ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಬಿಜೆಪಿ ಟ್ಯಾಗ್ ಇರುವ ಇವಿಎಂಗಳನ್ನು ಬಳಸಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.
ಬಿಜೆಪಿಯ ಹೆಸರಿರುವ ಪೇಪರ್ ಟ್ಯಾಗ್‌ಗಳಿರುವ ಇವಿಎಂಗಳ ಎರಡು ಚಿತ್ರಗಳನ್ನು ಟಿಎಂಸಿ, “ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಮೂಲಕ ಮತಗಳನ್ನು ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪದೇ ಪದೇ ಹೇಳುತ್ತಿದ್ದಾರೆ. ಇದೀಗ, ಬಂಕುರಾದ ರಘುನಾಥಪುರದಲ್ಲಿ 5 ಇವಿಎಂಗಳಲ್ಲಿ ಬಿಜೆಪಿ ಟ್ಯಾಗ್‌ಗಳು ಕಂಡುಬಂದಿವೆ. ಚುನಾವಣಾ ಆಯೋಗ ತಕ್ಷಣವೇ ಇದನ್ನು ಪರಿಶೀಲಿಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದೆ.
ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, “ಆಡಳಿತಾತ್ಮಕ ಪರಿಶೀಲನೆ ನಡೆಸುವಾಗ ಮತಗಟ್ಟೆ ವಿಳಾಸದ ಟ್ಯಾಗ್‌ಗಳಿಗೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟ್‌ಗಳು ಸಹಿ ಮಾಡಿದ್ದಾರೆ. ಚುನಾವಣಾ ಕಾರ್ಯಾರಂಭದ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರತಿನಿಧಿ ಮಾತ್ರ ಕಚೇರಿಯಲ್ಲಿ ಇದ್ದುದ್ದರಿಂದ EVM ಮತ್ತು VVPATಗಳಿಗೆ ಅವರ ಸಹಿಯನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದೆ.
(2/1) While commissioning, common address tags were signed by the Candidates and their agents present. And since only BJP Candidate’s representative was present during that time in the commissioning hall, his signature was taken during commissioning of that EVM and VVPAT. pic.twitter.com/54p78J2jUe
— CEO West Bengal (@CEOWestBengal) May 25, 2024
“ಆದಾಗ್ಯೂ, ಮತಗಟ್ಟೆ ಸಂಖ್ಯೆ 56, 58, 60, 61,62ರಲ್ಲಿ ಸ್ಥಳದಲ್ಲಿದ್ದ ಎಲ್ಲ ಏಜೆಂಟ್‌ಗಳ ಸಹಿಯನ್ನು ಮತದಾನದ ಸಮಯದಲ್ಲಿ ಪಡೆಯಲಾಗಿದೆ. ಕಾರ್ಯಾರಂಭದ ಸಮಯದಲ್ಲಿ ಚುನಾವಣಾ ಆಯೋಗದ ಎಲ್ಲ ಮಾನದಂಡಗಳನ್ನು ಸರಿಯಾಗಿ ಅನುಸರಿಸಲಾಗಿದೆ. ಸಂಪೂರ್ಣವಾಗಿ ಸಿಸಿಟಿವಿ ಕವರೇಜ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಮತ್ತು ಅದನ್ನು ವೀಡಿಯೊಗ್ರಾಫ್ ಮಾಡಲಾಗಿದೆ” ಎಂದು ಆಯೋಗ ವಿವರಿಸಿದೆ.
ಪಶ್ಚಿಮ ಬಂಗಾಳದ 8 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಆರನೇ ಹಂತದಲ್ಲಿ ಮತದಾನ ನಡೆದಿದೆ.