ಮೋದಿ ಭಕ್ತರಿಗೆ ಶ್ರೇಯಸ್ ಅಯ್ಯರ್ ಬ್ಯಾಟಿನ ಏಟು; ವಿಶ್ವಕಪ್‌ನಲ್ಲಿ ಶ್ರೇಯಸ್ ಕೈಬಿಡಲು ಮೋದಿ ಕಾರಣವೇ?

Date:

ಬೆಟ್ಟಿಂಗ್‌ ದಂಧೆಗೂ ಹೆಸರಾಗಿರುವ, ಭಾರತದ ಕ್ರಿಕೆಟ್‌ ಪ್ರೇಮಿಗಳ ಹುಚ್ಚಿನ ಆಟ ಐಪಿಎಲ್‌-2024 ತೆರೆ ಕಂಡಿದೆ. ಐಪಿಎಲ್‌ ಅಂಕಪಟ್ಟಿಯಲ್ಲಿ ಆರಂಭದಿಂದಲೂ ಅಗ್ರಸ್ಥಾನದಲ್ಲೇ ಇದ್ದ ಕೆಕೆಆರ್‌ 3ನೇ ಬಾರಿಗೆ ‘ಟ್ರೋಫಿ’ ಗೆದ್ದುಕೊಂಡಿದೆ. ಅತ್ಯುತ್ತಮ ಆಟಗಾರ ಎಂಬ ಖ್ಯಾತಿಗೂ, ಕೆಲ ವದಂತಿಗಳಿಂದ ಟೀಕೆಗೂ ಗುರಿಯಾಗಿದ್ದ ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನಡೆಸಿದ್ದು, ಟ್ರೋಫಿ ಗೆದ್ದಿದ್ದಾರೆ. ಅಯ್ಯರ್ ನೇತೃತ್ವದಲ್ಲಿ ತಂಡವೊಂದು ಮೊದಲ ಬಾರಿಗೆ ಚಾಂಪಿಯನ್ ಕಿರೀಟವನ್ನೂ ಧರಿಸಿದೆ.

ಒಂದು ತಂಡವನ್ನು ಮುನ್ನಡೆಸಿ, ಟ್ರೋಫಿ ಗೆದ್ದ ಭಾರತೀಯ ತಂಡ ಬ್ಯಾಟರ್‌ ಶ್ರೇಯಸ್‌ ಅಯ್ಯರ್ ಅವರನ್ನು ಜೂನ್ ತಿಂಗಳಿನಲ್ಲಿ ನಡೆಯಲಿರುವ ‘ಟಿ20 ವಿಶ್ವಕಪ್‌’ನಲ್ಲಿ ಭಾರತೀಯ ತಂಡದಿಂದ ಬಿಸಿಸಿಐ ಹೊರಗಿಟ್ಟಿದೆ. ಮಾತ್ರವಲ್ಲದೆ, ಶ್ರೇಯಸ್ ಜೊತೆಗೆ ಬಿಸಿಸಿಐ ಒಪ್ಪಂದವನ್ನೇ ರದ್ದುಗೊಳಿಸಿದೆ. ಅಂದರೆ, ಮುಂದಿನ ದಿನಗಳಲ್ಲಿ ಶ್ರೇಯಸ್ ಭಾರತೀಯ ತಂಡಕ್ಕಾಗಿ ಆಡಿದರೂ, ಆತನಿಗೆ ಯಾವುದೇ ಸಂಭಾವನೆ ಸಿಗುವುದಿಲ್ಲ.

ಶ್ರೇಯಸ್ ಜತೆ ಬಿಸಿಸಿಐ ಒಪ್ಪಂದ ರದ್ದತಿಯ ಹಿಂದೆ ಬಿಜೆಪಿ ಅದರಲ್ಲೂ, ಬಿಸಿಸಿಐ ಅಧ್ಯಕ್ಷ, ಅಮಿತ್ ಶಾ ಪುತ್ರ ಜೈ ಶಾ ಕುತಂತ್ರವಿದೆ ಎಂಬ ಚರ್ಚೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇದಕ್ಕೆ, 2023ರ ನವೆಂಬರ್‌ನಲ್ಲಿ ನಡೆದ ‘ಏಕದಿನ ವಿಶ್ವಕಪ್‌’ನ ಫೈನಲ್‌ ಪಂದ್ಯದ ದಿನ ನಡೆದ ಘಟನೆಯೇ ಕಾರಣವೆಂದೂ ಹೇಳಲಾಗುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ವರ್ಷ ನವೆಂಬರ್ 19ರಂದು ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ‘ಒನ್‌ ಡೇ ವಿಶ್ವಕಪ್‌’ನ ಫೈನಲ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿತು. ತವರಲ್ಲೇ ಚಾಂಪಿಯನ್‌ ಆಗುವ ಅವಕಾಶ ಕಳೆದುಕೊಂಡ ತಂಡಕ್ಕೆ ಬೇಸರವು ಆಗಿತ್ತು.

ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗಿದ್ದ ಪ್ರಧಾನಿ ಮೋದಿ, ತಂಡದ ಸೋಲು ಮತ್ತು ಬೇಸರವನ್ನೂ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದಂತೂ ಅಕ್ಷರಶಃ ನಿಜ. ಅದಕ್ಕಾಗಿ, ಮೋದಿ ಅವರು ಭಾರತೀಯ ತಂಡದ ಡ್ರೆಸ್ಸಿಂಗ್‌ ರೂಮ್‌ಗೆ ತಮ್ಮ ಕ್ಯಾಮೆರಾ ಪಡೆಯೊಂದಿಗೆ ನುಗ್ಗಿದರು. ಮೋದಿ ನಡೆ ಶ್ರೇಯಸ್‌ಗೆ ಕಿರಿಕಿರಿ ಉಂಟುಮಾಡಿತು. ತಂಡದ ಆಟಗಾರರ ಬೆನ್ನು ತಟ್ಟಿ ಸಮಾಧಾನ ಮಾಡುತ್ತೇನೆಂದು ಹೋದ ಮೋದಿಗೆ ಶ್ರೇಯಸ್‌ ಮುಖನೋಡಿ ಕೈ ಕುಲುಕಲಿಲ್ಲ. ಮೋದಿಯನ್ನು ನೋಡಿ ನಗೆ ಬೀರಲಿಲ್ಲ. ಬದಲಾಗಿ, ಅವರು ಮೋದಿಯಿಂದ ಹಿಂದೆ ಸರಿದು, ಅಸಮಾಧಾನವನ್ನು ತಮ್ಮ ಹಾವಭಾವದಲ್ಲಿ ತೋರಿಸಿದರು.

ಪ್ರಚಾರಗೀಳಿನ ಮೋದಿಗೆ ಶ್ರೇಯಸ್‌ ‘ಸ್ಮೈಲ್’ ಮಾಡದೇ ಹೋದದ್ದು, ಮೋದಿ ಭಕ್ತ ಪಡೆ ಮತ್ತು ಭಜನಾ ಮಂಡಳಿ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯೂ ಆಗಿತ್ತು. ಬಿಜೆಪಿ ಐಟಿ ಸೆಲ್, ಸಂಘಪರಿವಾರದ ಭಕ್ತರು ಶ್ರೇಯಸ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಇಳಿದಿದ್ದರು. ನಾನಾ ರೀತಿಯಲ್ಲಿ ವಿಷ ಕಾರಿದ್ದರು.

 

ಮೋದಿಗೆ ‘ಸ್ಮೈಲ್’ ಮಾಡದಿದ್ದಕ್ಕೆ ಶ್ರೇಯಸ್‌ ಮೇಲೆ ಬಿಸಿಸಿಐನ ಅಧ್ಯಕ್ಷನಾಗಿರುವ ಅಮಿತ್ ಶಾ ಪುತ್ರ ಜೈ ಶಾ ಕೂಡ ಸಿಟ್ಟಾಗಿದ್ದರು. ಶ್ರೇಯಸ್‌ ವಿರುದ್ಧ ಕತ್ತಿ ಮಸೆಯುತ್ತಿದ್ದರು ಎಂಬುದು ಬಚ್ಚಿಟ್ಟ ಸತ್ಯವೇನಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ದಾಳವಾಗಿ ಸಿಕ್ಕಿದ್ದು ಬೆನ್ನು ಸೆಳೆತದ ಕಾರಣಕ್ಕೆ ಕೆಲವು ಟೂರ್ನಿಗಳಿಂದ ಶ್ರೇಯಸ್‌ ಹೊರಗುಳಿದದ್ದು. ಇದೇ ನೆಪವೊಡ್ಡಿ ಅವರನ್ನು ‘ಟಿ20 ವಿಶ್ವಕಪ್‌’ನಿಂದ ಹೊರಗಿಡಲಾಗಿದೆ. ಮಾತ್ರವಲ್ಲದೆ, ಶ್ರೇಯಸ್‌ ಜೊತೆಗಿನ ಒಪ್ಪಂದವನ್ನೂ ಕಡಿತಗೊಳಿಸಲಾಗಿದೆ.

ಅಂದಹಾಗೆ, ಶ್ರೇಯಸ್‌ಗೆ ಬೆನ್ನು ಸೆಳೆತ ಇದ್ದದ್ದು ಅಕ್ಷರಶಃ ಸತ್ಯ. ಆ ಕಾರಣಕ್ಕಾಗಿಯೇ ‘ಏಕದಿನ ವಿಶ್ವಕಪ್‌’ಗೂ ಮೊದಲು 2023ರ ಫೆಬ್ರವರಿಯಲ್ಲಿ ನಡೆದಿದ್ದ ರಣಜಿ ಟೂರ್ನಿಯಲ್ಲಿ ಮುಂಬೈ ತಂಡದಲ್ಲಿದ್ದ ಅವರು, ಕ್ವಾರ್ಟರ್ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಆಡದೆ, ಹೊರಗುಳಿದಿದ್ದರು. ಬಳಿಕ, ಏಷ್ಯಾ ಕಪ್ ವೇಳೆಗೆ ಚೇತರಿಸಿಕೊಂಡಿದ್ದರು. ‘ಒನ್‌ಡೇ ವಿಶ್ವಕಪ್‌’ನಲ್ಲೂ ಆಡಿದರು.

ಆದರೆ, 2024ರ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದಲ್ಲಿದ್ದ ಅವರು 2 ಪಂದ್ಯಗಳನ್ನು ಆಡಿದರೂ, 3ನೇ ಪಂದ್ಯದ ವೇಳೆಗೆ ಬೆನ್ನು ಸೆಳೆತ ಮತ್ತೆ ಕೈಕೊಟ್ಟಿತ್ತು. ಹೀಗಾಗಿ, ನಂತರದ ಮೂರು ಟೆಸ್ಟ್‌ ಪಂದ್ಯಗಳನ್ನು ಶ್ರೇಯಸ್‌ ಆಡಲಿಲ್ಲ. ನಂತರ, ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ರಣಜಿ ಟೂರ್ನಿಯಿಂದಲೂ ಅವರು ದೂರ ಉಳಿದರು.

ಅವರು ದೂರ ಉಳಿಯುತ್ತಿದ್ದಂತೆ ರೊಚ್ಚಿಗೆದ್ದ ಮೋದಿ ಭಕ್ತ ಪಡೆ ಮತ್ತು ನೆಟ್ಟಿಗರು, ದುಡ್ಡಿನ ಟೂರ್ನಿ ಐಪಿಎಲ್‌ಗೋಸ್ಕರ ಶ್ರೇಯಸ್, ರಣಜಿಯಿಂದ ಹೊರಗುಳಿದಿದ್ದಾರೆ ಎಂದು ಭಾರೀ ಟ್ರೋಲ್ ಮಾಡಿದ್ದರು. ನೆಟ್ಟಿಗರ ಟ್ರೋಲ್‌ ಬಗ್ಗೆ ಮಾತನಾಡಿರುವ ಶ್ರೇಯಸ್, ”ವಿಶ್ವಕಪ್ ನಂತರ ನಾನು ನಿಜವಾಗಿಯೂ ಬೆನ್ನು ಸೆಳೆತದಿಂದ ಕಷ್ಟಪಡುತ್ತಿದ್ದೆ. ಆದರೆ, ಅದನ್ನು ಯಾರು ನಂಬಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅದಾಗ್ಯೂ, 2022ರಲ್ಲೇ ಕೆಕೆಆರ್‌ ತಂಡದ ಮಾಲೀಕ ಶಾರೂಖ್‌ ಖಾನ್ ನೇತೃತ್ವದ ‘ರೆಡ್‌ ಚಿಲ್ಲಿ ಎಂಟರ್ಟೈನ್ಮೆಂಟ್‌’ ಸಂಸ್ಥೆ ಶ್ರೇಯಸ್ ಅವರನ್ನು ಕೆಕೆಆರ್‌ಗೆ 12.5 ಕೋಟಿ ಖರೀದಿಸಿತ್ತು. ನಾಯಕನಾಗಿಯೂ ಮಾಡಿತ್ತು. ಇದೀಗ, ಅವರು ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿ, ಟ್ರೋಫಿಯನ್ನು ಗೆದ್ದಿದ್ದಾರೆ.

ಐಪಿಎಲ್‌ನಲ್ಲಿ ಟ್ರೋಫಿ ಗೆದ್ದ ತಂಡದ ನಾಯಕನನ್ನೇ ಬಿಸಿಸಿಐ, ‘ಟಿ-20 ವಿಶ್ವಕಪ್‌’ನಿಂದ ಹೊರಗಿಟ್ಟಿದೆ. ಅಂದರೆ, ಇದಕ್ಕೆ ಕಾರಣ, ರಣಜಿಯಲ್ಲಿ ಹೊರಗಿದ್ದರು ಎಂಬುದಲ್ಲ, ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬುದು. ಮೋದಿ ನಡೆಯಿಂದ ಕಿರಿಕಿರಿಗೊಂಡ ಕಾರಣಕ್ಕಾಗಿ ಒಬ್ಬ ಅತ್ಯುತ್ತಮ ಆಟಗಾರ, ಅದರಲ್ಲೂ ಹಿಂದು, ಗಮನಾರ್ಹವಾಗಿ ಬ್ರಾಹ್ಮಣ ಸಮುದಾಯದ ಶ್ರೇಯಸ್‌ ಅಯ್ಯರ್ ಅವರನ್ನು ಬಿಸಿಸಿಐ ಹೊರಗಿಟ್ಟಿದೆ. ಅಂದರೆ, ಆಟದಲ್ಲೂ ಮೋದಿಗೆ ಸಲಾಮು ಹೊಡೆಯುವುದು ಚಾಲ್ತಿಗೆ ಬರುತ್ತಿದೆ.

ಇತ್ತೀಚೆಗೆ, ಮೋದಿ ಸರ್ಕಾರದ ತಂತ್ರ-ಕುತಂತ್ರಗಳನ್ನು ಎಳೆ-ಎಳೆಯಾಗಿ ಬಿಚ್ಚಿಡುವ ಹಿಂದಿಯ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಇನ್ಟಾಗ್ರಾಂನಲ್ಲಿ ಫಾಲೋ ಮಾಡಲು ಆರಂಭಿಸಿದ್ದರು. ಇದೇ ಕಾರಣಕ್ಕೆ ಹಲವಾರು ಮೋದಿ ಭಕ್ತರು ಶ್ರೇಯಸ್‌ರನ್ನು ಅನ್‌ಫಾಲೋ ಮಾಡಿದ್ದಾರೆ.

ಅಂದರೆ, ಮೋದಿಗೆ ಸಲಾಮು ಹೊಡೆಯದಿದ್ದರೆ, ಮೋದಿ ಮುಂದೆ ಹಲ್ಲು ಕಿರಿಯದಿದ್ದರೆ, ಮೋದಿ ಭಕ್ತರು ಅತ್ಯುತ್ತಮ ಆಟಗಾರರನ್ನೂ ಸಹಿಸುವುದಿಲ್ಲ. ಕ್ರಿಕೆಟ್ ವಾಣಿಜ್ಯ ಸಂಸ್ಥೆಯೇ ಸಿಟ್ಟಾಗುತ್ತದೆ ಎಂಬುದನ್ನು ಶ್ರೇಯಸ್‌ ವಿಚಾರ ಬಹಿರಂಗಗೊಳಿಸಿದೆ.

ಅಂದರೆ,  ಭಾರತದಲ್ಲಿ ಕ್ರೀಡೆ – ಕ್ರೀಡೆಯಾಗಿ, ಕಲೆ – ಕಲೆಯಾಗಿ, ಮನರಂಜನೆ – ಮನೆರಂಜನೆಯ ತಾಣವಾಗಿ ಉಳಿದಿಲ್ಲ. ಎಲ್ಲವೂ ರಾಜಕೀಯವಾಗಿವೆ. ಎಲ್ಲೆಡೆ ಬಿಜೆಪಿ-ಸಂಘಪರಿವಾರ ಆವರಿಸಿ, ಆಕ್ರಮಿಸಿಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಬೀಳದಿದ್ದರೆ, ಭಾರತದ ಜನಾಂಗ ದ್ವೇಷಿಯಾಗಿ ಬದಲಾಗಿಬಿಡುವ ಅಪಾಯವಿದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಆಟವನ್ನು ಆಟವಾಗಿ, ಕಲೆಯನ್ನು ಕಲೆಯಾಗಿ, ರಾಜಕೀಯವನ್ನು ರಾಜಕೀಯವಾಗಿ ನೋಡಬೇಕು. ಸಂಘಪರಿವಾರದ ಅಜೆಂಡಾಗಳನ್ನು ಅರಿತು, ಫ್ಯಾಸಿಸ್ಟ್‌ ಬಿಜೆಪಿಯನ್ನು ಹಿಮ್ಮೆಟ್ಟಬೇಕು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲಭೆಗಳು, ಧ್ವಂಸಗಳ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದಿಲ್ಲ: ಎನ್‌ಸಿಇಆರ್‌ಟಿ ನಿರ್ದೇಶಕ

ಶಾಲಾ ಪಠ್ಯಕ್ರಮದಲ್ಲಿ ಕೇಸರೀಕರಣದ ಆರೋಪಗಳನ್ನು ತಳ್ಳಿಹಾಕಿರುವ ಎನ್‌ಸಿಇಆರ್‌ಟಿ ನಿರ್ದೇಶಕರಾದ ದಿನೇಶ್ ಪ್ರಸಾದ್‌...

ಗಂಗಾನದಿಯಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಪಲ್ಟಿ; 6 ಮಂದಿ ನಾಪತ್ತೆ

17 ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಪಲ್ಟಿಯಾಗಿರುವ ಘಟನೆ ಬಿಹಾರ...

ನೀರಿನ ಸಮಸ್ಯೆ| ದೆಹಲಿ ಜಲ ಮಂಡಳಿ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು

ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಬಿಜೆಪಿಯ ಮಹಿಳಾ ಪ್ರತಿಭಟನಾಕಾರರು ಚತ್ತರ್‌ಪುರದಲ್ಲಿರುವ...