ಬೀದರ್ ನಗರದ ಗುರುನಾನಕ ದೇವ ಕಾಲೇಜಿನಲ್ಲಿ ಯುವಕರು ಜೈಶ್ರೀರಾಮ ಹಾಡು ಹಾಕಿದಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ವಿರೋಧಿಸಿ, ಹಿಂದು ಯುವಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ, ಕೂಡಲೇ ಹಲ್ಲೆ ಮಾಡಿರುವ ಎಲ್ಲರನ್ನೂ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಪ್ರಚೋದಿಸಿ, ಬಹುಸಂಖ್ಯಾತರ ಮೇಲೆ ಹಲ್ಲೆ, ಕೊಲೆ, ದಬ್ಬಾಳಿಕೆ ನಡೆಸಲು ಅವಕಾಶ ನೀಡಿ ತನ್ನ ಹೇಡಿತನ ತೋರಿಸುತ್ತಿದೆ. ಬೀದರಿನ ಜಿಎನ್‌ಡಿ ಕಾಲೇಜಿನ ಘಟನೆ, ನ್ಯೂಟೌನ್ ಸಿಪಿಐ ಮೇಲೆ ರೌಡಿ ರಸೂಲ್ ಚಾಕು ಇರಿತ ಮತ್ತು ಚನ್ನಗಿರಿ ಪೋಲಿಸ್ ಸ್ಟೇಷನ್ ಮೇಲೆ ದಾಳಿಯನ್ನು ಕೇಂದ್ರ ಸಚಿವ ಖೂಬಾ ಖಂಡಿಸಿದ್ದಾರೆ.
“ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಗುರುನಾನಕ ಕಾಲೇಜಿಗೆ ತೆರಳಿ, ಹಲ್ಲೆ ಮಾಡಿರುವ ವಿದ್ಯಾರ್ಥಿಗಳಿಗೆ ರಕ್ಷಿಸುವಂತೆ ಕಾಲೇಜಿನವರಿಗೆ ತಿಳಿಸಿರುವುದು ನಾಚಿಕೆಗೇಡಿತನ ಮತ್ತು ಪಕ್ಷಪಾತ ಧೋರಣೆ ತೋರಿಸುತ್ತದೆ. ಇವರಿಗೆ ಹಿಂದೂ ಜನರು ಮತ ಹಾಕಿ ಗೆಲ್ಲಿಸಿದ್ದಕ್ಕೆ ಒಳ್ಳೆಯ ಉಪಕಾರ ಮಾಡುತ್ತಿದ್ದಾರೆ” ಎಂದು ಸಚಿವ ಖೂಬಾ ಆಕ್ರೋಶ ಹೊರಹಾಕಿದ್ದಾರೆ.
ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಂ ಖಾನ್ ಒತ್ತಡಕ್ಕೆ ಮಣಿದು ಹಲ್ಲೆಗೊಳಗಾದ ಹಿಂದೂ ಯುವಕರ ಮೇಲೂ ಎಫ್‌ಐಆರ್ ಮಾಡಲಾಗಿದ್ದು, ಕೂಡಲೇ ಕೇಸ್ ವಾಪಸ್ ಪಡೆಯಬೇಕು. ಜಿಲ್ಲಾಡಳಿತವಾದರೂ ನ್ಯಾಯ ಕೊಡುವ ಕೆಲಸ ಮಾಡಬೇಕೆಂದು ಗುರುವಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ʼಎನ್‌ಎಸ್‌ಯುಐʼ ಕುಮ್ಮಕ್ಕು :
“ಸುಮಾರು ದಿನಗಳಿಂದ ಈ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಅನ್ಯ ಕೋಮಿನವರು ಅನಗತ್ಯವಾಗಿ
ಚುಡಾಯಿಸುವುದು, ತೊಂದರೆ ಕೊಡುವುದು ಮಾಡುತ್ತಿದ್ದಾರೆ. ಹಿಂದೂ ಯುವಕರ ಜೊತೆ ವಿನಾಕಾರಣ ಜಗಳಕ್ಕೆ ಇಳಿಯುವುದು ಮಾಡುತ್ತಿದ್ದಾರೆ ಎಂದು ಯುವಕರು ನನ್ನ ಗಮನಕ್ಕೆ ತಂದಿದ್ದಾರೆ, ಇದಕ್ಕೆ ಎನ್‌ಎಸ್‌ಯುಐ ಕುಮ್ಮಕ್ಕು ನೀಡುತ್ತಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ ಚಲೋ | ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಹೋರಾಟಗಾರ್ತಿ ಕೆ ನೀಲಾ
ಇಂತಹ ಘಟನೆಗಳಿಗೆ ಕಾಲೇಜು ಆಡಳಿತ ಮಂಡಳಿ ಆಸ್ಪದ ನೀಡಬಾರದು. ಹಲ್ಲೆ ಮಾಡಿರುವ ವಿದ್ಯಾರ್ಥಿಗಳನ್ನು ಕೂಡಲೇ ಕಾಲೇಜಿನಿಂದ ಹೊರಹಾಕಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಪೋಷಕರಿಗೆ ತಿಳಿಸಲು ಕಾಲೇಜು ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಖೂಬಾ ಒತ್ತಾಯಿಸಿದ್ದಾರೆ.