ಸಾಹಿತ್ಯ ಚಿಂತನ-ಮಂಥನ | ವೈದೇಹಿ ಸಮಗ್ರ ಸಾಹಿತ್ಯವನ್ನು ಹೊಸ ಕಣ್ಣಿನಲ್ಲಿ ನೋಡುವ ಪ್ರಯತ್ನ

Date:

Advertisements
ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಲೋಕದ ಹಿರಿಯ, ಸೂಕ್ಷ್ಮ ಬರಹಗಾರರಾದ ವೈದೇಹಿಯವರ ವೈಚಾರಿಕ ಆಳ, ಭಾಷಾ ಸೊಗಡು ಮತ್ತು ಭಾವನಾಲೋಕವನ್ನು ಅನಾವರಣಗೊಳಿಸಿದ್ದಾರೆ
ಲೇಖಕಿ, ವಿಮರ್ಶಕಿ ಎಂ.ಎಸ್. ಆಶಾದೇವಿ…

‘ಏನಿದ್ದೂ ಕಿಂಚಿದೂನ’ ಎನ್ನುವುದು ಒಟ್ಟಾರೆಯಾಗಿ ಹೆಣ್ಣಿನ ಅಭಿವ್ಯಕ್ತಿಯನ್ನು ಕುರಿತಂತೆ ಇದ್ದ, ಇರುವ ಒಳನೋಟ ಮತ್ತು ಹೊರನೋಟ. ಭಾರತದ ಪ್ರಮುಖ ಬರೆಹಗಾರರು ಎನ್ನುವ ವೇದಿಕೆಯಲ್ಲಿ ಎಲ್ಲೋ ಕೆಲವರನ್ನು ತುದಿಯಲ್ಲಿ ಕೂರಿಸಿ, ಆಯಿತೇ ಸಮಾಧಾನ ಎಂದು ನೋಡುವ ಪರಿಸ್ಥಿತಿ ಎಂದಾದರೂ ಬದಲಾದೀತು. ‘ಅವರ’ ಒಪ್ಪಿಗೆ, ಮೆಚ್ಚುಗೆಯನ್ನು ಕುರಿತ ಮಾತಲ್ಲ ಇದು. ನಿಮ್ಮದೇ ವೈಕಲ್ಯ ನಿಮಗೆ ವೈಕಲ್ಯವಾಗಿ ಕಾಣದ ಹೊರತು ನಿಜದಲ್ಲಿ ಏನೂ ಬದಲಾವಣೆಯಾಗದು ಎನ್ನುವ ನಿಟ್ಟುಸಿರು.

ಈ ಇಂಥ ಮಾತು ವೈದೇಹಿಯವರ ವಿಷಯದಲ್ಲಿ ಅಗತ್ಯವಿಲ್ಲ ಎನ್ನುವವರೂ ಇದ್ದಾರೆ. ಅವರ ಸಾಹಿತ್ಯವನ್ನು ಅಪಾರ ಪ್ರೀತಿಯಲ್ಲಿಯೇ ಕನ್ನಡ ಲೋಕ ಸ್ವೀಕರಿಸಿದೆ ಎನ್ನುವ ಮಾತನ್ನು ಅಲ್ಲಗಳೆಯುವ ಅವಶ್ಯಕತೆಯಿಲ್ಲ. ಆದರೆ, ಅವರ ಸಾಹಿತ್ಯವನ್ನು ಓದಬೇಕಾದ ಕ್ರಮದಲ್ಲಿ, ಅರ್ಥೈಸಿಕೊಳ್ಳಬೇಕಾದ ನೆಲೆಗಳಲ್ಲಿ ಓದುವುದು ಆರಂಭವಾಗಿದ್ದು ಬಲು ತಡವಾಗಿ. ವೈದೇಹಿಯವರ ಸಾಹಿತ್ಯದ ಮಿತಿಗಳು ಎಂದು ಕೆಲವರು ಗುರುತಿಸಿರುವುದನ್ನು ಗಮನಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಹೆಣ್ಣಿನ ಲೋಕಮೀಮಾಂಸೆ, ಅವಳ ಭಾಷೆ, ಸುಖ ದುಃಖಗಳ ಅವಳ ವ್ಯಾಖ್ಯಾನ… ಈ ಎಲ್ಲವೂ ಗಂಡಿಗಿಂತ ತೀರ ಭಿನ್ನ. ಇವುಗಳನ್ನು ಅವಳ ಅನನ್ಯತೆಯ ಕೇಂದ್ರದಲ್ಲಿಯೇ ಗುರುತಿಸಬೇಕಾದ್ದು ಮೊದಲ ಸಂಗತಿ. ಎಲ್ಲೋ ಕೆಲ ವಿಮರ್ಶಕರನ್ನು ಬಿಟ್ಟರೆ ಮಿಕ್ಕವರು ಹೆಣ್ಣನ್ನು ಅರಿಯುವ ದಾರಿಯಲ್ಲಿದ್ದೇವೆ ಎನ್ನುವ ಮಿಥ್ಯೆಯ ಪ್ರಭಾವಳಿಯಲ್ಲಿಯೇ ಇದ್ದಾರೆ. ಅಂತಃಕರಣದ ಒಳಗಣ್ಣು ತೆರೆಯದೇ ಬೌದ್ಧಿಕವಾಗಿ ಮಾತ್ರ ಬದಲಾದ ಸನ್ನಿವೇಶಗಳು ನಮ್ಮನ್ನು ಎಲ್ಲಿಗೂ ಒಯ್ಯಲಾರವು ಮಾತ್ರವಲ್ಲ ಹೆಣ್ಣಿನ ಮೇಲಿನ ಹಕ್ಕಲ್ಲದ ಹಕ್ಕನ್ನು ಸ್ಥಾಪಿಸಲು ಈ ಹಿಂದೆಂದೂ ಕಾಣದ ಮಾರ್ಗಗಳನ್ನು ಈ ಕಾಲ ಹುಡುಕುತ್ತಿದೆ ಎನ್ನುವುದು ಈ ಮಿಥ್‌ನ ಸತ್ಯವನ್ನು ಬಯಲು ಮಾಡುತ್ತದೆ. ಇತ್ತೀಚಿನ ಘಟನೆಗಳು ಇದಕ್ಕಿರುವ ದೊಡ್ಡ ಪುರಾವೆ. ಇದರಲ್ಲಿ ನಮ್ಮ ತಪ್ಪುಗಳೂ ಇವೆ ಎನ್ನುವುದನ್ನು ವಿಷಾದದಿಂದ, ಪಾಪಪ್ರಜ್ಞೆಯಿಂದ ನಾವು ಒಪ್ಪಬೇಕು. ಆಳ್ವಾಸ್‌ನಲ್ಲಿನ ವಿದ್ಯಾರ್ಥಿನಿಯ ಪ್ರಕರಣವಾಗಲಿ, ಸೌಜನ್ಯ ಪ್ರಕರಣವಾಗಲಿ ನಾವು ಹೇಗೆ ಅದನ್ನು ಎದುರಿಸಬೇಕಿತ್ತೋ ಹಾಗೆ ಎದುರಿಸದ ಹೊಣೆಯನ್ನು ನಾವು ಹೊರಲೇಬೇಕು.

ವೈದೇಹಿಯವರನ್ನು ಕುರಿತ ಬರೆಹದಲ್ಲಿ ಈ ಅಂಶಗಳ ಪ್ರಸ್ತಾಪ ಮಾಡಿದ್ದು, ಈ ಎಲ್ಲವೂ ಒಂದಕ್ಕೊಂದು ಬಿಡಿಸಬರದಂತೆ ಸೇರಿವೆ ಎನ್ನುವ ಕಾರಣಕ್ಕೆ. ವೈದೇಹಿಯವರ, ಅವರನ್ನು ಕುರಿತ ಮೂರು ಪುಸ್ತಕಗಳು ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ಲೇಖಕಿಯರ ಸ್ಥಿತಿ- ಗತಿಗಳು ಮತ್ತು ಹೆಣ್ಣಿನ ಅವಸ್ಥೆಗಳ ಸಂಬಂಧ ತೀವ್ರವಾದಷ್ಟೂ ಎರಡೂ ಬಲವಾಗುತ್ತವೆ.

Advertisements

ವೈದೇಹಿಯವರ ವ್ಯಕ್ತಿಚಿತ್ರಗಳ ರಾಗಮಾಲೆ ‘ನೆನಪು ಏಕತಾರಿ’, ವೈದೇಹಿಯವರ ಸಮಗ್ರ ಸಾಹಿತ್ಯವನ್ನು ಕುರಿತ  ಡಾ. ಬಿ.ಎನ್. ಸುಮಿತ್ರಾಬಾಯಿಯವರ ‘ಸೀಮಾಂತೆ ಅಲ್ಲ ಸೀಮಾತೀತೆ’, ವೈದೇಹಿಯವರ ಮಹಿಳಾ ಕೇಂದ್ರಿತ ಬರೆಹಗಳ ಸಂಪಾದಿತ ಕೃತಿ ‘ಹೆಗಲಲಿದೆ ಸಾವಿರ ಸವಾಲು’ ಈ ಮೂರೂ ಕೃತಿಗಳು ಇಂದು, 2-6-24ರಂದು ಬಿಡುಗಡೆಯಾಗುತ್ತಿವೆ.

ಹೆಣ್ಣನ್ನು ತನ್ನದೇ ಬಂಧನಗಳಿಂದ ಬಿಡುಗಡೆಗೊಳಿಸುವ ನೋಟ ಪಲ್ಲಟದ ಕೇಂದ್ರ ವೈದೇಹಿಯವರದ್ದು. ಈ ಕೇಂದ್ರದಲ್ಲಿನ ಪಲ್ಲಟವು ಏಕಕಾಲಕ್ಕೆ ತನ್ನನ್ನೂ ಲೋಕವನ್ನೂ ಬಿಡುಗಡೆಗೊಳಿಸಲು ಸಾಧ್ಯ ಎನ್ನುವುದು ಇವರ ನಂಬಿಕೆ. ‘ಹೊಸ ಹೆಣ್ಣು’ ಹುಟ್ಟಬೇಕಾಗಿಲ್ಲ, ಅವಳನ್ನು ಸೃಷ್ಟಿಸಬೇಕಾಗಿಲ್ಲ, ಅವಳನ್ನು ‘ಕಾಣಬೇಕು’. ಕಾಣುವ ಕಣ್ಣು ಬೇಕು ಎನ್ನುವುದಾದರೆ, ಮೊದಲು ಹೆಣ್ಣು ತನ್ನನ್ನು ತಾನು ನೋಡಿಕೊಳ್ಳುವ ಹೊಸ ಕಣ್ಣನ್ನು ಪಡೆಯಬೇಕು. ಇವರ ಬಹುತೇಕ ನಾಯಕಿಯರು ಇದರ ಹುಡುಕಾಟದಲ್ಲಿದ್ದಾರೆ. ಈ ಹುಡುಕಾಟವನ್ನು ಹೆಣ್ಣಿಗೆ ಮಾತ್ರ ಸಾಧ್ಯವಾದ ಜೀವನಾನುರಕ್ತಿಯಲ್ಲಿ ಇವರ ಪಾತ್ರಗಳು ಮಾಡುತ್ತವೆ. ಅಂತರಂಗದ ಪುಟಗಳಿಂದ ಕಥೆ ಕಾರಣದ ತನಕದ ಇವರ ನೋಟ ನಿಲುವುಗಳಲ್ಲಿ ಸಾತತ್ಯವೂ ಇದೆ, ಪಲ್ಲಟಗಳೂ ಇವೆ. ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಕತೆಯಿಂದ ಕ್ರೌಂಚಪಕ್ಷಿಗಳು ತನಕದ ಇವರ ಪ್ರಯಾಣ ದೀರ್ಘವಾದುದು ಮಾತ್ರವಲ್ಲ, ಹೆಣ್ಣಿನ ಬದುಕಿನ ಅದೆಷ್ಟು ಮಗ್ಗುಲುಗಳನ್ನು ಇವರು ಕಾಣಿಸುತ್ತಾ ಹೋಗುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಧಿಕಾರ ಸ್ಥಾನಗಳಿಂದ ಮಹಿಳೆಯರನ್ನು ಹೊರಗಿಟ್ಟು ಸಮಾನತೆ ಬಗ್ಗೆ ಮಾತನಾಡುವುದಕ್ಕೆ ಅರ್ಥವಿದೆಯೇ?

ಹೆಣ್ಣು ಕೇಂದ್ರ ಎಂದೆ, ಆದರೆ ಅವಳು ಮಾತ್ರ ಕೇಂದ್ರವಾಗದ ಹಾಗೆ, ಬದುಕಿನ ಭಿತ್ತಿಯಲ್ಲಿ ಗಂಡು ಹೆಣ್ಣು, ಸಂಸಾರ, ಮೌಲ್ಯವ್ಯವಸ್ಥೆ ಎಲ್ಲವನ್ನೂ ಅದೇ ಆದ್ಯತೆಯಲ್ಲಿ ಇವರು ಚಿತ್ರಿಸುತ್ತಾ ಹೋಗುವುದರಿಂದ ಇವರ ಕತೆಗಳಿಗೆ ಆಳ ಅಗಲಗಳೆರಡೂ ದಕ್ಕಿವೆ. ವ್ಯಗ್ರತೆಯೋ ಆಕ್ಷೇಪವೋ ವಿಷಾದವೋ ಕತೆಯ ಹದವನ್ನು ಕೆಡಿಸದಂತೆ ‘ನೋಡಿ ಹೀಗಿದೆಯಲ್ಲ, ಇದಕ್ಕೆ ಏನು ಮಾಡುವುದು’ ಎನ್ನುವ ಪ್ರಶ್ನೆ ಬೇಕೋ ಬೇಡವೋ ಗಂಡು ಮತ್ತು ಹೆಣ್ಣು ಇಬ್ಬರ ಮನಸ್ಸಿನಲ್ಲೂ ಏಳುವಂತೆ ಮಾಡುವುದರಲ್ಲಿ ಇವರ ಕತೆಗಳ ಶಕ್ತಿ ಮತ್ತು ಸೌಂದರ್ಯವಿದೆ. ‘ಸೌಗಂಧಿಯ ಸ್ವಗತಗಳು’ ಹೆಣ್ಣಿನ ಕಾಲಾತೀತ ಸ್ವಗತಗಳಂತೆ ಕೇಳಿಸುತ್ತವೆ. ಯಾವುದೋ ದೇಶದ, ಯಾವುದೋ ಕಾಲದ ಹೆಣ್ಣಾಗಲೀ, ಈ ನಮ್ಮ ಕಾಲದ ಹೆಣ್ಣಾಗಲಿ, ಎಷ್ಟೋ ಬಾರಿ ಸ್ವಗತಗಳ ಕನವರಿಕೆಯಲ್ಲೇ ಹೆಣ್ಣು ಮಕ್ಕಳು ಬದುಕು ಕಳೆದೇ ಹೋಗಿ ಬಿಡುತ್ತದೆಯಲ್ಲ! ದಾಂಪತ್ಯಕ್ಕಿಂತ ಹೆಚ್ಚಿನ ಸಾರ್ಥಕತೆ ಸಖ್ಯವೊಂದರಲ್ಲಿ ಸಿಕ್ಕಿ ಬಿಡುತ್ತದೆ.

ವೈದೇಹಿಯವರ ಮ್ಯಾನಿಫೆಸ್ಟೋ ಎಂದು ಕರೆಯಬಹುದಾದ ಹೇಳಿಕೆಯೊಂದಿದೆ. ‘ಹೆಣ್ಣು ಗಂಡಿಗೆ ಸಮನಲ್ಲ, ಅದಕ್ಕಿಂತ ಹೆಚ್ಚಾಗಿ ಗಂಡು ಎಂದಿಗೂ ಹೆಣ್ಣಿಗೆ ಸಮನಲ್ಲ’. ಈ ಹೇಳಿಕೆಗೆ ದರ್ಶನವೊಂದರ ಶಕ್ತಿಯಿದೆ. ಹೆಣ್ಣಿನ ಆತ್ಮಬಲವನ್ನು ಹೆಚ್ಚಿಸುವ ಈ ಬಗೆಯ ನೋಟವು ಹೆಣ್ಣಿನ ಹೋರಾಟಕ್ಕೆ ದಕ್ಕಿಸಿಕೊಡುವ ನೈತಿಕ ಶಕ್ತಿ ಬಲು ದೊಡ್ಡದು. ಇದು ಹೆಣ್ಣಿನ ಹೋರಾಟವನ್ನು ಹೋರಾಟದ ಚೌಕಟ್ಟಿನಿಂದ ಹೊರತಂದು ಅದು ಹೆಣ್ಣಿನ ಸ್ವಗ್ರಹಿಕೆಯ ಘನವಾದ ನೆಲೆಯನ್ನು ಕಟ್ಟುತ್ತದೆ. ಸ್ಪರ್ಧೆಯ ಅಗತ್ಯವಿಲ್ಲದ, ಗಂಡು ಮತ್ತು ಹೆಣ್ಣು ಇಬ್ಬರೂ ಅವರವರ ಲೋಕದಲ್ಲಿ, ಅವರವರ ಗ್ರಹಿಕೆಯಲ್ಲಿ, ಅಷ್ಟೇ ಮುಖ್ಯವಾಗಿ ಪರಸ್ಪರರ ಲೋಕಗಳ ಬಗೆಗೆ ಪ್ರೀತಿ, ಗೌರವದಲ್ಲಿ ಬದುಕುವ ಸಾಧ್ಯತೆಯನ್ನು ನಂಬುತ್ತದೆ.

ಸುಮಿತ್ರಾಬಾಯಿಯವರ ಪುಸ್ತಕ, ವೈದೇಹಿಯವರ ಸಮಗ್ರ ಸಾಹಿತ್ಯವನ್ನು ಹೊಸ ಕಣ್ಣಿನಲ್ಲಿ ನೋಡುವ ಪ್ರಯತ್ನ ಮಾಡುತ್ತದೆ. ಹೆಣ್ಣನ್ನು ಉದ್ದಕ್ಕೂ ಸೀಮೆಗಳಲ್ಲೇ ನೋಡುತ್ತಾ ಬಂದಿರುವ ಲೋಕಕ್ಕೆ ಅದರ ಸೀಮಾತೀತ ನೆಲೆಗಳನ್ನು, ಅದರ ವಿಸ್ತಾರದಲ್ಲಿ ನೋಡುವುದನ್ನು ಕಲಿಸುವ ಪ್ರಯತ್ನವಾಗಿಯೂ ಇದನ್ನು ನಾವು ನೋಡಬಹುದು. ಇದು ವೈದೇಹಿಯವರನ್ನೂ ಒಳಗೊಂಡಂತೆ ಮಹತ್ವದ ಲೇಖಕಿಯರನ್ನು ನೋಡಲು ಬೇಕಾದ ಮಾದರಿಯೊಂದನ್ನು ಕಟ್ಟಿಕೊಡುತ್ತದೆ. ಲೇಖಕಿಯರ ಭಾಷೆಯನ್ನು ಹೆಣ್ಣಿನ ಭಾಷೆಯಾಗಿ ಓದಬೇಕಾದ ರೀತಿಯನ್ನು ಅನೇಕ ಉದಾಹರಣೆಗಳ ಮೂಲಕ ನಿರೂಪಿಸುವ ಈ ಬರೆಹ ಸ್ತ್ರೀವಾದಿ ವಿಮರ್ಶೆಯ ಪ್ರಾಯೋಗಿಕ ವಿಮರ್ಶೆಯಂತೆ ಕಾಣಿಸುತ್ತದೆ. ಸಾಮಾನ್ಯ ಎನ್ನಿಸುವ ಮಾತುಕತೆಗಳು, ತುಸು ಆಳವಾಗಿ ನೋಡಿದರೆ ಮತ್ತೇನನ್ನೋ ಧ್ವನಿಸುತ್ತಿರುತ್ತವೆ. ಹೂಂ ಎನ್ನುವುದು ಕೇವಲ ಹೂಂಕಾರವಾಗದೇ ಉದ್ದನೆಯ ವಾಕ್ಯವೊಂದರ ಸಂಕ್ಷಿಪ್ತ ರೂಪದಂತಿರುತ್ತದೆ. ಅದನ್ನು ಅರಿಯಲು ಹೆಣ್ಣಿನ ಮನಸ್ಸನ್ನು ನಾವು ಒಳಗೊಳ್ಳಬೇಕು.

ಈ ಕಾಲಕ್ಕೆ ಬೇಕಾಗಿರುವುದು ಹೆಣ್ಣಿನ ತಾಯ್ತನದ ಪೊರೆಯುವ ಅಮೃತ. ಅದನ್ನು ಹೆಣ್ಣಿನಿಂದ ಗಂಡು ಪಡೆದು ಕುಡಿಯುವುದು ಈ ಕಾಲದ ವಿಷಪ್ರಾಶನದಿಂದ ಪಾರಾಗಲು ಇರುವ ಒಂದೇ ದಾರಿ.

Vaidehi Balaga 980x695 1

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ | ಬಾನು ಮುಷ್ತಾಕ್‌ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ...

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

Download Eedina App Android / iOS

X