ಒಂದು ಸಿಲಿಂಡರ್ ಅಡುಗೆ ಅನಿಲವನ್ನು ಉಚಿತವಾಗಿ ನೀಡಿ, ತಿಂಗಳಿಗೆ ಐದು ಕೇಜಿ ಉಚಿತ ಪಡಿತರ ನೀಡಿ ಮಹಿಳಾ ‘ಲಾಭಾರ್ಥಿಗಳು’ ತಮ್ಮ ಜೋಳಿಗೆಯಲ್ಲಿದ್ದಾರೆ ಎಂದು ಭಾವಿಸಿದ್ದವರನ್ನು ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳು ಬೆಚ್ಚಿ ಬೀಳಿಸತೊಡಗಿವೆ. ಪ್ರಧಾನಿಯವರು ಕೂಡ ಗಲಿಬಿಲಿಗೊಂಡಿದ್ದಾರೆ.
ದೆಹಲಿ ಗದ್ದುಗೆಯ ಹಾದಿ ಭಾರೀ ಜನಬಾಹುಳ್ಯದ ಸೀಮೆಗಳೆನಿಸಿದ ಉತ್ತರಪ್ರದೇಶ ಮತ್ತು ಬಿಹಾರವನ್ನು ಹಾದು ಹೋಗುತ್ತದೆ. ಈ ರಾಜ್ಯಗಳಲ್ಲಿ ಹೆಚ್ಚು ಸೀಟುಗಳನ್ನು ಗೆದ್ದವರೇ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಾರೆ ಎಂಬ ಮಾತಿದೆ. ಈ ವಿವೇಕ ಸತ್ಯ. ದೂರವೇನೂ ಅಲ್ಲ. ಈ ಎರಡೂ ರಾಜ್ಯಗಳಲ್ಲಿ ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ದೈತ್ಯ ಗೆಲುವು ಸಾಧಿಸಿದೆ. ಈ ಎರಡು ಅಪ್ಪಟ ಹಿಂದಿ ಸೀಮೆಗಳು ಲೋಕಸಭೆಗೆ ಆರಿಸಿ ಕಳಿಸುವ ಸದಸ್ಯರ ಸಂಖ್ಯೆ 120. ಸರ್ಕಾರ ರಚನೆಗೆ ಬೇಕಿರುವ ಸರಳ ಬಹುಮತದ ಸಂಖ್ಯೆ 272.
2019ರಲ್ಲಿ ಬಿಹಾರದ 40 ಸೀಟುಗಳ ಪೈಕಿ 33 ಸೀಟುಗಳು ಬಿಜೆಪಿ ಮತ್ತು ಮಿತ್ರಪಕ್ಷ ಸಂಯುಕ್ತ ಜನತಾದಳದ ಪಾಲಾಗಿದ್ದವು. ಉತ್ತರಪ್ರದೇಶದ 80ರ ಪೈಕಿ 61 ಸೀಟುಗಳನ್ನು ಗೆದ್ದಿತ್ತು ಬಿಜೆಪಿ. 272ರ ಪೈಕಿ 94 ಸೀಟುಗಳು ಉತ್ತರಪ್ರದೇಶ ಬಿಹಾರದಿಂದಲೇ ಬಿಜೆಪಿಯ ಪಾಲಾಗಿದ್ದವು.
ಈ ಎರಡೂ ರಾಜ್ಯಗಳು ದಟ್ಟ ದಾರಿದ್ರ್ಯದಲ್ಲಿ ನರಳುವಂತಹವು. ಬಿಹಾರದಲ್ಲಿನ ಬಡಜನರ ಅಂದಾಜು ಮೂರೂ ಮುಕ್ಕಾಲು ಕೋಟಿ. ಪಾಕಿಸ್ತಾನದಷ್ಟೇ ಜನಸಂಖ್ಯೆ (20 ಕೋಟಿ) ಹೊಂದಿರುವ ಉತ್ತರಪ್ರದೇಶದ ತಲಾದಾಯ ಶೋಚನೀಯ. ಆರ್ಥಿಕ ಸಂಕಟದ ತಿರುಗಣಿಗೆ ಸಿಲುಕಿದ್ದರೂ ಪಾಕಿಸ್ತಾನದ ತಲಾದಾಯ ಯೂಪಿಯ ದುಪ್ಪಟ್ಟು. ಉತ್ತರಪ್ರದೇಶ ಎಂಬುದು ವಿಶ್ವದ ಅತ್ಯಂತ ಬಡಸೀಮೆಗಳಲ್ಲೊಂದು. ಬಲವಾಗಿ ಬೇರು ಬಿಟ್ಟು ಹಬ್ಬಿರುವ ಊಳಿಗಮಾನ್ಯ ವ್ಯವಸ್ಥೆ ಈ ಸೀಮೆಗಳಿಗೆ ಅಂಟಿಕೊಂಡಿರುವ ಬೇನೆ. ಮೂಲಸೌಕರ್ಯಗಳು ಇಡಿಯಾಗಿ ಮುರಿದು ಬಿದ್ದಿವೆ. ಜಮೀನಿನ ಮರುಹಂಚಿಕೆಯೆಂಬುದು ಇಲ್ಲಿ ಬಿಸಿಲುಗುದುರೆ. ಆಗಾಗ ಚೇತರಿಕೆ ಕಂಡರೂ ಸದಾ ಅಧ್ವಾನದಲ್ಲಿ ಮುಳುಗಿರುವ ಕಾನೂನು ಮತ್ತು ಸುವ್ಯವಸ್ಥೆ. ಈ ಕಾರಣಗಳು ಉತ್ತರಪ್ರದೇಶವನ್ನು ಆರ್ಥಿಕ ಬಂಜರುಭೂಮಿಯಾಗಿಸಿಬಿಟ್ಟಿವೆ. ಬಹ್ರೇಚ್, ಬಲರಾಂಪುರ್, ಶ್ರಾವಸ್ತಿ ಜಿಲ್ಲೆಗಳಲ್ಲಿನ ಬಡವರ ಪ್ರಮಾಣ ಶೇ.70 ನೀತಿ ಆಯೋಗದ ಇತ್ತೀಚಿನ ಅಂಕಿ-ಅಂಶಗಳೇ ಈ ಮಾತಿಗೆ ಸಾಕ್ಷಿ. ಸುಮಾರು ಐದು ಕೋಟಿ ಮಂದಿಯದು ದಟ್ಟ ದಾರಿದ್ರ್ಯದ ಬದುಕು.
ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ಮಂಡಿಸಿದ ಜಾತಿ ಜನಗಣತಿಯ ಪ್ರಕಾರ ಬಿಹಾರದ ಪ್ರತಿ ಮೂರನೆಯ ಕುಟುಂಬದ ದೈನಂದಿನ ಆದಾಯ ಕೇವಲ 200 ರುಪಾಯಿ. ಅರ್ಥಾತ್ ಮಾಸಿಕ ವರಮಾನ ಆರು ಸಾವಿರ ರುಪಾಯಿಗಳು ಅಥವಾ ಅದಕ್ಕಿಂತಲೂ ಕಡಿಮೆ. ಪರಿಶಿಷ್ಟ ಜಾತಿಗಳಲ್ಲಿ ಇಂತಹ ಕುಟುಂಬಗಳ ಪ್ರಮಾಣ ಶೇ.43.99. ಈ ಎಲ್ಲ ವ್ಯಾಧಿಗಳ ಜೊತೆಗೆ ಅನಕ್ಷರತೆಯೂ ಸೇರಿಕೊಂಡಿದೆ.
ಇಂತಹ ಈ ರಾಜ್ಯಗಳ ಬಹುಪಾಲು ಜನಕೋಟಿಗೆ ತಮ್ಮ ಮತದ ಮೌಲ್ಯ ತಿಳಿದಿಲ್ಲ. ಜನತಂತ್ರದಲ್ಲಿ ಮತದಾನಕ್ಕಿರುವ ಶಕ್ತಿಯ ಅರಿವಿಲ್ಲ. ಕಪಟ ರಾಜಕಾರಣ ಬಲು ಸಲೀಸಾಗಿ ಇಂತಹವರನ್ನು ದಾರಿ ತಪ್ಪಿಸಿ ವೋಟು ಕದಿಯುತ್ತದೆ. ಹೊಟ್ಟೆಬಟ್ಟೆಗೆ ಏನನ್ನೂ ನೀಡದೆ ಜುಟ್ಟಿಗೆ ಮಲ್ಲಿಗೆ ಮುಡಿಸುವ ಧೂರ್ತರನ್ನು ಸಲೀಸಾಗಿ ಗುರುತಿಸಲು ಇನ್ನೂ ಅಸಮರ್ಥರು ಈ ಜನ. ಮಂದಿರ, ಮಸೀದಿ, ಸ್ಮಶಾನ, ಖಬರಸ್ತಾನದ ರಾಜಕಾರಣ ಮಾಡಿ ಕೆರಳಿಸಿ ಯಾಮಾರಿಸಬಹುದು. ಮತಾಂಧತೆ, ಮೌಢ್ಯಗಳ ಕತ್ತಲ ಕೂಪದಲ್ಲೇ ಕೊಳೆಯಿಸುತ್ತಲೇ ಅಮೃತಕಾಲದಲ್ಲಿ ಬದುಕಿರುವ ಪುಣ್ಯವಂತರು ನೀವು ಎಂಬ ಭ್ರಮೆ ಬಿತ್ತಬಹುದು.

ಇಂತಹ ಸ್ಥಿತಿಯಲ್ಲಿ ಪ್ರತಿ ತಿಂಗಳು ನಿಮ್ಮ ಕುಟುಂಬದ ಹೆಣ್ಣುಮಗಳ ಖಾತೆಗೆ ಎಂಟೂವರೆ ಸಾವಿರ ರುಪಾಯಿ, (ವರ್ಷಕ್ಕೆ ಒಂದು ಲಕ್ಷ ರುಪಾಯಿ) ಬಂದು ಬೀಳುತ್ತದೆ ಎಂಬ ವಚನ ನೀಡಿದರೆ, ಉದ್ಯೋಗ ಖಾತರಿ, ರೈತರ ಸಾಲ ಮನ್ನಾದ ಮಾತು ಮುಂದು ಮಾಡಿದರೆ ಈ ದೀನರ ಕಣ್ಣುಗಳು ಆಸೆಯಿಂದ ಅರಳಿದರೆ, ಅನ್ನ ಅರಿವೆಯ ಮಾತಾಡಿದರೆ ಕಿವಿಗಳು ಚುರುಕಾಗುವುದಿಲ್ಲವೇ?
ನಾಲ್ಕು ಮತ್ತು ಐದನೆಯ ಹಂತದ ಮತದಾನದ ಹೊತ್ತಿಗಾದರೂ ಇಂತಹ ಅರಿವು ಬಡಜನರ ಮನದಾಳಕ್ಕೆ ಹನಿದಿದೆ. ಕಾಂಗ್ರೆಸ್‌ನ ಮಹಾಲಕ್ಷ್ಮಿ ಯೋಜನೆ ಮತದಾರರಿಗೆ ತಲುಪತೊಡಗಿದೆ. “ಮೋದಿಯವರು ತಮ್ಮ ಕೆಲವೇ ಗೆಳೆಯರನ್ನು ಶತಕೋಟ್ಯಾಧಿಪತಿಗಳನ್ನಾಗಿ ಮಾಡಲಿ, ನಾವು ಲಕ್ಷ ಲಕ್ಷ ಲಕ್ಷಾಧಿಪತಿಗಳನ್ನು ಸೃಷ್ಟಿಸಲಿದ್ದೇವೆ. ಪ್ರತಿ ತಿಂಗಳೂ ಎಂಟೂವರೆ ಸಾವಿರ ರುಪಾಯಿ ಖಾತೆಗಳಿಗೆ ಜಮಾ ಆಗಲಿದೆ ಜುಲೈ ತಿಂಗಳ ಒಂದನೆಯ ತೇದಿಯಿಂದಲೇ ಖಟಾ ಖಟ್ ಖಟಾ ಖಟ್ ಖಟಾ ಖಟ್” ಎಂಬ ರಾಹುಲ್ ಭಾಷಣ ಎಲ್ಲೆಡೆ ಅನುರಣಿಸತೊಡಗಿದೆ.
ಉತ್ತರಪ್ರದೇಶದ ಫೂಲ್ಪುರ್ ಲೋಕಸಭಾ ಕ್ಷೇತ್ರದಿಂದ ಒಂದು ಕಾಲಕ್ಕೆ ನೆಹರೂ ಕೂಡ ಸ್ಪರ್ಧಿಸಿದ್ದರು. ಇಂತಹ ಫೂಲ್ಪುರದ ಎಸ್.ಪಿ. ಮತ್ತು ಕಾಂಗ್ರೆಸ್ ಪಕ್ಷದ ರ‍್ಯಾಲಿ ಮೊನ್ನೆ ರಾಜಕೀಯ ವೀಕ್ಷಕರ ಹುಬ್ಬೇರಿಸಿತು. ಮಿತ್ರಪಕ್ಷಗಳಾದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ನ ಅಖಿಲೇಶ್ ಮತ್ತು ರಾಹುಲ್ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡದೆ ಹಿಂತಿರುಗಬೇಕಾಯಿತು. ಭಾರೀ ಜನಸ್ತೋಮ ನೆರೆದಿತ್ತು, ಉತ್ಸಾಹ ಉಕ್ಕಿ ಹರಿದಿತ್ತು. ಹದ್ದುಬಸ್ತನ್ನು ಮೀರಿ ವೇದಿಕೆಗೆ ನುಗ್ಗಿತ್ತು. ರಾಹುಲ್- ಅಖಿಲೇಶ್ ಜೊತೆ ಫೋಟೋ ತೆಗೆಯಿಸಿಕೊಳ್ಳಲು, ಅವರೊಂದಿಗೆ ಕೈ ಕುಲುಕಲು ಕಾತರವಾಗಿತ್ತು. ಉತ್ತರ ಇಂಡಿಯಾದ ಹಗಲುಗಳು ಹೊತ್ತಿ ಉರಿಯುತ್ತಿವೆ. ಉಷ್ಣೋಗ್ರತೆ 45-46 ಡಿಗ್ರಿ ಸೆಲ್ಶಿಯಸ್ ದಾಟತೊಡಗಿದೆ. ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಸಾರಿದೆ. ಉರಿ ಬಿಸಿಲ ಝಳವನ್ನೂ ಲೆಕ್ಕಿಸದೆ ರಾಹುಲ್- ಅಖಿಲೇಶ್ ಸಭೆಗಳಿಗೆ ಜನ ಭಾರೀ ಸಂಖ್ಯೆಯಲ್ಲಿ ನೆರೆಯತೊಡಗಿದ್ದಾರೆ.
ಅಲಹಾಬಾದ್- ಪ್ರಯಾಗರಾಜ್, ಲಾಲ್ ಗಂಜ್, ಆಝಮ್ ಗಢ್, ಮುಂತಾದ ಹಲವೆಡೆಗಳಲ್ಲಿ ಇದೇ ಹುರುಪು ಉತ್ಸಾಹ ಕಂಡಿದೆ. ಬಿಹಾರದಲ್ಲಿ ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್ ಪ್ರಚಾರ ಸಭೆಗಳು ಕೂಡ ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿವೆ. ಉದ್ಯೋಗದ ಭರವಸೆ ನೀಡಿರುವ ತೇಜಸ್ವಿಯವರು ತಮ್ಮ ಸಭೆಗಳಲ್ಲಿ ಮೋದಿಯವರ ಸುಳ್ಳುಗಳನ್ನು ಸಾಕ್ಷಿ ಸಹಿತ ಎಣಿಸತೊಡಗಿದ್ದಾರೆ.
ಇಂದಿರಾ ಕಾಲದ ಬೆಲೆ ಏರಿಕೆ ಮತ್ತು ಸರ್ವಾಧಿಕಾರವನ್ನು ವಿರೋಧಿಸಿ ಗುಜರಾತಿನ ಗದ್ದುಗೆಯನ್ನು ಉರುಳಿಸಿ ಪಾಟ್ನಾ ಕಡೆಗೆ ಹಬ್ಬಿ ಚಾಚಿದ್ದ ಜಯಪ್ರಕಾಶ ನಾರಾಯಣ ಅವರ ಸಂಪೂರ್ಣಕ್ರಾಂತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಹಳೆಯ ಸಮಾಜವಾದಿಗಳು. ಕಾಂಗ್ರೆಸ್ಸಿನ ಮಿತ್ರಪಕ್ಷ ಎಸ್.ಪಿ. ನಾಯಕ ಅಖಿಲೇಶ್ ಕೂಡ ತಾಯಂದಿರು, ಸೋದರಿಯರ ಖಾತೆಗಳಿಗೆ ತಿಂಗಳಿಗೆ ಎಂಟೂವರೆ ಸಾವಿರ ರುಪಾಯಿ ಖಟಾ ಖಟ್ ಖಟಾ ಖಟ್ ಜಮಾ ಆಗಲಿದೆ ಎನ್ನತೊಡಗಿದ್ದಾರೆ.
ಒಂದು ಸಿಲಿಂಡರ್ ಅಡುಗೆ ಅನಿಲವನ್ನು ಉಚಿತವಾಗಿ ನೀಡಿ, ತಿಂಗಳಿಗೆ ಐದು ಕೇಜಿ ಉಚಿತ ಪಡಿತರ ನೀಡಿ ಮಹಿಳಾ ‘ಲಾಭಾರ್ಥಿಗಳು’ ತಮ್ಮ ಜೋಳಿಗೆಯಲ್ಲಿದ್ದಾರೆ ಎಂದು ಭಾವಿಸಿದ್ದವರನ್ನು ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳು ಬೆಚ್ಚಿ ಬೀಳಿಸತೊಡಗಿವೆ. ಪ್ರಧಾನಿಯವರು ಕೂಡ ಗಲಿಬಿಲಿಗೊಂಡಿದ್ದಾರೆ. ಈ ಮಾತಿಗೆ ಹತ್ತು ಹಲವು ನಿದರ್ಶನಗಳಿವೆ. ಖಟಾ ಖಟ್, ಖಟಾ ಖಟ್, ಖಟಾ ಖಟ್ ಎಂಬ ಪದಗಳು ವ್ಯಂಗ್ಯದ ರೂಪದಲ್ಲಾದರೂ ಮೋದಿಯವರ ಬಾಯಿಂದ ಹೊರಬಿದ್ದಿವೆ. ಅನ್ನ, ಅರಿವೆ, ಉದ್ಯೋಗದ ಯಾವ ಮಾತನ್ನೂ ಆಡದಿರುವ ಅವರು ಬರಿದೇ ವ್ಯಂಗ್ಯೋಕ್ತಿಗಳಿಗೆ ಶರಣಾಗಿದ್ದಾರೆ. ಅತ್ತ 48 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸುವ ಮಹಾರಾಷ್ಟ್ರದಿಂದಲೂ ಬಿಜೆಪಿಗೆ ಕಠಿಣ ಪೈಪೋಟಿ ನೀಡುತ್ತಿದೆ ಉದ್ಧವ ಠಾಕ್ರೆ ಶಿವಸೇನೆ.
ಆಳುವ ಪಕ್ಷದ ಹಲವು ಹುನ್ನಾರಗಳು, ಅನ್ಯಾಯದ ನಡೆಗಳು ಚುನಾವಣಾ ಆಯೋಗದ ಬಿಜೆಪಿ ಪಕ್ಷಪಾತ, ಪ್ರತಿಪಕ್ಷಗಳಿಗೆ ಹೋಲಿಸಿದರೆ ಆಳುವ ಪಕ್ಷ ಹೊಂದಿರುವ ಅನಂತ ಸಂಪನ್ಮೂಲಗಳು ಈ ಚುನಾವಣೆಯಲ್ಲಿ ಅಸಮಾನ ಪೈಪೋಟಿಯನ್ನು ಸೃಷ್ಟಿಸಿವೆ.
2019ರಲ್ಲಿ ಮೋದಿಯವರು ಪುಲ್ವಾಮಾ ಹುತಾತ್ಮರನ್ನು ಚುನಾವಣೆಗೆ ಬಳಸಿಕೊಂಡಿದ್ದರು. 2014ರಲ್ಲಿ ಕಾಂಗ್ರೆಸ್ ವಿರೋಧದ ಅಲೆಯನ್ನು ತಮ್ಮ ಪರವಾಗಿ ಹಣಿದು ಕಟ್ಟಿಕೊಂಡು ವಿಜಯಿಯಾಗಿದ್ದರು. ಈ ಸಲ ಇಂತಹ ಯಾವುದೇ ಅಂಶ ಮೋದಿಯವರ ನೆರವಿಗೆ ಇಲ್ಲವಾಗಿದೆ. ಅಲೆಯಿಲ್ಲದ ಹಲವು ಹಂತಗಳ ಚುನಾವಣೆಯಿದು. ಅರ್ಧ ಹಾದಿ ಸವೆಸಿದ ನಂತರ ಮೋದಿ ವಿರೋಧಿ ಹೊರಳು ಪಡೆಯುತ್ತಿರುವ ಸೂಚನೆಗಳು ಪ್ರಕಟಗೊಳ್ಳುತ್ತಿವೆ.
ಪ್ರತಿಪಕ್ಷಗಳು ತಮ್ಮ ಸ್ವಾರ್ಥಗಳನ್ನು ಬದಿಗಿಟ್ಟು ನಿಜ ಭಾವದಿಂದ ಒಗ್ಗೂಡಿದ್ದರೆ, ಕಾಂಗ್ರೆಸ್ ನೀಡಿರುವಂತಹ ಜನಪರ ಪ್ರಣಾಳಿಕೆ ಮಾದರಿಯಲ್ಲಿ ಸಮಾನ ಕನಿಷ್ಠ ಕಾರ್ಯಕ್ರಮವೊಂದನ್ನು ಮತದಾರರ ಮುಂದೆ ಮುಂಚಿತವಾಗಿಯೇ ಇಟ್ಟು ವ್ಯೂಹ ರಚಿಸಿದ್ದರೆ ಈ ಚುನಾವಣೆ ಆರಂಭದಿಂದಲೇ ಹೊರಳುತ್ತಿತ್ತು ಮತ್ತು ಅದು ನಿರ್ಣಯಾತ್ಮಕ ಆಗಿರುತ್ತಿತ್ತು.
