ಕರ್ನಾಟಕದಲ್ಲಿ ಮುಂಗಾರು ಮಳೆಯ ನಿರೀಕ್ಷೆ ಹೆಚ್ಚಾಗಿದ್ದು, ಮುಂದಿನ ಏಳು ದಿನ ರಾಜ್ಯದ ಹಲವೆಡೆ ಗುಡುಗು ಸಹಿತ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವೆಡೆ ಮೇ 31ರಂದು ಮಳೆಯಾಗಲಿದೆ. ಉಳಿದಂತೆ ಬೆಂಗಳೂರು, ಮೈಸೂರು ಸೇರಿ 12 ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 1ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಜತೆಗೆ, 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಹೇಳಿದೆ.
ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯನಗರ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಕಲಬುರ್ಗಿ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಆಂತರಿಕ ಕರ್ನಾಟಕದ ಎಲ್ಲ ಜಿಲ್ಲೆಗಳ ಮೇಲೆ (40-50 kmph) ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ. ಜೂನ್ 6ರವರೆಗೂ ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂದಿನ ಮೂರು ದಿನ ರಾಜ್ಯದಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗುವುದಿಲ್ಲ. ರಾಜ್ಯದಾದ್ಯಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ತಾಪಮಾನ ಕುಸಿಯುತ್ತದೆ ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ; ಹೆಚ್ಚಿನ ಜನರಿಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ
ಮುಂದಿನ ಎರಡು ದಿನ ಬೆಂಗಳೂರು ನಗರದ ಕೆಲವೆಡೆ ಮೋಡಕವಿದ ವಾತಾವರಣ ಇರಲಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಬಹುದು. ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಶಿಯಸ್ ಕನಿಷ್ಠ 23 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಹೇಳಿದೆ.