ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆ ಇಮೇಲ್ ಬರುವುದು ಮುಂದುವರೆದಿದ್ದು, ಮತ್ತೆ ನಗರದ ಮೂರು ‘ಫೈವ್ ಸ್ಟಾರ್’ ಹೋಟೆಲ್ಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ವರದಿಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಬಳಿಯ ಒಟೇರಾ ಹೋಟೆಲ್ ಸೇರಿ ಮೂರು ಹೋಟೆಲ್‌ಗಳಿಗೆ ಮೇಲ್ ಮೂಲಕ ಸಂದೇಶ ಬಂದಿದ್ದು, ಗುರುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಇಮೇಲ್ ಬಂದಿದ್ದು, ಹೋಟೆಲ್ ಸಿಬ್ಬಂದಿ ಮೇಲ್ ಪರಿಶೀಲನೆ ಮಾಡಿದಾಗ ಬೆದರಿಕೆ ಸಂದೇಶ ಬೆಳಕಿಗೆ ಬಂದಿದೆ.
ಬೆದರಿಕೆ ಇ-ಮೇಲ್ ಬರುತ್ತಿದ್ದಂತೆ ಹೋಟೆಲ್ ಮಾಲೀಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಸ್ಕ್ಯಾಡ್‍ಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ.
ಒಟೇರಾ ಹೋಟೆಲ್‌ಗೆ ಬಾಂಬ್ ಸ್ಕ್ವಾಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿಬಾಂಬ್ ಬೆದರಿಕೆ ಅನ್ನೋದು ಬಯಲಾಗಿದೆ.
ಈ ಹಿಂದೆ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಲಾಗಿತ್ತು. ಈ ವೇಳೆಯೂ ಗಾಬರಿಗೊಂಡಿದ್ದ ಶಾಲಾ ಆಡಳಿತ ಮಂಡಳಿಗಳು ಮಕ್ಕಳನ್ನು ಮನೆಗೆ ಕಳುಹಿಸಿದ್ದವು. ಇತ್ತ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಬಂದು ಪರಿಶೀಲನೆ ನಡೆಸಿದಾಗ ಹುಸಿಬಾಂಬ್ ಕರೆ ಎಂದು ಬಯಲಾಗಿತ್ತು.
ಮೇ 13ರಂದು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದ ಜೈನ್ ಹೆರಿಟೇಜ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಅದರ ಮರುದಿನವೇ ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯ ಕಗ್ಗಲಿಪುರದ ಕನಕಪುರ ರಸ್ತೆ ಸೋಮನಹಳ್ಳಿ ಬಳಿಯ ಈಡಿಫೈ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪರಿಶೀಲನೆಯ ನಂತರ ಈ ಎರಡೂ ಬೆದರಿಕೆ ಸಂದೇಶಗಳು ಹುಸಿ ಎಂಬುದು ತಿಳಿದುಬಂದಿತ್ತು.
ಕಳೆದ ತಿಂಗಳು ಜಾಲಹಳ್ಳಿ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಮೈದಾನ ಬಳಿಯ ಕದಂಬ ಹೋಟೆಲ್ ಸುತ್ತಮುತ್ತ ಬಾಂಬ್ ಇರಿಸಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು. ನಂತರ ಅದು ಹುಸಿ ಬೆದರಿಕೆ ಎಂಬುದು ತಿಳಿದುಬಂದಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಡಬ್ಲೂಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ; ಎಲ್ಲೆಲ್ಲಿ ಸಂಚಾರ ನಿರ್ಬಂಧ?
ನಾಲ್ಕು ತಿಂಗಳ ಅವಧಿಯಲ್ಲಿ ನಗರದ ನೂರಾರು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಕರೆಗಳಿಗೆ ಸಂಬಂಧಿಸಿದಂತೆ 19 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಮೇ 13 ಮತ್ತು 14 ರಂದು ಆರು ಆಸ್ಪತ್ರೆಗಳು ಮತ್ತು ಎಂಟು ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ. ಆದರೂ, ಯಾವುದೇ ಪ್ರಕರಣಗಳಲ್ಲಿ ಇದುವರೆಗೆ ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲ.
ದೇಶದಾದ್ಯಂತ ಹುಸಿ ಬಾಂಬ್ ದಾಳಿ ಬೆದರಿಕೆ ಸಂದೇಶಗಳು ಕಳೆದ ಕೆಲವು ತಿಂಗಳುಗಳಲ್ಲಿ ವಿಪರೀತ ಹೆಚ್ಚಾಗಿದೆ. ಇದು ಪೊಲೀಸರನ್ನು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿವೆ.