ಜೂನ್ 3ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದೆ. ಅಂದರೆ, ವಿಧಾನಸಭಾ ಶಾಸಕರು ವಿಧಾನ ಪರಿಷತ್‌ಗೆ 13 ಮಂದಿ ಸದಸ್ಯರ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. 13 ಸ್ಥಾನಗಳಲ್ಲಿ ಬಿಜೆಪಿ 3 ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹಿಂದಿದ್ದು, ಮೂವರು ಅಭ್ಯರ್ಥಿಗಳು ಬಿಜೆಪಿ ಹೈಕಮಾಂಡ್ ಫೈನಲ್ ಮಾಡಿದೆ ಎಂದು ತಿಳಿದುಬಂದಿದೆ. ಅದರಲ್ಲಿ, ಸಂಸದ ಸುಮಲತಾ ಹೆಸರೂ ಇದೆ ಎಂದು ಹೇಳಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದು ಸಂಸದೆಯಾಗಿದ್ದ ಸುಮಲತಾ, ಇತ್ತೀಚೆಗೆ ಬಿಜೆಪಿ ಸೇರಿದ್ದರು. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಜೆಡಿಎಸ್ ಪಾಲಾದ ಮಂಡ್ಯದಲ್ಲಿ ಸುಮಲತಾ ಟಿಕೆಟ್ ವಂಚಿತೆಯಾಗಿದ್ದರು. ಅಲ್ಲದೆ, ಚುನಾವಣೆಯ ವೇಳೆ ಮೈತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಹೇಳಿದ್ದರೂ, ಚುನಾವಣಾ ಪ್ರಚಾರದಿಂದ ಕಾಣೆಯಾಗಿದ್ದರು.
ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದರೂ, ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ಮಣಿದು ಮೌನವಾಗಿದ್ದರು. ಇದೀಗ, ಅವರಿಗೆ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಅವಕಾಶ ನೀಡದೆ ಎನ್ನಲಾಗುತ್ತಿದೆ. ಸುಮಲತಾ ಜೊತೆಗೆ, ಎನ್ ರವಿಕುಮಾರ್ ಮತ್ತು ಎಂ ನಾಗರಾಜು ಅವರಿಗೂ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇಂದು (ಜೂನ್ 1) ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ರಾಜ್ಯ ಬಿಜೆಪಿ ನಾಯಕತ್ವವು 15 ಮಂದಿಯ ಹೆಸರುಗಳನ್ನು ಬಿಜೆಪಿ ಹೈಕಮಾಂಡ್‌ಗೆ ಕಳಿಸಿತ್ತು. ಅವರಲ್ಲಿ ಮೂವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಮಹಿಳಾ ಪ್ರಾತಿನಿಧ್ಯವೂ ಇರಬೇಕೆಂದು ರಾಜ್ಯ ನಾಯಕರು ಹೇಳಿದ್ದು, ಹೀಗಾಗಿ ಸುಮಲತಾ ಹೆಸರು ಮುನ್ನೆಲೆಯಲ್ಲಿದೆ.