ಹೆಚ್ಚು ವಯಸ್ಸಾಗಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಿವೃತ್ತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ, 77 ವರ್ಷ ವಯಸ್ಸಾಗಿರುವ ನವೀನ್ ಪಟ್ನಾಯಕ್ ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು ಎಂದು ಮಾತನಾಡಿದ್ದಾರೆ. ಈ ರೀತಿ ಮಾತನಾಡಿ 73 ವರ್ಷ 7 ತಿಂಗಳಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷವಾಗಿ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಸೂಚನೆ ನೀಡಿದ್ದಾರೆ ಎಂದಿದ್ದಾರೆ.
ಒಂದು ವೇಳೆ ಕೆಂದ್ರದಲ್ಲಿ ಬಿಜೆಪಿ ಅಧಿಕಾರ ರಚಿಸಿದರೆ ಅಮಿತ್ ಶಾ ಅವರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಸರ್ಕಾರ ರಚಿಸದಿದ್ದರೆ ಮೋದಿಗಿಂತ ಅಮಿತ್ ಶಾ ಹೆಚ್ಚು ಸಂತೋಷ ಪಡುತ್ತಾರೆ. ಹಾಗೆಯೇ ವಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಪಿ ಚಿದಂಬರಂ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ
ಇತ್ತೀಚಿಗೆ ಒಡಿಶಾದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಅಮಿತ್ ಶಾ, ಹೆಚ್ಚು ವಯಸ್ಸಾಗಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ನವೀನ್ ಪಟ್ನಾಯಕ್ ನಿವೃತ್ತಿ ಪಡೆಯಬೇಕು. ಸ್ಥಳೀಯ ಬಿಜೆಪಿಯ ನಾಯಕರೊಬ್ಬರು ಅಧಿಕಾರ ರಚಿಸಲಿದ್ದಾರೆ ಎಂದು ಹೇಳಿದ್ದರು.
ಬಿಜೆಪಿ ನೀತಿಯಂತೆ 75 ವರ್ಷ ಮೇಲ್ಪಟ್ಟವರು ರಾಜಕೀಯ ನಿವೃತ್ತಿ ಪಡೆಯಬೇಕು. ಆದರೆ ಇತ್ತೀಚಿಗೆ ಮಾತನಾಡಿದ್ದ ಅಮಿತ್ ಶಾ 75 ವರ್ಷದ ನಂತರವೂ ಮೋದಿ ಪ್ರಧಾನಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದ್ದರು.
ಅಮಿತ್ ಶಾ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಒಳಗೊಂಡ ವಿಪಕ್ಷ ನಾಯಕರು ಬಿಜೆಪಿಯ ನಿವೃತ್ತಿಯ ನೀತಿ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಯಶವಂತ್ ಸಿನ್ಹಾ ಸೇರಿದಂತೆ ಕೆಲವರಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದ್ದರು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಳಗೊಂಡು ಹಲವು ನಾಯಕರನ್ನು 75 ವರ್ಷ ದಾಟಿದ ಕಾರಣದಿಂದ ಅಧಿಕಾರದಿಂದ ಕೆಳಗಿಳಿಸಲಾಗಿತ್ತು.
