ಹೊಸಕಾಲದ ವಿಕೃತಿ | ಹೆಣ್ಣನ್ನು ಅವಮಾನಿಸುವ ವೇದಿಕೆಯಾಗುತ್ತಿದೆಯೇ ಸಾಮಾಜಿಕ ಜಾಲತಾಣ?

Date:

ಇತ್ತೀಚಿನ ದಿನಗಳಲ್ಲಿ ಬಹುತೇಕರು ಸಾಮಾಜಿಕ ಜಾಲತಾಣಕ್ಕೆ ಒಗ್ಗಿ ಹೋಗಿದ್ದಾರೆ. ಏನೇ ವೈಯಕ್ತಿಕ ವಿಷಯ ಇದ್ದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಮಾಡುವುದು, ರೀಲ್ಸ್‌ ಮಾಡೋದು, ಕಮೆಂಟ್ ಹಾಕೋದು ಸೇರಿದಂತೆ ಹಲವು ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರನ್ನು ಮಾರಿಯರಂತೆ ಬಿಂಬಿಸುವ, ದಡ್ಡರೆಂದು ಅಪಹಾಸ್ಯ ಮಾಡುವ, ನಡೆ, ವರ್ಣನೆ, ನಿರೂಪಣೆಗಳ ಮೂಲಕ ಮಹಿಳೆಯರನ್ನು ಅಪಮಾನ ಮಾಡುವ ಪೋಸ್ಟರ್‌ಗಳು, ಚಿತ್ರಗಳು, ರೀಲ್ಸ್‌-ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಅವುಗಳನ್ನು ಮಹಿಳೆಯರು ಅದರಲ್ಲೂ ಯುವತಿಯರು ಒಪ್ಪಿಕೊಳ್ಳುವಂತಹ ಮನಸ್ಥಿತಿಯನ್ನೂ ಹುಟ್ಟುಹಾಕಲಾಗಿದೆ. ಇದೆಲ್ಲದರ ನಡುವೆ, ಮಹಿಳೆಯರ ಪ್ರತಿಭೆಯನ್ನೂ ತಮ್ಮ ಟ್ರೋಲ್‌ಗಳ ಲಾಲಸೆಗಾಗಿ ಅವಹೇಳನ ಮಾಡುವ ಪ್ರವೃತ್ತಿಯೂ ಬೆಳೆಯುತ್ತಿದೆ. ನಿತ್ಯ ಮಹಿಳೆಯರು ಅಪ್‌ಲೋಡ್‌ ಮಾಡುವ ವಿಡಿಯೋ, ರೀಲ್ಸ್‌ಗಳಲ್ಲಿ ಹೆಚ್ಚಾಗಿ ಅವರ ಪ್ರತಿಭೆಯನ್ನು ಪುರಸ್ಕರಿಸುವುದಕ್ಕಿಂತ ಅವರ ಸೌಂದರ್ಯ ಕುರಿತ ಕಮೆಂಟ್‌ಗಳು ಹೆಚ್ಚಾಗುತ್ತಿವೆ. ಹೆಣ್ಣಿನ ಅಂದ-ಚೆಂದ, ಮೈಬಣ್ಣ, ದೇಹದ ಗಾತ್ರ, ಆಕಾರ ಸೇರಿದಂತೆ ಅವರ ಬಾಹ್ಯ ಸೌಂದರ್ಯದ ಬಗ್ಗೆ ಕೀಳು ಅಭಿರುಚಿಯ ಕಮೆಂಟ್‌ ಮಾಡುವ, ಅವಮಾನಿಸುವ ಪ್ರವೃತ್ತಿ ಮಿತಿ ಮೀರುತ್ತಿದೆ.

ಉದಾಹರಣೆಗೆ, ಇತ್ತೀಚೆಗೆ 15 ವರ್ಷ ವಯಸ್ಸಿನ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು 2024ರ ಉತ್ತರಪ್ರದೇಶ ಬೋರ್ಡ್ ಪರೀಕ್ಷೆಗಳಲ್ಲಿ 98.5 ಪ್ರತಿಶತದೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ. ಆದರೆ, ಆಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರತಿಭೆಗಿಂತಲೂ ಹೆಚ್ಚಾಗಿ ಚರ್ಮದ ಬಣ್ಣ ಮತ್ತು ರೂಪದ ಕಾರಣಕ್ಕಾಗಿ ವಿಷಕಾರಿ ಟ್ರೋಲ್‌ಗೆ ಗುರಿಯಾದಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತನ್ನ ದೇಹಾಕೃತಿಯ ಕಾರಣಕ್ಕೆ ಟ್ರೋಲ್‌ಗೆ ತುತ್ತಾದ ಬಾಲಕಿ ಪ್ರಾಚಿ ನಿಗಮ್, ”ನಾನು ಟಾಪರ್ ಆಗದೇ ಇದ್ದಿದ್ದರೆ ಬಹುಶಃ ನಾನು ಇಷ್ಟೊಂದು ಟ್ರೋಲ್ ಆಗುತ್ತಿರಲಿಲ್ಲ. ನನ್ನ ದೈಹಿಕ ನೋಟದಿಂದಾಗಿ (ನನ್ನ ಸಾಧನೆಯ ಕಾರಣಕ್ಕಲ್ಲ) ವಿಡಿಯೋ ಹೆಚ್ಚು ವೈರಲ್ ಆಗಿದೆ” ಎಂದು ವಿಡಿಯೋವೊಂದರಲ್ಲಿ ನೊಂದು ನುಡಿದಿದ್ದಾಳೆ.

                 ಪ್ರಾಚಿ ನಿಗಮ್

ಅಷ್ಟೇ ಅಲ್ಲ, ಬಾಲಕಿ ಟ್ರೋಲ್‌ಗೆ ಒಳಗಾದದ್ದನ್ನೇ ತನ್ನ ಜಾಹೀರಾತಿಗೆ ಬಳಸಿಕೊಂಡ ರೇಜರ್‌ ಕಂಪನಿಯೊಂದು ಹಣ ಮಾಡಲು ಮುಂದಾಗಿತ್ತು.

ಇನ್ನು, ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ರೇಷ್ಮಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರು. ಅವರ ಮಾತು, ಬಾಯಿ ಹಾಗೂ ಆಕೆಯ ದೇಹಾಕಾರದ ಕಾರಣಕ್ಕೆ ಆಕೆಯನ್ನೂ ಅಪಹಾಸ್ಯ ಮಾಡಲಾಗುತ್ತಿದೆ. ಇನ್ನು, ಈ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಬಹುತೇಕ ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಹ ಕಲಾವಿದೆಯರ ಎತ್ತರ, ಬಣ್ಣ, ತೂಕವನ್ನೇ ವ್ಯಂಗ್ಯವಾಗಿ ಅಪಹಾಸ್ಯ ಮಾಡಿ, ಅದನ್ನೇ ಹಾಸ್ಯವೆಂದು ಪ್ರಸಾರ ಮಾಡಲಾಗುತ್ತಿದೆ.

ವಿಪರ್ಯಾಸವೆಂದರೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೂ ಅವರ ಬಣ್ಣದ ಕಾರಣಕ್ಕೆ ‘ಅಡ್ಡ ಹೆಸರಿನಲ್ಲಿ’ ಕರೆದು, ಅವಮಾನಿಸಲಾಗಿದ್ದನ್ನು ಕರ್ನಾಟಕವೇ ಕಂಡಿದೆ.

ಅಲ್ಲದೇ, ಈ ಹಿಂದೆ ಒಂದು ರೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯ ಫೋಟೋವನ್ನು ಸೆರೆ ಹಿಡಿದು ವೈರಲ್ ಮಾಡಲಾಗಿದೆ. ಆಕೆಯನ್ನು ದೃಷ್ಟಿಬೊಂಬೆಯಂತೆ ಬಿಂಬಿಸಲಾಗಿದೆ. ಹಲವಾರು, ಜನರು ತಮ್ಮ ಹೊಸ ಮನೆಗಳ ಎದುರು ಆಕೆಯ ಚಿತ್ರವನ್ನ ದೃಷ್ಟಿ ಬೊಂಬೆಯಾಗಿ ಹಾಕುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ಈ ಗಂಡಾಳ್ವಿಕೆ ಅಥವಾ ಗಂಡು ಮನಸ್ಥಿತಿ ಯಾವ ಅತಿರೇಕಕ್ಕೆ ಹೋಗಿದೆ ಎಂದರೆ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದಲ್ಲಿ ಆರೋಪಿಯನ್ನು ಸಮರ್ಥಿಸಿ, ಸಂತ್ರಸ್ತೆಯರನ್ನೇ ದೂಷಿಸಲಾಗುತ್ತಿದೆ. ಪರಾರಿಯಾಗಿರುವ ಆರೋಪಿ ಹಣವಂತ ಮಾತ್ರವಲ್ಲದೆ, ಆತ ಗಂಡು ಎಂಬ ಅಹಮಿಕೆಯಿಂದಲೇ ಇಂತಹ ಕೃತ್ಯಗಳನ್ನು ಎಸಗಿದ್ದಾನೆ. ಮಹಿಳೆಯರ ದೌರ್ಬಲ್ಯವನ್ನು ತನ್ನ ಕಾಮವಾಂಛೆ ತೀರಿಸಿಕೊಳ್ಳಲು ದುರುಪಯೋಗ ಮಾಡಿಕೊಂಡಿದ್ದಾನೆ. ಆದರೆ ಅಪರಾಧಿಯನ್ನಾಗಿಸಿದ್ದು, ಕಟಕಟೆಯಲ್ಲಿ ನಿಲ್ಲಿಸಿದ್ದು ಸಂತ್ರಸ್ತ ಹೆಣ್ಣುಮಕ್ಕಳನ್ನೇ. ಸಂತ್ರಸ್ತ ಮಹಿಳೆಯರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈಗ ಅವರ ಬದುಕು ಮೂರಾಬಟ್ಟೆಯಾಗಿದೆ.

ಇನ್ನು, ಇತ್ತೀಚೆಗೆ ಚೆನ್ನೈನಲ್ಲಿ ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ ಬಾಲ್ಕನಿಯಿಂದ ತಾಯಿಯ ಕೈಯಿಂದ ಕೈತಪ್ಪಿ ಮಗುವೊಂದು ಬಿದ್ದಿತ್ತು. ನಂತರ ಮಗುವಿನ ರಕ್ಷಣೆ ಮಾಡಲಾಗಿತ್ತು. ಆ ಘಟನೆಯ ಬಳಿಕ ಮಗುವಿನ ರಕ್ಷಣೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ತಾಯಿಗೆ ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದ್ದಂತೆ ಮಹಿಳೆ ಆಘಾತಕ್ಕೆ ಒಳಗಾಗಿದ್ದರು. ಈ ವಿಷಯವನ್ನು ಅವರ ಸಂಬಂಧಿಕರು ತನಿಖೆಯ ವೇಳೆ ತಿಳಿಸಿದ್ದಾರೆ ಎಂದು ಕೊಯಮತ್ತೂರಿನ ಕರಮಡೈ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಕುರಿತ ಟೀಕೆಗಳಿಂದ ಬೇಸತ್ತ 33 ವರ್ಷದ ಮಹಿಳೆಯು ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಣ್ಣು ಮಕ್ಕಳು ತಮ್ಮಿಷ್ಟದಂತೆ ಬದುಕುವುದೇ ಕಷ್ಟವಾಗಿದೆ. ಏನೇ ಮಾಡಿದರೂ, ಟ್ರೋಲ್‌ಗೆ ಒಳಗಾಗುವ ಆತಂಕ, ಭಯ ಮಹಿಳೆಯರನ್ನು ಬೆನ್ನತ್ತಿ ಕಾಡುತ್ತಿದೆ. ಇತ್ತೀಚೆಗೆ, ಹೆಣ್ಣಿನ ದೇಹವನ್ನು ಸಂಖ್ಯೆಗಳಲ್ಲಿ ಅಳೆಯಲಾಗುತ್ತಿದೆ. ಆಕೆ ದೇಹದ ಆಕಾರ ಆ ಸಂಖ್ಯೆಗೆ ಹೋಲಿಕೆಯಾದರೆ, ಆಕೆ ಸುಂದರಿ, ಇಲ್ಲವೇ ಅಷ್ಟಕ್ಕಷ್ಟೇ ಎಂಬಂತ ಮನಸ್ಥಿತಿಯನ್ನು ಸಿನಿಮಾ, ಫ್ಯಾಷನ್ ಮತ್ತು ಜಾಹೀರಾತು ಜಗತ್ತು ಹುಟ್ಟು ಹಾಕಿದೆ.

ಕಪ್ಪು ತ್ವಚೆಗಿಂತ ಬಿಳಿ ತ್ವಚೆ ಶ್ರೇಷ್ಠ ಎಂಬ ಭಾವನೆಯನ್ನು ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡು ನಾನಾ ಕಂಪನಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಬೆಳ್ಳಗಾಗಲು ಈ ಉತ್ಪನ್ನ ಬಳಸಿ ಎಂದು ಜಾಹೀರಾತುಗಳ ಮೂಲಕ ಮಹಿಳೆಯರನ್ನು ಪ್ರೇರೇಪಿಸುತ್ತಿವೆ.

ಸಾಮಾಜಿಕ ಮಾಧ್ಯಮವು ಮನುಷ್ಯರನ್ನು ನೋಡುವ ರೀತಿಯನ್ನೇ ಬದಲಿಸುತ್ತಿದೆ. ನೈಸರ್ಗಿಕವಾಗಿ ಸುಂದರವಾಗಿರುವ ಮಹಿಳೆಯರನ್ನು ಕೃತಕ ಬಣ್ಣಗಳೊಂದಿಗೆ ಅಂದಗೊಳಿಸುವ ರಾಸಾಯನಿಕಗಳು ಮಹಿಳೆಯರನ್ನು ಅನಾರೋಗ್ಯದತ್ತ ದೂಡುತ್ತಿವೆ.

ಚರ್ಮದ ಬಣ್ಣವು ಆಯಾ ಪ್ರದೇಶದ ಮೇಲೆ ಹೆಚ್ಚು ಆಧಾರವಾಗಿರುತ್ತದೆ. ಯಾವುದೇ ಚರ್ಮದ ಬಣ್ಣ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ ಎಂಬುದನ್ನು ಇಡೀ ಜಗತ್ತು ಅರ್ಥೈಸಿಕೊಳ್ಳಬೇಕಿದೆ. ಪ್ರತಿ ಪ್ರದೇಶಕ್ಕೆ ಅನುಗುಣವಾಗಿ ದೇಹದ ಬಣ್ಣ, ಆಕಾರಗಳು ಬದಲಾಗುತ್ತದೆ. ಅದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿರುತ್ತದೆ. ಯಾವ ವ್ಯಕ್ತಿಯನ್ನು ಆತನ ದೇಹದ ರಚನೆಯ ಮೇಲೆ ಅಳೆಯುವುದು ಅಥವಾ ಅವರು ಹೀಗೆಯೇ ಎಂದು ತೀರ್ಪು ನೀಡುವ ಅಧಿಕಾರ ಯಾರೊಬ್ಬರಿಗೂ ಇಲ್ಲ.

ಈ ಸುದ್ದಿ ಓದಿದ್ದೀರಾ? ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಮನೋವಿಜ್ಞಾನಿ ಡಾ. ಶ್ರೀಧರ್, ”ಸಾಮಾಜಿಕ ಜಾಲತಾಣಗಳ ಬಲ ಯಾವುದು ಅಂದರೆ ಟ್ರೋಲ್ ಮಾಡುವ ಅಥವಾ ಕೆಟ್ಟದಾಗಿ ಕಮೆಂಟ್ ಮಾಡುವ ವ್ಯಕ್ತಿಯ ಗುರುತು ಪತ್ತೆಯಾಗುವುದಿಲ್ಲ ಎಂಬುವುದು. ತಮ್ಮ ಗುರುತು ಮುಚ್ಚಿಟ್ಟುಕೊಂಡು ತಮ್ಮಗಿಷ್ಟ ಬಂದಂತೆ ಇನ್ನೊಬ್ಬರನ್ನು ತೆಗಳಲು ಸಾಮಾಜಿಕ ಜಾಲತಾಣದಲ್ಲಿ ಅವಕಾಶ ಸಿಗುತ್ತದೆ. ಗಂಡಸು ಏನು ಬೇಕಾದರೂ ಹೇಳಬಹುದು ಎಂಬುದು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ಪುರುಷ ಪ್ರಾಧಾನ್ಯತೆಗೆ ಪುಷ್ಟಿ ಕೊಡುತ್ತದೆ. ಸಣ್ಣ ಮಕ್ಕಳಲ್ಲಿ ಈ ರೀತಿಯ ಭಾವನೆಗಳು ಮೂಡದೇ ಇರುವ ಹಾಗೇ ನೋಡಿಕೊಳ್ಳಬೇಕು” ಎಂದರು.

”ಹೆಚ್ಚಿನ ಸಮಯದಲ್ಲಿ ಕೋಪ, ಆವೇಶ ಸೇರಿದಂತೆ ಎಲ್ಲವನ್ನೂ ಹೊರಹಾಕಲು ಈ ಸಾಮಾಜಿಕ ಮಾಧ್ಯಮ ಒಂದು ರೀತಿಯಲ್ಲಿ ವೇದಿಕೆಯಾಗಿದೆ. ಇದರಲ್ಲಿ ಮಹಿಳೆಯರು ಗಂಭೀರ ಪರಿಣಾಮ ಎದುರಿಸುತ್ತಿದ್ದಾರೆ. ಸೌಮ್ಯ ಅನ್ನೋದು ಇದೀಗ ಕಳಚಿಕೊಂಡು ಬಿಟ್ಟಿದೆ. ವ್ಯಾಘ್ರ ಹೆಚ್ಚಾಗಿ ತುಂಬಿದೆ. ನನಗೆ ಒಬ್ಬರ ಮೇಲೆ ಕೋಪ ಇದ್ದರೆ, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಬೈದು ಪೋಸ್ಟ್‌ ಮಾಡಿಬಿಡುವುದು. ಅದರ ಪರಿಣಾಮ ನಾನು ಎದುರಿಸ್ತೀನಿ ಅನ್ನೋದರ ಬಗ್ಗೆ ಯೋಚನೆ ಮಾಡಲ್ಲ. ಒಟ್ಟಿನಲ್ಲಿ ಆ ವ್ಯಕ್ತಿಗೆ ನೋವುಂಟು ಮಾಡಿದರೆ ಸಾಕು ಎಂಬುದು ಈಗ ಹೆಚ್ಚಾಗಿದೆ” ಎಂದರು.

ಲೇಖಕ, ನಾಟಕಕಾರ, ಚಲನಚಿತ್ರ-ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಈ ಸಾಮಾಜಿಕ ಜಾಲತಾಣ ಎಂಬುದು ಪುರುಷ ಮತ್ತು ಮಹಿಳೆಯರು ಇಬ್ಬರಿಗೂ ಮಾರಕವೇ. ಅನೈತಿಕ, ಅನಾಗರಿಕ, ಅತೃಪ್ತ ವಿಷಯಗಳೆಲ್ಲವೂ ಮಹಿಳೆಯರ ಬಗ್ಗೆ ಪುರುಷರು ಪ್ರತಿಕ್ರಿಯೆ ನೀಡಲು ಪ್ರೇರೇಪಣೆ ನೀಡುತ್ತದೆ. ಮಹಿಳೆಯರ ಬಗ್ಗೆ ಅತಿ ಕೆಟ್ಟ ಭಾಷೆ ಬಳಸಿ ಅವರನ್ನು ತುಚ್ಛವಾಗಿ ಕಂಡು ಟ್ರೋಲ್ ಮಾಡುವುದು, ಕೆಟ್ಟ ಪದಬಳಕೆ ಮಾಡುವುದು ಇದು ಒಬ್ಬ ನಾಗರಿಕ, ಸುಸಂಸ್ಕ್ರತ ಮನುಷ್ಯ ಈ ರೀತಿ ಕೆಟ್ಟ ರೀತಿಯಲ್ಲಿ ಭಾಷೆ ಬಳಕೆ ಮಾಡೋದು ಸುಲಭವಾ? ಇದಕ್ಕೆ ಮುಖ್ಯ ಕಾರಣ ಪುರುಷರಿಗೆ ನೈತಿಕತೆಯ ಶಿಕ್ಷಣ ನೀಡದೇ ಇರುವುದು. ಸೌಹಾರ್ದವಾಗಿ ಬದುಕುವ ಬಗ್ಗೆ ತಿಳಿಸಿಲ್ಲದಿರುವುದು. ಇದಕ್ಕೆ ನೇರ ಕಾರಣ ಅವರ ಕುಟುಂಬ ಮತ್ತು ಅವರ ಪರಿಸರ” ಎಂದು ತಿಳಿಸಿದರು.

“ಮಹಿಳೆಯರನ್ನು ಲಜ್ಜೆಗೆಟ್ಟ ರೀತಿಯಲ್ಲಿ ಟ್ರೋಲ್ ಮಾಡುತ್ತಾರೆ. ಮಹಿಳೆಯರನ್ನ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದಾಕ್ಷಣ ಮಹಿಳೆಯರ ಸ್ಥಾನ ಕುಸಿಯುವುದಿಲ್ಲ. ಪುರುಷರ ನೈತಿಕ ಮಟ್ಟ ಕುಸಿಯುತ್ತೆ. ಇವರು ಬೆತ್ತಲಾಗುತಾ ಹೋಗುತ್ತಾರೆ. ಇವರ ಕುಟುಂಬ ಎಷ್ಟು ಕೀಳು ಮಟ್ಟದು ಎಂದು ತಿಳಿಯುತ್ತೆ. ಪ್ರತಿಯೊಬ್ಬರಿಗೂ ಅವರ ಖಾಸಗಿತನದ ಹಕ್ಕು ಇರುತ್ತದೆ. ಸಾಮಾನ್ಯವಾಗಿ ಮಹಿಳೆಯನ್ನು ಟ್ರೋಲ್ ಮಾಡಿ ಅವಮಾನಿಸುತ್ತಾರೆ. ಇದರಿಂದ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅವರ ಖಾಸಗಿ ಬದುಕನ್ನು ತಮಗೆ ತೋಚಿದಂತೆ ಬಹಿರಂಗವಾಗಿ ವಿಶ್ಲೇಷಣೆ ಮಾಡುತ್ತಾರೆ. ಇದರಿಂದ ಅವರ ಖಾಸಗಿತನದ ಹಕ್ಕನ್ನು ಉಲ್ಲಂಘನೆ ಮಾಡುತ್ತಾರೆ. ಮಹಿಳೆಯರ ಖಾಸಗಿತನದ ಬಗ್ಗೆ ಗಂಡಸರಿಗೆ ಬಹಳ ಕುತೂಹಲ ಇರುತ್ತದೆ. ಅವರ ಲೈಂಗಿಕ ಕಾಮನೆಯ ದೌರ್ಜನ್ಯದ ಮನಸ್ಥಿತಿಯನ್ನ ಪದಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ತೋಡಿಕೊಳ್ಳುತ್ತರುತ್ತಾರೆ” ಎಂದು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ; ಶಾಲೆಗಳಲ್ಲಿ ಲಿಂಗಸಮಾನತೆಯ ಪಾಠದ ಕೊರತೆ

2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು...

ಪರಿಶಿಷ್ಟ ಪಂಗಡಗಳ ಮಕ್ಕಳ ಶೈಕ್ಷಣಿಕ ಮಟ್ಟ ಏಕೆ ಸುಧಾರಿಸಿಲ್ಲ?: ಅಧಿಕಾರಿಗಳಿಗೆ ಸಿಎಂ ತರಾಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣದಲ್ಲಿ ಪರಿಶಿಷ್ಟ...

ಚಿತ್ರದುರ್ಗದ ಅದ್ಭುತ ಐತಿಹಾಸಿಕ ಸ್ಮಾರಕ ʼಚಂದ್ರವಳ್ಳಿಯ ಗುಹೆʼ

ಕರ್ನಾಟಕದ ಇತಿಹಾಸದಲ್ಲಿ ನಾವು ಅನೇಕ ರಾಜರನ್ನು, ರಾಜವಂಶಗಳನ್ನು ಹಾಗು ಅವರ ಸಾಧನೆಗಳನ್ನು...

ತೈಲ ಬೆಲೆ ಏರಿಕೆ | ಬಿಜೆಪಿ ಪ್ರತಿಭಟನೆ ಬರೀ‌ ನಾಟಕ: ಸಚಿವ ಎಂ‌ ಬಿ ಪಾಟೀಲ್ ವಾಗ್ದಾಳಿ

ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯನ್ನು ನಾವು ಕೇವಲ ಮೂರು ರೂಪಾಯಿ ಏರಿಸಿದ್ದೇವೆ...