ಮಳೆ ಬರುತ್ತಿರುವಾಗ ಚಾಲಕನೋರ್ವ ಕೊಡೆ ಹಿಡಿದುಕೊಂಡು ಬಸ್ ಚಾಲನೆ ಮಾಡಿದ ಕುರಿತಾಗಿ ಸ್ಪಷ್ಟೀಕರಣ ನೀಡಿರುವ ಸಾರಿಗೆ ಇಲಾಖೆ, ಮನರಂಜನೆಗಾಗಿ ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ್ದಾರೆ. ಚಾಲಕರ ಮೇಲಿನ ಛಾವಣಿಯಾಗಲೀ, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಲ್ಲಾಗಲೀ ಯಾವುದೇ ಸೋರಿಕೆ (Roof Leakage) ಇರಲಿಲ್ಲ ಎಂದು ತಿಳಿಸಿದೆ.
ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು,”ಮಳೆ ಬರುತ್ತಿರುವಾಗ ಚಾಲಕರ ಕೊಡೆ ಹಿಡಿದುಕೊಂಡು ಬಸ್ ಚಾಲನೆ ಮಾಡಿದ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮನರಂಜನೆಗಾಗಿ ಈ ರೀತಿ ಮಾಡಿದ್ದಾರೆ. ಬಸ್ಸಿನಲ್ಲಿ ಛತ್ರಿ ಹಿಡಿದು ರೀಲ್ಸ್ ಮಾಡಿದ ಚಾಲಕ ಮತ್ತು ನಿರ್ವಾಹಕಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ” ಎಂದು ತಿಳಿಸಿದೆ.
ಸ್ಪಷ್ಟನೆಯಲ್ಲಿ ಏನಿದೆ?
ಧಾರವಾಡ ಘಟಕದ ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್ನಲ್ಲಿ ಚಾಲಕರಾಗಿ ಹನುಮಂತಪ್ಪ ಎ ಕಿಲ್ಲೇದಾರ ಹಾಗೂ ನಿರ್ವಾಹಕರಾಗಿ ಅನಿತಾ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದಾಗ ಸಂಜೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದಾಗ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು ಹಿಡಿದುಕೊಂಡು ಬಸ್ ಚಾಲನೆ ಮಾಡಿದ್ದಾರೆ. ಚಾಲನೆ ಮಾಡುತ್ತಿರುವ ದೃಶ್ಯವನ್ನು ನಿರ್ವಾಹಕಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
— North Western Karnataka Road Transport Corporation (@nw_krtc) May 24, 2024
ಮಳೆ ಬರುತ್ತಿದ್ದಾಗ ಚಾಲಕರ ಮೇಲಿನ ಛಾವಣಿಯಾಗಲೀ, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಿಂದ ಸೋರುತ್ತಿರಲಿಲ್ಲ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲಾಗಿಲ್ಲ. ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿದ್ದು, ಮೇಲ್ಚಾವಣಿ ಸೋರುತ್ತಿಲ್ಲ ಎನ್ನುವುದನ್ನು ಖಚಿತಪಡಿಸಲಾಗಿದೆ.
“ಛತ್ರಿ ಭಾಗ್ಯ”ಕ್ಕೆ ಚಾಲನೆ ನೀಡಿದ “ಚಿಪ್ಪು” ಸರ್ಕಾರ. pic.twitter.com/Y7pVW43DoF
— BJP Karnataka (@BJP4Karnataka) May 24, 2024
ಈ ವಿಡಿಯೋದ ಬಗ್ಗೆ ಸಿಬ್ಬಂದಿಯಿಂದ ಸ್ಪಷ್ಟೀಕರಣ ಪಡೆಯಲಾಗಿದ್ದು ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ರಾಜಕೀಯಕ್ಕೆ ಬಳಸಿಕೊಂಡಿದ್ದ ಬಿಜೆಪಿ
ಈ ವಿಡಿಯೋವನ್ನು ಇಟ್ಟುಕೊಂಡು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್, ಅಶ್ವತ್ ನಾರಾಯಣ ಟ್ವೀಟ್ ಮಾಡಿ, ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು.
ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಎಂಬ ಹೆಗ್ಗಳಿಕೆ ಹೊಂದಿರುವ ನಮ್ಮ ಕೆಎಸ್ಆರ್ಟಿಸಿ ಬಸ್ಗಳಿಗೆ ಕಾಂಗ್ರೆಸ್ ಸರ್ಕಾರ ಎಂತಹ ಪರಿಸ್ಥಿತಿ ತಂದಿಟ್ಟಿದೆ ನೋಡಿ. ಬಸ್ ಚಾಲಕರು ಛತ್ರಿ ಹಿಡಿದು ವಾಹನ ಚಲಾಯಿಸುವ ದೃಶ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಮಾನ್ಯ ಸಾರಿಗೆ ಸಚಿವರಾದ @RLR_BTM ಅವರೇ, ಇಂತಹ… pic.twitter.com/kd8GIEVm2d
— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) May 24, 2024
“ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಎಂಬ ಹೆಗ್ಗಳಿಕೆ ಹೊಂದಿರುವ ನಮ್ಮ ಕೆಎಸ್ಆರ್ಟಿಸಿ ಬಸ್ಗಳಿಗೆ ಕಾಂಗ್ರೆಸ್ ಸರ್ಕಾರ ಎಂತಹ ಪರಿಸ್ಥಿತಿ ತಂದಿಟ್ಟಿದೆ ನೋಡಿ. ಬಸ್ ಚಾಲಕರು ಛತ್ರಿ ಹಿಡಿದು ವಾಹನ ಚಲಾಯಿಸುವ ದೃಶ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರೇ, ಇಂತಹ ಬಸ್ಗಳನ್ನು ರಸ್ತೆಗೆ ಬಿಡುವಷ್ಟು ದುಃಸ್ಥಿತಿ ತಲುಪಿದೆಯೇ ನಮ್ಮ ಸಾರಿಗೆ ಇಲಾಖೆ?” ಎಂದು ಪ್ರಶ್ನಿಸಿದ್ದರು.
