ಪಂಜಾಬ್ ‘ಭೂಮಿ, ಡ್ರಗ್ಸ್ ಮತ್ತು ಮರಳು ಮಾಫಿಯಾ’ವಾಗಿ ಬದಲಾಗಿದೆ. ಪಂಜಾಬ್‌ನ ಮಾಫಿಯಾವನ್ನು ಹತ್ತಿಕ್ಕಲು ಉತ್ತರ ಪ್ರದೇಶದ ಬುಲ್ಡೋಜರ್‌ಗಳನ್ನು ಕಳಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಗುರುವಾರ, ಪಂಜಾಬ್‌ನ ಲೂಧಿಯಾನ ಮತ್ತು ಆನಂದಪುರ ಸಾಹಿಬ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು “ಪಂಜಾಬ್‌ನ ಪುಣ್ಯ ಭೂಮಿಯನ್ನು ಎಎಪಿ ಸರ್ಕಾರ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳು ‘ಅಶುದ್ಧ’ಗೊಳಿಸಿವೆ. ಕಾಂಗ್ರೆಸ್ ಮತ್ತು ಎಎಪಿಗೆ ಪಂಜಾಬ್ ಜನರ ಭಾವನೆಗಳು ಅರ್ಥವಾಗುತ್ತಿಲ್ಲ. ಈ ಸರ್ಕಾರಗಳ ನಿರಾಸಕ್ತಿಯಿಂದಾಗಿಯೇ ರಾಜ್ಯ ಭೂಮಾಫಿಯಾ, ಡ್ರಗ್ ಮಾಫಿಯಾ, ಮರಳು ಮಾಫಿಯಾಗಳ ಕೂಪವಾಗಿ ಮಾರ್ಪಟ್ಟಿದೆ. ಈ ಮಾಫಿಯಾಗಳನ್ನು ಹತ್ತಿಕ್ಕಬೇಕು. ಇದಕ್ಕಾಗಿ ಲೂಧಿಯಾನ ಮತ್ತು ಆನಂದಪುರ ಸಾಹಿಬ್‌ನ ಜನರು ಮತ ಚಲಾಯಿಸಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು” ಎಂದರು.
“ಮಾಫಿಯಾಗಳನ್ನು ಹತ್ತಿಕ್ಕಲು ನಾನು ಉತ್ತರಪ್ರದೇಶದಿಂದ ಬುಲ್ಡೋಜರ್‌ಗಳನ್ನು ಕಳುಹಿಸುತ್ತೇನೆ. ಪಂಜಾಬ್‌ನಲ್ಲಿ ಬಿಜೆಪಿ ಮುಂದಿನ ಸರ್ಕಾರವನ್ನು ರಚಿಸಿದರೆ, ಅದು 48 ಗಂಟೆಗಳಲ್ಲಿ ಮಾಫಿಯಾ ಗುಂಪುಗಳನ್ನು ತೊಡೆದುಹಾಕುತ್ತದೆ” ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಜೂನ್ 1ರಂದು ನಡೆಯಲಿದೆ. ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬರಲಿದೆ.