ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಶಿಲಾ ಸ್ಮಾರಕದಲ್ಲಿ ಮೇ 30ರಂದು ಮೂರು ದಿನಗಳ ಕಾಲ ಧ್ಯಾನಕ್ಕಾಗಿ ಆಗಮಿಸುತ್ತಿರುವುದನ್ನು ತಮಿಳುನಾಡು ಕಾಂಗ್ರೆಸ್ ವಿರೋಧಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ತಮಿಳುನಾಡು ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾದ ಕೆ ಸೆಲ್ವಪೆರುನಾಥಗೈ ಅವರು, ಮಾದರಿ ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ಪ್ರಧಾನ ಮಂತ್ರಿಯವರ ಈ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು. ಇಂತಹ ನಡೆಯು ಪ್ರಚಾರದ ನಂತರವು ಪರೋಕ್ಷವಾಗಿ ಪ್ರಚಾರ ಮಾಡುವ ಪ್ರಯತ್ನವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೊಪ್ಪಿಸುತ್ತಿದೆಯೇ ಸರಕಾರ?
“ಚುನಾವಣೆಗೂ ಮುನ್ನ 48 ಗಂಟೆಗಳು ಮೌನ ಅವಧಿಯಾಗಿರುವ ಸಂದರ್ಭದಲ್ಲಿ ಮೋದಿಯವರು ಮಾಧ್ಯಮಗಳ ಮೂಲಕ ರಹಸ್ಯ ರೀತಿಯಲ್ಲಿ ಪ್ರಚಾರ ಮಾಡುತ್ತಿರುವುದು ಇದರಲ್ಲಿ ಸ್ಪಷ್ಟವಾಗಿದೆ” ಎಂದು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥರು ತಿಳಿಸಿದ್ದಾರೆ.
“ಇದಕ್ಕೆ ಸಂಬಂಧಿಸಿದಂತೆ ನಾಳೆ ಚುನಾವಣಾ ಆಯೋಗಕ್ಕೆ ಪತ್ರವನ್ನು ನೀಡುತ್ತೇವೆ. ಅಗತ್ಯವೆನಿಸಿದರೆ ಗೌರವಾನ್ವಿತ ನ್ಯಾಯಾಲಯಕ್ಕೂ ಮನವಿ ಮಾಡುತ್ತೇವೆ” ಎಂದು ಕೆ ಸೆಲ್ವಪೆರುನಾಥಗೈ ಹೇಳಿದ್ದಾರೆ.
ಪ್ರಧಾನಿ ಕನ್ಯಾಕುಮಾರಿಗೆ ಆಗಮಿಸುತ್ತಿರುವ ಕಾರಣ ಭಾರಿ ಭದ್ರತೆಯನ್ನು ಏರ್ಪಡಿಸಲಾಗಿದೆ. 2000 ಪೊಲೀಸರು ಹಾಗೂ ವಿವಿಧ ಭದ್ರತಾ ದಳದವರನ್ನು ನಿಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಚುನಾವಣಾ ಪ್ರಚಾರ ಮುಗಿದ ನಂತರ ಉತ್ತರಾಖಂಡದ ಕೇದಾರನಾಥ ಗುಹೆಗೆ ತೆರಳಿದ್ದರು.
