಾರಣವಿರಲು ಸಾಧ್ಯ- ಬಿಬಿಸಿ ಎಂಬ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಇದರ ನಿರ್ಮಾಪಕರಾಗಿರುವುದು, ಮತ್ತು ಆ ಕಾರಣಕ್ಕೇ ವಿಶ್ವ ವೇದಿಕೆಗಳಲ್ಲಿ ಭಾರತದ ವರ್ಚಸ್ಸು ಮಂಕಾಗಬಹುದು ಎಂಬ ಆತಂಕ…..

ನನ್ನ ಆತ್ಮೀಯರಾದ ಬಿಜೆಪಿ ಭಕ್ತರೊಬ್ಬರು ಈ ಸಾಕ್ಷ್ಯಚಿತ್ರದ ಬಗ್ಗೆ ಇದು ಒನ್‌ಸೈಡೆಡ್, ಗೋಧ್ರಾದ ರೈಲಿನಲ್ಲಿ ಬೆಂಕಿಗೆ ಆಹುತಿಯಾದವರ ಕಥನವೇ ಇಲ್ಲಿಲ್ಲ ಎಂಬ ಆಕ್ಷೇಪವೆತ್ತಿದರು. ಮೇಲ್ನೋಟಕ್ಕೆ ಅತ್ಯಂತ ಸಾಚಾ ಆಕ್ಷೇಪಣೆಯಿದು. ನಿಜ, ಗೋಧ್ರಾ ಘಟನೆಯೂ ದಾರುಣವಾದ ದುರಂತವೇ. ವ್ಯತ್ಯಾಸವೆಂದರೆ ಗೋಧ್ರೋತ್ತರ ಮಾರಣಹೋಮ- ಸರ್ಕಾರಿ ಪ್ರಾಯೋಜಿತ ನರಮೇಧ. ಈಗ ಜೈಲಿನಲ್ಲಿರುವ ಐಪಿಎಸ್ ಅಧಿಕಾರಿ ಸಂಜೀವ ಭಟ್ ಆರೋಪಿಸಿದ ಹಾಗೆ ಸ್ವತಃ ಮುಖ್ಯಮಂತ್ರಿ ನರೇಂದ್ರ ಮೋದಿ ಮೂರು ದಿನ ಹಿಂದೂಗಳಿಗೆ ತಮ್ಮ ಆಕ್ರೋಶ ಮುಕ್ತವಾಗಿ ಹೊರಹಾಕಲು ಅವಕಾಶ ನೀಡಿ ಎಂದು ಆದೇಶಿಸಿದ್ದು ನಿಜವೋ ಸುಳ್ಳೋ ಗೊತ್ತಿಲ್ಲ; ಆದರೆ ಗುಜರಾತಿನ ಆ ಕರಾಳ ದಿನಗಳ ಇತಿಹಾಸವನ್ನು ನೋಡಿದರೆ, ಸಂಜೀವ ಭಟ್ ಮಾತುಗಳನ್ನು ಅನುಮಾನಿಸಲು ಆಸ್ಪದವೇ ಉಳಿಯುವುದಿಲ್ಲ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕಾದ ಸರ್ಕಾರವೇ ಸ್ವತಃ ಕತ್ತಿ ಹಿರಿದು ಒಂದು ಸಮುದಾಯದ ವಿರುದ್ಧ ನಿಲ್ಲುವುದು- ವಾಜಪೇಯಿಯವರ ಮಾತಿನಂತೆ- ರಾಜಧರ್ಮವಲ್ಲ. ಆದರೆ ಆ ಅಕ್ಷಮ್ಯ ಉಲ್ಲಂಘನೆಯೇ ಒಬ್ಬ ವ್ಯಕ್ತಿಗೆ ಅನತಿ ಕಾಲದಲ್ಲೇ ಪ್ರಧಾನಿ ಪಟ್ಟ ತಂದು ಕೊಟ್ಟಿತೆಂದರೆ ಅದಕ್ಕೆ ಹೊಣೆಗಾರರು ಅವರಲ್ಲ, ನಾವು- ಪ್ರಜೆಗಳು.

ಈ ಸಾಕ್ಷ್ಯಚಿತ್ರದಲ್ಲಿ, ಸಿಎಎ- ಎನ್‌ಆರ್‌ಸಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಗಳ ಒಂದು ಭಾಗ ಕಂಡು ಮನಸ್ಸು ಮೂಕವಾಗುತ್ತದೆ.

ಮೊದಲು ಗಲಭೆ ಸಮಯದಲ್ಲಿ ಶಹರಕ್ಕೆ ಹೋದ ತನ್ನ ತಾಯಿಯನ್ನು ಹುಡುಕಿಕೊಂಡು ಮಹಮದ್ ವಾಸಿಂ ಎಂಬ ತರುಣ ಹೋಗುತ್ತಾನೆ, ಪೊಲೀಸರ ಕೈಗೆ ಸಿಕ್ಕಿಕೊಳ್ಳುತ್ತಾನೆ. ಆತನನ್ನು ಇತರೆ ನಾಲ್ವರು ಮುಸ್ಲಿಂ ಯುವಕರ ಜೊತೆ ಸೇರಿಸಿ ಬೀದಿಯಲ್ಲೇ ಕೆಡವಿ ಪೊಲೀಸರು ಒಂದೇ ಸಮ ಲಾಠಿಗಳಿಂದ, ಬಂದೂಕಿನಿಂದ ಥಳಿಸುತ್ತಾರೆ. ರಸ್ತೆ ಮೇಲೆ ಏಟು ತಿನ್ನುತ್ತಾ ಮಲಗಿದ ಭಂಗಿಯಲ್ಲೇ ಬಲವಂತವಾಗಿ ರಾಷ್ಟ್ರಗೀತೆ ಹಾಡಲು ಹೇಳುತ್ತಾರೆ. (ಇದೆಲ್ಲವನ್ನೂ ಪೊಲೀಸರೇ ತಮ್ಮ ಮೊಬೈಲುಗಳಲ್ಲಿ ಚಿತ್ರೀಕರಿಸುತ್ತಾರೆ!) ಮತ್ತೆ ವಾಸಿಂನನ್ನು ಅವನ ಗೆಳೆಯ ಫೈಝನ್ ಜೊತೆ ಜ್ಯೋತಿನಗರ ಠಾಣೆಗೆ ಕರೆದೊಯ್ಯುತ್ತಾರೆ.

ಠಾಣೆಯಿಂದ ಹೊರಬಂದ ಫೈಝನ್ ನಡೆಯುವ ಸ್ಥಿತಿಯಲ್ಲೂ ಇರುವುದಿಲ್ಲ. ಡಾಕ್ಟರನ್ನು ಕರೆಸಿದಾಗ ಅವರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಹೇಳುತ್ತಾರೆ. ಆದರೆ ಸ್ವಲ್ಪ ಹೊತ್ತಿಗೆ ಆ ತರುಣ ಪ್ರಾಣ ಬಿಡುತ್ತಾನೆ. 23ರ ಪ್ರಾಯದ ಯುವಕ.
ಅವನಿಗಿನ್ನೂ ನ್ಯಾಯ ಸಿಕ್ಕಿಲ್ಲ…..

ಹೌದು, ಬಿಜೆಪಿ ಈ ಚಿತ್ರವನ್ನು ಚುನಾವಣಾ ಪ್ರಚಾರಕ್ಕೇಕೆ ಬಳಸುತ್ತಿಲ್ಲ?!!!

file74tcvr506zr11ksc9kci 1578578266
ಎನ್‌ ಎಸ್‌ ಶಂಕರ್‌
+ posts

ಲೇಖಕರು, ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎನ್‌ ಎಸ್‌ ಶಂಕರ್‌
ಎನ್‌ ಎಸ್‌ ಶಂಕರ್‌
ಲೇಖಕರು, ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X