ಕಣ್ತೆರೆದು ನೋಡಿ, ‘ಅತ್ಯಾಚಾರಿ’ ಗಂಡು ನಮ್ಮ-ನಿಮ್ಮ‌ ಮನೆಯಲ್ಲೂ ಇರಬಹುದು

Date:

NCRB ವರದಿಯ ಪ್ರಕಾರ ಪ್ರತಿ ವರ್ಷ ಮೂರುವರೆ ಲಕ್ಷ ಅಪರಾಧಗಳು ಮಹಿಳೆಯರ ಮೇಲೆ ನಡೆಯುತ್ತವೆ. 32 ಸಾವಿರ ಅಪರಾಧಗಳು ಅತ್ಯಾಚಾರಕ್ಕೆ ಸಂಬಂಧಿಸಿವೆ. ಹೆಣ್ಣಿನ ಮೇಲೆ ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರಗಳು ನಡೆಯುತ್ತವೆ. ಈ 32 ಸಾವಿರ ಅತ್ಯಾಚಾರದ ಆರೋಪಿಗಳಲ್ಲಿ ಶೇ 96 ಜನ ಅತ್ಯಾಚಾರಕ್ಕೆ ಒಳಗಾದವರಿಗೆ ಪರಿಚಿತರಾಗಿರುತ್ತಾರೆ!

 

ಎಲ್ಲಿಯದೋ ಅತ್ಯಾಚಾರದ ಸುದ್ದಿ ಕೇಳಿದಾಗ ತಕ್ಷಣಕ್ಕೆ ನಮ್ಮ ಮನೆಯ ಮಗಳು ನೆನಪಾಗುತ್ತಾಳೆ. ನಮ್ಮನ್ನೂ ಒಳಗೊಂಡಂತೆ ಎಲ್ಲಾ ತಂದೆ ತಾಯಿಗಳು ಸಹಜವಾಗಿ ಅತ್ಯಾಚಾರದ ಕ್ರೌರ್ಯಕ್ಕೆ ಒಳಗಾಗ ಸಂತ್ರಸ್ತೆಯ ಜಾಗದಲ್ಲಿ ತನ್ನ ಮಗಳು ಅಥವಾ ತನ್ನ ಮನೆಯ ಹೆಣ್ಣುಗಳನ್ನು ಕಲ್ಪಿಸಿಕೊಂಡು ಭಯಪಡುತ್ತಾರೆ. ಈ ಆತಂಕದಲ್ಲಿಯೇ ಅವರ ರಕ್ಷಣೆಯ ಬಗ್ಗೆ ಯೋಚಿಸುತ್ತಾರೆ. ಮನೆಯ ಹೆಣ್ಣುಮಕ್ಕಳನ್ನು ಮತ್ತಷ್ಟು ಹುಷಾರಾಗಿರುವಂತೆ ಕಟ್ಟುಪಾಡುಗಳನ್ನು ಹಾಕುತ್ತಾರೆ. ಮನೆಯ ಗಂಡಾಳ್ವಿಕೆಯ ಕಾರಣ ಪರೋಕ್ಷವಾಗಿ ತಮ್ಮ ಮನೆಯ ಹೆಣ್ಣುಗಳ ಬಗೆಗೆ ಅದೇ ಮನೆಯ ಗಂಡು ಹದ್ದಿನ ಕಣ್ಣಿಟ್ಟು ಕಾಯುವ ಹೊಣೆ ಹೊರುತ್ತಾನೆ.

ಆದರೆ ಅತ್ಯಾಚಾರದಂತಹ ಕ್ರೌರ್ಯವನ್ನು ಎಸಗಿದ ಗಂಡಿನ ಜಾಗದಲ್ಲಿ ತಮ್ಮ ಮಗನನ್ನೋ, ಅಥವಾ ತನ್ನನ್ನೂ ಒಳಗೊಂಡಂತೆ ತಮ್ಮ ಮನೆಯ ಇತರೆ ಗಂಡಸರನ್ನೋ ಕಲ್ಪಿಸಿಕೊಂಡು ವಿಚಲಿತರಾಗುವುದಿಲ್ಲ. ಹಾಗೆ ವಿಚಲಿತರಾಗಿ ತನ್ನ ಮನೆಯ ಗಂಡಸರು ಅತ್ಯಾಚಾರದಂತಹ ಕ್ರೌರ್ಯ ಎಸಗಂತೆ ಎಚ್ಚರವಹಿಸುವ ವಾತಾವರಣ ಮನೆಗಳಲ್ಲಿ ನಿರ್ಮಾಣವಾಗುವುದಿಲ್ಲ.

ಹೆಣ್ಣನ್ನು ನೋಡುವ ದೃಷ್ಟಿಕೋನದ ಬಗೆಗೆ ತಮ್ಮ ಮನೆಯ ಗಂಡಸರಲ್ಲಿ ಬುದ್ಧಿವಾದವನ್ನೋ, ತಿಳಿವಳಿಕೆಯನ್ನೋ ಹೇಳುವುದಿಲ್ಲ. ಇಂತಹ ತಿಳಿವಳಿಕೆಯನ್ನು ಯಾರು ಹೇಳಬೇಕು? ಮನೆಯ ಹೆಣ್ಣು ತನ್ನ ಮನೆಯ ಗಂಡಸರನ್ನು ಅಪರಾಧಿಗಳಂತೆ ನೋಡಿ ಬುದ್ಧಿವಾದ ಹೇಳಿ ಬಚಾವಾಗಲು ಈ ದೇಶದಲ್ಲಿ ಸಾಧ್ಯವಿಲ್ಲ. ಅಂತೆಯೇ ಮನೆಯ ತಂದೆ ತನ್ನದೇ ಕುಲದ ಮಗನಿಗೆ ಹೆಣ್ಣಿನ ಬಗೆಗೆ ಸೂಕ್ಷ್ಮಗೊಳಿಸಬೇಕಾದ ತರಬೇತಿಯೂ ನಮ್ಮ ಕುಟುಂಬಗಳಿಗಿಲ್ಲ. ಮನೆಯ ಗಂಡಸರು ಏನು ಮಾಡುತ್ತಾರೆಂದು ಹದ್ದಿನ ಕಣ್ಣಿಟ್ಟು ಕಾಯುವ ಅವಶ್ಯಕತೆ ಇಲ್ಲವೆಂದು ಭಾವಿಸಲಾಗುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಎರಡೂ ಭಿನ್ನತೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಾವುಗಳು ನಮ್ಮ ಮನೆಗಳ ಹೆಣ್ಣುಗಳನ್ನು ಸಂತ್ರಸ್ತೆಯಂತೆ ಭಾವಿಸಿ, ಅದರಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳನ್ನು ಹುಡುಕುತ್ತೇವೆಯೋ ಹೊರತು, ನಮ್ಮ ಮನೆಗಳ ಗಂಡಸರನ್ನು ಅಪರಾಧಿಯ ಸ್ಥಾನದಲ್ಲಿ ಕಲ್ಪಿಸಿ ಅಂತಹ ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸುವುದಿಲ್ಲ. ಅಂದರೆ ಅಪರಾಧವನ್ನು ಮತ್ಯಾರೋ ಮಾಡುತ್ತಾರೆ, ಅಂತಹ ಅಪರಾಧಿಗಳು ಹೊರಗಿದ್ದಾರೆ. ಹಾಗಾಗಿ ಆ ಅಪರಾಧಕ್ಕೆ ಬಲಿಯಾಗುವವರಲ್ಲಿ ನಮ್ಮ ಹೆಣ್ಣುಮಕ್ಕಳು ಇರುತ್ತಾರೆಯೇ ವಿನಃ, ಅಪರಾಧ ಮಾಡುವವರಲ್ಲಿ ನಮ್ಮ ಮನೆಯ ಗಂಡಸರು ಇರುವುದಿಲ್ಲ ಎಂದು ನಂಬಲಾಗುತ್ತದೆ. ಹಾಗಾಗಿ ಇನ್ನಾರದೋ ಮನೆಯಲ್ಲಿ ಬೆಳೆದ ಗಂಡುಗಳಿಂದ ಈ ಮನೆಯ ಹೆಣ್ಣುಗಳ ಮೇಲೆಯೂ, ಇವರದೇ ಮನೆಯಲ್ಲಿ ಬೆಳೆದ ಗಂಡುಗಳಿಂದ ಇನ್ನಾರದೋ ಮನೆಯ ಹೆಣ್ಣುಗಳ ಮೇಲೆಯೂ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಬಹುಶಃ ಅತ್ಯಾಚಾರಗಳು ಹೆಚ್ಚುತ್ತಿರುವುದಕ್ಕಿರುವ ಕಾರಣಗಳಲ್ಲಿ ಈ ಸಂಗತಿ ಪ್ರಮುಖವಾಗಿದೆ. ಇಂತಹದ್ದೊಂದು ನಂಬಿಕೆ ಹುಟ್ಟಿರುವುದು ಕೂಡ ಗಂಡಾಳ್ವಿಕೆಯ ಕುಟುಂಬ ಅಥವಾ ಸಮಾಜದ ಪರಿಣಾಮ ಎನ್ನುವುದನ್ನು ಗಮನಿಸಬೇಕು.

ಇದೇನು ಕಲ್ಪಿಸಿದ ಘಟನೆಯಲ್ಲ ಇದಕ್ಕೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್.ಸಿ.ಆರ್.ಬಿ) ಪ್ರತಿ ವರ್ಷ ನೀಡುವ ವರದಿಗಳೂ ಸಾಕ್ಷ್ಯ ಒದಗಿಸುತ್ತವೆ. ಪ್ರತಿ ವರ್ಷ ಮೂರುವರೆ ಲಕ್ಷ ಅಪರಾಧಗಳು ಮಹಿಳೆಯರ ಮೇಲೆ ನಡೆಯುತ್ತವೆ. 32 ಸಾವಿರ ಅಪರಾಧಗಳು ಅತ್ಯಾಚಾರಕ್ಕೆ ಸಂಬಂಧಿಸಿವೆ. ಹೆಣ್ಣಿನ ಮೇಲೆ ಪ್ರತಿ ಗಂಟೆಗೆ ನಾಲ್ಕು ಅತ್ಯಾಚಾರಗಳು ನಡೆಯುತ್ತವೆ. ಈ 32 ಸಾವಿರ ಅತ್ಯಾಚಾರದ ಆರೋಪಿಗಳಲ್ಲಿ ಶೇ 96 ಜನ ಅತ್ಯಾಚಾರಕ್ಕೆ ಒಳಗಾದವರಿಗೆ ಪರಿಚಿತರಾಗಿರುತ್ತಾರೆ. ಮನೆಯವರು, ಪಕ್ಕದ ಮನೆಯವರು, ಸಂಬಂಧಿಕರು, ಪರಿಚಿತ ಸ್ನೇಹಿತರು, ಕೆಲಸ ಮಾಡುವ ಸ್ಥಳಗಳಲ್ಲಿ ಸಹಚರರು ಮತ್ತು ಮೇಲಾಧಿಕಾರಿಗಳು. ಹಾಗಾಗಿ ಅತ್ಯಾಚಾರ ಮಾಡುವ ಆರೋಪಿ ಬೇರೆಲ್ಲೋ ಇದ್ದಾರೆ ಅಂತಹವರು ನಮ್ಮ ಮನೆಯಲ್ಲಿಲ್ಲ, ಪರಿಚಿತರಲಿಲ್ಲ, ಸಂಬಂಧಿಕರಲ್ಲಿಲ್ಲ ಎಂದು ಭಾವಿಸುವಿಕೆಯಿಂದಲೇ ಈ 96 ಜನ ಅತ್ಯಾಚಾರಿಗಳು ಪರಿಚಯದವರೇ ಆಗಿರುವುದು ಎನ್ನುವುದನ್ನು ಗಮನಿಸಬೇಕು.

ಮೊಟ್ಟ ಮೊದಲನೆಯದಾಗಿ ಮನೆಯೊಳಗೆ ಲಿಂಗ ತಟಸ್ಥ ವಾತಾವರಣವನ್ನು ರೂಪಿಸಬೇಕಾಗುತ್ತದೆ. ನಾನೊಬ್ಬ ಚಿಕ್ಕಮಕ್ಕಳ ತಂದೆಯಾಗಿ ಮಕ್ಕಳ ಎದುರು ಹೆಂಡತಿಯನ್ನು ಎರಡನೇ ದರ್ಜೆಯವಳು ಎಂದು ನಡೆಸಿಕೊಳ್ಳುತ್ತಿದ್ದರೆ, ಹೆಂಡತಿಯೂ ನಾನು ಗಂಡನಿಗೆ ಅಧೀನ ಎಂದು ನಡೆದುಕೊಳ್ಳುತ್ತಿದ್ದರೆ, ಅದನ್ನು ನೋಡುತ್ತಾ ಬೆಳೆವ ಮಗಳಲ್ಲಿ`ಹೆಣ್ಣು’ ಎನ್ನುವ ಭಾವನೆಯೂ, ಮಗನಲ್ಲಿ`ಗಂಡು’ ಎಂಬ ಭಾವನೆ ರೂಪುಗೊಳ್ಳಲು ಪರೋಕ್ಷ ಪ್ರೇರಣೆಯಾಗುತ್ತದೆ.

ಮಕ್ಕಳಿಗೆ ಇಡುವ ಹೆಸರಿನಿಂದ ಹಿಡಿದು ಆಟದ ಸಾಮಾನು, ಡ್ರೆಸ್ ಕೋಡ್‍ಗಳಲ್ಲಿ ಲಿಂಗ ತಟಸ್ಥತೆ ತರಲು ಸಾಧ್ಯವೇ? ಪ್ರಯತ್ನಿಸಬೇಕು. ಗಂಡಿನ ಸಂಕೇತದ ಹೆಸರನ್ನು ಗಂಡುಮಗುವಿಗೂ, ಹೆಣ್ಣಿನ ಸಂಕೇತದ ಹೆಸರನ್ನು ಹೆಣ್ಣುಮಗುವಿಗೂ ಇಟ್ಟಾಗಲೆ ನಾವು ಸಮಾಜದ ಹೆಣ್ಣುಗಂಡುಗಳ ಬೇಧಕ್ಕೆ ಮಕ್ಕಳನ್ನು ಒಗ್ಗಿಸಲು ಪ್ರಯತ್ನಿಸುತ್ತಿರುತ್ತೇವೆ. ಹಾಗಾಗಿ ಮೊಟ್ಟ ಮೊದಲಿಗೆ ನಮ್ಮ ನಮ್ಮ ಮನೆಗಳಲ್ಲಿ ನಮ್ಮಿಂದಲೇ ಲಿಂಗತಟಸ್ಥ ವಾತಾವರಣವನ್ನು ರೂಪಿಸುತ್ತಾ ಹೋಗಬೇಕು.

ಮನೆಗಳಲ್ಲಿ ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಉದಾಹರಣೆಗೆ ಮನೆಗಳಲ್ಲಿ ತೋರುವಂತೆ ಹಾಕುವ ದೇವರ, ಸಾಧು ಸಂತರ, ರಾಷ್ಟ್ರೀಯ ನಾಯಕರುಗಳ ಚಿತ್ರಗಳಲ್ಲಿ ಗಂಡ ಹೆಂಡತಿ ಇರುವ ಪಟಗಳನ್ನು ಹಾಕೋಣ. ಕೃಷ್ಣ ರಾಧೆಯನ್ನೋ, ಶಿವ ಪಾರ್ವತಿಯನ್ನೋ, ಬುದ್ಧನ ಜತೆ ಯಶೋಧರೆ, ಗಾಂಧಿ ಜೊತೆ ಕಸ್ತೂರಬಾ, ಜ್ಯೋತಿಬಾ ಫುಲೆಯ ಜತೆ ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್ ಜತೆ ರಮಾಬಾಯಿ ಮತ್ತು ಸವಿತಾ, ಬಸವಣ್ಣನ ಜತೆ ಗಂಗಾಬಿಕೆ ನೀಲಾಂಬಿಕೆ, ಈಗಿನ ಪ್ರಧಾನಿ ಮೋದಿಯ ಜತೆ ಜಶೋದಾ ಬೆನ್‌ ಫೋಟೋವನ್ನೂ ಹಾಕೋಣ. ಮನೆಯಲ್ಲಿ ಹೀಗೆ ಜೋಡಿ ಫೋಟೋಗಳನ್ನು ನೋಡಿದ ಮಗುವಿಗೆ ಹೊರಜಗತ್ತಿನಲ್ಲಿ ಈ ಎಲ್ಲರ ಒಂಟಿ ಫೋಟೋಗಳು ಪ್ರಶ್ನೆಗಳನ್ನು ಹುಟ್ಟಿಸುತ್ತವೆ.

ಹೀಗೆ ಮನೆಯೊಳಗಣ ಲಿಂಗಸ್ಥಗಿತತೆ ಮತ್ತು ಸಮಾನತೆಯ ವಾತಾವರಣವನ್ನು ರೂಪಿಸಿದಾಗ ಇಂತಹ ಮನೆಗಳಲ್ಲಿ ಬೆಳೆವ ಮಕ್ಕಳಿಗೆ ಹೊರಜಗತ್ತು ವಿರುದ್ಧವಾಗಿ ಕಾಣುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಲಿಂಗ ಸ್ಥಗಿತ ಟಾಯ್ಲೆಟ್ ಇರುತ್ತದೆ. ಇದು ಮಗುವಿಗೆ ಅಭ್ಯಾಸವಾಗಿರುತ್ತದೆ. ಆದರೆ ಅದೇ ಮಗು ಶಾಲೆಗೆ ಹೋದಾಗ ಗಂಡು ಹೆಣ್ಣಿಗೆ ಪ್ರತ್ಯೇಕ ಶೌಚಾಲಯಗಳಿರುತ್ತವೆ. ಲಿಂಗಸ್ಥಗಿತವಾದ ಉಡುಪು ಮನೆಯಲ್ಲಿ ಅಭ್ಯಾಸ ಮಾಡಿಸಿದಾಗಲೂ ಅದೇ ಮಗು ಹೊರಜಗತ್ತಿನಲ್ಲಿನ ಲಿಂಗಭಿನ್ನತೆಯ ಉಡುಪು ಕಾಣುತ್ತದೆ.

ಲಿಂಗಬೇಧವಿಲ್ಲದ ಹೆಸರನ್ನು ಇಟ್ಟಾಗಲೂ ಗಂಡುಹುಡುಗನಿಗೆ ಆತನ ಸ್ನೇಹಿತರು ಇದೇನೋ ನಿಮ್ಮ ಅಪ್ಪ ಅಮ್ಮ ಹೆಣ್ಣುಡುಗಿಯಂಥ ಹೆಸರು ಇಟ್ಟಿದಾರೆ ಎಂತಲೂ, ಹುಡುಗಿಗೆ ಅವಳ ಸ್ನೇಹಿತೆಯರು ಇದೇನು ಗಂಡಿನಂತಹ ಹೆಸರು ಇಟ್ಟಿದ್ದಾರೆ ಎಂದು ಕಿಚಾಯಿಸಲು ಶುರು ಮಾಡುತ್ತಾರೆ. ಇದೆಲ್ಲದರಿಂದ ಹೊರಜಗತ್ತಿನ ಜತೆ ಮಗು ತನ್ನ ಮನೆಯ ನಡಾವಳಿಗಳನ್ನು ಹೋಲಿಸಲು ಶುರುಮಾಡುತ್ತದೆ. ಆಗ ಮಕ್ಕಳಲ್ಲಿ ಸಹಜವಾದ ಪ್ರಶ್ನೆಗಳು ಹುಟ್ಟುತ್ತವೆ. ಇಂತಹ ಸಂದರ್ಭದಲ್ಲಿ ತಂದೆ ತಾಯಿಗಳು ಅತ್ಯಂತ ಸೂಕ್ಷ್ಮವಾದ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗಳಿಗೆ ತಂದೆ ತಾಯಿಗಳು ಸಮರ್ಪಕವಾದ ಮತ್ತು ತಾರ್ಕಿಕವಾದ ಉತ್ತರಗಳನ್ನು ಮಗುವಿನ ಮನಸ್ಸಿನ ಮಟ್ಟಕ್ಕಿಳಿದು ಅರ್ಥೈಸಲು ಪ್ರಯತ್ನಿಸಬೇಕು. ಮಗುವಿಗೆ ತನ್ನ ಮನೆಯ ನಡಾವಳಿಗಳೆ ಸರಿಯಾಗಿವೆ ಹೊರ ಜಗತ್ತಿನ ನಡಾವಳಿಗಳೆ ಸರಿಯಾಗಿಲ್ಲ ಅದನ್ನು ನಾವು ಸರಿಪಡಿಸಬೇಕು ಎನ್ನುವ ಭಾವನೆ ಮೂಡುತ್ತಾ ಹೋಗಬೇಕು.

ಹೀಗೆ ಮಕ್ಕಳ ಮನಸ್ಸಲ್ಲಿ ಗಂಡು ಹೆಣ್ಣು ಎನ್ನುವುದರ ಬದಲು ನಾವೆಲ್ಲ ಮನುಷ್ಯರು ಎನ್ನುವ ಭಾವನೆ ರೂಪುಗೊಳ್ಳುವಂತೆ ಲಿಂಗತಟಸ್ಥ ಅಥವಾ ಲಿಂಗ ಸಮಾನತೆಯ ಅರಿವನ್ನು ಹಂತಹಂತವಾಗಿ ಬೆಳೆಸುತ್ತಾ ಹೋಗಬೇಕು. ಮಕ್ಕಳು ಕಾರ್ಟೂನನ್ನೋ, ಗೇಮನ್ನೋ, ಫನ್ನಿ ವಿಡಿಯೊಗಳನ್ನು ನೋಡುವಾಗ ಟೈಂ ಪಾಸ್ ಆದರೆ ಸಾಕು ಎಂದು ಮಕ್ಕಳ ಪಾಡಿಗೆ ಬಿಟ್ಟು ನಮ್ಮ ಪಾಡಿಗೆ ನಾವು ಇರುತ್ತೇವೆ. ಕನಿಷ್ಠ ಮಕ್ಕಳ ಜತೆ ಅದೇ ಕಾರ್ಟೂನ್, ಗೇಮ್, ಫನ್ನಿ ವಿಡಿಯೊಗಳನ್ನು ನೋಡುತ್ತಲೆ ಅದರಲ್ಲಿ ಲಿಂಗಬೇಧದ ನೆಲೆಗಳನ್ನು ಸೂಕ್ಷ್ಮವಾಗಿ ವಿವರಿಸಬೇಕು. ಅಥವಾ ನಾವೇ ಪರಿಶೀಲಿಸಿ ವಿಡಿಯೊ ಗೇಮ್, ಕಾರ್ಟೂನ್ಸ್, ಡ್ರಸ್ ಕೋಡ್ ಇತ್ಯಾದಿಗಳಲ್ಲಿ ಜೆಂಡರ್ ನ್ಯೂಟ್ರಲ್ ಆದವುಗಳನ್ನು ಆಯ್ದು ಕೊಡಬೇಕು.

ಹೀಗೆ ಪ್ರತಿ ಮನೆಗಳಲ್ಲಿನ `ಲಿಂಗ ಸ್ಥಗಿತ’ ವಾತಾವರಣ ಸೃಷ್ಠಿಯಾದರೆ, ಸಮಾಜದಲ್ಲಿ ಇಂತಹದ್ದೇ `ಲಿಂಗ ಸ್ಥಗಿತ’ ವಾತಾವರಣವನ್ನು ರೂಪಿಸಲು ಹಕ್ಕೊತ್ತಾಯಗಳು ತಾನೇ ತಾನಾಗಿ ಆರಂಭವಾಗುತ್ತವೆ. ನಮ್ಮ ಮಾರುಕಟ್ಟೆಯ ಆಯ್ಕೆಯಲ್ಲಿ `ಜೆಂಡರ್ ನ್ಯೂಟ್ರಲ್’ ಆಯ್ಕೆಗೆ ಬೇಡಿಕೆ ಹೆಚ್ಚಾದಂತೆ `ಜೆಂಡರ್ ನ್ಯೂಟ್ರಲ್’ ಉತ್ಪಾದನೆಗಳೂ, ಮಾರುಕಟ್ಟೆಯೂ ರೂಪುಗೊಳ್ಳುತ್ತಾ ಹೋಗುತ್ತದೆ.

ಪ್ರತ್ಯೇಕ ಹುಡುಗ ಹುಡುಗಿಯರ ಕಲಿಕಾ ವ್ಯವಸ್ಥೆಯನ್ನು ರದ್ಧುಪಡಿಸುವ ಬಗೆಗೆ ಹಕ್ಕೊತ್ತಾಯಗಳನ್ನು ಮಂಡಿಸುತ್ತಲೇ, ಶಾಲೆಗಳ ಪೇರೆಂಟ್ಸ್ ಮೀಟಿಂಗ್ ಗಳಲ್ಲಿ ಶಾಲಾ ಪಠ್ಯದಲ್ಲಿರುವ ಲಿಂಗ ತಾರತಮ್ಯದ ಪಠ್ಯಕ್ರಮವನ್ನು ಬೋಧಿಸದಂತೆ ತಕರಾರು ತೆಗೆಯಬೇಕು. ಅಂತೆಯೇ ಆರೋಗ್ಯಕರವಾಗ ಲೈಂಗಿಕ ಶಿಕ್ಷಣಕ್ಕೆ ಪೋಷಕರು ಒತ್ತಾಯಿಸಬೇಕು. ಹೀಗೆ ಹೆಣ್ಣೆದರೆ ಭೋಗಿಸುವ ವಸ್ತು ಎಂದು ತೋರಿಸುವ ಎಲ್ಲಾ ಬಗೆಯ ಅಭಿವ್ಯಕ್ತಿಗಳನ್ನು ಇಡೀ ವಾತಾವರಣವೇ ವಿರೋಧಿಸುವಂತಾಗಬೇಕು. ಆಗ ಮಾತ್ರ ನಿಧಾನಕ್ಕೆ ಸಮಾಜದಲ್ಲಿ ಲಿಂಗಸ್ಥಗಿತ ವಾತಾವರಣ ರೂಪುಗೊಳ್ಳುತ್ತದೆ. ಇದು ಪರೋಕ್ಷವಾಗಿ ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯಗಳಂತಹ ಘಟನೆಗಳನ್ನು ಕಡಿಮೆಗೊಳಿಸುತ್ತಾ ಹೋಗುತ್ತದೆ.

ಜೆಂಡರ್ ನ್ಯೂಟ್ರಲ್ ಸಂಶೋಧನೆಗಳಿಗೆ ಉತ್ತೇಜನ ನೀಡಬೇಕಿದೆ. ಇಂತಹ ಸಂಶೋಧನೆಗಳಿಗಾಗಿ ಫೆಲೋಶಿಪ್ ಗಳನ್ನು ಪ್ರಶಸ್ತಿಗಳನ್ನು ಹೆಚ್ಚು ಮಾಡಬೇಕಿದೆ. ಇಂತಹ ಉತ್ತೇಜನಗಳಿಂದ ʼಲಿಂಗಸ್ಥಗಿತತೆ’ ಗೆ ಸಾಮಾಜಿಕ ಮಾನ್ಯತೆ ದೊರೆಯುತ್ತಾ ಹೋಗಬೇಕು. ಇದರಿಂದಾಗಿ ಲಿಂಗ ತಟಸ್ಥ ಸಂಶೋಧನೆಗಳು ಹೆಚ್ಚಾದರೆ ಅದು ಹೊಸ ತಲೆಮಾರಿನ ಯುವ  ಸಂಶೋಧಕರನ್ನು ಪ್ರೇರೇಪಿಸುತ್ತದೆ.

ಅರುಣ್‌ ಜೋಳದ ಕೂಡ್ಲಿಗಿ
+ posts

ಲೇಖಕ, ಜಾನಪದ ಸಂಶೋಧಕರು

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

2 COMMENTS

  1. ಒಳ್ಳೆಯ ಚಿಂತನೆ. ಈ ಬಗೆಯ ಆಲೋಚನೆಗಳು ನಮ್ಮ ಪಠ್ಯ ಪುಸ್ತಕಗಳ ಭಾಗವಾಗಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೋಹತ್ಯೆ ನಿಷೇಧ ಕಾಯ್ದೆ ಎಂಬ ‘ಅನರ್ಥ’ಕಾರಿ ಪ್ರಹಸನ

ಗೋವನ್ನು ಹೈನುಗಾರಿಕೋತ್ಪನ್ನಗಳ ಮೂಲ ಧಾತು ಎಂಬುದನ್ನು ಪರಿಗಣಿಸಿ, ಹೈನುಗಾರಿಕೋತ್ಪನ್ನಗಳ ಸಾಲಿಗೆ ಗೋಮಾಂಸವನ್ನೂ...

ವಿಶ್ಲೇಷಣೆ | ಹಿಂದುತ್ವ ರಾಜಕಾರಣಕ್ಕೆ ಶ್ರೀರಾಮನ ಆಶೀರ್ವಾದವಿಲ್ಲ!

ಅಯೋಧ್ಯೆಯಲ್ಲಿ ಭವ್ಯ ಮಂದಿರವ ಕಟ್ಟಿ ಜಗವೆಲ್ಲಾ ಕೊಂಡಾಡಿದರೂ ಶ್ರೀರಾಮ ಒಲಿಯಲಿಲ್ಲವೇಕೆ? ನಾನೂರಕ್ಕೂ...

ವಿಶ್ಲೇಷಣೆ | ಸಂವಿಧಾನದ ಮುಂದೆ ಧರ್ಮ ರಾಜಕಾರಣಕ್ಕೆ ತಾತ್ಕಾಲಿಕ ಸೋಲಾಗಿದೆ

ಸಂವಿಧಾನದ ಆಶಯಗಳ ನೆಲೆಯಲ್ಲಿ, ಎಲ್ಲರಿಗೂ ಶಿಕ್ಷಣ, ಆರೋಗ್ಯ ,ಉದ್ಯೋಗ ಮತ್ತು ಭಾರತವನ್ನು...

ಅಮೇಥಿಯಲ್ಲಿ ಮುರಿದ ಸ್ಮೃತಿ ಇರಾನಿಯ ಅಹಂಕಾರ; ಎರಡೂ ಕಡೆ ಗೆದ್ದ ರಾಹುಲ್‌

ಅಮೇಥಿಯಲ್ಲಿ ರಾಹುಲ್‌ ಸ್ಪರ್ಧಿಸುತ್ತಿಲ್ಲ ಎಂದು ಗೊತ್ತಾದಾಗ ಚುನಾವಣೆಗೆ ಮುಂದೆಯೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಿದೆ....