ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದೀಚೆಗೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುರಿಯುತ್ತಿರುವ ಅಕಾಲಿಕ ಮಳೆಗೆ ರೈತರ ಬದುಕು ಹೈರಾಣಾಗಿದೆ. ಬರವೇ ಬರಲಿ, ಅಕಾಲಿಕ ಮಳೆಯೇ ಸುರಿಯಲಿ- ಜನರಿಗೆ ಕಷ್ಟ, ಜನಪ್ರತಿನಿಧಿಗಳಿಗೆ ಲಾಭ ನಿಲ್ಲುವುದಿಲ್ಲ. ಸರ್ಕಾರಗಳು ಬದಲಾದರೂ, ಭರವಸೆಗಳಿಗೆ ಬರವಿಲ್ಲ…
ಕೆಲವೇ ದಿನಗಳ ಹಿಂದೆ ಕಲಬುರಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿ, ಬಿಸಿಲಿನ ಝಳಕ್ಕೆ ಜನ ಉರಿದುಹೋಗುತ್ತಿದ್ದರು. ಬೀದಿಯಲ್ಲಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು.
ಇದನ್ನೆಲ್ಲ ಮರೆಸುವಂತೆ, ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿಯುತ್ತಿದೆ. ಕರೆ, ಕಟ್ಟೆಗಳಲ್ಲಿ ನೀರು ಕಾಣಿಸಿಕೊಂಡು ಭೂಮಿ ತಂಪಾಗತೊಡಗಿದೆ. ಬರದ ನಾಡಿಗೆ ಮಳೆ ಬಂತೆಂದರೆ ಜನರಲ್ಲಿ ಸಂಭ್ರಮ ಸಾಮಾನ್ಯ. ಆದರೆ, ಅಕಾಲಿಕ ಮಳೆ ರೈತರ ಬದುಕನ್ನು ಹೈರಾಣಾಗಿಸಿದೆ.
ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದೀಚೆಗೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುರಿಯುತ್ತಿರುವ ಅಕಾಲಿಕ ಮಳೆಗೆ ಹಲವರು ಬಲಿಯಾಗಿದ್ದಾರೆ. ನೂರಾರು ಎಮ್ಮೆ-ದನಗಳು, ಆಡು-ಕುರಿ-ಕೋಳಿಗಳು ಕೊಚ್ಚಿ ಹೋಗಿವೆ. ಮಣ್ಣಿನ ಮನೆಗಳು ಕುಸಿದುಬಿದ್ದಿವೆ.
ಬರದ ನಡುವೆಯೂ ಕೆಲ ರೈತರು ಸಾಲ ತಂದು ಬೋರ್ ಕೊರೆಸಿ, ಹನಿ ನೀರಾವರಿ ಅಳವಡಿಸಿಕೊಂಡು ಬೆಳೆ ತೆಗೆದಿದ್ದ ಒಂದು ಲಕ್ಷ ಎಕರೆಗೂ ಹೆಚ್ಚು ಪ್ರದೇಶ ಅಕಾಲಿಕ ಮಳೆಯಿಂದಾಗಿ ಜಲಾವೃತವಾಗಿದೆ. ಕಡಲೆ, ಮೆಣಸಿನಕಾಯಿ, ಬಾಳೆ, ಜೋಳ, ಶೇಂಗಾ, ಶುಂಠಿ, ಕಬ್ಬು, ದ್ರಾಕ್ಷಿ, ದಾಳಿಂಬೆ, ಪಪ್ಪಾಯ, ಕಲ್ಲಂಗಡಿ ಬೆಳೆದು ಇನ್ನೇನು ಕಾಸು ಕಾಣಬೇಕೆನ್ನುವ ಹೊತ್ತಿನಲ್ಲಿ, ಮಳೆ ಬಂದು ಬೆಳೆ ಮಣ್ಣು ಪಾಲಾಗಿದೆ. ಅಂದಾಜಿಗೆ ಸಿಗದ ನಷ್ಟದಿಂದ ಹೈರಾಣಾಗಿರುವ ರೈತರು ಈಗ, ತೋಟಗಳ ದುರಸ್ತಿಗೇ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ್ದಾರೆ. ಕಷ್ಟ, ನಷ್ಟ, ಸಂಕಷ್ಟಗಳೊಂದಿಗೇ ನವೆಯುತ್ತಿರುವ ಕೃಷಿಕರು ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.
ಅಕಾಲಿಕ ಮಳೆ ಸುರಿಯುತ್ತಿರುವುದು, ಸಿಡಿಲಿಗೆ ಪ್ರಾಣ ಕಳೆದುಕೊಳ್ಳುತ್ತಿರುವುದು, ಬೆಳೆ ಹಾನಿಯಾಗಿರುವುದು, ಕುರಿಗಳು ಕೊಚ್ಚಿಕೊಂಡು ಹೋಗಿರುವುದು, ಮನೆಗಳು ಮುರಿದು ಬಿದ್ದಿರುವುದು- ಎಲ್ಲವೂ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ರೈತರ ಸಂಕಟಕ್ಕೆ ಸ್ಪಂದಿಸಬೇಕಾದ ಸರ್ಕಾರ- ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರ ಸುಳಿವೇ ಇಲ್ಲದಾಗಿದೆ.
ವಿಪರ್ಯಾಸಕರ ಸಂಗತಿ ಎಂದರೆ, ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು’ ಎಂಬ ಡಾ. ಸಿದ್ದಲಿಂಗಯ್ಯನವರ ಕವನವನ್ನು ಸದನದಲ್ಲಿ ಉಲ್ಲೇಖಿಸಿದರು. ಭಾರೀ ಮೊತ್ತದ ಕೃಷಿ ಬಜೆಟ್ ಮಂಡಿಸಿದರು. ಕೃಷಿ, ತೋಟಗಾರಿಕೆ, ಸಹಕಾರ, ನೀರಾವರಿ, ರೇಷ್ಮೆ ಇಲಾಖೆಗಳ ಅಡಿಯಲ್ಲಿ ಕೃಷಿಗಾಗಿ, ರೈತರಿಗಾಗಿ ನೂರಾರು ಯೋಜನೆಗಳು, ಕಾರ್ಯಕ್ರಮಗಳು, ಸಬ್ಸಿಡಿಗಳು, ಸೌಲಭ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿ, ಬಹಳ ದೊಡ್ಡ ಕೃಷಿಕ ಸಮುದಾಯದೊಂದಿಗೆ ಸರ್ಕಾರವಿದೆ ಎಂದರು.
ಇದನ್ನು ಓದಿದ್ದೀರಾ?: ಹೊಸಕಾಲದ ವಿಕೃತಿ | ಹೆಣ್ಣನ್ನು ಅವಮಾನಿಸುವ ವೇದಿಕೆಯಾಗುತ್ತಿದೆಯೇ ಸಾಮಾಜಿಕ ಜಾಲತಾಣ?
ಅಷ್ಟೇ ಅಲ್ಲ, ಕೃಷಿ, ಕಂದಾಯ ಮತ್ತು ತೋಟಗಾರಿಕೆ ಖಾತೆಗಳಿಗೆ ಕೃಷಿ ಕುಟುಂಬದಿಂದ ಬಂದವರನ್ನೇ ಸಚಿವರನ್ನಾಗಿ ನೇಮಿಸಿದರು. ಅವರು ಕೃಷಿಯ ಕಷ್ಟ ಗೊತ್ತಿರುವವರು. ಅನಿಶ್ಚಿತ ಬದುಕನ್ನು ಅರಿತವರು. ರೈತರ ದುಗುಡ-ದುಮ್ಮಾನಗಳನ್ನು ಅನುಭವಿಸಿದರು. ಅವರೇ ರೈತರ ಕಷ್ಟಗಳಿಗೆ ಕಿವುಡರಾದರೆ, ಕುರುಡರಾದರೆ ಕೃಷಿ ಉಳಿಯುವುದೇ?
ಮಳೆಯ ಕಣ್ಣಾಮುಚ್ಚಾಲೆಯಾಟ, ಬೆಳೆ ವೈಫಲ್ಯ, ಸಾಲದ ಹೊರೆಗಳು, ಕೆಟ್ಟ ಸರ್ಕಾರಿ ನೀತಿಗಳು, ಸಬ್ಸಿಡಿ ಎಂಬ ಸಬೂಬುಗಳು, ಮಾರುಕಟ್ಟೆಯ ಮೋಸಗಳು, ರೈತ ವಿರೋಧಿ ಕಾನೂನುಗಳು ಕೃಷಿ ಕ್ಷೇತ್ರವನ್ನು ಅವನತಿಯ ಅಂಚಿಗೆ ತಂದು ನಿಲ್ಲಿಸಿವೆ. ಯುವಪೀಳಿಗೆಯುಂತೂ ಕೃಷಿಯ ಕಡೆ ಮುಖಮಾಡದೆ, ನಗರಗಳತ್ತ ಗುಳೆ ಎದ್ದಿದೆ. ಅಪ್ಪಿತಪ್ಪಿ ಕೃಷಿಯಲ್ಲಿ ತೊಡಗಿಕೊಂಡ ಯುವಕರಿಗೆ ಹೆಣ್ಣು ಸಿಗದಂತಾಗಿದೆ. ಈ ಎಲ್ಲ ಆತಂಕಗಳ ನಡುವೆ ಪ್ರಾಕೃತಿಕ ವಿಕೋಪಗಳು. ಬರ, ನೆರೆಗಳು. ಪರಿಹಾರದ ನೆಪದಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳ ಸಬೂಬುಗಳು, ಸುಳ್ಳುಗಳು. ಇವೆಲ್ಲ ಬಡ ರೈತನನ್ನು ಆತ್ಮಹತ್ಯೆಯತ್ತ ಪ್ರೇರೇಪಿಸಿದರೆ ಆಶ್ಚರ್ಯವಿಲ್ಲ.
ಮೊನ್ನೆ, ಸಾಹುಕಾರ್ ಸಿದ್ದವ್ವ ಬಯ್ಯಣ್ಣವರ್ ಎಂಬ ಮಹಿಳೆಯ ಬಳಿ ಒಂದೂವರೆ ಲಕ್ಷ ಸಾಲ ಪಡೆದಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಸ್ಲಾಂಪುರದ ಐವತ್ತೊಂದು ವರ್ಷದ ರಾಜು ಖೋತಗಿ ಎಂಬ ರೈತ, ಬರದ ನಡುವೆಯೂ ಕಾಲಕಾಲಕ್ಕೆ ಬಡ್ಡಿ ಕಟ್ಟಿದ್ದರು. ಮೊನ್ನೆ ಪುತ್ರ ಮತ್ತು ಪತ್ನಿಯನ್ನು ಸಾಹುಕಾರ್ ಸಿದ್ದವ್ವ ಒತ್ತೆ ಇಟ್ಟುಕೊಂಡು, ಸಾಲಕ್ಕೆ ಒತ್ತಾಯಿಸಿದಾಗ, ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಡ ರೈತ ರಾಜು ಖೋತಗಿ ಆತ್ಮಹತ್ಯೆ ಅಧಿಕಾರಿಗಳ, ಜನಪ್ರತಿನಿಧಿಗಳ ಮತ್ತು ಸಚಿವರ ನಿಸ್ಸೀಮ ಉದಾಸೀನತೆಗೆ ಹಿಡಿದ ಕನ್ನಡಿಯಲ್ಲವೇ?
ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಮಳೆಯಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಭೂಮಿಯನ್ನು ಹಸನು ಮಾಡಿ, ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತ ಸಂಪರ್ಕ ಕೇಂದ್ರದತ್ತ ಧಾವಿಸುತ್ತಿದ್ದಾರೆ. ಶೇಂಗಾ, ಸೋಯಾಬೀನ್ಗಾಗಿ ಹಾವೇರಿಯಲ್ಲಿ ರೈತರು ಬಿಸಿಲಿನಲ್ಲಿಯೇ ಸಾಲುಗಟ್ಟಿ ನಿಂತಿರುವುದು, ನೂಕು ನುಗ್ಗಲು ಉಂಟಾಗಿ ಗಲಾಟೆಯಾಗಿರುವುದು ಸುದ್ದಿಯಾಗಿದೆ. 2008ರಲ್ಲಿ ಇದೇ ಕಾರಣಕ್ಕಾಗಿ ಇಲ್ಲಿ ಗೋಲಿಬಾರ್ ಆಗಿತ್ತು, ಇಬ್ಬರು ರೈತರ ಹೆಣ ಉರುಳಿತ್ತು. ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ, ಆಕ್ರೋಶ ಮುಗಿಲು ಮುಟ್ಟಿತ್ತು.
ಮುಖ್ಯಮಂತ್ರಿಗಳು ಕೃಷಿ ಸಚಿವರೊಂದಿಗೆ ಸಭೆ ನಡೆಸುತ್ತಾರೆ. ಕೃಷಿ ಸಚಿವರು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆಯುತ್ತಾರೆ. ಅಧಿಕಾರಿಗಳು ಸಾಕಷ್ಟು ದಾಸ್ತಾನಿದೆ, ರೈತರು ಆತಂಕಕ್ಕೊಳಗಾಗಬೇಕಾಗಿಲ್ಲ ಎನ್ನುವ ಭರವಸೆ ನೀಡುತ್ತಾರೆ.
ಸರ್ಕಾರಗಳು ಬದಲಾದರೂ, ಭರವಸೆಗಳಿಗೆ ಬರವಿಲ್ಲ. ಬರವೇ ಬರಲಿ, ಅಕಾಲಿಕ ಮಳೆಯೇ ಸುರಿಯಲಿ- ಜನರಿಗೆ ಕಷ್ಟ, ಜನಪ್ರತಿನಿಧಿಗಳಿಗೆ ಲಾಭ ನಿಲ್ಲುವುದಿಲ್ಲ. ನಮ್ಮ ರಾಜಕಾರಣಿಗಳಲ್ಲಿ ಒಳ್ಳೆಯತನ ಲವಲೇಶವಾದರೂ ಇದ್ದರೆ, ಜನ ಜನರಾಗಿ ಬದುಕುವುದು ಕಷ್ಟವಲ್ಲ… ಅಲ್ಲವೇ?
