ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?

Date:

Advertisements
ಸೌಜನ್ಯ ಕೇಸಿನ ಆರೋಪಿಗಳಿಂದ ಆಶೀರ್ವಾದ ಪಡೆದ ಸರ್ಕಾರದ ಮುಖ್ಯಸ್ಥರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ವಿಷಯದಲ್ಲಿ ದೃಢ ನಿಲುವು ತಾಳದೆ, ರಾಜಕೀಯ ಲಾಭಕ್ಕಷ್ಟೇ ಜೋತುಬಿದ್ದಿರುವುದು ಇಲ್ಲಿಯವರೆಗಿನ ಅವರ ನಡೆಗಳಿಂದ ಸಾಬೀತಾಗಿದೆ. ಸರ್ಕಾರದ ಮುಖ್ಯಸ್ಥರು, ಸೌಜನ್ಯಳನ್ನು ಮತ್ತು ಹಾಸನದ ಸಂತ್ರಸ್ತೆಯರನ್ನು ಸರಿಸಿ, ಬಲಾಢ್ಯರ ಪರ ನಿಂತು, ಪ್ರಜಾಪ್ರಭುತ್ವವನ್ನು ಅಣಕಿಸುತ್ತಿಲ್ಲವೇ?

ಕಳೆದ ಶನಿವಾರ ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ, ಸಾಂಪ್ರದಾಯಿಕ ಉಡುಗೆ ಧರಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಸನ್ನಿಧಿಯಲ್ಲಿ ತೀರ್ಥ ಪ್ರಸಾದ ಸ್ವೀಕರಿಸಿದರು ಎಂದು ಸುದ್ದಿಯಾಗಿದೆ.

ಅದೇ ಶನಿವಾರ ಬೆಂಗಳೂರಿನಲ್ಲಿ ಪ್ರಗತಿಪರ ಚಿಂತಕರ ವೇದಿಕೆ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಾಡಿನ ಗಣ್ಯರು, ‘ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಒಂದು ಹೇಳಿಕೆಯನ್ನೂ ನೀಡದ, ಹಾಸನಕ್ಕೂ ಭೇಟಿ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನ ಇದೆ. ನೊಂದವರಿಗೆ ನ್ಯಾಯ ಕಲ್ಪಿಸುತ್ತಾರೆ ಎನ್ನುವ ಭರವಸೆ ಇತ್ತು. ಅದು ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಕೂಡ ಸುದ್ದಿಯಾಗಿದೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರದ ನಡೆ ಅನುಮಾನಕ್ಕೆ, ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ. ಸರ್ಕಾರ ಸಂತ್ರಸ್ತೆಯರ ಪರವಾಗಿಲ್ಲ, ಆರೋಪಿಗಳ ವಿರುದ್ಧ ದೃಢ ನಿಲುವು ತಾಳುತ್ತಿಲ್ಲ ಎಂಬ ಬಗ್ಗೆ ಬೇಸರವಿದೆ. ಹಾಗೆಯೇ, ಆರೋಪಿ ಸ್ಥಾನದಲ್ಲಿರುವವರ ಪರ ಮೃದು ಧೋರಣೆ ತಾಳುತ್ತಿದೆ ಎಂಬ ಆರೋಪ ಕೇಳಿಬರತೊಡಗಿದೆ.

Advertisements

ಧರ್ಮಸ್ಥಳದ ಸೌಜನ್ಯ ಕೇಸ್‌ನಲ್ಲಿ ಕೋರ್ಟ್ ತೀರ್ಪು ಬಂದ ನಂತರ, ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ ಎಂಬುದು ಎಲ್ಲರ ಗಮನಕ್ಕೂ ಬಂದಿತ್ತು. ನ್ಯಾಯಕ್ಕಾಗಿ ಇಡೀ ರಾಜ್ಯವೇ ಒಂದಾಗಿ ಹೋರಾಡಿತ್ತು. ಧರ್ಮಸ್ಥಳದ ‘ಧರ್ಮಾಧಿಕಾರಿ’ಗಳ ವಿರುದ್ಧ ಸೆಟೆದು ನಿಂತಿತ್ತು. ನಾಡಿನ ಜನ ನ್ಯಾಯಕ್ಕಾಗಿ, ರಕ್ಷಣೆಗಾಗಿ ಧರ್ಮಸ್ಥಳದ ಮಂಜುನಾಥನ ಮೊರೆ ಹೋದರೆ, ತಮಗೆ ಎದುರಾದ ಸಂಕಷ್ಟ ನಿವಾರಣೆಗಾಗಿ ‘ಧರ್ಮಾಧಿಕಾರಿ’ಗಳು ನ್ಯಾಯಾಂಗದ ಮೊರೆ ಹೋಗಿದ್ದೂ ಆಗಿತ್ತು. ಇದರ ನಡುವೆ, ರಾಜ್ಯದ ಜನತೆ ಮುಖ್ಯಮಂತ್ರಿಗಳನ್ನು ಖುದ್ದಾಗಿ ಕಂಡು ಸೌಜನ್ಯಳಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದೂ ನಡೆದಿತ್ತು. ರಾಜ್ಯ ಸರ್ಕಾರ ಸಂತ್ರಸ್ತೆಯರ ಪರ ನಿಂತು ತನಿಖೆ ಕೈಗೆತ್ತಿಕೊಳ್ಳಬಹುದಿತ್ತು. ಲಕ್ಷಾಂತರ ಜನರು ಯಾರನ್ನು ಆರೋಪಿ ಎಂದು ಅನುಮಾನಿಸಿದರೋ ಅವರನ್ನು ತನಿಖೆಗೊಳಪಡಿಸಬಹುದಿತ್ತು. ಆ ಮೂಲಕ ಸಮಾಜಕ್ಕೆ ಸಂದೇಶ ರವಾನಿಸಬಹುದಿತ್ತು.

ಆದರೆ ಸರ್ಕಾರ ಆ ಕೆಲಸವನ್ನು ಮಾಡಲಿಲ್ಲ. ಸಾವಿರಾರು ಜನರು ಬೀದಿಗಿಳಿದು ಹೋರಾಟ ಮಾಡಿದರೂ, ಆ ಹೋರಾಟಕ್ಕೂ ಬೆಲೆ ಕೊಡಲಿಲ್ಲ. ಸಾಯುವವರೆಗೂ ಧರ್ಮಸ್ಥಳದ ‘ಧರ್ಮಾಧಿಕಾರಿ’ಯನ್ನು, ಅವರ ಅಕ್ರಮಗಳನ್ನು ವಿರೋಧಿಸುತ್ತಲೇ ಹೋರಾಟ ಮಾಡಿಕೊಂಡು ಬಂದ ವಸಂತ ಬಂಗೇರರ ನುಡಿ ನಮನದ ದಿನವೇ ಸರ್ಕಾರದ ಮುಖ್ಯಸ್ಥರು ಧರ್ಮಸ್ಥಳದಲ್ಲಿ ನಿಂತಿದ್ದಾರೆ. ‘ಧರ್ಮಾಧಿಕಾರಿ’ಯ ಆಶೀರ್ವಾದ ಪಡೆದಿದ್ದಾರೆ.

ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈಗಾಗಲೇ ಹಾಸನಕ್ಕೆ ಭೇಟಿ ನೀಡಿ, ಪ್ರಜ್ವಲ್ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಸಂತ್ರಸ್ತೆಯರನ್ನು ಕಂಡು ಸಾಂತ್ವನ ಹೇಳಬೇಕಿತ್ತು. ಸರ್ಕಾರ ನಿಮ್ಮ ಪರವಾಗಿದೆ, ಎಸ್ಐಟಿ ರಚನೆಯಾಗಿದೆ, ಅದರ ಮುಂದೆ ಬಂದು ನಿಮ್ಮ ದುಃಖ ದುಮ್ಮಾನಗಳನ್ನು ನಿವೇದಿಸಿಕೊಳ್ಳಿ, ನಿಮ್ಮ ರಕ್ಷಣೆ ನಮ್ಮ ಕರ್ತವ್ಯ ಎಂದು ಅವರಿಗೆ ಧೈರ್ಯ ತುಂಬಬೇಕಿತ್ತು. ಆದರೆ, ಘಟನೆ ಬೆಳಕಿಗೆ ಬಂದು ತಿಂಗಳಾಗುತ್ತಾ ಬಂದರೂ, ಸರ್ಕಾರದ ಮುಖ್ಯಸ್ಥರು ಹಾಸನದತ್ತ ತಲೆ ಹಾಕಿಲ್ಲ.

ಬದಲಿಗೆ, ಪ್ರಜ್ವಲ್ ರೇವಣ್ಣ ಕುಟುಂಬ ತಮ್ಮಿಂದ ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಗೌಡರ ಕುಟುಂಬದ ಕಡೆಯಿಂದ ಕುಮಾರಸ್ವಾಮಿಯವರ ಕೀಳುಮಟ್ಟದ ರಾಜಕೀಯ ಹೇಳಿಕೆಗಳು ಬಾಣದಂತೆ ತೂರಿ ಬರುತ್ತಿವೆ. ಅದಕ್ಕೆ ಪ್ರತಿಯಾಗಿ ಸರ್ಕಾರದ ಕಡೆಯಿಂದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡ ತಿರುಗೇಟು ನೀಡುತ್ತಿದ್ದಾರೆ. ಇಬ್ಬರಿಗೂ ನ್ಯಾಯ ಬೇಕಾಗಿಲ್ಲ, ರಾಜಕೀಯ ಮುಖ್ಯವಾಗಿದೆ. ಅಂದರೆ, ಈ ಲೈಂಗಿಕ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಬದಲು, ಹೇಳಿಕೆ ಮತ್ತು ಪ್ರತಿಹೇಳಿಕೆಗಳಿಗಷ್ಟೇ ಸೀಮಿತವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾಣೆಯಾದ ಮಹಿಳೆಯರು ಮತ್ತು ಸಾಮಾಜಿಕ ವಿಡಂಬನೆ

ಏತನ್ಮಧ್ಯೆ, ದೇಶ ತೊರೆದು ಹಾರಿಹೋಗಿರುವ ಆರೋಪಿಯನ್ನು ಕರೆತರುವುದಾಗಲಿ, ಆ ಬಗೆಗಿನ ತನಿಖೆಯನ್ನು ಚುರುಕುಗೊಳಿಸುವುದಾಗಲಿ ಮಾಡುತ್ತಿಲ್ಲ. ಇಲ್ಲೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಪ-ಪ್ರತ್ಯಾರೋಪಗಳಿಂದ ಕಾಲಹರಣವಾಗುತ್ತಿದೆ. ಆರೋಪಿಯನ್ನು ಕರೆತರುವಲ್ಲಿ ಕೇಂದ್ರ ಮತ್ತು ರಾಜ್ಯದ ಪಾತ್ರವೇನು, ಕಾನೂನು ಕ್ರಮಗಳೇನು ಎಂಬುದು ಜನರಿಗೆ ತಿಳಿಯದಾಗಿದೆ.

ಏಕೆಂದರೆ, ಸೌಜನ್ಯ ಕೇಸಿನ ಆರೋಪಿಗಳಿಂದ ಆಶೀರ್ವಾದ ಪಡೆದ ಸರ್ಕಾರದ ಮುಖ್ಯಸ್ಥರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ವಿಷಯದಲ್ಲಿ ಗಟ್ಟಿ ನಿಲುವು ತಾಳದೆ, ರಾಜಕೀಯ ಲಾಭಕ್ಕಷ್ಟೇ ಜೋತುಬಿದ್ದಿರುವುದು ಇಲ್ಲಿಯವರೆಗಿನ ಅವರ ನಡೆಗಳಿಂದ ಸಾಬೀತಾಗಿದೆ.

ರಾಜ್ಯ ಸರ್ಕಾರದ ಈ ನಡೆ ಏನನ್ನು ಸೂಚಿಸುತ್ತದೆ ಮತ್ತು ಎಂತಹ ಸಂದೇಶವನ್ನು ರವಾನಿಸುತ್ತದೆ? ಪ್ರಜಾಪ್ರಭುತ್ವವೆಂದರೆ ಭೇದಭಾವವಿಲ್ಲದೆ ಪ್ರತಿಯೊಬ್ಬನ ಹಿತಕ್ಕೆ ಅನುಗುಣವಾದ ಆಡಳಿತ ನಡೆಸುವುದು ಎಂದು ವ್ಯಾಖ್ಯಾನಿಸುತ್ತಾರೆ ಚಿಂತಕರು. ಆದರೆ ಸರ್ಕಾರದ ಮುಖ್ಯಸ್ಥರು, ಸೌಜನ್ಯಳನ್ನು ಮತ್ತು ಹಾಸನದ ಸಂತ್ರಸ್ತೆಯರನ್ನು ಸರಿಸಿ, ಬಲಾಢ್ಯರ ಪರ ನಿಂತು, ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದ್ದಾರೆಯೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಈ ಸರಕಾರಕ್ಕೆ ಹೀಗೆ ವರ್ತಿಸುವ ಅನಿವಾರ್ಯತೆ ಏನು ಎಂಬುದನ್ನು ತಿಳಿಯ ಬೇಕಾಗಿದೆ.

  2. ಉತ್ತಮವಾಗಿ ವಿವರಿಸಿ ಮನಮುಟ್ಟುವಂತೆ ಹೇಳಿದಿರಿ.
    ಆಳುವ ಪಕ್ಷ ವಿರೋಧ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು.

    ಅನ್ಯಾಯದ ವಿರುದ್ಧ ನಿಮ್ಮ ಧ್ವನಿ ಹೀಗೆ ನಿರಂತರವಾಗಿರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X