ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಅವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ ಬಳಿಯಿರುವ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಬಿಜೆಪಿ–ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಬಗ್ಗೆ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ, “ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ ₹187 ಕೋಟಿ ಅವ್ಯವಹಾರವು ಕಾಂಗ್ರೆಸ್‌ನ ‘ಮಿಷನ್ ಕಮಿಷನ್’ಗೆ ತೆರೆ ಎಳೆದಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಅಹಿಂದ ಪರ ಎಂದು ಭಾಷಣ ಬಿಗಿಯುವ ಇವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕಲ್ಲು ಹಾಕುವುದಲ್ಲದೇ, ಅಭಿವೃದ್ಧಿ ನಿಗಮದಿಂದ ಕೊಳ್ಳೆ ಹೊಡೆದು, ಅಲ್ಲಿನ ಅಮಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆಗೀಡಾಗುವಂತೆ ಮಾಡಿರುವುದು ದೌರ್ಭಾಗ್ಯ” ಎಂದಿದ್ದಾರೆ.
“ಈ ಪರಿಯ ಅವ್ಯವಹಾರ ಇಲಾಖೆಯ ಸಚಿವರ ಮೂಗಿನಡಿಯಲ್ಲೇ ನಡೆದರೂ ಅವರಿಗೆ ಅರಿವಿಲ್ಲ ಎಂಬುದು ಹಾಸ್ಯಾಸ್ಪದ ಹಾಗೂ ನಂಬಲಸಾಧ್ಯ. ಬಿ.ನಾಗೇಂದ್ರ ಅವರನ್ನು ವಜಾಗೊಳಿಸಿ, ಪಾರದರ್ಶಕ ತನಿಖೆ ಈ ಕೂಡಲೇ ನಡೆಸಬೇಕು” ಎಂದು ಜೋಶಿ ಆಗ್ರಹಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ ರೂ. 187 ಕೋಟಿ ಅವ್ಯವಹಾರವು ಕಾಂಗ್ರೆಸ್ ನ ಮಿಷನ್ ಕಮಿಷನ್ ಗೆ ತೆರೆ ಎಳೆದಿದೆ. ಅಹಿಂದ ಪರ ಎಂದು ಭಾಷಣ ಬಿಗಿಯುವ ಇವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕಲ್ಲು ಹಾಕುವುದಲ್ಲದೇ, ಅಭಿವೃದ್ಧಿ ನಿಗಮದಿಂದ ಕೊಳ್ಳೆ ಹೊಡೆದು, ಅಲ್ಲಿನ ಅಮಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆಗೀಡಾಗುವಂತೆ ಮಾಡಿರುವುದು…
— Pralhad Joshi (Modi Ka Parivar) (@JoshiPralhad) May 28, 2024
ಕೆ ಎಸ್ ಈಶ್ವರಪ್ಪ ವಾಗ್ದಾಳಿ
ಚಂದ್ರಶೇಖರ್ ಆತ್ಮಹತ್ಯೆ ವಿಚಾರವಾಗಿ ಮಾಜಿ ಸಚಿವ ಮತ್ತು ಬಿಜೆಪಿಯಿಂದ ಉಚ್ಚಾಟಿತವಾಗಿರುವ ನಾಯಕ ಕೆ ಎಸ್ ಈಶ್ವರಪ್ಪ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, “ಹಿಂದೆ ನನ್ನ ವಿರುದ್ಧ ಆರೋಪ ಬಂದಾಗ ರಾಜೀನಾಮೆ ನೀಡುವಂತೆ ಹೋರಾಟ ನಡೆಸಿದ್ರಲ್ಲ, ನಿಮಗೆ ನೈತಿಕತೆ ಇದ್ದರೆ, ನಿಮ್ಮ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದು ಪ್ರಕರಣದ ತನಿಖೆ ನಡೆಸಿ, ದ್ವಿಮುಖ ನಿಲುವು ಯಾಕೆ” ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
“ಸಿವಿಲ್ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ನನ್ನ ಮೇಲೆ ಆರೋಪ ಬಂದ ಸಂದರ್ಭದಲ್ಲಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆಗ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ನಿಮ್ಮ ಸರ್ಕಾರದ ಸಚಿವ ಬಿ. ನಾಗೇಂದ್ರ ಮೇಲೆ ಆರೋಪ ಕೇಳಿಬಂದಿದೆ. ಯಾರು ಬೇಕಾದರೂ ಸಾಯಲಿ ಎಂದು ಅಂದುಕೊಂಡಿದ್ದೀರಾ? ಯಾವ ನಿರ್ಧಾರ ತಳೆಯುವಿರಿ? ಮೊದಲು ರಾಜೀನಾಮೆ ಪಡೆದು, ತನಿಖೆ ನಡೆಸಿ” ಎಂದು ಒತ್ತಾಯಿಸಿದ್ದಾರೆ.
