ಬೆಳಗಾವಿಯ ರೈತ ನಾಯಕಿ ಜಯಶ್ರೀ ಗುರನ್ನವರ್ ನಿಧನರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗಿದ್ದ ಜಯಶ್ರೀ, ಪತಿಯ ಸಾವಿನ ನಂತರ ಗಂಡನ ಮನೆಯಲ್ಲಿ ವಿಪರೀತ ಹಿಂಸೆ ಅನುಭವಿಸಿ, ತನಗಾದ ಶೋಷಣೆ ಮತ್ಯಾರಿಗೂ ಆಗಬಾರದೆಂದು ತನ್ನ ಚಿಕ್ಕ ಮಗನೊಂದಿಗೆ ಹೊರಬಂದು ಹೋರಾಟಗಾರ್ತಿ ಆದ ದಲಿತ ಸಮುದಾಯದ ಚೇತನ ಜಯಶ್ರೀ ಗುರನ್ನವರ್.
ಮೊದಲು Action Aid ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಿ ನಂತರ ಬೆಳಗಾವಿಯಲ್ಲಿ ರೈತ ಹೋರಾಟಕ್ಕೆ ಧುಮುಕಿದರು. ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ಕೊಡಿಸಲು ಬೆಳಗಾವಿಯ ಸುವರ್ಣ ಸೌಧದ ಗೇಟಿನ ಬೀಗವನ್ನು, ಸೈಜು ಕಲ್ಲಿನಿಂದ ಒಡೆದು ರೈತರ ಕಬ್ಬಿನ ಲಾರಿಗಳನ್ನು ಸುವರ್ಣ ಸೌಧದ ಒಳಗೆ ನುಗ್ಗಿಸುವ ಪ್ರಯತ್ನ ಮಾಡುವಂತಹ ಹೋರಾಟ ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಧೈರ್ಯವಂತ ದಿಟ್ಟ ಮಹಿಳಾ ರೈತ ಹೋರಾಟಗಾರ್ತಿಯಾಗಿದ್ದರು ಜಯಶ್ರೀ.
1980 ಹಾಗೂ 90ರ ದಶಕದಲ್ಲಿ ಶಾಮಿಯಾನ ಹಾಗೂ ಕುರ್ಚಿಗಳಿಲ್ಲದೆಯೇ ಜನಸಾಗರವು ರೈತ ಸಂಘದ ಸಮಾವೇಶಗಳಿಗೆ ಹರಿದು ಬರುತ್ತಿದ್ದ ಕಾಲವಿತ್ತು. ಈಗ ಅಂತಹ ಕಾಲವೆಲ್ಲಿ ಎಂಬ ಪ್ರಶ್ನೆ ಹುಟ್ಟುತ್ತಿರುವಾಗಲೇ, ನಮ್ಮ ಅನಿಸಿಕೆ ಸುಳ್ಳು ಎಂದು ಮನವರಿಕೆ ಮಾಡುವಂತೆ ಜನಸಾಗರವನ್ನು ಜಯಶ್ರೀ ಸೃಷ್ಟಿಸಿಬಿಡುತ್ತಿದ್ದರು.
ಜಯಶ್ರೀ ಮತ್ತು ಚೂನಪ್ಪ ಪೂಜೇರಿರವರುಗಳ ನೇತೃತ್ವದಲ್ಲಿ ಬೆಳಗಾವಿ ಅನೇಕ ಅವಿಸ್ಮರಣೀಯ ರೈತ ಹೋರಾಟಗಳನ್ನು ಕಂಡಿದೆ. ವಿಪರೀತ ಆರ್ಥಿಕ ಮುಗ್ಗಟ್ಟಿದ್ದರೂ ಹೋಂಡಾ ಆಕ್ಟಿವಾದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ನರೇಗಾ ಕಾರ್ಮಿಕರನ್ನು ಸಂಘಟಿಸಿ ಸುವರ್ಣ ಸೌಧದ ಮುಂದೆ ಜಯಶ್ರೀ ಸಾವಿರಾರು ರೈತರನ್ನು ಮತ್ತು ಮಹಿಳೆಯರನ್ನು ಸೇರಿಸಿ ಹೋರಾಟ ಮಾಡಿದ್ದು, ಅವಿಸ್ಮರಣೀಯ ಹೋರಾಟವಾಗಿದೆ.
ಇನ್ನೂ ಹೆಚ್ಚು ಕಾಲ ಬದುಕಿ, ಇನ್ನೂ ಎತ್ತರಕ್ಕೆ ಏರಬೇಕಾಗಿದ್ದ ರೈತ ಚಳವಳಿಯ ಪ್ರತಿಭಾವಂತ ಹೋರಾಟಗಾರ್ತಿ ಕೇವಲ 40ನೇ ವಯಸ್ಸಿಗೆ ನಿಧನರಾಗಿರುವುದು ನೋವಿನ ಸಂಗತಿ. ಅವರ ಕಿರುವಯಸ್ಸಿನ ಮಗನಿಗೆ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸೋಣ. ಜಯಶ್ರೀ ಗುರನ್ನವರ್‌ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಹಸಿರು ನಮನಗಳು.
-ಪಚ್ಚೆ ನಂಜುಂಡಸ್ವಾಮಿ
