ಮಧ್ಯ ಪ್ರದೇಶದ ಸಾಗರದಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಸಮುದಾಯದ ಮಹಿಳೆ ಹಾಗೂ ಆಕೆಯ ಕುಟುಂಬದವರ ಸಾವಿನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಕಾನೂನಿನ ಆಳ್ವಿಕೆ ಕೊನೆಗೊಳಿಸಿದ್ದು, ನಾವು ದುರ್ಬಲ ವ್ಯಕ್ತಿಯು ಆತನ ದಬ್ಬಾಳಿಕೆಯ ವಿರುದ್ಧ ಪ್ರಬಲವಾಗಿ ಧನಿ ಎತ್ತುವ ವ್ಯವಸ್ಥೆಯನ್ನು ರಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಅತ್ಯಾಚಾರಕ್ಕೊಳಗಾದ ಬಗ್ಗೆ ದೂರು ದಾಖಲಿಸಿದ ಕಾರಣಕ್ಕೆ ದಲಿತ ಸಮುದಾಯದ ಮಹಿಳೆಯೊಬ್ಬರ ಸೋದರನನ್ನು ಪ್ರಬಲ ಜಾತಿಯ ಗುಂಪು ಹತ್ಯೆ ಮಾಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಚಿಕ್ಕಪ್ಪನನ್ನು ಅದೇ ಗುಂಪು ಹತ್ಯೆ ಮಾಡಿದೆ. ಮಹಿಳೆಯು ತನ್ನ ಚಿಕ್ಕಪ್ಪನ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಆಂಬುಲೆನ್ಸ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
“ನರೇಂದ್ರ ಮೋದಿಯವರು ಕಾನೂನಿನ ಆಳ್ವಿಕೆಯನ್ನು ಕೊನೆಗೊಳಿಸಿದ್ದಾರೆ. ನನ್ನ ಹೃದಯ ನೋವಿನಿಂದ ಮಿಡಿಯುತ್ತಿದ್ದು, ಅದೇ ರೀತಿ ಮಧ್ಯ ಪ್ರದೇಶದಲ್ಲಿ ದಲಿತ ಕುಟುಂಬಕ್ಕೆ ದೌರ್ಜನ್ಯವೆಸಗಿದ ಬಿಜೆಪಿ ನಾಯಕರ ಬಗ್ಗೆ ಆಕ್ರೋಶ ಕುದಿಯುತ್ತಿದೆ. ಇದು ಬಿಜೆಪಿ ಆಡಳಿತದ ನಾಚಿಕಿಗೇಡಿನ ಸಂಗತಿ. ಈ ಸರ್ಕಾರ ಯಾವಾಗಲು ಸಂತ್ರಸ್ತ ಮಹಿಳೆಯ ಪರ ಇರುವ ಬದಲು ಅಪರಾಧಿಗಳ ಪರ ನಿಲ್ಲುತ್ತದೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
ನ್ಯಾಯಾಂಗದಿಂದ ಮಾತ್ರವೇ ನ್ಯಾಯ ಪಡೆಯುವ ಪ್ರತಿಯೊಬ್ಬ ವ್ಯಕ್ತಿಗೂ ಇಂತಹ ಘಟನೆಗಳು ಧೈರ್ಯವನ್ನು ಕುಂದಿಸುತ್ತದೆ. ನಾವು ದುರ್ಬಲ ವ್ಯಕ್ತಿಯು ಆತನ ದಬ್ಬಾಳಿಕೆಯ ವಿರುದ್ಧ ಪ್ರಬಲವಾಗಿ ಧನಿ ಎತ್ತುವ ವ್ಯವಸ್ಥೆಯನ್ನು ರಚಿಸುತ್ತೇವೆ ಎಂದು ಭರವಸೆ ನೀಡುತ್ತೇವೆ. ನಾವು ಅಧಿಕಾರ ಹಾಗೂ ಹಣದ ಮೂಲಕ ನ್ಯಾಯ ಪಡೆಯುವುದಕ್ಕೆ ಅನುಮತಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮಧ್ಯ ಪ್ರದೇಶದಲ್ಲಿ ದಲಿತ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೌರ್ಜನ್ಯದ ವಿರುದ್ಧ ನ್ಯಾಯ ಕೇಳುವ ಕುಟುಂಬಗಳನ್ನು ನಾಶಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
“ಮಧ್ಯ ಪ್ರದೇಶದಲ್ಲಿ ದಲಿತ ಸೋದರಿಗಾದ ಘಟನೆಯು ಹೃದಯ ವಿದ್ರಾವಕವಾಗಿದೆ. ಬಿಜೆಪಿಯ ನಾಯಕರುಗಳಿಗೆ ಸಂವಿಧಾನ ಜಾರಿಯಾದ ನಂತರ ಮಹಿಳೆಯರು ಸೇರಿದಂತೆ ದಲಿತರು, ಬುಡಕಟ್ಟು ಸಮುದಾಯದವರು ಹಾಗೂ ಹಿಂದುಳಿದ ವರ್ಗದವರು ಘನತೆಯಿಂದ ಬದುಕುವುದು ಇಷ್ಟವಿಲ್ಲ. ದೆಹಲಿಯ ಕುಸ್ತಿಪಟುಗಳ ಸಹೋದರಿಯರು, ಹತ್ರಾಸ್ ಉನ್ನಾವೊ ಘಟನೆ ಎಲ್ಲೇ ನೋಡಿ ಮಹಿಳೆಯರ ವಿರುದ್ಧ ಭಯಾನಕವಾಗಿ ದಾಳಿಯಾಗುತ್ತಿದೆ. ನರೇಂದ್ರ ಮೋದಿ ಸರ್ಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
