ಸಮತಾ ಸಂಸ್ಕ್ರತಿ ವೇದಿಕೆ ಸ್ಥಾಪಿಸಿ, ಅದರ ಮೂಲಕ ಬಡವರ, ನಿರ್ಗತಿಕರ ಬಾಳು ಬೆಳಗಿಸಲು ವೈಯಕ್ತಿಕ ಬದುಕು ಲೆಕ್ಕಿಸದೆ ಸದಾ ಅನ್ಯರ ಹಿತಕ್ಕಾಗಿ ಬದ್ಧತೆ ಮೈಗೂಡಿಸಿಕೊಂಡಿರುವ ಕಂಟೆಪ್ಪ ಗುಮ್ಮೆ ಅವರ ಬದುಕು ರೋಮಾಂಚಕಾರಿ ಎಂದು ಹಿರಿಯ ಪತ್ರಕರ್ತ ಗಂಧರ್ವ ಸೇನಾ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿ ಕಂಟೆಪ್ಪ ಗುಮ್ಮೆ ಅವರ ನಿವಾಸದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ʼ74ನೇ ಮನೆಯಂಗಳದಲ್ಲಿ ಮಾತುಕತೆʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಸಮಾಜದಲ್ಲಿ ಇಂದಿಗೂ ಶೋಷಣೆ ಮುಂದುವರೆದಿದೆ. ಬರಹಗಾರರು ಇಂತಹ ಸೂಕ್ಷ್ಮತೆಗಳ ಕುರಿತು ಗಮನಹರಿಸಬೇಕು. ಸಾಹಿತ್ಯದಲ್ಲಿ ಹೋರಾಟದ ಚಿಂತನೆ ಇಲ್ಲದಿದ್ದರೆ ನೂರು ಕೃತಿ ರಚಿಸಿದ ಲೇಖಕರು ಸಮಾಜದಲ್ಲಿ ಮರೆಯಾಗುತ್ತಾರೆ. ಕೇವಲ ಪ್ರೀತಿ-ಪ್ರೇಮ, ನಿಸರ್ಗ ವಿಷಯಗಳ ಸಾಹಿತ್ಯ ಅಷ್ಟೇ ಅಲ್ಲದೆ ಬದುಕು, ಹಸಿವು ಸೇರಿದಂತೆ ಸಾಮಾಜಿಕ ಸಂಕಟಗಳ ಕುರಿತು ಸಾಹಿತ್ಯ ರಚಿಸಿಬೇಕು” ಎಂದು ಸಲಹೆ ನೀಡಿದರು.
ಕವಿ, ಸಾಹಿತಿ ಕಂಟೆಪ್ಪ ಗುಮ್ಮೆ ಮಾತನಾಡಿ, “ನನ್ನ ಸಾಮಾಜಿಕ ಹೋರಾಟಕ್ಕೆ ಕಾರ್ಲ್ ಮಾರ್ಕ್ಸ್ ಹಾಗೂ ಲೆನಿನ್ ಚಿಂತನೆಗಳು ಪ್ರೇರಣೆಯಾಗಿವೆ. ಕೆ.ಆರ್.ದುರ್ಗಾದಾಸ, ಕಾಶಿನಾಥ ಅಂಬುಲಗಿ, ಚನ್ನಣ್ಣ ವಾಲಿಕಾರ, ಸೌದತ್ತಿ ಮಠ, ಮ.ಗು.ಬಿರಾದಾರ, ಜಿ ಎಸ್ ಶಿವರುದ್ರಪ್ಪ ಸೇರಿದಂತೆ ಅನೇಕ ಲೇಖಕರು, ಸಾಹಿತಿಗಳ ಮಾರ್ಗದರ್ಶನದಿಂದ ಸಾಹಿತ್ಯ ಸೃಷ್ಟಿಗೆ ಕಾರಣವಾಯಿತು” ಎಂದು ಹೇಳಿದರು.
“ಕವಿ ತನ್ನ ಬದುಕಿನ ಅನುಭವ ಸಾರವನ್ನು ಸಾಹಿತ್ಯದಲ್ಲಿ ಹಿಡಿದಿಡಬೇಕು. ನನ್ನ ʼಒಡೆದ ಬಳೆʼ ಕಿರು ಕಾದಂಬರಿ, ʼಬೆಂಕಿ ಕಾರಿತು ಕೆಂಡʼ, ʼಸತ್ತಾಗ ಹೆಗಲು ಕೊಡುʼ, ʼಗೊಡ್ಡು ಎಮ್ಮೆʼ ಸೇರಿದಂತೆ ಅನೇಕ ಕವಿತೆಗಳು ರಚನೆಯಾದರೂ ಆರ್ಥಿಕ ಮುಗ್ಗಟ್ಟಿನಿಂದ ಕೃತಿಗಳು ಮುದ್ರಿಸಲು ಸಾಧ್ಯವಾಗಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತವಾದ ನನ್ನೂರಿಗೆ ಹೋರಾಟದ ಪ್ರತಿಫಲವಾಗಿ ರಸ್ತೆ , ಶಾಲೆ ಹಾಗೂ ಬೀದಿ ದೀಪ ವ್ಯವಸ್ಥೆ ಕಲ್ಪಿಸಿದರು” ಎಂದು ಬದುಕಿನ ಘಟನೆಗಳನ್ನು ಮೆಲಕು ಹಾಕಿದರು.
ಚುಟುಕು ಸಾಹಿತಿ ವೀರಶೆಟ್ಟಿ ಚೌಕನಪಳ್ಳಿ ಹಾಗೂ ಸಾಹಿತಿ ಪ್ರಭು ಮಾಲೆ ಸಂವಾದ ನಡೆಸಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ನುಡಿದರು.
ಇದೇ ಸಂದರ್ಭದಲ್ಲಿ ಪರಪ್ಪನ ಅಗ್ರಹಾರದಲ್ಲಿ ಪೊಲೀಸ್ ಸಿಬ್ಬಂದಿಯಾಗಿರುವ ಅಮಲಾಪುರ ಗ್ರಾಮದ ಮಮಿತಾ ಅವರು ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ಪ್ರಯುಕ್ತ ಜಿಲ್ಲಾ ಕಸಾಪದಿಂದ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೈಕ್ಗೆ ಸಾರಿಗೆ ಬಸ್ ಢಿಕ್ಕಿ; ಒಂದೇ ಊರಿನ ಮೂವರು ಯುವಕರು ದುರ್ಮರಣ
ಕಾರ್ಯಕ್ರಮದಲ್ಲಿ ಬೀದರ್ ತಾಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್.ಮನೋಹರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಗನಾಥ ಕಮಲಾಪುರೆ ನಿರೂಪಿಸಿದರು. ಶಿವಶಂಕರ ಟೋಕರೆ ಸ್ವಾಗತಿಸಿದರು. ಬಾಬು ಮಡಕಿ ವಂದಿಸಿದರು. ಕಸಾಪದ ಪ್ರಮುಖರಾದ ಶಿವಕುಮಾರ ಕಟ್ಟೆ, ದಾನಿ ಬಾಬುರಾವ, ಶಂಭುಲಿಂಗ ವಾಲ್ದೊಡ್ಡಿ, ಡಾ.ಸಂಜೀವಕುಮಾರ ಅತಿವಾಳೆ, ಮಾರುತಿ ಕಂಟೆ, ನರಸಿಂಗ ಸಾಮ್ರಾಟ್, ಮಹಾದೇವ ಕಾಂಬಳೆ, ಚಂದ್ರಕಾಂತ ಹೊಸಮನಿ, ರಮೇಶ ಬಾಬು, ಅಶೋಕ ಸಂಗಮ, ಸಿಮ್ಲಾಬಾಯಿ ಶಾಸ್ತ್ರಿ, ಕೀರ್ತಿಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.