ಗುಜರಾತಿನ ರಾಜ್ಕೋಟ್ ಗೇಮ್ ಜೋನ್ ದುರಂತದಲ್ಲಿ ಇಲ್ಲಿಯವರೆಗೂ 28 ಮಂದಿ ಮೃತಪಟ್ಟಿದ್ದು, ಘೋರ ಘಟನೆಯ ನಂತರ ರಾಜ್ಯ ಸರ್ಕಾರ ಹಲವು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ. ನಗರ ಪೊಲೀಸ್ ಆಯುಕ್ತ ರಾಜು ಭಾರ್ಗವ ಅವರನ್ನು ವರ್ಗಾವಣೆಗೊಳಿಸಿದ್ದು, ಅವರ ಸ್ಥಾನಕ್ಕೆ ಅಹಮದಾಬಾದಿನ ವಿಶೇಷ ಪೊಲೀಸ್ ಆಯುಕ್ತ ಬ್ರಜೇಶ್ ಕುಮಾರ್ ಝಾ ಅವರನ್ನು ನೇಮಿಸಲಾಗಿದೆ.
ನಗರ ಆಯುಕ್ತರಲ್ಲದೆ ಆಡಳಿತ, ಸಂಚಾರಿ ಹಾಗೂ ಅಪರಾಧ ವಿಭಾಗದ ಆಯುಕ್ತರನ್ನು ಕೂಡ ವರ್ಗಾವಣೆಗೊಳಿಸಲಾಗಿದೆ.
ಗುಜರಾತ್ ಹೈಕೋರ್ಟ್ ರಾಜ್ಕೋಟ್ ಪಾಲಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವು ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
ಗೇಮ್ ಜೋನ್ ಸಂಸ್ಥೆ ನಗರ ಪಾಲಿಕೆಯಿಂದ ನಿರಪೇಕ್ಷಣ ಪ್ರಮಾಣ ಪತ್ರ, ಅಗ್ನಿ ಸುರಕ್ಷತೆ ಹಾಗೂ ಕಟ್ಟಡ ನಿಯಮ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳದ ಕಾರಣ ಸರ್ಕಾರ ಹಾಗೂ ಪಾಲಿಕೆ ಸಂಸ್ಥೆ ವಿರುದ್ಧ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು.
ಪ್ರಮುಖ ಪ್ರಮಾಣ ಪತ್ರಗಳನ್ನು ಪಡೆಯದೆ 2 ವರ್ಷಗಳಿಗೂ ಹೆಚ್ಚು ಕಾಲ ರಾಜ್ಕೋಟ್ನ ಎರಡು ಗೇಮ್ ಜೋನ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರಿಂದ ನಿಯಂತ್ರಿಸಲ್ಪಡುತ್ತಿರುವ ರಾಜ್ಯ ಸರ್ಕಾರವನ್ನು ಇನ್ನು ಮುಂದೆ ನಂಬಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
“ಎರಡೂ ವರ್ಷಗಳಿಗೂ ಹೆಚ್ಚು ಕಾಲ ಈ ಗೇಮಿಂಗ್ ಜೋನ್ ಕಾರ್ಯ ನಿರ್ವಹಿಸುತ್ತಿದೆ. ನೀವು ಕಣ್ಣು ಮುಚ್ಚಿಕೊಂಡಿದ್ದೀರಿ ಎಂದು ನಾವು ಭಾವಿಸಬೇಕೆ? ನೀವು ನಿದ್ದೆಯ ಮಂಪರಿನಲ್ಲಿದ್ದರಾ? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು” ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು.
