ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ, ಕರ್ತವ್ಯನಿರತ ಪೊಲೀಸರಿಗೆ ಧಮ್ಕಿ ಹಾಕಿ, ಗೂಂಡಾ ವರ್ತನೆ ತೋರಿದ್ದ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲೂ ಬಂಧನ ನಡೆಸುವ ಸಾಧ್ಯತೆ ಇದೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, “ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದೆ ಆಗುವಂತಹ ಅನಾಹುತಕ್ಕೆ ಸರ್ಕಾರ ಹಾಗೂ ಇಲಾಖೆ ಹೊಣೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಪೊಲೀಸರ ವಿರುದ್ಧ ನಡೆಸಿದ್ದ ಪ್ರತಿಭಟನೆಯ ವೇಳೆ ಶಾಸಕ ಪೂಂಜಾ ಭಾಷಣ ನೋಡಿದ್ದೇನೆ. ಅವರ ಜೊತೆ ಚರ್ಚಿಸಿದ್ದೇನೆ. ವಿಷಯ ಮರೆಮಾಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಶಾಸಕರು ಉದ್ವೇಗದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದು ಸರಿಯಲ್ಲ ಎಂದು ಪೂಂಜಾರಿಗೂ ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇ ಪದೇ ಬಿಜೆಪಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಸಹಿಸಲು ಆಗುವುದಿಲ್ಲ. ಶಾಸಕರನ್ನು ಬಂಧಿಸುವ ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ, ಪೊಲೀಸ್ ಇಲಾಖೆ ಹೊಣೆ ಆಗುತ್ತದೆ. ಪೊಲೀಸರಿಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಕಾನೂನು ಸುವ್ಯವಸ್ಥೆ ಹದೆಗೆಡಲು ನೀವೇ ಕುಮ್ಮಕ್ಕು ಕೊಡುತ್ತಿದ್ದೀರಿ” ಎಂದು ಬಿ ವೈ ವಿಜಯೇಂದ್ರ ದೂರಿದ್ದಾರೆ.
“ಅಕ್ರಮ ಕಲ್ಲುಕ್ವಾರಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಬಿಜೆಪಿ ಮುಖಂಡ ಶಶಿರಾಜ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಶಾಸಕರ ಬಂಧನಕ್ಕೆ ಮುಂದಾಗುವುದನ್ನು ಸರ್ಕಾರ ಕೈಬಿಡಬೇಕು. ಗೃಹ ಸಚಿವರು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಜೊತೆ ಮಾತನಾಡಿ, ಇಲಾಖೆಗೆ ಸೂಚನೆ ಕೊಡಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದರು.
ಇದನ್ನು ಓದಿದ್ದೀರಾ? ಪೊಲೀಸರಿಗೆ ಧಮ್ಕಿ ಹಾಕಿ ಗೂಂಡಾ ವರ್ತನೆ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧನ ಸಾಧ್ಯತೆ
“ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ ಮತ್ತು ಕೊಡಗಿನಲ್ಲಿ ತಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ವಿನಾಕಾರಣ ಬಿಜೆಪಿ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದನ್ನೆಲ್ಲ ನಾವು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಗೃಹ ಸಚಿವರು ತಮ್ಮ ಅಧಿಕಾರಿಗಳೊಂದಿಗೆ ಮಾತನಾಡಿ ಇದನ್ನು ನಿಲ್ಲಿಸಬೇಕು” ಎಂದು ಬಿ ವೈ ವಿಜಯೇಂದ್ರ ಹೇಳಿದರು.
