ಈ ದಿನ ಸಂಪಾದಕೀಯ | ಕಾಣೆಯಾದ ಮಹಿಳೆಯರು ಮತ್ತು ಸಾಮಾಜಿಕ ವಿಡಂಬನೆ

Date:

ಪ್ರಜ್ವಲ್ ಕೃತ್ಯ ಕಂಡು ಕನಲಿ ಕೆಂಡವಾಗುವ ಜನ ಕಾಲಾನಂತರ ಸುಮ್ಮನಾಗುತ್ತಾರೆ. ‘ಲಾಪತಾ ಲೇಡಿಸ್’ ಚಿತ್ರ ನೋಡಿ ಮಹಿಳೆಯರ ಬಗ್ಗೆ ಕನಿಕರಿಸುವ ಜನ, ಸಿನೆಮಾದಿಂದ ಹೊರಬರುತ್ತಿದ್ದಂತೆ ಮರೆಯುತ್ತಾರೆ. ಅಲ್ಲೂ, ಇಲ್ಲೂ ಕಾಣೆಯಾಗುವುದು ಮಾತ್ರ ಮಹಿಳೆಯರೇ. ಸಮಾಜ ಬದಲಾಗುವುದು ಯಾವಾಗ?

ಇತ್ತೀಚೆಗೆ ತೆರೆ ಕಂಡ ‘ಲಾಪತಾ ಲೇಡಿಸ್’ ಅಥವಾ ‘ಕಾಣೆಯಾದ ಮಹಿಳೆಯರು’ ಚಿತ್ರವನ್ನು ಜನ ಮೆಚ್ಚಿ ಮಾತನಾಡುತ್ತಿದ್ದಾರೆ. ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಇಂತಹ ಸಾಮಾಜಿಕ ವ್ಯವಸ್ಥೆ ನಮ್ಮ ದೇಶದಲ್ಲಿದೆಯೇ ಎಂದು ಹುಬ್ಬೇರಿಸುತ್ತಿದ್ದಾರೆ. ಮುಗ್ಧ ಮಹಿಳೆಯರ ಬಗ್ಗೆ ಕಾಳಜಿ ಮತ್ತು ಕನಿಕರ ವ್ಯಕ್ತಪಡಿಸುತ್ತಿದ್ದಾರೆ.

ಲಾಪತಾ ಲೇಡಿಸ್‘ ಸಿನೆಮಾ ಉತ್ತರ ಭಾರತದ ಹಳ್ಳಿಯ ಕತೆ. ಅದಕ್ಕೆ ತಕ್ಕಂತೆ ಇಡೀ ಚಿತ್ರವನ್ನು ಹಳ್ಳಿಯ ಪರಿಸರದಲ್ಲಿಯೇ ಚಿತ್ರೀಕರಿಸಲಾಗಿದೆ. ಚಿತ್ರದ ಆರಂಭದಲ್ಲಿ, ಆಗಷ್ಟೇ ಮದುವೆಯಾಗಿ, ಸಂಪ್ರದಾಯದಂತೆ ಮುಖದ ತುಂಬಾ ಸೆರಗೊದ್ದು ಗಂಡನನ್ನು ಹಿಂಬಾಲಿಸುವ, ಫೂಲ್ ಮತ್ತು ನೀಲಂ ಎಂಬ ಇಬ್ಬರು ಯುವತಿಯರು ರೈಲು ಪ್ರಯಾಣದ ವೇಳೆಯಲ್ಲಿ ಆಕಸ್ಮಿಕವಾಗಿ ಕಾಣೆಯಾಗುತ್ತಾರೆ.

ಮದುವೆಯಾಗಿ ಮನೆಗೆ ಕರೆದುಕೊಂಡು ಬರುವಾಗ ಹೆಂಡತಿಯರನ್ನು ಕತ್ತಲಲ್ಲಿ ಕಳೆದುಕೊಂಡ ಗಂಡಂದಿರಿಗೆ, ಮನೆಯ ಹಿರಿಯರಿಗೆ ಮುಖ ತೋರಿಸುವುದು ಹೇಗೆ ಎಂಬ ಅಳುಕು. ಹಳ್ಳಿಯವರ ಮುಂದೆ ಹೆಂಡತಿ ಕಳೆದುಕೊಂಡವನು ಎಂಬ ಅವಮಾನ. ಕಳೆದು ಹೋದ ಹೆಂಡತಿಯ ಪರಿಸ್ಥಿತಿ ಹೇಗಿದೆಯೋ ಎಂಬ ಆತಂಕ. ಈ ಜನಸಾಗರದಲ್ಲಿ ಅವರನ್ನು ಹುಡುಕುವುದೆಲ್ಲಿ ಎಂಬ ಸವಾಲು. ಇಂಥ ಸಂದಿಗ್ಧ ಸಂದರ್ಭವನ್ನು ಬಹಳ ಅಚ್ಚುಕಟ್ಟಾಗಿ ವಿವರಿಸುತ್ತಲೇ ಹತ್ತಾರು ವಿಚಾರಗಳನ್ನು ಪ್ರೇಕ್ಷಕರ ಮುಂದೆ ಚಿತ್ರ ತೆರೆದಿಡುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೇಲ್ನೋಟಕ್ಕೆ ಇದು ಹಳ್ಳಿಯ ಹೆಂಗಸರ ಕಣ್ಣೀರಿನ ಕತೆಯಂತೆ ಕಂಡರೂ, ದೇಶದ ಸದ್ಯದ ಸ್ಥಿತಿಯನ್ನು, ಸಾಮಾಜಿಕ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ವಿಶ್ಲೇಷಿಸಿ ನೋಡುಗರನ್ನು ಚಿಂತನೆಗೆ ಹಚ್ಚುತ್ತದೆ. ‘ಕಾಣೆಯಾದ ಮಹಿಳೆಯರು’ ಎಂಬುದು ಕೇವಲ ಕಥೆಗೆ ಕೊಟ್ಟ ಶೀರ್ಷಿಕೆಯಲ್ಲ, ಪುರುಷಪ್ರಧಾನ ಸಮಾಜದಲ್ಲಿ, ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ಪಾತ್ರವೇನು ಎಂಬ ವಿಷಯವನ್ನು ಗಂಭೀರವಾಗಿ ಚರ್ಚಿಸುತ್ತದೆ. ವಿಷಾದ ಹುಟ್ಟಿಸುತ್ತದೆ. ವಿಚಾರ ಪ್ರಚೋದಕವೆನಿಸುತ್ತದೆ.

ಮನೆಯಲ್ಲಿ ಮಹಿಳೆಯರು ಇದ್ದರೂ ಅವರ ಇಷ್ಟ-ಕಷ್ಟಗಳೇ ಕಾಣೆಯಾಗಿರುತ್ತದೆ. ವಯಸ್ಸಿಗೆ ಬಂದ ಹುಡುಗಿ ಮನೆಯವರ ಒತ್ತಡಕ್ಕೆ ಒಳಗಾಗಿ ಆಕೆಯ ಭವಿಷ್ಯವೇ ಕಾಣೆಯಾಗಿರುತ್ತದೆ. ಗಂಡಸರ ವಿಶಾಲ ಎದೆಯೊಳಗೆ ಮಹಿಳೆಯರ ಬಗೆಗಿನ ಸಹಾನುಭೂತಿಯೇ ಕಾಣೆಯಾಗಿರುತ್ತದೆ. ಸಮಾಜದಲ್ಲಿ ಸಮಸಂಖ್ಯೆಯಲ್ಲಿದ್ದರೂ ಮಹಿಳಾ ಪ್ರಾತಿನಿಧ್ಯವೇ ಕಾಣೆಯಾಗಿರುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಅಸ್ತಿತ್ವವೇ ಕಾಣೆಯಾಗಿರುತ್ತದೆ.

ಇದನ್ನು ಓದಿದ್ದೀರಾ?: ಕಣ್ತೆರೆದು ನೋಡಿ, ‘ಅತ್ಯಾಚಾರಿ’ ಗಂಡು ನಮ್ಮ-ನಿಮ್ಮ‌ ಮನೆಯಲ್ಲೂ ಇರಬಹುದು

ಚಿತ್ರ ಕಾಣೆ ಆದ ಎಲ್ಲ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಹಾಗೆಯೇ, ಮಹಿಳೆಯರನ್ನು ಪ್ರದರ್ಶನದ ಗೊಂಬೆಗಳಂತೆ ಕಾಣುವ, ಮಾರಾಟದ ಸರಕಾಗಿ ನೋಡುವ, ಮಹಿಳೆಯರನ್ನು ತುಚ್ಛವಾಗಿ ಚಿತ್ರಿಸುವ ಚಿತ್ರಜಗತ್ತಿನ ಜನರಿಗೂ ಪಾಠವಾಗುತ್ತದೆ. ಇದೂ ಕೂಡ ಒಂದು ಚಿತ್ರವೇ ಆದರೂ, ನಾವೂ ಕೂಡ ಆ ತಾರತಮ್ಯದ ಪಾತ್ರಧಾರಿಗಳಾಗಿರುವುದನ್ನು ನಮಗೇ ಗೊತ್ತಿಲ್ಲದಂತೆ ನಮಗೆ ಅರ್ಥ ಮಾಡಿಸುತ್ತದೆ. ತಪ್ಪನ್ನು ತಿದ್ದಿಕೊಂಡು ಮನುಷ್ಯರಾಗಲು ಪ್ರೇರೇಪಿಸುತ್ತದೆ.

ಈ ಚಿತ್ರದಲ್ಲಿ ಮನೆಯ ಹೊರಗಿನ ವರಾಂಡದಲ್ಲಿ ಕಾಟ್ ಮೇಲೆ ಸದಾ ಕಾಲ ಮಲಗೇ ಇರುವ ಮುದುಕನೊಬ್ಬನ ಪಾತ್ರವನ್ನು ಸೃಷ್ಟಿಸಲಾಗಿದೆ. ಎಲ್ಲರೂ ಮಲಗಿರುವಾಗ ಬುದ್ಧನೆದ್ದಂತೆ, ಆತನ ಬಾಯಿಂದ ಆಗಾಗ ‘ಜಾಗ್ತೆ ರಹೋ’ ಎಂದು ಕೂಗು ಕೇಳಿಬರುತ್ತಿರುತ್ತದೆ. ಜಾಗ್ತೆ ರಹೋ ಎಂದರೆ ಎಚ್ಚರವಾಗಿರಿ ಎಂದರ್ಥ. ಆತ, ಅದನ್ನು ಸಮಾಜಕ್ಕೆ ಅಥವಾ ಹೆಣ್ಣು ಸಂಕುಲಕ್ಕೆ ಸಾರುವ ರೂಪಕವಾಗಿ ಬಳಸಲಾಗಿದೆ.

ಈ ಚಿತ್ರ ನೋಡುತ್ತಿದ್ದಂತೆ ನೆನಪಾಗಿದ್ದು ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಕಾಮಕಾಂಡ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಕಲ್ಪಿಸಿದ ಅಧಿಕಾರವನ್ನು ಪ್ರಜೆಗಳ ಮೇಲೆಯೇ ಪ್ರಯೋಗಿಸಿದ ಪ್ರಜ್ವಲ್, ಅಜ್ಜ-ಅಪ್ಪ ಕಟ್ಟಿದ ರಾಜಕೀಯ ಕೋಟೆಯನ್ನು ಕಾಮಕೋಟೆಯನ್ನಾಗಿಸಿದ್ದಾನೆ. ಆತನ ಅಧಿಕಾರಕ್ಕೆ, ಹಣಕ್ಕೆ, ಆಮಿಷಕ್ಕೆ, ದರ್ಪಕ್ಕೆ, ದೌರ್ಜನ್ಯಕ್ಕೆ ಬಲಿಯಾದ ಹೆಣ್ಣುಮಕ್ಕಳು ಇವತ್ತು ಇದ್ದೂ ಇಲ್ಲವಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಾಗದೆ ಕಾಣೆಯಾಗಿದ್ದಾರೆ. ಈ ಕಾಣೆಯಾದ ಮಹಿಳೆಯರ ಪರವಿರಬೇಕಾದ ಸಮಾಜ, ಪುರುಷರಿಗೆ ‘ಎಚ್ಚರವಾಗಿರಿ’ ಎಂದು ಹೇಳುವುದಿಲ್ಲ.

ಪ್ರಜ್ವಲ್ ರೇವಣ್ಣನ ಕಾಮಕಾಂಡದ ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿದೆ, ಮಹಿಳೆಯರಿಗೆ ಮುಂದೆ ಬಂದು ಹೇಳಿಕೊಳ್ಳುವ ಧೈರ್ಯವೇ ಇಲ್ಲದಾಗಿದೆ. ಕಾಯ್ದೆ-ಕಾನೂನುಗಳಿವೆ, ವಿಶ್ವಾಸವೇ ಹುಟ್ಟದಾಗಿದೆ. ಸುದ್ದಿ ಮಾಧ್ಯಮಗಳಿವೆ, ನಂಬಿಕೆಯೇ ಇಲ್ಲದಂತಾಗಿದೆ. ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಬೇಕಾದ ಮನೆಯ ಗಂಡಸರು, ಸಂತ್ರಸ್ತೆಯರಿಗೇ ‘ಎಚ್ಚರವಾಗಿರಿ’ ಎನ್ನುತ್ತಿದ್ದಾರೆ.

ಕಾಣೆಯಾಗಿರುವ ಮಹಿಳೆಯರ ಪರವಿರಬೇಕಾದ, ಅವರ ಕೌಟುಂಬಿಕ-ಸಾಮಾಜಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾದ, ಅವರಿಗೆ ನ್ಯಾಯ ಕೊಡಿಸಬೇಕಾದ, ಅವರ ನೆರವಿಗೆ ಧಾವಿಸಬೇಕಾದ ದೊಡ್ಡಗೌಡರು, ಮೊಮ್ಮಗನಿಗೆ ಪತ್ರ ಬರೆಯುವ ಮೂಲಕ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ‘ಎಚ್ಚರವಾಗಿರಿ’ ಎಂಬ ಸಂದೇಶವನ್ನು ಪ್ರಭುತ್ವಕ್ಕೆ, ಸಮಾಜಕ್ಕೆ ರವಾನಿಸಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಜ್ವಲ್‌ನ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಲು ಮೋದಿ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? 

ಪ್ರಜ್ವಲ್ ರೇವಣ್ಣನ ಹೀನ ಕೃತ್ಯ ಗೊತ್ತಿದ್ದ ಗೌಡರ ಕುಟುಂಬ ಆತನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಮೈತ್ರಿ ಮಾಡಿಕೊಂಡ ಬಿಜೆಪಿ ಅದಕ್ಕೆ ಸಹಕರಿಸುತ್ತದೆ. ಅಂದರೆ, ಎಲ್ಲರಿಗೂ ಗೊತ್ತು. ಹಾಗೆಯೇ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿದ್ದೂ ಕಾಣೆಯಾಗಿದ್ದಾರೆ. ಅದೂ ಕೂಡ ಎಲ್ಲರಿಗೂ ಗೊತ್ತು.

ಪ್ರಜ್ವಲ್ ಕೃತ್ಯ ಕಂಡು ಕನಲಿ ಕೆಂಡವಾಗುವ ಜನ ಕಾಲಾನಂತರ ಸುಮ್ಮನಾಗುತ್ತಾರೆ. ‘ಲಾಪತಾ ಲೇಡಿಸ್’ ಚಿತ್ರ ನೋಡಿ ಮಹಿಳೆಯರ ಬಗ್ಗೆ ಕನಿಕರಿಸುವ ಜನ, ಸಿನೆಮಾದಿಂದ ಹೊರಬರುತ್ತಿದ್ದಂತೆ ಮರೆಯುತ್ತಾರೆ. ಅಲ್ಲೂ, ಇಲ್ಲೂ ಕಾಣೆಯಾಗುವುದು ಮಾತ್ರ ಮಹಿಳೆಯರೇ. ಸಮಾಜ ಬದಲಾಗುವುದು ಯಾವಾಗ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

ಇಂಡಿಯಾ ಒಕ್ಕೂಟ ಮೈತ್ರಿ ಹುಟ್ಟಿದ್ದೇ ಒಂದು ಚಮತ್ಕಾರ. ಸೀಟು ಹೊಂದಾಣಿಕೆ ಪೂರ್ಣ...

ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು...

ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?

ದೇಶದ ದೊಡ್ಡ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಾರ್ಟಿ ಅವನತಿಯ ಹಾದಿಯಿಂದ ಮೈಕೊಡವಿ...

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ

ಫಲಿತಾಂಶ ಹೊರಬಿದ್ದಿದೆ. ರಾಜಕೀಯ ಪಕ್ಷಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ, ಪಂಡಿತರ...