ಈ ದಿನ ಸಂಪಾದಕೀಯ | ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೊಪ್ಪಿಸುತ್ತಿದೆಯೇ ಸರಕಾರ?

Date:

ಶಿಕ್ಷಣ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸರಕಾರ ಸೋಲುತ್ತಲೇ ಸಾಗಿದೆ. ಸರಕಾರದ ಈ ವೈಫಲ್ಯ ಖಾಸಗಿಯವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಶಿಕ್ಷಣ ವ್ಯವಸ್ಥೆ ನಿಧಾನವಾಗಿ ಖಾಸಗಿಯವರ ಆಕ್ಟೋಪಸ್ ಹಿಡಿತಕ್ಕೆ ಒಳಗಾಗುತ್ತಿದೆ. ಇದು ಭವಿಷ್ಯದಲ್ಲಿ ಬಡವರು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುವುದಿಲ್ಲವೇ?

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಂದು ಪುನರಾರಂಭವಾಗುತ್ತಿದ್ದು, 31ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟವೂ ಇರಲಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಪ್ರಾಶಸ್ತ್ಯ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಕಳೆದವ‍ರ್ಷ ಇದೇ ಸಂದರ್ಭದಲ್ಲಿ, ಆಗತಾನೆ ಸರ್ಕಾರ ರಚನೆಯಾಗಿತ್ತು. ಶಿಕ್ಷಣ ಖಾತೆ ವಹಿಸಿಕೊಂಡ ಮಧು ಬಂಗಾರಪ್ಪನವರು ಖಾತೆಗೆ ಹೊಸಬರಾಗಿ, ಕೊಂಚ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ನಿಜ.

ಜೊತೆಗೆ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚಿಸುವುದು, ಸಮಿತಿ ವರದಿ ನೀಡುವಲ್ಲಿ ತೋರಿದ ವಿಳಂಬದಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವರ್ಷಪೂರ್ತಿ ಗೊಂದಲದಲ್ಲಿಯೇ ಮುಳುಗಿದರು. ಸಮವಸ್ತ್ರ ವಿತರಣೆಯಂತೂ ಅಧ್ವಾನವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವರ್ಷ ಖಾತೆಯ ಮೇಲೆ ಕೊಂಚ ಹಿಡಿತ ಸಾಧಿಸಿದಂತೆ ಕಾಣುವ ಮಧು ಬಂಗಾರಪ್ಪ, ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯ ವಿಷಯದಲ್ಲಿ ಎಚ್ಚರ ವಹಿಸಿದ್ದಾರೆ. ಆದರೆ ಶಾಲೆಗಳಲ್ಲಿ ಅತಿ ಮುಖ್ಯವಾಗಿ ಇರಲೇಬೇಕಾದ ಶಿಕ್ಷಕರ ನೇಮಕಾತಿ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ‘ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದಿರುವುದು ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ಬರೆದಿಟ್ಟಂತೆ ಕಾಣುತ್ತಿದೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎನ್ನುವುದು ಇಂದು ನಿನ್ನೆಯ ಸಮಸ್ಯೆಯಲ್ಲ, ನಿಜ. ಆದರೆ, ಸರಕಾರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಏಕೋ ಮೀನಮೇಷ ಎಣಿಸುತ್ತಿದೆ. ಗುರುತರವಾದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅತಿಥಿ ಶಿಕ್ಷಕರ ನೇಮಕಕ್ಕೆ ಮುಂದಾಗಿದೆ. ಇದು ಸರಿಯಾದ ಕ್ರಮವಲ್ಲ, ಇದರಿಂದ ಗುಣಮಟ್ಟದ ಶಿಕ್ಷಣ ದೊರಕುವುದಿಲ್ಲ. ಸರಕಾರಕ್ಕೂ ಒಳ್ಳೆಯ ಹೆಸರು ತರುವುದಿಲ್ಲ. ಸರಕಾರದ ಹಣಕಾಸಿನ ಪರಿಸ್ಥಿತಿ ಹೇಗಿದ್ದರೂ, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶಿಕ್ಷಣಕ್ಕೆ ಸರಕಾರ ಆದ್ಯತೆ ನೀಡಬೇಕು.

ಸರಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆಯನ್ನು ಅರಿಯಲು ಬಿಬಿಎಂಪಿ ಶಾಲೆಗಳ ಬಗ್ಗೆ ಸರಕಾರದ ನಿಲುವನ್ನು ಗಮನಿಸಬಹುದು. ಬಿಬಿಎಂಪಿಯ ಶಾಲೆಗಳು ಕೆಲವು ಕಡೆ ಶಾಸಕರ ಆಸಕ್ತಿಯಿಂದ ಹೈಟೆಕ್ ಶಾಲೆಗಳಾಗಿವೆ. ಆದರೆ ಹಲವು ಕಡೆ ಪಾಳುಬಿದ್ದ ಮನೆಗಳಂತೆ ಕಾಣುತ್ತಿವೆ. ಇದೇ ಕಾರಣವನ್ನು ಮುಂದಿಟ್ಟು ಕಳೆದ ಕೆಲ ವರ್ಷಗಳಿಂದ ಬಿಬಿಎಂಪಿಯ ಶಾಲೆಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ಒಪ್ಪಿಸುವ ಕುರಿತ ಮಾತುಕತೆ ನಡೆಯುತ್ತಿದೆ. ಈ ಶಾಲೆಗಳಲ್ಲಿ ಕಳೆದ 20 ವರ್ಷಗಳಿಂದ 772 ಶಿಕ್ಷಕರು ಗುತ್ತಿಗೆ ಆಧಾರದ ಮೇಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಖಾಯಮಾತಿಯೂ ಆಗಿಲ್ಲ, ಸೇವಾ ಭದ್ರತೆಯೂ ಸಿಕ್ಕಿಲ್ಲ. ಇವುಗಳ ನಡುವೆಯೇ ಮತ್ತೆ 700 ಹೊಸ ಗುತ್ತಿಗೆ ಶಿಕ್ಷಕರ ನೇಮಕಕ್ಕೆ ಬಿಬಿಎಂಪಿ ಮುಂದಾಗಿದೆ. ವಿಪರ್ಯಾಸಕರ ಸಂಗತಿ ಎಂದರೆ, ಆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮೂರು ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕಾರ್ಯಾದೇಶವನ್ನೂ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಸೆಕ್ಯುರಿಟಿ ಏಜೆನ್ಸಿಗಳಿಗೂ ಏನು ಸಂಬಂಧ? ಇಲ್ಲಿಂದ ಆಯ್ಕೆಯಾಗುವ ಶಿಕ್ಷಕರಿಂದ ಇನ್ನೆಂತಹ ಶಿಕ್ಷಣ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?

ಇದು ಬಿಬಿಎಂಪಿ ಶಾಲೆಗಳ ವಿಚಾರವಾದರೆ, ರಾಜ್ಯದಾದ್ಯಂತ ಇರುವ ಸರಕಾರಿ ಶಾಲೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಸವಲತ್ತುಗಳು ಹಾಗೂ ಶಿಕ್ಷಕರ ಕೊರತೆಯೇ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಕೆಲವು ಕಡೆ ಎಲ್ಲ ಕೆಲಸ ಕಾರ್ಯಗಳನ್ನು ಒಬ್ಬನೇ ಶಿಕ್ಷಕ ನಿರ್ವಹಿಸಬೇಕಾದ ಪರಿಸ್ಥಿತಿಯೂ ಇದೆ. ಸರಕಾರ ಮತ್ತು ಶಿಕ್ಷಣ ಇಲಾಖೆ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರ ಕೌಶಲ ಮತ್ತು ಬೋಧನೆಯ ಗುಣಮಟ್ಟ ಸುಧಾರಣೆಯ ಕಡೆಗೆ ಗಮನ ಹರಿಸಬೇಕಿದೆ. ಇಲ್ಲದಿದ್ದರೆ, ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದು ಸಾಧ್ಯವಿಲ್ಲ.

ಇವತ್ತಿನ ದಿನಗಳಲ್ಲಿ ಖಾಸಗಿ ಶಾಲೆಗಳೆಂಬ ವ್ಯಾಪಾರಿ ಕೇಂದ್ರಗಳು ಶಿಕ್ಷಣವನ್ನು ಮಾರುಕಟ್ಟೆಯಲ್ಲಿಟ್ಟು ಮಾರಾಟ ಮಾಡುತ್ತಿವೆ. ಗುಣಮಟ್ಟದ ಶಿಕ್ಷಣದ ನೆಪದಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಈ ಶಾಲೆಗಳಲ್ಲಿ ಶಿಕ್ಷಕರಿಲ್ಲ ಎಂದರೆ, ಪೋಷಕರು ಪ್ರಶ್ನಿಸುತ್ತಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಇದೇ ದೊಡ್ಡ ಸಮಸ್ಯೆ. ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರು ಹೆಚ್ಚಿನ ಪಾಲು ಬಡವರೇ ಆಗಿರುತ್ತಾರೆ. ಈ ಸಮಸ್ಯೆಗೆ ಬಲಿಯಾಗುವವರು ಕೂಡ ಆ ಬಡವರ ಮಕ್ಕಳಾಗಿರುತ್ತಾರೆ. ಹೀಗಾಗಿ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ಮಕ್ಕಳ ನಡುವಿನ ಸಾಧನೆಯ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಪರೋಕ್ಷವಾಗಿ ಇದು ಪರಿಣಾಮ ಬೀರುವುದು ಶಿಕ್ಷಣ ವ್ಯವಸ್ಥೆಯ ಮೇಲೆ.

ಇದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಎದ್ದುಕಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಏರುತ್ತಾ ಸಾಗಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿ ತೀವ್ರ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣವೂ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ಪದವಿ ಕೋರ್ಸ್‌ಗಳಲ್ಲಿ ಎನ್ಇಪಿ ತಿರಸ್ಕರಿಸಿರುವ ರಾಜ್ಯ ಸರಕಾರ, ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿಯೇ ವರ್ಷ ಕಳೆದಿದೆ.

ಒಟ್ಟಾರೆ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವಲ್ಲಿ, ಗುಣಮಟ್ಟ ಹೆಚ್ಚಿಸುವಲ್ಲಿ, ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸರಕಾರ ಸೋಲುತ್ತಲೇ ಸಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರತಿವರ್ಷ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಸರಕಾರದ ಈ ವೈಫಲ್ಯ ಖಾಸಗಿಯವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಶಿಕ್ಷಣ ವ್ಯವಸ್ಥೆ ನಿಧಾನವಾಗಿ ಖಾಸಗಿಯವರ ಆಕ್ಟೋಪಸ್ ಹಿಡಿತಕ್ಕೆ ಒಳಗಾಗುತ್ತಿದೆ. ಇದು ಭವಿಷ್ಯದಲ್ಲಿ ಬಡವರು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

ಇಂಡಿಯಾ ಒಕ್ಕೂಟ ಮೈತ್ರಿ ಹುಟ್ಟಿದ್ದೇ ಒಂದು ಚಮತ್ಕಾರ. ಸೀಟು ಹೊಂದಾಣಿಕೆ ಪೂರ್ಣ...

ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು...

ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?

ದೇಶದ ದೊಡ್ಡ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಾರ್ಟಿ ಅವನತಿಯ ಹಾದಿಯಿಂದ ಮೈಕೊಡವಿ...

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ

ಫಲಿತಾಂಶ ಹೊರಬಿದ್ದಿದೆ. ರಾಜಕೀಯ ಪಕ್ಷಗಳ, ಸುದ್ದಿ ಮಾಧ್ಯಮಗಳ, ರಾಜಕೀಯ ವಿಶ್ಲೇಷಕರ, ಪಂಡಿತರ...