ಕೆಲವು ತಿಂಗಳುಗಳಿಂದ ಗ್ರಾಮದ ಹೊರಗಡೆ ಆನ್‌ಲೈನ್ ಗೇಮ್ ಆಡಲು ಹೋದ 20ರ ಆಸುಪಾಸಿನ ಸುಮಾರು 14 ಮಂದಿ ಮಲೇರಿಯಾ ಕ್ಕೆ ತುತ್ತಾಗಿ ಮೃತಪಟ್ಟ ಘಟನೆ ಮೇಘಾಲಯದಲ್ಲಿ ನಡೆದಿದೆ.
ಸಂಜೆಯ ವೇಳೆ ಗ್ರಾಮದ ಆಚೆ ಉತ್ತಮ ಇಂಟರ್‌ನೆಟ್ ಸಂಪರ್ಕ ಸಿಗುವ ಪ್ರದೇಶಕ್ಕೆ ಈ ಯುವಕರು ತೆರಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಮಲೇರಿಯಾ ಉಂಟು ಮಾಡುವ ಸೊಳ್ಳೆಗಳು ಕಚ್ಚಿದ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಗಾರೋ ಕಣಿವೆ ಪ್ರದೇಶ, ದಕ್ಷಿಣ ಗಾರೋ ಕಣಿವೆಗಳು, ಪೂರ್ವ ಕಣಿವೆ ಕಣಿವೆಗಳು ಹಾಗೂ ಪಶ್ಚಿಮ ಕಾಶಿ ಕಣಿವೆಗಳಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಿದ್ದು, ಈ ಪ್ರದೇಶಗಳಲ್ಲಿ ಸೊಳ್ಳೆ ಕಡಿತದಿಂದ ಯುವಕರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಮಲೇರಿಯಾ ಲಕ್ಷಣಗಳು ಕಂಡುಬಂದಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಈ ಪ್ರದೇಶಗಳ ಜನತೆಗೆ ಎಚ್ಚರಿಕೆ ನೀಡಿತ್ತು. ಆದರೂ ಕಾಯಿಲೆ ಬಂದ ತಕ್ಷಣ ಅಸಡ್ಡೆ ತೋರಿದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರವೇ ಬರಲಿ, ನೆರೆಯೇ ಇರಲಿ, ಭರವಸೆಗಳಿಗೆ ಬರವಿಲ್ಲ
“ನಾನು ಮಲೇರಿಯಾ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಹಲವು ಯುವಕರು ಗ್ರಾಮದ ಹೊರ ಪ್ರದೇಶದಲ್ಲಿ ಆನ್‌ಲೈನ್ ಗೇಮ್ ಆಟವಾಡುತ್ತಿದ್ದರು. ಅವರೆಲ್ಲ ಉತ್ತಮ ಇಂಟರ್‌ನೆಟ್ ಸಂಪರ್ಕಕ್ಕಾಗಿ ಗ್ರಾಮದ ಆಚೆ ತೆರಳುತ್ತಿದ್ದರು” ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ರಾಜ್ಯ ಸರ್ಕಾರವು ದಶಕಗಳ ಹಿಂದೆಯೇ ಮಲೇರಿಯಾದಿಂದ ಉಂಟಾಗುವ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಚಿಕಿತ್ಸೆ ಪ್ರಕ್ರಿಯೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೆಲವು ಜಿಲ್ಲೆಗಳಲ್ಲಿ ಮಲೇರಿಯಾದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ” ಎಂದು ಆರೋಗ್ಯ ಸಚಿವರಾದ ಅಪ್ರೀನ್ ಲಿಂಗ್ಡೊ ತಿಳಿಸಿದ್ದಾರೆ.
“ಯುವಕರ ಜೊತೆ ಅವರ ಪೋಷಕರಿಗೂ ರೋಗದ ಗಂಭಿರತೆಯ ಬಗ್ಗೆ ಅರಿವಿರುವುದಿಲ್ಲ. ಜ್ವರದ ಲಕ್ಷಣಗಳಿಂದಲೇ ಬಹುತೇಕ ಪ್ರಕರಣಗಳಲ್ಲಿ ಮೃತಪಟ್ಟಿದ್ದಾರೆ. ಸಂಜೆಯ ವೇಳೆಯಲ್ಲಿ ಉತ್ತಮ ಇಂಟರ್‌ನೆಟ್ ಸಂಪರ್ಕ ದೊರಕುವ ಸ್ಥಳಗಳಿಗೆ ತೆರಳುವ 20ರ ವಯಸ್ಸಿನ ಯುವಕರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾರೆ. ಸೊಳ್ಳೆಗಳು ಹೆಚ್ಚಿರುವ ನೀರಿರುವ ಪ್ರದೇಶ, ಮರದ ಕಳಗಿನ ಪ್ರದೇಶಗಳಿಗೆ ತೆರಳಬಾರದೆಂದು ಇವರು ಅರಿತುಕೊಳ್ಳುವುದಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಸಾಮಾಜಿಕ ಮಾಧ್ಯಮಗಳ ಮೂಲಕವೂ ಅರಿವು ಮೂಡಿಸಲಾಗುತ್ತಿದೆ” ಎಂದು ಆರೋಗ್ಯ ಸಚಿವ ಅಪ್ರೀನ್ ಲಿಂಗ್ಡೊ ತಿಳಿಸಿದ್ದಾರೆ.
